ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 29, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೨. ಅರ್ಥ

     ದ್ವಿತೀಯ ಪುರುಷಾರ್ಥ ಅರ್ಥ. ಭೌತಿಕ ಆವಶ್ಯಕತೆಗಳನ್ನು ಪೂರೈಸಿಕೊಂಡು, ಸುಖ-ಶಾಂತಿಪೂರ್ವಕ ಜೀವಿಸಲು ಮತ್ತು ಪರರಿಗೆ ಸೇವೆ ಸಲ್ಲಿಸಲು ಅರ್ಥಸಂಪಾದನೆ ಕೇವಲ ಆವಶ್ಯಕವಲ್ಲ, ಅನಿವಾರ್ಯವೇ ಆಗಿದೆ. ವೇದಗಳು ದಾರಿದ್ರ್ಯವನ್ನು ಒಂದು ಅಮೂಲ್ಯ ವಸ್ತುವೆಂದು ಗ್ರಹಿಸುವುದಿಲ್ಲ. ಬಡವನು, ಇಚ್ಛೆಯಿಲ್ಲದಿದ್ದರೂ ಅನೇಕ ಪಾಪಗಳನ್ನು ಮಾಡುತ್ತಾನೆ. ಅರಾಯೀ ಕಾಣೇ ವಿಕಟೇ ಗಿರಿಂ ಗಚ್ಛ ಸದಾನ್ವೇ || (ಋಕ್.೧೦.೧೫೫.೧.) - [ಸದಾನ್ವೇ] ಸದಾ ಪೀಡೆಗಳನ್ನು ಹುಡುಕುತ್ತಿರುವ [ವಿಕಟೇ] ವಿಡಂಬನಕಾರಿಣಿಯಾದ [ಅರಾಯಿ] ದರಿದ್ರವೇ, [ಗಿರಿಂ ಗಚ್ಛ] (ಏನೂ ಬೆಳೆಯದ) ಪರ್ವತಕ್ಕೆ ಹೋಗು - ಎನ್ನುತ್ತಿದೆ. ವಯಂ ಸ್ಯಾಮ ಪತಯೋ ರಯೀಣಾಮ್ || (ಯಜು.೨೩.೬೫.) - [ಪ್ರಜಾಪತೇ] ಪ್ರಜೆಗಳ ಸ್ವಾಮಿಯೇ, [ವಯಮ್] ನಾವು [ರಯೀಣಾಂ ಪತಯಃ ಸ್ಯಾಮ] ಸಂಪತ್ತಿನ ಸ್ವಾಮಿಗಳಾಗೋಣ. ಈ ರೀತಿ ಪ್ರಾರ್ಥನೆ ಮಾಡುವುದನ್ನು ಯಜುರ್ವೇದ ಕಲಿಸುತ್ತದೆ. ಅಥರ್ವವೇದವಂತೂ ಪ್ರತಿಯೊಬ್ಬನಿಗೂ ಈ ಆದೇಶ ಕೊಡುತ್ತಲಿದೆ:-
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | 
ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     [ಶತಹಸ್ತ] ನೂರು ಕೈಗಳುಳ್ಳವನೇ, [ಸಂ ಆಹರ] ಚೆನ್ನಾಗಿ ಸಂಪಾದನೆ ಮಾಡು. [ಸಹಸ್ರಹಸ್ತ] ಸಾವಿರ ಕೈಗಳುಳ್ಳವನೇ, [ಸಂ ಕಿರ] ಚೆನ್ನಾಗಿ ಹಂಚು. [ಇಹ] ಈ ಲೋಕದಲ್ಲಿ [ಕೃತಸ್ಯ ಕಾರ್ಯಸ್ಯ ಸ್ಫಾತಿಮ್] ನೀನು ಮಾಡಿದ ಕಾರ್ಯದ ವಿಸ್ತಾರವನ್ನು [ಸಂ ಆವಹ] ಈ ರೀತಿ ಸಾಧಿಸಿಕೋ.
     ರಾಶಿಗೂಡಿದ ಹಣ ಅನರ್ಥಕಾರಿ. ಹಾಗೆಂದು, ಸಂಪಾದಿಸುವುದೇ ಬೇಡ ಎನ್ನುವುದು ಮಹಾ ಪ್ರಮಾದ. ದುಡಿಯಬೇಕು. ನೂರು ರೀತಿಯಲ್ಲಿ ಸಂಪಾದಿಸಬೇಕು. ಮತ್ತೆ, ತಾನು ಉಪಭುಂಜಿಸುವುದು ಮಾತ್ರವಲ್ಲದೇ, ಶಾರೀರಿಕ, ಮಾನಸಿಕ ವ್ಯಾಧಿಗಳಿಂದ ನರಳುತ್ತಿರುವ ದುಃಖೀ ಜೀವರಿಗಾಗಿ ಸಾವಿರ ಬಗೆಯಿಂದ ಉಪಯೋಗಿಸಲೂಬೇಕು.
     ಸಂಪಾದಿಸಬೇಕು, ಆದರೆ, ಧರ್ಮ ಸದಾ ಗಮನದಲ್ಲಿರಬೇಕು. ಅನ್ಯಾಯಮಾರ್ಗಕ್ಕೆ, ಅಸತ್ಯವ್ಯವಹಾರಗಳಿಗೆ, ಪರಿವಂಚನೆಗೆ, ಸುಲಭವಾಗಿ ಹಣ ರಾಶಿಹಾಕುವ ಪ್ರಲೋಭನಕ್ಕೆ ಎಂದೂ ಸಿಕ್ಕಿಕೊಳ್ಳಬಾರದು. ಋಗ್ವೇದ ಹೇಳುತ್ತದೆ:-
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     [ಅಕ್ಷೈಃ ಮಾ ದೀವ್ಯಃ] ದಾಳಗಳಿಂದ ಜೂಜಾಡಬೇಡ. [ಕೃಷಿಮಿತ್ ಕೃಷಸ್ವ] ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. [ಬಹುಮನ್ಯಮಾನಃ] ನಿಜವಾದ ದುಡಿಮೆಯಿಂದ ಲಭಿಸುದುದೇ ಬಹಳ ಎಂದರಿತು, [ವಿತ್ತೇ ರಮಸ್ಯ] ಆ ಹಣದಲ್ಲಿ ಸಂತುಷ್ಟನಾಗಿರು. [ಕಿತವ] ಓ ಜೂಜುಕೋರ, [ತತ್ರ ಗಾವಃ] ಕಷ್ಟದ ದುಡಿಮೆಯಲ್ಲೇ ಗೋಸಂಪತ್ತಿದೆ. [ತತ್ರ ಜಾಯಾ] ಅದರಲ್ಲೇ ದಾಂಪತ್ಯಸುಖವೂ ಇದೆ. [ಅಯಂ ಅರ್ಯಃ ಸವಿತಾ] ಈ ಸ್ವಾಮಿಯಾದ ಪ್ರೇರಕನು, [ತತ್ ಮೇ ವಿಚಷ್ಟೇ] ಅದನ್ನೇ ನನಗೆ ಹೇಳುತ್ತಿದ್ದಾನೆ. 
     'ಅಕ್ಷ' ಎಂದರೆ ದಾಳ ಎಂಬುದನ್ನು ಉಪಲಕ್ಷಣ ಮಾತ್ರವೆಂದು ಭಾವಿಸಬೇಕು. ಕುದುರೆ ಜೂಜು, ಲಾಟರಿ, ಕಾಳಸಂತೆ, ಲಾಭಕೋರತನ, ಕಳ್ಳದಾಸ್ತಾನು ಇವೆಲ್ಲಾ ಪಗಡೆಜೂಜಿನ ಗುಂಪಿಗೇ ಸೇರಿದ ಪಾಪವೃತ್ತಿಗಳು ಎಂಬುದನ್ನು ಎಂದಿಗೂ ಮರೆಯಬಾರದು. ಹೇಗೆ ಸಂಪಾದಿಸಬೇಕು ಎಂಬ ಪ್ರಶ್ನೆಗೆ ಋಗ್ವೇದದ ಉತ್ತರವಿದು:-
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಭ್ಯಾತ್ || (ಋಕ್.೧೦.೩೧.೨.)
     [ಮರ್ತಃ} ಮಾನವನು, [ದ್ರವಿಣಮ್] ಹಣವು [ಪರಿಚಿತ್] ಎಲ್ಲೆಡೆಯೂ ಇದೆ ಎಂದರಿಯಬೇಕು. [ಋತಸ್ಯ ಪಥಾ] ನ್ಯಾಯದ ಹಾಗೂ ಸತ್ಯದ ಮಾರ್ಗದಿಂದ [ನಮಸಾ] ನಮ್ರತೆಯಿಂದ [ವಿವಾಸೇತ್] ನಡೆದುಹೋಗಬೇಕು. [ಉತ] ಮತ್ತು [ಸ್ವೇನ ಕ್ರತುನಾ] ತನ್ನ ಸ್ವಂತ ಸದ್ವಿಚಾರ ಸದಾಚಾರಗಳಿಂದ [ಸಂ ವದೇತ್] ಮಾತನಾಡಬೇಕು. [ಮನಸಾ] ಮನಸ್ಸಿನಿಂದ [ಶ್ರೇಯಾಂಸಂ] ಶ್ರೇಯಸ್ಕರವಾದ ಶಕ್ತಿಯನ್ನು [ಜಗೃಭ್ಯಾತ್] ಗ್ರಹಿಸಬೇಕು. ಈ ವೇದೋಕ್ತ ಮಾರ್ಗದಲ್ಲಿ ಅರ್ಥಸಂಚಯ ಮಾಡುವುದೇ ದ್ವಿತೀಯ ಪುರುಷಾರ್ಥ.
*******************
-ಪಂ. ಸುಧಾಕರ ಚತುರ್ವೇದಿ.

ಶುಕ್ರವಾರ, ಜುಲೈ 26, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೧. ಧರ್ಮ

    ಇಷ್ಟೆಲ್ಲಾ ತಿಳಿದ ಮೇಲೆ, ಕೊನೆಗೆ ಒಂದು ಪ್ರಶ್ನೆ ಹಾಕೋಣ. ಮಾನವಜೀವನದ ಉದ್ದೇಶ್ಯವೇನು? ವೈದಿಕ ಧರ್ಮದ ದೃಷ್ಟಿಯಲ್ಲಿ, ನಾಲ್ಕು ಪುರುಷಾರ್ಥಗಳನ್ನು ಸಾಧಿಸುವುದೇ ಮಾನವಜೀವನದ ಉದ್ದೇಶ್ಯ. ಋಗ್ವೇದ ಹೇಳುತ್ತದೆ:-
ಏಕಂ ಚಮಸಂ ಚತುರಃ ಕೃಣೋತನ ತದ್ ವೋ ದೇವಾ ಅಬ್ರುವನ್ ತದ್ ವ ಆಗಮಮ್ |
ಸೌಧನ್ವನಾ ಯದ್ಯೇವಾ ಕರಿಷ್ಯಥ ಸಾಕಂ ದೇವೈರ್ಯಜ್ಞಿಯಾಸೋ ಭವಿಷ್ಯಥ || (ಋಕ್.೧.೧೬೧.೨.)
     [ಏಕಂ ಚಮಸಮ್] ಆತ್ಮನಿಗೆ ಜೀವನಸಾರವನ್ನು ಬಡಿಸುವ ಒಂದು ಉದ್ದೇಶ್ಯವನ್ನು, [ಚತುರಃ ಕೃಣೋತನ] ನಾಲ್ಕಾಗಿ ವಿಂಗಡಿಸಿರಿ. [ದೇವಾಃ] ಪ್ರಕಾಶವಂತರೂ, ಉದಾರರೂ, ಶುಭಗುಣವಿಶಿಷ್ಟರೂ ಆದ ವಿದ್ವಾಂಸರು, [ವಃ ತತ್ ಅಬ್ರುವನ್] ನಿಮಗೆ ಅದನ್ನೇ ನಿರ್ದೇಶಿಸುತ್ತಾರೆ. [ತತ್] ಅದನ್ನೇ [ಆಗಮಮ್] ತಂದಿದ್ದೇನೆ. [ಸೌಧನ್ವನಾಃ] ಭೂಮಾತೆಯ ಸುಪುತ್ರರೇ! [ಯದಿ ಏವಾ ಕರಿಷ್ಯಥಃ] ಹೀಗೆ ಮಾಡುವಿರಾದಲ್ಲಿ, [ದೇವೈಃ ಸಾಕಮ್] ದಿವ್ಯಗುಣ ವಿಶಿಷ್ಟರಾದ ವಿದ್ವಾಂಸರೊಂದಿಗೆ, [ಯಜ್ಞಿಯಾಸಃ ಭವಿಷ್ಯಥ] ನೀವೂ ಆದರಣೀಯರಾಗುವಿರಿ.
     'ಚಮಸ' ಎಂದರೆ ಬಡಿಸುವ ಸಾಧನ. ಆತ್ಮನಿಗೆ ಜೀವನದ ಸಾರವನ್ನು ಬಡಿಸುವ ಉದಾತ್ತವಾದ ಆದರ್ಶ ಅಥವಾ ಶ್ರೇಷ್ಠವಾದ ಉದ್ದೇಶ್ಯವೇ. ಈ ಒಂದು ಉದ್ದೇಶ್ಯವನ್ನು ನಾಲ್ಕಾಗಿ ವಿಂಗಡಿಸಿ, ಒಂದೊಂದು ಅರ್ಥವನ್ನೂ ಸಾಧಿಸಿಕೊಳ್ಳುತ್ತಾ ಹೋಗಬೇಕು. ಪುರುಷನಿಂದ ಸಾಧಿಸಲ್ಪಡಬೇಕಾದ ಈ ನಾಲ್ಕನ್ನೂ 'ನಾಲ್ಕು ಪುರುಷಾರ್ಥಗಳು' ಎನ್ನುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷ - ಇವೇ ಆ ನಾಲ್ಕು ಪುರುಷಾರ್ಥಗಳು. 
     ಪ್ರಥಮ ಪುರುಷಾರ್ಥ ಧರ್ಮ. ಧರ್ಮದ ವಿಷಯವನ್ನು ಪಾಠಕರು ಈ ಮೊದಲೂ ಓದಿದ್ದಾರೆ. ಆತ್ಮನ ಧಾರಕ ತತ್ತ್ವಗಳೇ ಒಟ್ಟು ಸೇರಿ 'ಧರ್ಮ' ಎನಿಸುತ್ತದೆ. ಆ ಧರ್ಮದ ಮೂರು ಅಭಿನ್ನ ಅಂಗಗಳು ಜ್ಞಾನ, ಕರ್ಮ, ಉಪಾಸನಾ ಎಂದು ಮೊದಲೇ ತಿಳಿದಿದ್ದೇವೆ. ಈ ಧರ್ಮ ಎಂಬ ಧಾರಕತ್ತ್ವವನ್ನು ಸಾಧಿಸಿಕೊಂಡರೆ ಮಾನವನ ರೂಪ ಹೇಗಿರುವುದೆಂದು ಋಗ್ವೇದ ಹೇಳುತ್ತಲಿದೆ:-
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | ಋತೇನ ವಿಶ್ವಂ ಭುವನಂ ವಿ ರಾಜಥಃ ಸೂರ್ಯಮಾ ಧತ್ಥೋ ದಿವಿ ಚಿತ್ರ್ಯಂ ರಥಮ್ || (ಋಕ್.೫.೬೩.೭.)
     [ಮಿತ್ರಾವರುಣಾ] ಸ್ನೇಹಪರ ನರ ಹಾಗೂ ವರಣೀಯಳಾದ ನಾರಿ! [ದರ್ಮಣಾ] ಧರ್ಮದಿಂದ [ವಿಪಶ್ಚಿತಾ] ಜ್ಞಾನಿಗಳಾಗುತ್ತೀರಿ. [ಅಸುರಸ್ಯ] ಪ್ರಾಣದಾಯಕನಾದ ಪರಮಾತ್ಮನ [ಮಾಯಯಾ] ಪ್ರಜ್ಞೆಯಿಂದ, ವೇದಜ್ಞಾನದಿಂದ [ವ್ರತಾ ರಕ್ಷೇಥೇ] ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ವ್ರತಗಳನ್ನು ರಕ್ಷಿಸುತ್ತೀರಿ. [ಋತೇನ] ಯಜ್ಞ ಮತ್ತು ನ್ಯಾಯದಿಂದ [ವಿಶ್ವಂ ಭುವನಮ್] ಸಮಸ್ತ ಪ್ರಪಂಚವನ್ನೂ, [ವಿರಾಜಥಃ] ಸಿಂಗರಿಸುತ್ತೀರಿ. [ದಿವಿ] ಜ್ಞಾನಮಯವಾದ ಸ್ಥಿತಿಯಲ್ಲಿ, [ಚಿತ್ರ್ಯಮ್] ಅದ್ಭುತ [ರಥಮ್] ಗತಿದಾತೃವಾದ [ಸೂರ್ಯಮ್] ಬ್ರಹ್ಮಾಂಡದ ಸಂಚಾಲಕನಾದ ಭಗವಂತನನ್ನು [ಆ ದತ್ಥಃ] ಎಲ್ಲಡೆಯಿಂದಲೂ ಜೀವನಗತವಾಗಿ ಮಾಡಿಕೊಳ್ಳುತ್ತೀರಿ. 'ವಿಪಶ್ಚಿತಾ' ಎಂಬ ಶಬ್ದ ಜ್ಞಾನವನ್ನು, 'ವ್ರತಾ' ಎಂಬ ಶಬ್ದ ಕರ್ಮವನ್ನೂ, 'ಸೂರ್ಯ ಆಧತ್ಥಃ' ಎಂಬ ಶಬ್ದಗಳು ಉಪಾಸನೆಯನ್ನೂ ಸೂಚಿಸುತ್ತವೆ. ಧಾರ್ಮಿಕರು ಜಗತ್ತಿನಲ್ಲಿ ಸುಖ-ಶಾಂತಿಗಳನ್ನು ಪಸರಿಸಿ, ಜಗತ್ತನ್ನು ಶೃಂಗರಿಸುತ್ತಾರೆ. ಇದು ಪ್ರಥಮ ಪುರುಷಾರ್ಥ.
-ಪಂ. ಸುಧಾಕರ ಚತುರ್ವೇದಿ.

ಗುರುವಾರ, ಜುಲೈ 25, 2013

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

     ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ ವಿಧಿವತ್ ಪ್ರತಿಷ್ಟಾಪನೆ ಕಾರ್ಯ ಹುಬ್ಬಳ್ಳಿಯ ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಸಾನ್ನಿಧ್ಯದಲ್ಲಿ ೦೯-೦೬-೨೦೧೩ರಂದು ನೆರವೇರಿತ್ತು. ಆ ಗೋಶಾಲೆಗೂ ಒಂದು ಹಿನ್ನೆಲೆಯಿತ್ತು. ೨೦ ವರ್ಷದ ಬೆಳೆದ ಮಗ ಸುಭಾಷ್ ಅಕಾಲಿಕವಾಗಿ ತೀರಿಹೋದ ದುಃಖವನ್ನು ಅರಗಿಸಿಕೊಳ್ಳಲಾಗದ ಆ ದಂಪತಿಗಳು ಗೋಶಾಲೆಯನ್ನು ನಡೆಸುವ ಮೂಲಕ ಮರೆಯಲು ಪ್ರಯತ್ನಿಸಿದ್ದಾರೆ. ಆಹ್ವಾನವಿದ್ದದ್ದರಿಂದ ಹಾಸನದ ವೇದಭಾರತಿಯ ನಾವು ಹದಿನೈದು ವೇದಾಭ್ಯಾಸಿಗಳು ಆ ಸಮಾರಂಭಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಮಹಿಳೆಯರೂ ಇದ್ದು ಸ್ವಾಮಿಗಳ ಸಮ್ಮುಖದಲ್ಲಿ ವೇದಘೋಷವನ್ನೂ ಮಾಡಿದೆವು. ಮಹಿಳೆಯರೂ ವೇದಮಂತ್ರಗಳನ್ನು ಹೇಳಿದ್ದನ್ನು ಕೇಳಿದ ಸ್ವಾಮಿಗಳು ಆನಂದಿತರಾಗಿ ವೇದಭಾರತಿಯ ಕುರಿತು ವಿಚಾರಿಸಿದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವಿಲ್ಲದೆ ಕಳೆದ ಒಂದು ವರ್ಷದಿಂದ ವೇದಾಭ್ಯಾಸ ಮಾಡುತ್ತಿರುವ ಬಗ್ಗೆ, ಇದಕ್ಕೆ ಪೂರಕವಾದ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿ, ಈ ಕಾರ್ಯಕ್ಕೆ ಅವರ ಆಶೀರ್ವಾದವನ್ನೂ ಕೋರಿದೆವು. ಆಗ ಅವರು ಉದ್ಗರಿಸಿದ್ದೇನೆಂದರೆ, "ಇದು ನಿಜವಾಗಿ ರಾಷ್ಟ್ರ ಕಟ್ಟುವ ಕೆಲಸ. ಆಗಬೇಕಾಗಿರುವುದೂ ಇದೇ. ಕೇವಲ ನನ್ನ ಆಶೀರ್ವಾದ ನಿಮಗೆ ಸಾಕೆ? ಐ ವಿಲ್ ಬಿ ವಿತ್ ಯು! " ಈ ಭೇಟಿಯ ಫಲಶ್ರುತಿಯಾಗಿ ಇದೀಗ ಸ್ವಾಮಿಗಳು ವೇದಭಾರತಿ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಕೇಂದ್ರದ ಆಶ್ರಯದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ತಿಂಗಳು ೨೫ ರಿಂದ ೩೦ರವರೆಗೆ ಗೀತಾಜ್ಞಾನಯಜ್ಞ ನಡೆಸಿಕೊಡುತ್ತಿದ್ದಾರೆ. ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಕಿರುಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.
     ಪೂಜ್ಯರ ಪೂರ್ವಾಶ್ರಮದ ಹೆಸರು ದತ್ತಾತ್ರೇಯ. ಸಾತ್ವಿಕ ದಂಪತಿಗಳಾದ ಕೃಷ್ಣಭಟ್ಟ-ಕಮಲಾಬಾಯಿಯವವರ ಮೂರನೆಯ ಮಗನಾಗಿ ೧೧-೧-೧೯೪೮ರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು, ತಾಯಿ ಮತ್ತು ಸೋದರಮಾವನ ಆಶ್ರಯದಲ್ಲಿ ಸುಯೋಗ್ಯ ಶಿಕ್ಷಣ, ಸಂಸ್ಕಾರಗಳನ್ನು ಪಡೆದರು. ಬಾಲ್ಯದಿಂದಲೇ ಭಜನೆ, ಕೀರ್ತನೆ, ಸತ್ಸಂಗಗಳಲ್ಲಿ ಕಳೆಯುವ ಅವಕಾಶ ಮತ್ತು ಸಂಸ್ಕಾರ ಅವರಿಗೆ ಲಭ್ಯವಾಗಿತ್ತು. ತಬಲ ಮತ್ತು ಹಾರ್ಮೋನಿಯಮ್ ನುಡಿಸುವುದನ್ನು ಕಲಿತ ಅವರಿಗೆ ಸಂಗೀತದಲ್ಲೂ ಆಸಕ್ತಿಯಿತ್ತು. ಅವರ ತಾಯಿ ಹಸ್ತ ಸಾಮುದ್ರಿಕ, ಶರೀರ ಹಾಗೂ ಮುಖಲಕ್ಷಣ ಶಾಸ್ತ್ರಗಳನ್ನು ತಿಳಿದವರಾಗಿದ್ದು, ಮಗನಿಗೆ ಬಯ್ಯುವಾಗ ಆಗಾಗ್ಗೆ 'ನೀನು ಸನ್ಯಾಸಿ ಆಗು' ಅನ್ನುತ್ತಿದ್ದರಂತೆ. ಹುಬ್ಬಳ್ಳಿಯ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜನಿಯರಿಂಗ್ ಶಿಕ್ಷಣ ಪಡೆದು, ಕೆಲಕಾಲ ಅಣ್ಣಿಗೇರಿ, ನವಲಗುಂದಗಳಲ್ಲಿ ಖಾಸಗಿ ಸೇವೆಯನ್ನೂ ಸಲ್ಲಿಸಿದ್ದರು. ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೆ ಒಳಗಾದ ಅವರು ೧೯೭೯-೮೦ರಲ್ಲಿ ಸ್ವಾಮಿ ಚಿನ್ಮಯಾನಂದರ ಸಾಂದಿಪಿನಿ ಗುರುಕುಲದಲ್ಲಿ ಎರಡೂವರೆ ವರ್ಷಗಳ ಕಾಲ ವೇದಾಂತ ಸಾಧನಾ ತರಬೇತಿ ಪಡೆದರು. ನಂತರ ಸ್ವಾಮಿ ದಯಾನಂದ ಸರಸ್ವತಿಗಳವರ ಆಚಾರ್ಯತ್ವದಲ್ಲಿ ಹೃಷಿಕೇಶ, ಮುಂಬಯಿ, ಉತ್ತರಕಾಶಿಗಳಲ್ಲಿ ಶಾಸ್ತ್ರ ಅಧ್ಯಯನ ತರಬೇತಿ ಪಡೆದು, ನೈಷ್ಟಿಕ ಬ್ರಹ್ಮಚಾರಿ ದೀಕ್ಷೆ ಹೊಂದಿ ಮುಕ್ತಚೈತನ್ಯ ಎಂಬ ಹೆಸರು ಪಡೆದರು. ಮೂರು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಮಳಗಿಯಲ್ಲಿ ಆಶ್ರಮ ಹೊಂದಿ ಭಜನೆ, ಸತ್ಸಂಗ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಶುದ್ಧ ಅದ್ವೈತ ವೇದಾಂತವನ್ನು ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಹೃಷಿಕೇಶದ ಗಂಗಾತಟದಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ಚಿದ್ರೂಪಾನಂದ ಸರಸ್ವತಿ ಎಂಬ ನಾಮಧೇಯವನ್ನು ಸದ್ಗುರುವಿನಿಂದ ಪಡೆದರು.
     ಗುರುಗಳ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳ ಕಾಲ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ವೇದ, ಉಪದೇಶಸಾರ, ಇತ್ಯಾದಿಗಳನ್ನು ಆಳವಾಗಿ ಅಭ್ಯಸಿಸಿದ ಪೂಜ್ಯರು, ಗುರುಗಳ ಸೂಚನೆಯಂತೆ ತಾವು ಹೊಂದಿದ ಜ್ಞಾನಪ್ರಸಾರಕಾರ್ಯವನ್ನು ಮಾಡುತ್ತಾ ಎಲ್ಲೆಡೆ ಪ್ರವಾಸ ಮಾಡತೊಡಗಿದರು. ಹಲವು ಸಲ ವಿದೇಶಗಳಲ್ಲೂ ಸಂಚರಿಸಿ ಆಧ್ಯಾತ್ಮಿಕ ಪ್ರಚಾರ ಮಾಡಿದರು. ಇದೀಗ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಾಶ್ರಮದಲ್ಲಿ ಸಿವಿಲ್ ಇಂಜನಿಯರ್ ಆಗಿ ಮನೆಗಳನ್ನು ಕಟ್ಟುತ್ತಿದ್ದ, ಮುರಿದ ಮನೆಗಳನ್ನು ಸರಿಪಡಿಸುತ್ತಿದ್ದ ಪೂಜ್ಯರು ಈಗಲೂ ಆಧ್ಯಾತ್ಮಿಕ ಇಂಜನಿಯರ್ ಆಗಿ ಮುರಿದ ಮನಗಳನ್ನು ಕಟ್ಟುವ ಕಾಯಕ ಮುಂದುವರೆಸಿದ್ದಾರೆ. ಜನರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ, ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಈ ಕಾರ್ಯಕ್ಕೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿಸಿ ಹೇಳಬಲ್ಲ ಅವರ ಪಾಂಡಿತ್ಯ, ಜನರೊಡನೆ ಬೆರೆಯುವ ರೀತಿಗಳು ಸಹಕರಿಸಿವೆ.
     ಹುಬ್ಬಳ್ಳಿಯಲ್ಲಿ ಆರ್ಷವಿದ್ಯಾಪೀಠದ ಹೆಸರಿನಲ್ಲಿ ಆಶ್ರಮ ಹೊಂದಿರುವ ಇವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಗುರುಕುಲವೊಂದನ್ನೂ ಸ್ಥಾಪಿಸಿದ್ದಾರೆ. ಆಶ್ರಮ ಮತ್ತು ಗುರುಕುಲದಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ಆಧ್ಯಾತ್ಮ ಶಿಬಿರಗಳು, ಸೇವಾಕಾರ್ಯದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿರುವುದಲ್ಲದೆ, ಅನೇಕ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರು ೨೦೦೦ದಲ್ಲಿ ಪ್ರಾರಂಭಿಸಿದ ಅಖಿಲ ಭಾರತ ಸೇವಾ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗಳ ಸಮೀಪದಲ್ಲಿಯೇ ಛಾತ್ರಾಲಯ(ಹಾಸ್ಟೆಲ್)ಗಳನ್ನು ಸ್ಥಾಪಿಸಿ ಅವರುಗಳಿಗೆ ಉಚಿತವಾಗಿ ಊಟ, ವಸತಿಗಳನ್ನು ಒದಗಿಸುವುದಲ್ಲದೆ ಶಿಕ್ಷಣಕ್ಕೆ ಪೂರಕವಾದ ಆವಶ್ಯಕತೆಗಳನ್ನು ಒದಗಿಸುವುದು, ಆಟೋಟಗಳು, ಕುಶಲಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಅವರನ್ನು ಸದ್ವಿಚಾರಗಳನ್ನು ಹೊಂದುವ ಸುಯೋಗ್ಯ ಮಾನವರನ್ನಾಗಿ ರೂಪಿಸಿ ಭವಿಷ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದ ೧೧ ರಾಜ್ಯಗಳಲ್ಲಿ ೪೦ ಛಾತ್ರಾಲಯಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸೇವಾ ಅಭಿಯಾನದ ಪ್ರಮುಖರಾಗಿರುವ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮುಂದಾಳತ್ವದಲ್ಲಿ ೧೭ ಛಾತ್ರಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ೧೨೦ ಸಂಧ್ಯಾ ಗುರುಕುಲಗಳು ೪೦೦೦ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳಿಗೆ ಉಪಯೋಗಿಯಾಗಿವೆ. ಹೊನ್ನಾವರದಲ್ಲಿ ಒಂದು ಪ್ರಾಥಮಿಕ ಶಾಲೆ, ಕಲಭಾವಿಯಲ್ಲಿ ಪ್ರೌಢಶಾಲೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವೇದ ಪಾಠಶಾಲೆಗಳು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ೧೭೦ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. ೧೯೯೮ರಲ್ಲಿ ಪೂಜ್ಯರಿಂದ ಪ್ರಾರಂಭವಾದ ಅಕ್ಷಯ ಟ್ರಸ್ಟ್ ಸಹಾಯ ಅಗತ್ಯವಿರುವ ಎಲ್ಲರಿಗೆ ಜಾತಿ,ಮತ, ರಾಷ್ಟ್ರೀಯತೆಗಳ ಭೇದವಿಲ್ಲದೆ ಶಿಕ್ಷಣ ನೀಡುವ ಗುರಿ ಹೊಂದಿದ್ದು ೬ ಶಾಲೆಗಳು, ಪಿಯು ವಿಜ್ಞಾನ ಕಾಲೇಜು ಮತ್ತು ವೇದಪಾಠಶಾಲೆ ನಡೆಸುತ್ತಿದ್ದು ಸುಮರು ೫೦೦೦ ಮಕ್ಕಳು ಪ್ರಯೋಜನ ಹೊಂದಿದ್ದಾರೆ. 'ಸ್ವಾಸ್ಥ್ಯ' ಎಂಬ ಕನಸಿನ ಯೋಜನೆ ರೂಪಿಸಿರುವ ಇವರು, ಅಕ್ಷಯ ಟ್ರಸ್ಟ್ ವತಿಯಿಂದ ಇದರ ಅಡಿಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಭವನದಲ್ಲಿ ನಿಯಮಿತವಾಗಿ ಧಾರ್ಮಿಕ ಪ್ರವಚನಗಳು, ಧ್ಯಾನ, ಪ್ರಾರ್ಥನೆ ಮತ್ತು ಯೋಗ ಮಾಡಲು ಅವಕಾಶ, ಸಾತ್ವಿಕ ಆಹಾರ, ವ್ಯಾಯಾಮಶಾಲೆ, ಈಜುವಕೊಳ, ಇತ್ಯಾದಿಗಳನ್ನು ಒದಗಿಸಿ ಸ್ವಾಸ್ಥ್ಯ ಜೀವನ ನಡೆಸಬಯಸುವವರಿಗೆ ಅವಕಾಶ ಕಲ್ಪಿಸಬಯಸಿದ್ದಾರೆ. 
        ಇವರ ವಿಚಾರಧಾರೆಯ ಕೆಲವು ಅಂಶಗಳು:
* ಸಮಾಜದಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದೆ. ಜನರು ಧರ್ಮಭೀರುಗಳಾಗಬೇಕು.
* ಸಂನ್ಯಾಸಿಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಬದಲಾಗಿ ಸುಸಂಘಟಿತವಾದ ಸಮಾಜವನ್ನು ಕಟ್ಟುವಂತಹ, ಜಾತಿರಹಿತ ಸಮಾಜವನ್ನು ಕಟ್ಟಬಲ್ಲ ಉತ್ಸಾಹಿ ತರುಣರ ಅವಶ್ಯಕತೆ ಇದೆ. ಅವರನ್ನೇ ಸಂನ್ಯಾಸಿಗಳೆಂದು ಕರೆದರೂ ತಪ್ಪಿಲ್ಲ.
* ಜಾತಿಯ, ರಾಜಕಾರಣಿಗಳ ಅಥವ ಸರಕಾರದ, ಅಧಿಕಾರಿಗಳ ಮುಲಾಜಿಗೆ ಒಳಪಟ್ಟು ಉತ್ಸಾಹ ತೋರುವ ಸಂನ್ಯಾಸಿಗಳಿಂದ ಸಮಾಜದಲ್ಲಿ ಸುಸಂಘಟನೆ ತರಲಾಗದು. ಯಾವ ಮತ್ತು ಯಾರ ಮುಲಾಜಿಗೂ ಒಳಗಾಗದ ಸಂನ್ಯಾಸಿಗಳು ಇರಬೇಕು. ಇಂತಹ ಉತ್ಕಟ ಅನಿಸಿಕೆಯನ್ನು ಸಾಕಾರಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿರುವೆ. ಆಗುತ್ತಾ ಇಲ್ಲ. ಆದರೂ ಸಂಕಲ್ಪ ದೂರವಾಗಿಲ್ಲ.
* ಸಂನ್ಯಾಸಿಗಳಲ್ಲಿ ಎರಡು ವಿಧ - ಸಾಧಕ ಸಂನ್ಯಾಸಿ, ಜ್ಞಾನಿ ಸಂನ್ಯಾಸಿ. ಜ್ಞಾನಿ ಸಂನ್ಯಾಸಿಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಧಕ ಸಂನ್ಯಾಸಿಗಳಿಗೆ ರಾಷ್ಟ್ರಹಿತ, ಸಮಾಜಹಿತ, ಧರ್ಮರಕ್ಷಣೆ ಮತ್ತು ಆತ್ಮವಿಕಾಸಗಳೆಂಬ ನಾಲ್ಕು ಕರ್ತವ್ಯಗಳಿವೆ. ಸಮಾಜಹಿತವೆಂದರೆ ಸಮಸ್ತ ಮಾನವಕುಲಹಿತ. ಸಮಾಜವೆಂದರೆ ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ಕ್ಷತ್ರಿಯ ಸಮಾಜ, ಇತ್ಯಾದಿ ಪರಿಗಣಿಸುವುದಲ್ಲ. ಸದ್ಯದ ಸಂನ್ಯಾಸಿಗಳು ಜಾತಿ ಆಧಾರಿತ ಸಮಾಜದ ಸುಸಂಘಟನೆಗಾಗಿ ದುಡಿಯುವಂತಹವರಾದರೆ ಆದಷ್ಟು ಬೇಗ ತಮ್ಮ ವಿಚಾರಧಾರೆಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು.
* ಯುವಕರ ವಿಚಾರದಲ್ಲಿ ಧಾರ್ಮಿಕ ಜವಾಬ್ದಾರಿ ಹೊತ್ತ ಗುರುಗಳು, ಆಚಾರ್ಯರು, ಸಂನ್ಯಾಸಿಗಳು ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಯುವಪೀಳಿಗೆಗೆ ಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ.
* ದೀನ ದಲಿತ, ಕಡುಬಡವ ಮಕ್ಕಳಿಗೆ ಸಂಸ್ಕಾರ, ಶಿಕ್ಷಣಗಳನ್ನು ಉಚಿತವಾಗಿ ನೀಡುವ ಪ್ರಯತ್ನವನ್ನು ಪ್ರತಿ ಯುವಕ-ಯುವತಿಯರು, ಸಂನ್ಯಾಸಿಗಳು ಯಾವುದೇ ರೀತಿಯಲ್ಲಿ ಮಾಡಬೇಕು.
* ಮೌಲ್ಯಗಳ ಅಧಃಪತನದಿಂದಾಗಿ ಜನರಲ್ಲಿ ಸುಳ್ಳು, ವಂಚನೆ. ಮೋಸಗಳು ಇವೆ, ಇದರಿಂದಾಗಿ ಅಸತ್ಯದ ಅನುಸರಣೆ ಮಾಡುತ್ತಾರೆ, ಸತ್ಯವನ್ನು ದೂರ ಮಾಡುತ್ತಾರೆ. ಸತ್ಯಕ್ಕೆ ಕುಂದಿಲ್ಲ. ಶಾಸ್ತ್ರಾಧ್ಯಯನ, ಶಾಸ್ತ್ರ ಪರಂಪರೆ ಇದು ಒಬ್ಬಿಬ್ಬರ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ, ಸಹಸ್ರಾರು ಜನರ ಶ್ರಮಕ್ಕೆ ವೈಜ್ಞಾನಿಕತೆಯಿದೆ, ವಿಶ್ಲೇಷಣೆ ಇದೆ, ಕರ್ತವ್ಯವೂ ಇದೆ. ಪ್ರಮಾಣರಹಿತವಾದ ಇತರ ಮಾರ್ಗಗಳನ್ನು ಜನರು ಅನುಸರಿಸುತ್ತಾರೆಂದರೆ ಇದಕ್ಕೆ ಮೌಲ್ಯದ ಅಧಃಪತನವೇ ಕಾರಣ. ಕ್ರಮೇಣ ಇದರಲ್ಲಿ ಕೊರತೆ ಕಾಣುವ ಜನರು ಇದರಿಂದ ದೂರ ಸರಿಯುತ್ತಾರೆ. ಸತ್ಯ ತಲೆಯೆತ್ತುತ್ತದೆ. 
     ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ೨೫ರಿಂದ ೩೦ರವರೆಗೆ ಪೂಜ್ಯರು ಭಗವದ್ಗೀತೆಯ ಮತ್ತು ಉಪನಿಷತ್ ಕುರಿತು ನಡೆಸಿಕೊಡಲಿರುವ ಪ್ರವಚನಗಳು ಆಸಕ್ತರಿಗೆ ಮಾರ್ಗದರ್ಶಿಯಾಗಲಿರುವುದರಲ್ಲಿ ಅನುಮಾನವಿಲ್ಲ.

-ಕ.ವೆಂ.ನಾಗರಾಜ್, 

(ಆಧಾರ: ಸ್ವಾಮಿ ಸುವ್ರತಾನಂದ ಸರಸ್ವತಿಯವರ 'ಚಿದ್ರೂಪ ದರ್ಶನ')
     

ಸೋಮವಾರ, ಜುಲೈ 22, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೩

     ಇಂತಹವೇ ಪವಿತ್ರ ಸಮಾನತಾ ಭಾವನೆಯನ್ನು ಋಗ್ವೇದ ಅತೀ ಸ್ಫುಟವಾಗಿ ಸಾರುತ್ತಿದೆ:-
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಂ |
ಸಮಾನಂ ಮಂತ್ರಮಭಿ ಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ || (ಋಕ್.೧೦.೧೯೧.೩.)
     [ಏಷಾಮ್] ಈ ನಿಮ್ಮ [ಮಂತ್ರ ಸಮಾನಃ] ಆಲೋಚನೆ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿಯೂ ಸಮಾನವಾಗಿರಲಿ. [ಮನಃ ಸಮಾನಮ್] ಮನಸ್ಸು ಸಮಾನವಾಗಿರಲಿ. [ಚಿತ್ತಂ ಸಹ] ಚೈತನ್ಯ ಒಂದಾಗಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನಂ ಮಂತ್ರಮ್] ಸಮಾನವಾದ ಮಂತ್ರವನ್ನೇ ಉಪದೇಶಿಸುತ್ತೇನೆ. [ವಃ] ನಿಮ್ಮನ್ನು [ಸಮಾನೇನ ಹವಿಷಾ] ಸಮಾನವಾದ ಭೋಗ್ಯವಸ್ತುಗಳೊಂದಿಗೆ [ಜುಹೋಮಿ] ಸಮ್ಮಿಳಿತಗೊಳಿಸುತ್ತೇನೆ.
     ಹೀಗೆ, ವೇದೋಕ್ತ ಸಮಾಜ ಸಂಪೂರ್ಣ ಸಮಾನತ್ವದ ಆಧಾರದ ಮೇಲೆ ನಿಹಿತವಾಗಿದೆ. ವೈಷಮ್ಯಕ್ಕೆ, ಮೇಲು-ಕೀಳೆಂಬ ಭಾವನೆಗೆ ಈ ಸಮಾಜದಲ್ಲಿ ಎಳ್ಳಿನಷ್ಟೂ ಎಡೆಯಿಲ್ಲ. ಆದರೆ, ಜೀವಿತ, ಜಾಗೃತ ಸಮಾಜದ ಭುಜದ ಮೇಲೆ ಮತ್ತೊಂದು ಗುರುತರವಾದ ಉತ್ತರದಾಯಿತ್ವ ಬಿದ್ದಿರುತ್ತದೆ. ಅನೇಕ ಕಾರಣಗಳಿಂದ, ಕೆಲವು ಮಾನವಸಮೂಹಗಳು ವಿದ್ಯೆ, ಸಂಪತ್ತು, ಶಕ್ತಿ, ಸೌಜನ್ಯ ಮೊದಲಾದವುಗಳಲ್ಲಿ ಹಿಂದೆ ಬಿದ್ದಿರಬಹುದು. ಅಂತಹ ಹಿಂದುಳಿದ ಜನರನ್ನು ಹಿಂದೆಯೇ ಬಿಟ್ಟು ಮುಂದುವರೆದವರು ಮಾತ್ರ ಇನ್ನೂ ಮುಂದೆ ಹೋಗುವುದನ್ನು ವೇದಗಳು ಸಹಿಸಲಾರವು. ದೀನ, ಹೀನ, ರುಗ್ಣ, ದರಿದ್ರರಿಗೆ ಗೃಹಸ್ಥರು ಯಾವ ರೀತಿ ಸಹಾಯ ನೀಡಬೇಕೆಂಬುದನ್ನು ಬಲಿವೈಶ್ವದೇವ ಪ್ರಕರಣದಲ್ಲಿ ಚರ್ಚಿಸಿದ್ದೇವೆ. 
     ಇಲ್ಲಿ ಈ ಕೆಳಕಂಡ ಮಂತ್ರವನ್ನು ಕುರಿತು ಆಲೋಚಿಸೋಣ.
ನಕಿರ್ದೇವಾ ಮಿನೀಮಸಿ ನಕಿರಾ ಯೋಪಯಾಮಸಿ ಮಂತ್ರಶ್ರುತ್ಯಂ ಚರಾಮಸಿ |
ಪಕ್ಷೇಭಿರಪಿಕಕ್ಷೇಭಿರತ್ರಾಭಿ ಸಂ ರಭಾಮಹೇ || (ಋಕ್.೧೦.೧೩೪.೭.)
     [ದೇವಾಃ] ಶುಭ ಗುಣ ಭೂಷಿತರೂ, ಜಾಗರೂಕರೂ ಆದ ನಾವು, [ನಕಿಃ ಮಿನೀಮಸಿ] ಹಿಂಸೆಯನ್ನೂ ಮಾಡುವುದಿಲ್ಲ. [ನಕಿಃ ಅಯೋಪಯಾಮಸಿ] ಜನರನ್ನು ಬೇರೆ ಬೇರೆಯಾಗಿ ಸೀಳುವುದೂ ಇಲ್ಲ. [ಮಂತ್ರಶ್ರುತ್ಯಮ್] ಮಂತ್ರಗಳಲ್ಲಿ ನಾವು ಆಲಿಸಿರುವ ಜ್ಞಾನದಂತೆ, [ಚರಾಮಸಿ] ನಡೆದುಕೊಳ್ಳುತ್ತೇವೆ. [ಅತ್ರ] ಇಲ್ಲಿ, [ಕಕ್ಷೇಭಿಃ ಅಪಿ] ತುಚ್ಛ ಸ್ಥಿತಿಯಲ್ಲಿ ಇರುವ [ಪಕ್ಷೇಭಿಃ ಅಪಿ] ಪಕ್ಷಗಳೊಂದಿಗೂ ಕೂಡ [ಸಮ್] ಸೇರಿ [ಅಭಿ ರಭಾಮಹೇ] ಎಲ್ಲೆಡೆಯಿಂದಲೂ ಕಾರ್ಯೋನ್ಮುಖರಾಗುತ್ತೇವೆ. 
     ಸಾಮಾಜಿಕ ನೇತೃತ್ವಗಳ ಸಂಕಲ್ಪವನ್ನು ಋಗ್ವೇದ ಹೀಗೆ ಬಣ್ಣಿಸಿದೆ. ಆದುದರಿಂದ, ಸಮಾಜ ಯಾರನ್ನೂ ಹಿಂದುಳಿಯಲು ಬಿಡುವಂತಿಲ್ಲ. ಕೊನೆಗೆ, ಜನಹಿತಘಾತಕವಾದ ವೃತ್ತಿಗಳಲ್ಲಿ ನಿರತರಾಗಿರುವ ಜನರನ್ನೂ ಸಹ ಮುಂದುವರೆಸಿಯೇ ಸಮಾಜ ತನ್ನ ಗೌರವವನ್ನು ಕಾಪಾಡಿಕೊಳ್ಳಬಲ್ಲದು. ಅದಕ್ಕಾಗಿಯೇ ಅಥರ್ವವೇದ ಹೇಳುತ್ತಲಿದೆ:-
ಸಂ ವೋ ಮನಾಂಸಿ ಸಂ ವ್ರತಾ ಸಮಾಕೂತೀರ್ನಮಾಮಸಿ |
ಅಮೀ ಯೇ ವಿವ್ರತಾ ಸ್ಥನ ತಾನ್ವಃ ಸಂ ನಮಯಾಮಸಿ || (ಅಥರ್ವ.೩.೮.೫.)
     [ವಃ ಮನಾಂಸಿ] ನಿಮ್ಮ ಮನಸ್ಸುಗಳು, [ಸಮ್] ಒಂದಾಗಿರಲಿ. [ವ್ರತಾ] ವ್ರತಗಳೂ, [ಸಮ್] ಸಮಾನವಾಗಿರಲಿ. [ಆಕೂತಿಃ] ನಿಮ್ಮ ನುಡಿಗಳು, [ಸಮ್] ಸಮಾನವಾಗಿರಲಿ. [ನಮಾಮಸಿ] ನಾವು ವಿನೀತರಾಗಿರುತ್ತೇವೆ. [ವಃ] ನಿಮ್ಮ ನಡುವೆ [ಯೇ ಅಮೀ] ಯಾವ ಈ ಜನರು [ವಿವ್ರತಾ ಸ್ಥನ] ವಿಪರೀತ ವ್ರತರಾಗಿ ವಿರುದ್ಧ ಸಂಕಲ್ಪದವರಾಗಿದ್ದಾರೋ, [ತಾನ್] ಅವರನ್ನು [ಸಮ್] ಒಳ್ಳೆಯ ರೀತಿಯಿಂದಲೇ [ಸಂ ನಮಯಾಮಸಿ] ವಿನೀತರನ್ನಾಗಿ ಮಾಡುತ್ತೇವೆ.
     ಪವಿತ್ರ ವೇದಗಳಲ್ಲಿ ಇಂತಹ ಭವ್ಯಮಂತ್ರಗಳು ಬೇಕಾದಷ್ಟು ತುಂಬಿವೆ. ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಜನೈತಿಕ, ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಅತ್ಯಂತ ಉನ್ನತತಮ ಆದರ್ಶವನ್ನು ಒದಗಿಸುವ ಸಾರ್ವಭೌಮ ಹಾಗೂ ಸಾರ್ವಕಾಲಿಕ ಶಾಸ್ತ್ರಗಳು ಭಗವದುಕ್ತವಾದ ಈ ವೇದಗಳು. ಜಿಜ್ಞಾಸುಗಳಾಗಿ - ಪೂರ್ವಾಗ್ರಹದೂಷಿತ ದೃಷ್ಟಿಯಿಂದಲ್ಲ - ವೇದಾಧ್ಯಯನ ಮಾಡಿ, ಅವುಗಳ ಆದೇಶದಂತೆ ನಡೆದಲ್ಲಿ, ಒಂದು ಜಾತಿಯಲ್ಲ, ಒಂದು ಭಾಷೆಯಲ್ಲ, ಸಂಪೂರ್ಣ ಮಾನವಸಮಾಜವೇ ಎಲ್ಲ ದೃಷ್ಟಿಗಳಿಂದಲೂ ಪೂರ್ಣಪ್ರಗತಿಯನ್ನು ಸಾಧಿಸಬಲ್ಲದು. ವೇದಾನುಯಾಯಿಗಳಾದ ಯಾರೂ ಹಿಂದುಳಿಯುವ ಪ್ರಶ್ನೆಯೇ ಇಲ್ಲ. 'ಸಂ ಅಜತಿ ಇತಿ ಸಮಾಜಃ' - ಒಂದುಗೂಡಿ ಮುಂದುವರೆಯುವುದೇ ಸಮಾಜ. ಹಾಗಲ್ಲದೇ, ಹಿಂದುಳಿದವರನ್ನು ಹಿಂದೆಯೇ ಬಿಟ್ಟು, ಕೆಲವರು ಮಾತ್ರ ಮುಂದುವರೆಯಲು ಅವಕಾಶ ಕೊಡುವ ಸಮಾಜ ಸಮಾಜವೇ ಅಲ್ಲ. ಅದನ್ನು 'ದುಃ+ಅಜ = ದುರಾಜ' ಎನ್ನಬೇಕಾದೀತು. ಬನ್ನಿ, ಕೊನೆಗೊಂದು ಸ್ಫೂರ್ತಿದಾಯಕ ಸಂದೇಶವನ್ನಾಲಿಸಿ, ಈ ಸಮಾಜ ಪ್ರಕರಣವನ್ನು ಸಮಾಪ್ತಗೊಳಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || (ಅಥರ್ವ.೬.೬೪.೩.)
     [ಯಥಾ ವಃ ಸು ಸಹ ಅಸತಿ] ನಿಮ್ಮೆಲ್ಲರ ಕಲ್ಯಾಣವೂ ಒಟ್ಟಿಗೇ ಆಗುವಂತೆ, [ವಃ ಆಕೂತಿಃ] ನಿಮ್ಮ ಆಲೋಚನೆ, [ಸಮಾನೀ] ಸಮಾನವಾಗಿರಲಿ. [ವಃ ಹೃದಯಾನಿ] ನಿಮ್ಮ ಹೃದಯಗಳು [ಸಮಾನಾ] ಸಮಾನವಾಗಿರಲಿ. [ವಃ ಮನಃ] ನಿಮ್ಮ ಮನಸ್ಸು, [ಸಮಾನಂ ಅಸ್ತು] ಸಮಾನವಾಗಿರಲಿ.
*************
-ಪಂ. ಸುಧಾಕರ ಚತುರ್ವೇದಿ.

ಗುರುವಾರ, ಜುಲೈ 18, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೨

     ಇನ್ನೊಂದು ಕಡೆ ಅದೇ ವೇದ ಹೇಳುತ್ತದೆ:-
ಸಹೃದಯಂ ಸಾಂಮನಸ್ಯಮವಿದ್ವೇಷಂ ಕೃಣೋಮಿ ವಃ |
ಅನ್ಯೋ ಅನ್ಯಮಭಿ ಹರ್ಯತ ವತ್ಸಂ ಜಾತಮಿವಾಘ್ನ್ಯಾ || (ಅಥರ್ವ.೩.೩೦.೧.)
     [ವಃ] ನಿಮ್ಮೆಲ್ಲರಿಗೂ, [ಸಹೃದಯಮ್] ಸಮಾನ ಭಾವನೆಯಿಂದ ತುಡಿಯುವ ಹೃದಯವನ್ನೂ, [ಸಾಮ್ಮನಸ್ಯಮ್] ಒಂದೇ ಮಾರ್ಗದಲ್ಲಿ ನಡೆಯುವ ಮನಸ್ಸನ್ನೂ, [ಅವಿದ್ವೇಷಮ್] ವಿದ್ವೇಷರಹಿತವಾದ ಒಲವನ್ನೂ, [ಕೃಣೋಮಿ] ನೀಡುತ್ತೇನೆ. [ಅಘ್ನ್ಯಾ] ಎಂದಿಗೂ ಕೊಲ್ಲಲ್ಪಡಬಾರದ ಗೋವು, [ಜಾತಂ ವತ್ಸಂ ಇವ] ನವಜಾತ ಕರುವನ್ನು ಪ್ರೀತಿಸುವಂತೆ, [ಅನ್ಯೋ ಅನ್ಯಂ ಅಭಿಹರ್ಯತ] ಒಬ್ಬರನ್ನೊಬ್ಬರು ಪ್ರೀತಿಸಿರಿ. 
     ಇದು ನಿಜ. ವೇದಗಳ ಪ್ರಕಾಶನವಾಗಿರುವುದು ಮಾನವ ಮಾತ್ರರನ್ನು ಒಂದುಗೂಡಿಸುವುದಕ್ಕಾಗಿ. ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುವುದಕ್ಕಲ್ಲ. ವೇದಜ್ಞಾನದ ಜ್ಯೋತಿ ಬೆಳಗುತ್ತಿರುವೆಡೆ, ಈರ್ಷ್ಯಾಸೂಯೆಗಳ, ರಾಗದ್ವೇಷಗಳ ಅಂಧಕಾರ ಸುಳಿಯುವಂತಿಲ್ಲ. ಮಾನವರೆಲ್ಲರ ಹೃದಯದಲ್ಲಿಯೂ ಪರಸ್ಪರ ವಿಶ್ವಾಸದ ಭಾವನೆಯನ್ನು ಒಡಮೂಡಿಸುವುದಕ್ಕಾಗಿ ವೇದ ಹೇಳುತ್ತದೆ:- 
ಯೇನ ದೇವಾ ನ ವಿಯಂತಿ ನೋ ಚ ವಿದ್ವಿಷತೇ ಮಿಥಃ |
ತತ್ಕೃಣ್ಮೋ ಬ್ರಹ್ಮ ವೋ ಗೃಹೇ ಸಂಜ್ಞಾನಂ ಪುರುಷೇಭ್ಯಃ || (ಅಥರ್ವ.೩.೩೦.೪.)
     [ಯೇನ] ಯಾವುದರಿಂದ [ದೇವಾಃ ನ ವಿಯಂತಿ] ವಿದ್ವಜ್ಜನರು ಬೇರೆ ಬೇರೆಯಾಗಿ ಒಬ್ಬರಿಂದೊಬ್ಬರು ದೂರ ಸರಿಯುವುದಿಲ್ಲವೋ, [ಚ] ಮತ್ತು ಪರಸ್ಪರ, [ನ ವಿದ್ವಷತೇ] ದ್ವೇಷಿಸುವುದಿಲ್ಲವೋ. [ತತ್ ಬ್ರಹ್ಮ] ಆ ವೇದಜ್ಞಾನವನ್ನು, [ವಃ ಗೃಹೇ] ನಿಮ್ಮ ಗೃಹಗಳಲ್ಲಿ [ಕೃಣ್ಮಃ] ಮಾಡುತ್ತೇವೆ. 
     ವಸ್ತುತಃ ಒಬ್ಬರನ್ನೊಬ್ಬರು ಅರಿತುಕೊಳ್ಳುವುದೇ ಪರಸ್ಪರ ಪ್ರೇಮದ ಆಧಾರಶಿಲೆ. ವೇದಗಳು ಆ ಆಧಾರಶಿಲೆಯನ್ನು ನಿಃಸಂದೇಹವಾದ ಶೈಲಿಯಲ್ಲಿ ಪ್ರತಿಪಾದಿಸುತ್ತವೆ. ಕೇಳಿರಿ:-
ಸಂ ಜಾನೀಧಂ ಸಂ ಪೃಚ್ಯಧ್ವಂ ಸಂ ವೋ ಮನಾಂಸಿ ಜಾನತಾಮ್ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ || (ಅಥರ್ವ.೬.೬೪.೧.)
     [ಯಥಾ] ಹೇಗೆ ನಡೆದು, [ಪೂರ್ವೇ ದೇವಾಃ] ಅಗ್ರಗಾಮಿಗಳಾದ ವಿದ್ವಾಂಸರು, [ಸಂಜಾನಾನಾಃ] ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಾ, [ಭಾಗಂ ಉಪಾಸತೇ] ತಮ್ಮ ಭಾಗದ ಕರ್ತವ್ಯವನ್ನು ನಿರ್ವಹಿಸುತ್ತಾರೋ, ಅಥವಾ, ತಮ್ಮ ಭಾಗ್ಯವನ್ನು ಕಂಡುಕೊಳ್ಳುತ್ತಾರೋ, ಹಾಗೂ ಭಗವಂತನನ್ನು ಉಪಾಸಿಸುತ್ತಾರೋ ಹಾಗೆಯೇ, [ಸಂ ಜಾನೀಧ್ವಮ್] ನೀವೂ ಒಬ್ಬರನ್ನೊಬ್ಬರು ಅರಿತುಕೊಳ್ಳಿರಿ. [ಸಂ ಪೃಚ್ಛಧ್ವಮ್] ಒಬ್ಬರ ಸಂಪರ್ಕದಲ್ಲಿ ಒಬ್ಬರು ಬನ್ನಿರಿ. [ಜಾನತಾಂ ವಃ] ಈ ರೀತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಿಮ್ಮ, [ಮನಾಂಸಿ] ಮನಸ್ಸುಗಳನ್ನು [ಸಮ್] ಒಂದಕ್ಕೊಂದು ಹೊಂದಿಸಿಕೊಂಡು ನಡೆಯಿರಿ.
     ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಒಬ್ಬರ ಮೇಲೊಬ್ಬರಿಗೆ ಪರಸ್ಪರ ಪ್ರೇಮಭಾವ ಬೆಳೆದುಬರಬೇಕಾದರೆ, ಎಲ್ಲರೂ ಸಮಾನರು ಎಂಬ ಧೃಢವಾದ ತತ್ತ್ವ ಹೃದ್ಗತವಾಗಬೇಕು. ವರ್ಣವ್ಯವಸ್ಥಾಪ್ರಕರಣದಲ್ಲಿ ವೇದೋಕ್ತ ಸಮಾನತಾ ಸಿದ್ಧಾಂತವನ್ನು ಸಾಕಷ್ಟು ಚರ್ಚಿಸಿದ್ದೇವೆ. ಮಾನವಸಮಾಜದಲ್ಲಿ ಎಲ್ಲರ ಅಧಿಕಾರಗಳೂ ಸಮಾನವೇ. ಜಾತಿಯ ಪ್ರಶ್ನೆಯಂತೂ ವೇದಗಳಲ್ಲಿ ಇಲ್ಲವೇ ಇಲ್ಲ ಎಂದ ಮೇಲೆ ಸ್ಪೃಶ್ಯ-ಅಸ್ಪೃಶ್ಯ. ಹಿಂದೂ, ಅಹಿಂದೂ ಎಂಬ ನರನಿರ್ಮಿತ ಭೇದವೂ ಇಲ್ಲ. ಆದುದರಿಂದ ಅಥರ್ವವೇದ ತೆರೆನುಡಿಗಳಲ್ಲಿ ಮುಚ್ಚುಮರೆಯಿಲ್ಲದೆ ಸಂಶಯಕ್ಕೆಡೆಯಿಲ್ಲದಂತೆ ಈ ರೀತಿ ಘೋಷಿಸುತ್ತಿದೆ:-
ಸಮಾನೀ ಪ್ರಪಾ ಸಹ ವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ |
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ || (ಅಥರ್ವ.೩.೩೦.೬.)
     ಮಾನವರೇ, [ವಃ] ನಿಮ್ಮ, [ಪ್ರಪಾ] ಜಲಾಶಯ, [ಸಮಾನೀ] ಒಂದೇ ಆಗಿರಲಿ. [ಅನ್ನಭಾಗಃ] ಆಹಾರ ಭಾಗವೂ [ಸಹ] ಒಂದಿಗೇ ಆಗಲಿ. [ವಃ] ನಿಮ್ಮೆಲ್ಲರನ್ನೂ [ಸಮಾನೇ ಯೋಕ್ತ್ರೇ] ಸಮಾನವಾದ ದರ್ಮಬಂಧನದಲ್ಲಿ [ಸಹ] ಜೊತೆಯಾಗಿ [ಯುನಜ್ಮಿ] ಸೇರಿಸುತ್ತೇನೆ. [ಆರಾಃ] ಚಕ್ರದ ಅರೆಕಾಲುಗಳು [ನಾಭಿಮ್] ಚಕ್ರದ ಗುಂಬವನ್ನು [ಅಭಿತಃ ಇವ] ಸುತ್ತಿನಿಂದ ಸ್ಪರ್ಶಿಸುವಂತೆ [ಸಮ್ಯಂಚಃ] ನೀವೆಲ್ಲರೂ ಒಂದಾಗಿ [ಅಗ್ನಿಮ್] ತೇಜೋಮಯನಾದ ಪ್ರಭುವನ್ನು [ಸಪರ್ಯತ] ಆರಾಧಿಸಿರಿ.
**********
-ಪಂ.ಸುಧಾಕರ ಚತುರ್ವೇದಿ.

ಸೋಮವಾರ, ಜುಲೈ 15, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೧

     ವೇದಗಳಲ್ಲಿ ಸಮಸ್ತ ಸಂಘಟನ ನಿಯಮಗಳೂ ಇವೆ. ಆಧ್ಯಾತ್ಮಿಕ ಉತ್ಕರ್ಷವನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಪ್ರಯತ್ನದಿಂದಲೇ ಗಳಿಸಿಕೊಳ್ಳಬೇಕೆಂಬುದು ಸತ್ಯವಾದರೂ, ಉತ್ತಮ ಆದರ್ಶಗಳನ್ನಿಟ್ಟುಕೊಂಡು ನಡೆಯುವ ಸಮಾಜವೂ ಮಾನವನ ಉನ್ನತಿಗೆ ಸಾಧಕವಾಗಬಲ್ಲದು. ಸಮಾಜದ ರಕ್ಷಣೆಯಿಲ್ಲದೆ ಜೀವಿಸುವ ವ್ಯಕ್ತಿಯ ದೃಷ್ಟಿಕೋನ, ಅತ್ಯಂತ ಸಂಕುಚಿತವಾಗಿಹೋಗುವುದು. ಮತ್ತು, ಕಷ್ಟಕಾಲದಲ್ಲಿ ಆ ವ್ಯಕ್ತಿ ಆಶ್ರಯರಹಿತನಾಗಿ ನೋಯುವ ಪರಿಸ್ಥಿತಿಯೂ ಬರುತ್ತದೆ. ಸಾಮಾಜಿಕ ಜೀವನ ಇಹದ ಏಳಿಗೆಗೆ ಪೂರ್ಣತಃ ಮತ್ತು ಪರದ ಸಾಧನೆಗೆ ಅಂಶತಃ ನೆರವನ್ನು ನೀಡುತ್ತದೆ. ವಸ್ತುತಃ ಸಾಮಾಜಿಕ ಜೀವನವಿಲ್ಲದಿದ್ದಲ್ಲಿ ವೈಯಕ್ತಿಕ ಜೀವನ ನೀರಸವಾಗಿ ಹೋಗುತ್ತದೆ. ಪ್ರತಿ ಸದಸ್ಯನಿಗೂ ನೆರವನ್ನಿತ್ತು, ಪ್ರತಿಯೊಬ್ಬ ಸದಸ್ಯನಿಂದಲೂ ನೆರವನ್ನು ಪಡೆಯುವ ಸಂಘಟನವನ್ನೇ ಸಮಾಜವೆಂದು ಕರೆಯುತ್ತಾರೆ. ವೇದಗಳಲ್ಲಿ ಸಾಮಾಜಿಕ ಜೀವನದ ಭವ್ಯವಾದ ಆದೇಶವಿದೆ. ಸಮಾಜದ ಆಶ್ರಯದಲ್ಲಿ ಮುಂದುವರೆಯುವ ನೀತಿಯನ್ನು ಪ್ರತಿಪಾದಿಸುವ ಈ ಮಂತ್ರವನ್ನು ನೋಡಿರಿ:-
ಹಂಸಾ ಇವ ಶ್ರೇಣಿಶೋ ಯತಾನಾಃ ಶುಕ್ರಾಃ ವಸಾನಾಃ ಸ್ವರವೋ ನ ಆಗುಃ |
ಉನ್ನೀಯಮಾನಾಃ ಕವಿಭಿಃ ಪುರಸ್ತಾದ್ ದೇವಾ ದೇವಾನಾಮಪಿ ಯಂತಿ ಪಾಥಃ || (ಋಕ್.೩.೮.೯.)
     [ದೇವಾಃ] ದಿವ್ಯಗುಣಭೂತರೂ, ಜ್ಞಾನಿಗಳೂ ಆದ ಸಜ್ಜನರು, [ಹಂಸಾಃ] ಇವ ಹಂಸಗಳ ಹಾಗೆ, [ಶ್ರೇಣಿಶಃ ಯತಾನಾಃ] ಶ್ರೇಣಿಬದ್ಧರಾಗಿ ಸಾಮಾಜಿಕವಾಗಿ ಪ್ರಯತ್ನ ಪಡುತ್ತಾ [ಶುಕ್ರಾ ವಸಾನಾಃ] ಶುಭ್ರವಾದ ಜೀವನವನ್ನು ನಡೆಸುತ್ತಾ, [ಸ್ವರವಃ] ಪ್ರೇಮಪೂರ್ವಕವಾಗಿ ಮಾತನಾಡುತ್ತಾ, [ನಃ] ನಮ್ಮ ಬಳಿಗೆ, [ಆಗುಃ] ಬರುತ್ತಾರೆ. [ಕವಿಭಿಃ] ತತ್ತ್ವದರ್ಶಿಗಳಿಂದ, [ಪುರಸ್ತಾತ್] ಮುಂದಕ್ಕೆ [ಉನ್ನೀಯಮಾನಾಃ] ನಡೆಸಲ್ಪಡುವವರಾಗಿ, [ದೇವಾನಾಂ ಪಾಥಃ ಅಪಿ] ಪ್ರಕಾಶಮಯರಾದ, ತೇಜಸ್ವಿಗಳಾದ ವಿದ್ವಾಂಸರ ಮಾರ್ಗವನ್ನೇ, [ಯಂತಿ] ಹೊಂದುತ್ತಾರೆ.
     ಸಮಾಜದ ಪ್ರತಿಯೊಬ್ಬ ಸದಸ್ಯನೂ, ಪ್ರತಿಯೊಬ್ಬಳು ಸದಸ್ಯೆಯೂ ಶುಭ್ರವಾದ ನಡೆನುಡಿಗಳಿಂದ ಸಂಪನ್ನರಾಗಿರಬೇಕು. ಸಮಾಜದ ನಾಯಕರೂ ಉನ್ನತಸ್ತರದ ಚಾರಿತ್ರ್ಯವಂತರೇ ಆಗಿರಬೇಕು. ಸಮಾಜವಿರುವುದು ವ್ಯಕ್ತಿಯ ವಿಕಾಸವನ್ನು ತಡೆಗಟ್ಟುವುದಕ್ಕಲ್ಲ, ಅವನಿಗೆ ವಿಕಾಸಪಥದಲ್ಲಿ ನೆರವನ್ನು ನೀಡುವುದಕ್ಕೆ. ವೇದಗಳು ಸಾಮಾಜಿಕ ಜೀವನಕ್ಕೆ ಎಷ್ಟು ಮಹತ್ವ ಕೊಡುತ್ತವೆ ಎಂದರೆ, ಮುಕ್ತಿಯಂತಹ, ವ್ಯಕ್ತಿಪ್ರಯತ್ನಕ್ಕೇ ಪ್ರಾಧಾನ್ಯ ನೀಡುವ ವಿಷಯವನ್ನು ಪ್ರಸ್ತಾಪಿಸುವಾಗಲೂ ಕೂಡ, ಮೋಕ್ಷಗಾಮಿಗಳ ವರ್ಣನೆ ಮಾಡುವಾಗಲೂ ಕೂಡ, ಋಗ್ವೇದ, ಹಂಸಾ ಇವ ಶ್ರೇಣಿಷೋ ಯತಂತೇ|| (ಋಕ್.೧.೧೬೩.೧೦.) - ಹಂಸಗಳಂತೆ ಗುಂಪುಕೂಡಿ ಯತ್ನಿಸುತ್ತಾರೆ -  ಎಂದು ಹೇಳುತ್ತದೆ. ಸಾಮಾಜಿಕ ಜೀವನಕ್ಕೆ ಹಂಸಶ್ರೇಣಿಯ ಉದಾಹರಣೆ ನೀಡುವಾಗಲೂ, ವೇದ ಒಂದು ಭವ್ಯ ಆದರ್ಶವನ್ನು ಎದುರಿಗಿಡುತ್ತದೆ. ಹಂಸಗಳು ಸಾಂಘಿಕ ಜೀವನ ನಡೆಸುವುದಲ್ಲದೇ ಪ್ರತಿಯೊಂದೂ ಶುಭ್ರವಾಗಿರುತ್ತದೆ. ಸಮಾಜದ ಪ್ರತಿಯೊಬ್ಬ ಸದಸ್ಯನೂ ನಿರ್ಮಲವಾದ, ಪವಿತ್ರವಾದ ಜೀವನವನ್ನೇ ನಡೆಸಬೇಕೆಂಬ ಆದರ್ಶ ಈ ದೃಷ್ಟಾಂತದಲ್ಲಿದೆ. ವ್ಯಷ್ಟಿಗಳಿಂದ ಸಮಷ್ಟಿ, ಸಮಷ್ಟಿಯಿಂದ ವ್ಯಷ್ಟಿಗೆ ಸುರಕ್ಷತೆಯ ಹಾಗೂ ಬೆಂಬಲದ ಭರವಸೆ. ವೈದಿಕ ಜೀವನದ ಮಾರ್ಗ, ಉದಾರಾತ್ಮರ, ಆತ್ಮೌಪಮ್ಯ ದೃಷ್ಟಿಯನ್ನು ರೂಢಿಸಿಕೊಂಡ ವಿಶಾಲಾಂತಃಕರಣರ ಮಾರ್ಗ. ಸ್ವಾರ್ಥಿಗಳಿಗೆ ಈ ಮಾರ್ಗ ಎಂದಿಗೂ ಪ್ರಿಯವೆನಿಸದು. ಒಬ್ಬರಿಗೊಬ್ಬರು ನೆರವಾಗಿ ನಿಂತು, ಒಂದಾಗಿ, ಒಟ್ಟುಗೂಡಿ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳಿರಿ ಎನ್ನುವ ವೇದಾದೇಶದ ಒಂದು ಸಾರ್ವಭೌಮ ಸಂದೇಶವನ್ನು ಆಲಿಸಿರಿ:-
ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ |
ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ || (ಅಥರ್ವ.೩.೩೦.೫.)
     ವೇದಜ್ಞಾನದಾತೃ ಪರಮಾತ್ಮನ ಕರೆಯಿದು. ಮಾನವರೇ, [ಜ್ಯಾಯಸ್ವಂತಃ] ಉನ್ನತಾದರ್ಶವಂತರಾಗಿರಿ. [ಚಿತ್ರಿನಃ] ತಮ್ಮ ಉತ್ತರದಾಯಿತ್ವವನ್ನು ತಿಳಿದವರೂ, ಜಾಗರೂಕರೂ ಆಗಿರಿ. [ಮಾ ವಿಯೌಷ್ಟ] ಒಬ್ಬರಿಂದೊಬ್ಬರು ಭಿನ್ನ ಭಿನ್ನರಾಗಬೇಡಿ, ಒಬ್ಬರಿಂದೊಬ್ಬರು ದೂರ ಸರಿಯಬೇಡಿ. [ಸಂ ರಾಧಯಂತಃ] ಒಗ್ಗಟ್ಟಾಗಿ ಸಂಪದರ್ಜನೆ ಮಾಡಿರಿ. [ಸಧುರಾಃ] ಒಂದೇ ಸಾರ್ವಭೌಮ ಧರ್ಮದ ನೊಗವನ್ನು ಹೊತ್ತು ಸಂಚರಿಸಿರಿ. [ಅನ್ಯಃ ಅನ್ಯಸ್ಮೈ ವಲ್ಗು ವದಂತ] ಒಬ್ಬರಿಗೊಬ್ಬರು ಒಳ್ಳೆಯ ಮಾತುಗಳನ್ನಾಡುತ್ತಾ, [ಏತ] ಪ್ರಗತಿಯನ್ನು ಸಾಧಿಸಿರಿ. [ವಃ] ನಿಮ್ಮನ್ನು, [ಸಧ್ರೀಚೀನಾನ್] ಒಂದೇ ಮಾನವಪಥದಲ್ಲಿ ನಡೆಯುವವರನ್ನಾಗಿಯೂ, [ಸಂ ಮನಸಃ] ಸಮಾನ ಮನಸ್ಕರನ್ನಾಗಿಯೂ, [ಕೃಣೋಮಿ] ಮಾಡುತ್ತೇನೆ. ಎಂತಹ ಆಕರ್ಷಣೀಯವಾದ ಸಂದೇಶವಿದು!
***********************
-ಪಂ. ಸುಧಾಕರ ಚತುರ್ವೇದಿ.

ಭಾನುವಾರ, ಜುಲೈ 7, 2013

ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸ


     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಬಾಲಶಿಬಿರದಲ್ಲಿ ಉತ್ಸಾಹದಿಂದ ಪಾಲುಗೊಂಡಿದ್ದ ಮಕ್ಕಳು ವೇದಾಭ್ಯಾಸ ಮಾಡುತ್ತಿರುವುದು. 'ದುಡಿದು ತಿನ್ನಬೇಕು, ಸೋಮಾರಿಗಳು ಆಹಾರದ ಕೊಲೆಗಾರರು' ಎಂಬರ್ಥದ ಮಂತ್ರ ಹೇಳುತ್ತಿರುವ ಪುಟಾಣಿಗಳು!

ಶುಕ್ರವಾರ, ಜುಲೈ 5, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ

ವೇದೋಕ್ತ ಜೀವನ ಶಿಬಿರ

ಆಗಸ್ಟ್ 23,24 ಮತ್ತು 25

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ವಿಶ್ವನಾಥ್ ಕಿಣಿ-ಪುಣೆ 
2. ಮೋಹನ್ ಕುಮಾರ್, ನಂಜನ ಗೂಡು
3.ಗುರುಪ್ರಸಾದ್, ಭದ್ರಾವತಿ
4. ಮಹೇಶ್, ಭದ್ರಾವತಿ
5. ಶಿವಕುಮಾರ್, ಬೆಂಗಳೂರು
6. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
7. ವಿನಯ್ ಕಾಶ್ಯಪ್, ಬೆಂಗಳೂರು
8 .ಶರಣಪ್ಪ, ಗದಗ್
9. ವಿಜಯ್ ಹೆರಗು, ಬೆಗಳೂರು
10. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
11. ಕೆ.ಜಿ.ಕಾರ್ನಾಡ್,ಊರು ತಿಳಿಸಿಲ್ಲ.

ಹಾಸನ ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ಕವಿ ನಾಗರಾಜ್
2. ಶ್ರೀನಿವಾಸ್, AIR
3. ಹರಿಹರಪುರಶ್ರೀಧರ್
4. ಶ್ರೀ ಹರ್ಷ
5. ಚಿನ್ನಪ್ಪ
6. ಅಶೋಕ್
7. ನಟರಾಜ್ ಪಂಡಿತ್
8. ಶ್ರೀ ನಾಥ್        
9. ಸತೀಶ್
10.ಲೋಕೇಶ್
11.ಆದಿಶೇಷ್
12.ಕೇಶವಮೂರ್ತಿ
13.ಬೈರಪ್ಪಾಜಿ, 

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 

ವಿಶೇಷ:
1. ಸ್ಥಳೀಯವಾಗಿ ಪತ್ರಿಕೆಗಳಿಗೆ ಇನ್ನೂ ಮಾಹಿತಿ ನೀಡಿಲ್ಲ
2. ಇನ್ನೂ  ಕರಪತ್ರ ಮುದ್ರಣವಾಗಿಲ್ಲ
3. ಕೇವಲ ವೆಬ್ ಸೈಟ್ ಮಾಹಿತಿಯಿಂದ ಅಗತ್ಯ ಸಂಖ್ಯೆ ತಲುಪಿಯಾಗಿದೆ. 
4. ಸಂಜೆ ನಡೆಯುವ ಉಪನ್ಯಾಸಕ್ಕೆ    ಸಾರ್ವಜನಿಕರಿಗೂ ಪ್ರವೇಶ ವಿರುವುದರಿಂದ ಸ್ಥಳೀಯರು ಉಪನ್ಯಾಸದ ಲಾಭ 
    ಪಡೆಯುತ್ತಾರೆ. ಶಿಬಿರಕ್ಕಾಗಿ ಪ್ರಚಾರವನ್ನೇನೂ ಮಾಡುವುದಿಲ್ಲ.

ವೇದೋಕ್ತ ಜೀವನ ಪಥ: ಮಾನವಧರ್ಮ - ೨

ಅಥರ್ವವೇದ ಕೂಗಿ ಕೂಗಿ ಹೇಳುತ್ತಲಿದೆ:-
ಉತ್ಕ್ರಾಮಾತಃ ಪುರುಷ ಮಾವ ಪತ್ಥಾ ಮೃತ್ಯೋಃ ಪಡ್ವೀಶಮವಮುಂಚಮಾನಃ |
ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ || (ಅಥರ್ವ.೮.೧.೪.)
     [ಪುರುಷ] ಹೇ ದೇಹನಿವಾಸೀ ಜೀವ! [ಮೃತ್ಯೋಃ ಪಡ್ವೀಷಂ ಅವಮುಂಚಮಾನಃ] ಸಾವಿನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, [ಆತಃ ಉತ್ಕ್ರಾಮ] ಇಲ್ಲಿಂದ ಮೇಲಕ್ಕೆದ್ದು ನಡೆ. [ಮಾ ಅವ ಪತ್ಥಾ] ಕೆಳಗೆ ಬೀಳಬೇಡ. [ಅಸ್ಮಾತ್ ಲೋಕಾತ್] ಈ ಲೋಕದಿಂದ, [ಮಾ ಚ್ಛಿತ್ಥಾ] ಕಡಿದು ಹೋಗಬೇಡ. [ಅಗ್ನೇಃ] ರಾತ್ರಿಯಲ್ಲಿ ಅಗ್ನಿಯ, [ಸೂರ್ಯಸ್ಯ] ಹಗಲಿನಲ್ಲಿ ಸೂರ್ಯನ, [ಸಂದೃಶಃ] ಸಮಾನವಾಗಿ ಪ್ರಕಾಶಿಸು.
     ಒಂದೊಂದು ಶಬ್ದವೂ ಸ್ಫೂರ್ತಿಯ ಬುಗ್ಗೆ! ಮಾನವ, ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು. ಇದೀಗ ಧರ್ಮಮಾರ್ಗದ, ಉತ್ಥಾನ ಮಾರ್ಗದ ಒಂದು ಆಕರ್ಷಕವಾದ ಚಿತ್ರ.
*******************************
-ಪಂ. ಸುಧಾಕರ ಚತುರ್ವೇದಿ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2011/04/blog-post_26.html

ಮಂಗಳವಾರ, ಜುಲೈ 2, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೪

     ವೇದಗಳು, ಅಸ್ಯ ಪ್ರಿಯಸ್ಯ ಶರ್ಮಣ್ಯ ಹಿಂಸಾನಸ್ಯ ಸಶ್ಚಿರೇ || (ಋಕ್.೫.೬೪.೩.) -  ಅಹಿಂಸಕನಾದ ಈ ಪ್ರಿಯ ಮಾನವನ ಆಶ್ರಯದಲ್ಲಿ ಎಲ್ಲರೂ ಒಂದಾಗುತ್ತಾರೆ -  ಎಂದು ಹೇಳಿ, ಅಹಿಂಸಾ ಮಹಿಮೆಯನ್ನು ವರ್ಣಿಸುತ್ತವಾದರೂ ಕೂಡ, ರಾಜನೀತಿಯಲ್ಲಿ ಕೇವಲ ಅಹಿಂಸಾವೃತ್ತಿಯಿಂದ ರಾಷ್ಟ್ರದ ರಕ್ಷಣೆಯಾಗಲಾರದೆಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಬ್ರಾಹ್ಮವರ್ಚಸ್ಸಿನೊಂದಿಗೆ ಕ್ಷಾತ್ರ ತೇಜಸ್ಸು ಕೂಡಿದಾಗಲೇ ರಾಷ್ಟ್ರೋದ್ಧಾರವಾಗಬಲ್ಲದೆಂಬುದನ್ನು ವೇದಗಳು ಬಲ್ಲವು. ಅದೇ ಕಾರಣದಿಂದ ಯಜುರ್ವೇದದಲ್ಲಿ ನಾವು ಈ ಕೆಳಕಂಡ ಮಂತ್ರವನ್ನು ಕಾಣುತ್ತೇವೆ:-
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     [ಯತ್ರ] ಎಲ್ಲಿ [ಬ್ರಹ್ಮ ಚ ಕ್ಷತ್ರಂ ಚ] ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು [ಸಮ್ಯಂಚೌ] ಒಂದಕ್ಕೊಂದು ಆಶ್ರಯ ನೀಡುತ್ತಾ [ಸಹಚರತಃ] ಒಟ್ಟಿಗೆ ಪ್ರವೃತ್ತವಾಗುತ್ತವೋ, [ಯತ್ರ] ಎಲ್ಲಿ [ದೇವಾ] ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, [ಅಗ್ನಿನಾ ಸಹ] ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, [ತಂ ಲೋಕಮ್] ಆ ಲೋಕವನ್ನೇ [ಪುಣ್ಯಂ ಪ್ರಜ್ಞೇಷಮ್] ಪುಣ್ಯಶಾಲಿ ಎಂದು ತಿಳಿಯುತ್ತೇನೆ. 
     ಮಹಾಜನ, ರಾಜ್ಯದ ಪ್ರಧಾನಶಾಸಕನನ್ನು ಆರಿಸಬೇಕೆಂದು ಆದೇಶ ನೀಡುವ ಮಂತ್ರದಲ್ಲಿಯೂ 'ಮಹತೇ ಕ್ಷತ್ರಾಯ' ಎಂಬ ಪದವನ್ನು ಪಾಠಕರು ಓದಿದ್ದಾರೆ. ದೇವಾಸುರ ಸಂಗ್ರಾಮ ಮಾನವನ ಆಂತರ್ಯದಲ್ಲೆಂತೋ, ಬಾಹ್ಯ ಪ್ರಪಂಚದಲ್ಲಿಯೂ ಅಂತೆಯೇ ನಿರಂತರವಾಗಿ ನಡೆಯುತ್ತಿರುತ್ತದೆ. ವೈದಿಕ ಧರ್ಮ ಕ್ರಿಯಾತ್ಮಕ ಜೀವನಮಾರ್ಗ, ಅದರಲ್ಲಿ ನಿರರ್ಥಕ ಆದರ್ಶವಾದಕ್ಕೆ ಎಡೆಲ್ಲ.
     ಇಂದು ರಾಜನೈತಿಕಕ್ಷೇತ್ರದಲ್ಲಿ ದುಡಿದು ಅನುಭವ ಗಳಿಸಿದ ಸಮಸ್ತ ರಾಷ್ಟ್ರಗಳ ನಾಯಕರೂ, ಒಂದು 'ಜಾಗತಿಕ ಪ್ರಶಾಸನ'ಕ್ಕಾಗಿ, 'World Government ಗಾಗಿ ಹಾತೊರೆಯುತ್ತಿದ್ದಾರಷ್ಟೆ. ಸಾರ್ವಭೌಮವಾದ ವೇದಗಳು, ಮಾನವನ ಉದಯಕಾಲದಿಂದಲೇ ಈ ಆದರ್ಶವನ್ನು ಎತ್ತಿಹಿಡಿಯುತ್ತಾ ಬಂದಿದೆ. ವೇದಗಳಲ್ಲೆಲ್ಲಿಯೂ ದೇಶವಿದೇಶಗಳ ವರ್ಣನೆಯಿಲ್ಲ. ವೇದಗಳು ಸಂಪೂರ್ಣ ಜಗತ್ತನ್ನೇ ಒಂದು ರಾಷ್ಟ್ರವಾಗಿ ಪರಿಗಣಿಸುವ ಆದರ್ಶವನ್ನೇ ಮಾನವರ ಮುಂದೆ ಮೂಡಿಸುತ್ತಾ ಬಂದಿದೆ. ನಾವು ಅಥರ್ವವೇದದ ಪೃಥಿವೀ ಸೂಕ್ತದಲ್ಲಿ, ಸಾ ನೋ ಭೂಮಿರ್ವಿ ಸೃಜತಾಂ ಮಾತಾ ಪುತ್ರಾಯ ಮೇ ಪಯಃ|| (ಅಥರ್ವ.೧೨.೧.೧೦.) - [ನಃ ಸಾ ಭೂಮಿಃ ಮಾತಾ] ನಮ್ಮ ಭೂಮಿಯ ಮಾತೆಯು, [ಪುತ್ರಾಯ ಮೇ] ಮಗನಾದ ನನಗೆ, [ಪಯಃ ವಿ ಸೃಜತಾಮ್] ರಸವತ್ತಾದುದನ್ನು ಒದಗಿಸಲಿ. ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ|| (ಅಥರ್ವ.೧೨.೧.೧೨.) - {ಭೂಮಿಃ ಮಾತಾ] ಭೂಮಿಯ ತಾಯಿ, [ಅಹಂ ಪೃಥಿವ್ಯಾಃ ಪುತ್ರಃ] ನಾನು ಪೃಥ್ವಿಯ ಮಗ. ಭೂಮೇ ಮಾತರ್ನಿ ಧೇಹಿ ಮಾ ಭದ್ರಯಾ ಸುಪ್ರತಿಷ್ಠಿತಮ್|| (ಅಥರ್ವ.೧೨.೧.೬೩.) - {ಭೂಮೇ ಮಾತಃ] ಓ ಭೂಮಿ ಮಾತೆ, [ಭದ್ರಯಾ] ಕಲ್ಯಾಣದೊಂದಿಗೆ, [ಸುಪ್ರತಿಷ್ಠಿತಂ ಮಾ] ಧೃಢವಾಗಿ ನಿಂತ ನನ್ನನ್ನು [ನಿ ಧೇಹಿ] ರಕ್ಷಿಸು. ಈ ಬಗೆಯ ಅನೇಕ ವಾಕ್ಯಗಳನ್ನು ಕಾಣುತ್ತೇವೆ. ಸಾರ್ವಭೌಮ ಶಾಸ್ತ್ರಗಳಾದ ವೇದಗಳ ದೃಷ್ಟಿಯಲ್ಲಿ ಸಂಪೂರ್ಣ ಭೂಮಂಡಲವೇ ಒಂದು ರಾಷ್ಟ್ರ. ಆದರೆ ಇಂದಿನ ಮಾನವಸಮಾಜ ಇನ್ನೂ ಇಷ್ಟು ವಿಶಾಲವಾದ ತತ್ತ್ವವನ್ನು ಸ್ವೀಕರಿಸುವಷ್ಟು ಮುಂದೆ ಹೋಗಿಲ್ಲ. ಈ ದೊಡ್ಡ ಆದರ್ಶ ದೂರದಲ್ಲಿದ್ದರೂ, ನಮ್ಮ ಕೈಯಲ್ಲಿರುವ ಭಾರತವನ್ನಾದರೂ ನಾವು ವೇದೋಕ್ತವಾದ ರೀತಿಯಲ್ಲಿ ಆಳಬಲ್ಲೆವಾದರೂ ಜಗತ್ತಿಗೆ ಒಂದು ಉನ್ನತ ಮಾದರಿಯನ್ನು ಹಾಕಿಕೊಡಬಹುದು.
     ರಾಷ್ಟ್ರ, ನಿಜವಾಗಿ ಸಮೃದ್ಧವಾಗಬೇಕಾದರೆ, ಶಾಸಕರಲ್ಲಿಯೂ, ಪ್ರಜೆಗಳಲ್ಲಿಯೂ ಭೋಗವಿಲಾಸದ ಮತ್ತು ಸ್ವಾರ್ಥಸಾಧನೆಯ ಅಭಿಲಾಷೆಯಳಿದು, ಸಾತ್ವಿಕ ಜೀವನ ಹಾಗೂ ತ್ಯಾಗಭಾವನೆ ಮೂಡಿಬರಬೇಕು. ಅಥರ್ವವೇದ ಬಲಿಷ್ಠವಾದ ರಾಷ್ಟ್ರದ ನಿರ್ಮಾಣಕ್ಕೆ ದಾರಿ ತೋರಿಸುತ್ತದೆ:-
ಭದ್ರಮಿಚ್ಛಂತ ಋಷಯಃ ಸ್ವರ್ವಿದಸ್ತಪೋ ದೀಕ್ಷಾಮುಪನಿಷೇದುರಗ್ರೇ |
ತತೋ ರಾಷ್ಟ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಉಪಸಂನಮಂತು || (ಅಥರ್ವ.೧೯.೪೧.೧.)
    [ಸ್ವರ್ವಿದಃ] ಸುಖಪ್ರಾಪ್ತಿಯ ಮಾರ್ಗವನ್ನು ಬಲ್ಲ, [ಅಗ್ರೇ] ಅಗ್ರಗಾಮಿಗಳಾದ, [ಋಷಯಃ] ಪ್ರಗತಿಶೀಲ ತತ್ತ್ವದರ್ಶಿಗಳು [ಭದ್ರಂ ಇಚ್ಛಂತಃ] ಎಲ್ಲರಿಗೂ ಕಲ್ಯಾಣವನ್ನು ಬಯಸುತ್ತಾ, [ತಪೋದೀಕ್ಷಾಮ್] ತಪಸ್ಸಿನ ಕಷ್ಟಸಹಿಷ್ಣುತೆಯ ದೀಕ್ಷೆಯನ್ನು [ಉಪನಿಷೇದುಃ] ವಹಿಸುತ್ತಾ ಬಂದರು. [ತತಃ] ಅದರಿಂದ, [ರಾಷ್ಟ್ರಮ್] ರಾಷ್ಟ್ರವೂ [ಬಲಮ್] ಶಕ್ತಿಯೂ, [ಚ] ಮತ್ತು [ಓಜಃ] ಓಜಸ್ಸು, [ಜಾತಮ್] ಉತ್ಪನ್ನವಾಯಿತು. [ತತ್] ಆ ಕಾರಣದಿಂದ, [ದೇವಾಃ] ರಾಷ್ಟ್ರವಿಜಯಾಭಿಲಾಷಿಗಳೂ, ಸತ್ಯಮಯರೂ, ಉದಾರಾತ್ಮರೂ, ಆದ ವಿದ್ವಾಂಸರು, [ಅಸ್ಮೈ] ಈ ತಪೋ [ದೀಕ್ಷಾ] ಕರ್ಮಕ್ಕೆ [ಉಪಸಂನಮಂತು] ಕ್ರಿಯಾತ್ಮಕವಾಗಿ ಗೌರವ ಸಲ್ಲಿಸಲಿ.
     ಇದಕ್ಕಿಂತ ಹೆಚ್ಚೇನನ್ನು ಹೇಳಲು ಸಾಧ್ಯವಿದೆ? ಈ ಅಧ್ಯಾಯದಲ್ಲಿ ಹೇಳಿರುವುದೆಲ್ಲಾ ರಾಷ್ಟನಿರ್ಮಾಣದ ಮೂಲಭೂತ ತತ್ತ್ವಗಳು. ಇದಕ್ಕನುಸಾರವಾಗಿ ನಡೆದಲ್ಲಿ ರಾಷ್ಟ್ರೋತ್ಥಾನವಾಗುವುದರಲ್ಲಿ ಏನೇನೂ ಸಂದೇಹವಿಲ್ಲ. ಒಂದು ಮಹತ್ವಪೂರ್ಣ ಮಂತ್ರದೊಂದಿಗೆ ಈ ಅಧ್ಯಾಯವನ್ನು ಕೊನೆಮುಟ್ಟಿಸೋಣ.
ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ |
ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು || (ಅಥರ್ವ.೧೨.೧.೧.)
     [ಸತ್ಯಮ್] ಸತ್ಯ, [ಬೃಹತ್] ಮನೋವೈಶಾಲ್ಯ, [ಋತಮ್] ನ್ಯಾಯ, [ಉಗ್ರಮ್] ಪರಾಕ್ರಮ, [ದೀಕ್ಷಾ] ವ್ರತನಿಷ್ಠೆ, [ತಪಃ] ಕಷ್ಟಸಹಿಷ್ಣುತೆ, [ಬ್ರಹ್ಮ] ವೇದಜ್ಞಾನ ಮತ್ತು [ಯಜ್ಞಃ] ತ್ಯಾಗಭಾವಸಂಪನ್ನ ಸತ್ಕರ್ಮ ಇವು ಮತ್ತು [ಪೃಥಿವೀಮ್] ಪೃಥಿವಿಯನ್ನು, [ಧಾರಯಂತಿ] ಉದ್ಧರಿಸುತ್ತವೆ. [ನಃ] ನಮ್ಮ [ಭೂತಸ್ಯ ಭವಸ್ಯ ಪತ್ನೀ] ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ, [ಸಾ ಪೃಥಿವೀಮ್] ಆ ಪೃಥಿವಿಯು, [ನಃ] ನಮಗಾಗಿ [ಉರುಂ ಲೋಕಮ್] ವಿಶಾಲವಾದ ರಾಷ್ಟ್ರವನ್ನು [ಕೃಣೋತು] ಉಂಟುಮಾಡಲಿ. 
     ನಾವು ಮೇಲೆ ಹೇಳಿದ ಎಂಟು ತತ್ತ್ವಗಳನ್ನು ರೂಢಿಸಿಕೊಂಡಾಗ, ದೇಶದ ಏಕತೆಗೆ ಭಂಗ ತರುವ ಈ ಭಾಷಾವಾರು ಪ್ರಾಂತ್ಯರಚನೆಯ ಸಂಕುಚಿತ ಮನೋಭಾವನೆ ನಾಶವಾಗಿ, ಆಡಳಿತದಲ್ಲಿ ಭಾರತದಾದ್ಯಂತ ಒಂದೇ ನಿಯಮ ಜಾರಿಗೆ ಬಂದು, ರಾಜನೀತಿಯ ಭ್ರಷ್ಠಾಚಾರ ನಿರ್ಮೂಲವಾಗಿ, ಪ್ರಜೆಗಳೆಲ್ಲರೂ ಸುಖವನ್ನನುಭವಿಸಬಹುದು. ಈ ರೀತಿಯಿಂದ ಸರ್ವಸಮಾನತೆಯ ಉದಾತ್ತವಾದ ರಾಜನೀತಿಯ ಪರಿಚಯವನ್ನು ಜಗತ್ತಿಗೆ ಮಾಡೋಣ.
-ಪಂ. ಸುಧಾಕರ ಚತುರ್ವೇದಿ.