ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 29, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೪



    ಹದಿನಾಲ್ಕನೆಯ ಸಂಸ್ಕಾರ ವಾನಪ್ರಸ್ಥ.  ಚತುರಾಶ್ರಮಗಳ ಅಧ್ಯಾಯದಲ್ಲಿ ಹೇಳಿರುವಂತೆ ೨೫ ವರ್ಷಗಳ ಗೃಹಸ್ಥಜೀವನದ ನಂತರ, ಪುರುಷನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುವಾಗ ಮಾಡುವ ಸಂಸ್ಕಾರವಿದು. ಬೃಹತ್ ಹವನವನ್ನು ಮಾಡಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ, ಹಿರಿಯರ ಆಶೀರ್ವಾದ ಪಡೆದು, ಪತ್ನಿಯೊಂದಿಗೆ ಅಥವಾ ಒಬ್ಬನೇ ತನ್ನ ನೂತನ ಸ್ಥಾನಕ್ಕೆ ತೆರಳುತ್ತಾನೆ. 
     ಹದಿನೈದನೆಯ ಸಂಸ್ಕಾರ ಸಂನ್ಯಾಸ. ವಾನಪ್ರಸ್ಥವನ್ನು ಮುಗಿಸಿ ಸಂನ್ಯಾಸವನ್ನು ತೆಗೆದುಕೊಳ್ಳುವಾಗ ಮಾಡುವ ಸಂಸ್ಕಾರವಿದು. ಬೇರೊಬ್ಬ ವಿದ್ವಾನ್ ಸಂನ್ಯಾಸಿಯು ವಾನಪ್ರಸ್ಥಿಗೆ ಸಂನ್ಯಾಸದೀಕ್ಷೆ ಕೊಡುತ್ತಾನೆ. 'ನಾನು ಮಕ್ಕಳ ಮೇಲಿನ ಅಸೆಯನ್ನೂ, ಹಣದ ಆಸೆಯನ್ನೂ ಬಿಟ್ಟೆ. ಲೋಕದಲ್ಲಿ ಯಶಸ್ಸಿನ ಆಸೆಯನ್ನೂ ಬಿಟ್ಟೆ. ನನ್ನಿಂದ ಎಲ್ಲ ಪ್ರಾಣಿಗಳಿಗೂ ಅಭಯವಿರಲಿ' -  ಎಂದು ಘೋಷಿಸಿ, ಜಲದಲ್ಲಿ ನಿಂತು ಯಜ್ಞೋಪವೀತವನ್ನೂ, ಶಿಖೆಯನ್ನೂ ವಿಸರ್ಜಿಸುತ್ತಾನೆ. ಸ್ನಾನ ಮಾಡಿ, ಕಾಷಾಯಾಂಬರ ಧರಿಸಿ, ಪರಿವ್ರಾಜಕನಾಗಿ ಹೊರಟುಬಿಡುತ್ತಾನೆ. ಸರ್ವಬಂಧನಮುಕ್ತನಾಗಿ ಲೋಕಕ್ಕೆ ಆಧ್ಯಾತ್ಮ ಜ್ಞಾನದಾನ ಮಾಡುತ್ತಾ ತಿರುಗಾಡುತ್ತಾನೆ.
     ಕೊನೆಯದಾಗಿ ಅಂತ್ಯೇಷ್ಟಿ. ಮಾನವನು ಮೃತನಾದ ಮೇಲೆ, ಅವನ ಶವವನ್ನು ಆದಷ್ಟು ಬೇಗ ಪಂಚಭೂತಗಳಲ್ಲಿ ಲೀನ ಮಾಡಬೇಕು. ವೇದವು, ಭಸ್ಮಾಂತಂ ಶರೀರಮ್ || (ಯಜು.೪೦.೧೫.) - ಶರೀರ ಕೊನೆಯಾಗುವುದು ಬೂದಿಯಲ್ಲಿ - ಎನ್ನುತ್ತದೆ. ದಹನವೇ ವೈಜ್ಞಾನಿಕ ಕ್ರಮ. ಸರಿಯಾದ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನುಪಯೋಗಿಸಿದರೆ, ದುರ್ಗಂಧವೂ ಬರುವುದಿಲ್ಲ. ಅರ್ಥಗರ್ಭಿತ ವೇದಮಂತ್ರಗಳನ್ನುಚ್ಛರಿಸುತ್ತಾ ಚಿತಾಗ್ನಿಯಲ್ಲಿ ಆಹುತಿಗಳನ್ನು ಕೊಡಲಾಗುತ್ತದೆ. ಶವವೇನೋ ಮಂತ್ರಪಾಠದಿಂದ ಲಾಭ ಪಡೆಯಲಾರದು. ಆದರೆ, ಸ್ಮಶಾನದಲ್ಲಿ ಸೇರಿದ ಜನರ ಮನಸ್ಸಿನ ಮೇಲೆ ಜಗತ್ತಿನ ನಶ್ವರತೆಯ ರೂಪ ಚಿತ್ರಿತವಾಗಿ, ಆಧ್ಯಾತ್ಮಿಕ ಭಾವನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ಇದೊಂದು ಮಂತ್ರವನ್ನು ನೋಡಬಹುದು.
ಸಂ ಗಚ್ಛಸ್ವ ಪಿತೃಭಿಃ ಸಂ ಯಮನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾ || (ಋಕ್.೧೦.೧೪.೮.)
     ಓ ಜೀವ! [ಪಿತೃಭಿಃ ಸಮ್] ನಿನ್ನನ್ನು ಪಾಲಿಸುವವರೊಂದಿಗೆ, [ಯಮೇನ ಸಮ್] ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, [ಇಷ್ಟಾಪೂರ್ತೇನ] ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, [ಪರಮೇ ವ್ಯೋಮನ್] ಪರಮರಕ್ಷಕನಾದ ಪ್ರಭುವಿನಲ್ಲಿ, [ಗಚ್ಛಸ್ವ] ಆಶ್ರಯ ಪಡೆದುಕೋ. [ಅವದ್ಯಂ ಹಿತ್ವಾಯ] ಕೆಟ್ಟದ್ದನ್ನು ಬಿಟ್ಟು, [ಪುನಃ ಅಸ್ತಮೇಹಿ] ಮತ್ತೆ ಮನೆಗೆ ಹೋಗು. [ಸುವರ್ಚಾಃ] ಸುವರ್ಚಸ್ವಿಯಾಗಿ, [ತನ್ವಾ ಸಂ ಗಚ್ಛಸ್ವ] ಶರೀರದೊಂದಿಗೆ ಮುಂದೆ ಸಾಗು, ಪ್ರಭುವಿಗೆ ಶರಣಾಗು, ಕೆಟ್ಟದ್ದನ್ನು ಬಿಡು. ನಶ್ವರ ಜಗತ್ತನ್ನು ನಂಬಿ ನೀನೇನು ಪಡೆದುಕೊಳ್ಳಬೇಕಾಗಿದೆ?
     ಮೂರನೆಯ ದಿನ ಯಾರಾದರೂ ಅಸ್ಥಿಸಂಚಯ ಮಾಡಿ, ಎಲ್ಲಿಯಾದರೂ ಹೂತು ಬರಬೇಕು. ಅಲ್ಲಿಗೆ ಅಂತ್ಯೇಷ್ಟಿ ಕರ್ಮ ಮುಗಿಯಿತು. ಮೃತನಿಗೆ ಶ್ರಾದ್ಧಾದಿಗಳನ್ನು ಮಾಡುವುದು ಅವೈದಿಕವೆಂದು ಹಿಂದೆಯೇ ಹೇಳಿದ್ದೇವೆ.
     ಈ ಹದಿನಾರು ವೈದಿಕ ಸಂಸ್ಕಾರಗಳೂ ಮಾನವನ ಮನಸ್ಸಿನ ಮೇಲೆ ಅದ್ಭುತ ಪ್ರಭಾವವನ್ನು ಬೀರುತ್ತವೆ.
-ಪಂ. ಸುಧಾಕರ ಚತುರ್ವೇದಿ.



ಮಂಗಳವಾರ, ಏಪ್ರಿಲ್ 23, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೩


     ಇದಾದ ಮೇಲೆ ನಡೆಯುವ ಹದಿಮೂರನೆಯ ಸಂಸ್ಕಾರ ವಿವಾಹ. ಬ್ರಹ್ಮಚರ್ಯದಿಂದ ಧೃಢಕಾಯರೂ, ಸದಾಚಾರಿಗಳೂ, ಸಕಲ ವಿದ್ಯಾವಂತರೂ ಆದ, ಕನಿಷ್ಠಪಕ್ಷ ೨೫ ವರ್ಷ ವಯಸ್ಸಾಗಿರುವ ಯುವಕ ಮತ್ತು ಕನಿಷ್ಠಪಕ್ಷ ೧೬ ವರ್ಷ ವಯಸ್ಸಾಗಿರುವ ಯುವತಿ ಒಂದೇ ಬಗೆಯ ಗುಣ-ಕರ್ಮ-ಸ್ವಭಾವವುಳ್ಳವರು, ಪರಸ್ಪರ ಒಪ್ಪಿಗೆಯಿಂದ ವಿವಾಹಿತರಾಗುತ್ತಾರೆ. ಇದು ಮಾನವಜೀವನದಲ್ಲಿ ಎರಡನೆಯ ಮಹತ್ವಪೂರ್ಣವಾದ ಘಟ್ಟ. ವಿವಾಹ ಸಂಸ್ಕಾರದ ಪ್ರತಿಯೊಂದು ಕ್ರಿಯೆಯೂ ಅತ್ಯಂತ ಅರ್ಥಗರ್ಭಿತವಾದುದು. ಎರಡು ಆತ್ಮಗಳು ತಮ್ಮ ಜೀವನದ ಭಿನ್ನತ್ವವನ್ನು ಕಳೆದುಕೊಂಡು, ಒಂದೇ ಸಂಯುಕ್ತಜೀವನವನ್ನು ರೂಪಿಸಿಕೊಳ್ಳುವ ಸಂಕಲ್ಪದಿಂದ ಹೇಳುತ್ತವೆ:-
ಸಮಂಜಂತು ವಿಶ್ವೇ ದೇವಾಃ ಸಮಾಪೋ ಹೃದಯಾನಿ ನೌ |
ಸಂ ಮಾತರಿಶ್ವಾ ಸಂ ಧಾತಾ ಸಮು ದೇಷ್ಟ್ರೀ ದಧಾತು ನೌ || (ಋಕ್.೧೦.೮೫.೪೭.)
     [ವಿಶ್ವೇ ದೇವಾಃ] ಇಲ್ಲಿ ಸೇರಿರುವ ಸಮಸ್ತ ವಿದ್ವಾಂಸ-ವಿದುಷಿಯರೂ, [ಸಂ ಅಂಜಂತು] ಸ್ಪಷ್ಟವಾಗಿ ತಿಳಿಯಲಿ. [ನೌ ಹೃದಯಾನಿ] ನಮ್ಮ ಹೃದಯಗಳು, [ಆಪಃ ಸಮ್] ಜಲದೊಂದಿಗೆ ಬೆರೆತ ಜಲದಂತೆ ಒಂದಾಗಿವೆ. [ಮಾತರಿಶ್ವಾ] ಪ್ರಾಣಶಕ್ತಿಯೂ, [ಧಾತಾ] ಜಗದ್ಧಾರಕ, [ಉದೇಷ್ಟ್ರೀ] ವೇದಗಳ ಮೂಲಕ ಉಪದೇಶ ನೀಡುವವನೂ ಆದ ಪ್ರಭುವು, [ನೌ] ನಮ್ಮನ್ನು [ಸಂ ಸಂ ಸಮ್] ಚೆನ್ನಾಗಿ ಒಟ್ಟಿಗೆ ಕೂಡಿಸಿ, ಪ್ರೀತಿಯಿಂದ, [ದಧಾತು] ಸ್ಥಿರರನ್ನಾಗಿ ಮಾಡಲಿ. ಅನಂತರ ವರನು ವಧುವಿನ ಕೈ ಹಿಡಿದು, ಗಂಭೀರವಾಗಿ ಸಭ್ಯ ಗೃಹಸ್ಥರ ಮುಂದೆ ಈ ರೀತಿ ಹೇಳುತ್ತಿದ್ದಾನೆ:-
ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾಸಃ |
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ || (ಋಕ್.೧೦.೮೫.೩೬.)
     [ಪತ್ಯಾ ಮಯಾ] ಪತಿಯಾದ ನನ್ನೊಂದಿಗೆ, [ಯಥಾ ಜರದಷ್ಟಿಃ ಆಸಃ] ನೀನು ಪೂರ್ಣ ವೃದ್ಧೆಯಾಗಲನುಕೂಲಿಸುವಂತೆ, [ಸೌಭಗತ್ವಾಯ] ಆಧ್ಯಾತ್ಮಿಕ, ಭೌತಿಕ ಸೌಭಾಗ್ಯ ಪ್ರಾಪ್ತಿಗಾಗಿ, [ತೇ ಹಸ್ತಂ ಗೃಭ್ಣಾಮಿ] ನಿನ್ನ ಕೈಯನ್ನು ಹಿಡಿಯುತ್ತೇನೆ. [ಭಗಃ ಅರ್ಯಮಾ ಸವಿತಾ ಪುರಂಧಿಃ] ತೇಜೋಮಯನೂ, ನ್ಯಾಯಕಾರಿಯೂ, ಜಗದುತ್ಪಾದಕನೂ, ಸರ್ವಾಧಾರನೂ ಆದ ಪ್ರಭುವೂ, [ದೇವಾಃ] ಇಲ್ಲಿ ನೆರೆದಿರುವ ಗುರು-ಹಿರಿಯರೂ, [ಗಾರ್ಹಪತ್ಯಾಯ] ಗೃಹಸ್ಥ ಧರ್ಮಪಾಲನೆಗಾಗಿ [ತ್ವಾ ಮಹ್ಯಂ ಅದುಃ] ನಿನ್ನನ್ನು ನನಗೆ ಕೊಟ್ಟಿದ್ದಾರೆ. 
     ಈ ರೀತಿ ತಾನು ಭಗವಂತನನ್ನೂ, ವಿವಾಹ ಮಂಟಪದಲ್ಲಿ ಸೇರಿರುವ ವಿದ್ವಾಂಸರನ್ನೂ ಸಾಕ್ಷಿಯಾಗಿಟ್ಟುಕೊಂಡು, ಕನ್ಯೆಯ ಕೈಹಿಡಿದಿರುವುದಾಗಿ ಹೇಳಿ, 'ವೃದ್ಧೆಯಾಗುವವರೆಗೆ' ಎಂಬ ಮಾತುಗಳಿಂದ, ತಾನು ದಾಂಪತ್ಯವಿಚ್ಛೇದನಕ್ಕೆ ಅವಕಾಶ ಕೊಡುವುದಿಲ್ಲವೆಂಬ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಮುಂದೆ, ಪತ್ನೀ ತ್ವಮಸಿ ಧರ್ಮಣಾಹಂ ಗೃಹಪತಿಸ್ತವ || (ಅಥರ್ವ.೧೪.೧.೫೧.) -  ನೀನು ಧರ್ಮದಿಂದ ನನ್ನ ಪತ್ನಿಯಾಗಿದ್ದೀಯೆ, ನಾನು ಧರ್ಮದಿಂದಲೇ ನಿನ್ನ ಗೃಹಪತಿಯಾಗಿದ್ದೇನೆ - ಎಂದು ಹೇಳಿ, ತಮ್ಮಿಬ್ಬರನ್ನೂ ಕಟ್ಟಿಹಾಕಿರುವುದು ಧರ್ಮವೇ ಹೊರತು ಕಾಮವಲ್ಲ ಎಂಬ ಭಾವನೆಯನ್ನು ಸೂಚಿಸುತ್ತಾನೆ. ಕೊನೆಗೆ, ನ ಸ್ತೇಯಮದ್ಮಿ ಮನಸೋದಮುಚ್ಯೇ || (ಅಥರ್ವ.೧೪.೧.೫೭.) - ನಾನು ನಿನಗೆ ಕಾಣದಂತೆ ಕಳ್ಳತನದಿಂದ ಯಾವ ಭೋಗವನ್ನೂ ಅನುಭವಿಸೆನು, ಮನದಿಂದ ಕಳ್ಳತನದ ಭಾವನೆಯನ್ನು ಕಿತ್ತು ಬಿಸಾಡುವೆನು - ಎಂದು ವಧುವಿಗೆ ಆಶ್ವಾಸನೆ ಕೊಡುತ್ತಾನೆ.
     ವಧುವೂ ತನ್ನ ಸಂಪೂರ್ಣ ಜೀವನವನ್ನು ವರನಿಗೆ ಸಮರ್ಪಿಸಿರುವುದಾಗಿ ಘೋಷಿಸಿ,
ಇಯಂ ನಾರ್ಯುಪ ಬ್ರೂತೇ ಪೂಲ್ಯಾನ್ಯಾವಪಂತಿಕಾ |
ದೀರ್ಘಾಯುರಸ್ತು ಮೇ ಪತಿರ್ಜೀವಾತಿ ಶರದಃ ಶತಮ್ || (ಅಥರ್ವ.೧೪.೨.೬೩.)
     [ಪೂಲ್ಯಾನಿ ಅವಪಂತಿಕಾ] ಅರಳಿನ ಆಹುತಿ ನೀಡುತ್ತಾ, [ಇಯಂ ನಾರೀ ಉಪಬ್ರೂತೇ] ಈ ನಾರಿ ಹೇಳುತ್ತಾಳೆ. [ಮೇ ಪತಿಃ ದೀರ್ಘಾಯುರಸ್ತು] ನನ್ನ ಪತಿ ದೀರ್ಘಾಯುವಾಗಲಿ. [ಶರದಃ ಶತಂ ಜೀವಾತಿ] ನೂರು ವರ್ಷಗಳ ಕಾಲ ಜೀವಿಸಲಿ - ಎಂದು ಪ್ರಾರ್ಥಿಸುತ್ತಾಳೆ. ಸಪ್ತಪದಿಯಲ್ಲಿ, ನಾವು ಆಜೀವನವೂ ಒಬ್ಬರಿಗೊಬ್ಬರು ಹೊಂದಿಕೊಂಡೇ ಜೀವನ ನಡೆಸುವೆವು ಎಂಬುದನ್ನು ಸೂಚಿಸಲು, ಜೊತೆಜೊತೆಯಲ್ಲಿ ಏಳು ಹೆಜ್ಜೆಗಳನ್ನಿಡುತ್ತಾರೆ. ದಂಪತಿಗಳು, ಒಬ್ಬರಿಗೊಬ್ಬರು ಸೌಮನಸ್ಯದಿಂದ ವರ್ತಿಸಬೇಕು ಎಂಬುದು ವೇದಗಳ ಆದೇಶವಾಗಿದೆ. 
ಇಹೈವ ಸ್ತಂ ಮಾ ವಿ ಯೌಷ್ಟಂ ವಿಶ್ವಮಾಯುರ್ವ್ಯಶ್ನುತಮ್ |
ಕ್ರೀಡಂತೌ ಪುತ್ರೈರ್ನಪ್ರ್ಯಭಿರ್ಮೋದಮಾನೌ ಸ್ವೇ ಗೃಹೇ || (ಋಕ್.೧೦.೮೫.೪೨.)
     ದಂಪತಿಗಳೇ! [ಇಹ ಏವ ಸ್ತಮ್] ಇಲ್ಲಿಯೇ ಇರಿ. [ಮಾ ವಿಯೌಷ್ಟಮ್] ಒಬ್ಬರನ್ನೊಬ್ಬರು ಅಗಲಬೇಡಿ. [ವಿಶ್ವಂ ಆಯುಃ ವ್ಯಶ್ನುತಮ್] ಪೂರ್ಣ ಆಯಸ್ಸನ್ನು ಅನುಭವಿಸಿರಿ. [ಪುತ್ರೈಃ ನಪ್ರ್ಯಭಿಃ] ಮಕ್ಕಳು-ಮೊಮ್ಮಕ್ಕಳೊಂದಿಗೆ [ಕ್ರೀಡಂತೌ] ಆಟವಾಡುತ್ತಾ [ಮೋದಮಾನೌ] ಹರ್ಷಿಸುತ್ತಾ [ಸ್ವೇ ಗೃಹೇ ಸ್ತಮ್] ನಿಮ್ಮ ಸ್ವಂತ ಮನೆಯಲ್ಲಿರಿ.
-ಪಂ. ಸುಧಾಕರ ಚತುರ್ವೇದಿ.

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು



     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (19-04-2013) 116 ವಸಂತಗಳನ್ನು ಕಂಡು 117ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು 6-7 ವರ್ಷದವರಾಗಿದ್ದಾಗ -ಅಂದರೆ ಸುಮಾರು 110 ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.

     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ 117 ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ 5ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. 286/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.

ಗುರುವಾರ, ಏಪ್ರಿಲ್ 18, 2013

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ


     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ ತೊಡಗಿರುವ ವೇದಾಧ್ಯಾಯಿಗಳ ಸಂಘಟಿತ ಶ್ರಮ ಫಲ ನೀಡಿದೆ. ಮಕ್ಕಳಲ್ಲೂ ವೇದಾಧ್ಯಯನದ ಕಡೆಗೆ ಆಸಕ್ತಿ, ಅವರಲ್ಲಿ ದೇಶಭಕ್ತಿ, ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವುದರೊಂದಿಗೆ ಉತ್ತಮ ಸಂಸ್ಕಾರ ನೀಡಲು ಶಿಬಿರದಲ್ಲಿ ಒತ್ತು ನೀಡಲಾಯಿತು. ಕೇವಲ 40 ಮಕ್ಕಳಿಗೆ ಪ್ರವೇಶಾವಕಾಶ ಕೊಡಬೇಕೆಂದು ನಿರ್ಧರಿಸಿದ್ದರೂ, ಪೋಷಕರ ಒತ್ತಾಯಕ್ಕೆ ಮಣಿದು 80 ಮಕ್ಕಳನ್ನು ಶಿಬಿರಕ್ಕೆ ಸೇರಿಸಿಕೊಳ್ಳಬೇಕಾಯಿತು.
     ದೇಶಭಕ್ತರ, ಸಾಧು-ಸಂತರ, ಉತ್ತಮ ನೀತಿ ಸಾರುವ ಸುಭಾಷ ಚಂದ್ರ ಬೋಸ್, ಮದನ ಲಾಲ್ ಧಿಂಗ್ರಾ, ಶಿವಾಜಿ, ವಿವೇಕಾನಂದ, ಧ್ರುವ, ನಚಿಕೇತ ಮುಂತಾದವರ ಕಥೆಗಳನ್ನು ಹೇಳಲಾಯಿತು. ಪ್ರತಿನಿತ್ಯ ವಿವಿಧ ರೀತಿಯ ಆಟಗಳನ್ನು ಆಡಿಸಲಾಯಿತು. ದೇಶಭಕ್ತಿ ಗೀತೆಗಳನ್ನು ಹೇಳಿಕೊಡಲಾಯಿತು. ತಮ್ಮಲ್ಲಿನ ಪ್ರತಿಭೆಗಳನ್ನು ಮಕ್ಕಳು ಹಾಡು ಹೇಳುವ, ನೃತ್ಯ ಮಾಡುವ, ಏಕಪಾತ್ರಾಭಿನಯ ಮಾಡುವ, ಆಶುಭಾಷಣದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸಿದರು. ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆ ಮೆರೆದರು. ಕಾಗದದಿಂದ ಕರಕುಶಲಕಲೆಗಳನ್ನು ಅವರಿಂದ ಮಾಡಿಸಲಾಯಿತು. ಅಂತ್ಯಾಕ್ಷರಿ, ಹಾಡು, ಭಜನೆ, ಸಂವಾದಗಳಲ್ಲೂ ಅವರನ್ನು ತೊಡಗಿಸಲಾಯಿತು. ಇಷ್ಟೆಲ್ಲಾ ಆಸಕ್ತಿಕರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಪ್ರತಿನಿತ್ಯ ಸುಮಾರು ಒಂದು ಗಂಟೆಯ ಕಾಲ ಅವರಿಗೆ ಸರಳ ವೇದ ಮಂತ್ರಗಳನ್ನು ವೇದಾಧ್ಯಾಯಿಗಳಾದ ಶ್ರೀಯುತ ಅನಂತನಾರಾಯಣ, ಪ್ರಸಾದ್ ಮತ್ತು ವಿಶ್ವನಾಥ ಶರ್ಮರವರು ಅರ್ಥಸಹಿತ ಹೇಳಿಕೊಟ್ಟರು.  ಸುಮಾರು 25 ಮಂತ್ರಗಳನ್ನು ಕಲಿತ ಮಕ್ಕಳು ಸಮಾರೋಪ ದಿನದಂದು ಸಾಮೂಹಿಕವಾಗಿ ವೇದಮಂತ್ರಗಳನ್ನು ಸ್ವರಸಹಿತ ಹೇಳಿದಾಗ ಪೋಷಕರು, ಕಾರ್ಯಕ್ರಮದಲ್ಲಿ ಹಾಜರಿದ್ದವರು ಬೆರಗಾಗಿದ್ದರು.
     14-04-2013ರಂದು ಮಕ್ಕಳು ತಮ್ಮ ತಾಯಿ-ತಂದೆ, ಪೋಷಕರನ್ನು ನಮಸ್ಕರಿಸಿ ಗೌರವಿಸುವ ಮತ್ತು ಭಾರತಮಾತೆಯ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು. ಇದು ಮಕ್ಕಳ, ಪೋಷಕರ ಮತ್ತು ಕಾರ್ಯಕ್ರಮ ವೀಕ್ಷಿಸಿದವರ ಮೇಲೆ ಉತ್ತಮ ಪ್ರಭಾವ ಬೀರಿತು. ಪತ್ರಿಕೆಗಳು, ದೃಷ್ಯಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು. ಸಮಾರೋಪ ದಿನದಂದು ಮಕ್ಕಳು ಮತ್ತು ಅವರ ಪೋಷಕರು ವ್ಯಕ್ತಪಡಿಸಿದ ಅನಿಸಿಕೆಗಳು ಶಿಬಿರದ ಯಶಸ್ಸಿಗೆ ಕನ್ನಡಿಯಾಗಿತ್ತು. ಉದ್ಘಾಟನೆಯ ದಿನ, ಮಾತೃವಂದನಾ ಕಾರ್ಯಕ್ರಮದ ದಿನ ಮತ್ತು ಸಮಾರೋಪದ ದಿನಗಳಂದು ಪೋಷಕರನ್ನೂ ಆಹ್ವಾನಿಸಿ ಮಕ್ಕಳನ್ನು ಸುಸಂಸ್ಕಾರದಿಂದ ಬೆಳೆಸುವ ಹೊಣೆಗಾರಿಕೆ ಕುರಿತು ಹಾಗೂ ಮನೆಯೇ ಮೂಲತಃ ಸಂಸ್ಕಾರಗಳನ್ನು ಪೋಷಿಸುವ ಕೇಂದ್ರಗಳಾಗಬೇಕಾದ ಅಗತ್ಯತೆ ಕುರಿತು ಅವರ ಗಮನ ಸೆಳೆಯಲಾಯಿತು. 40 ಮಕ್ಕಳೂ ಸೇರಿದಂತೆ ಸುಮಾರು 80-100 ಪೋಷಕರೂ ಸಹ ವೇದಭಾರತೀ ವತಿಯಿಂದ ನಡೆಸಲಾಗುತ್ತಿರುವ ನಿತ್ಯ ವೇದಾಭ್ಯಾಸ ಕಾರ್ಯಕ್ರಮಕ್ಕೆ ಇನ್ನು ಮುಂದೆ ಬರುವುದಾಗಿ ನಿರ್ಧರಿಸಿ ತಿಳಿಸಿದ್ದು ವಿಶೇಷ. ಉತ್ತಮ ರೀತಿಯಲ್ಲಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಳ್ಳಲು ಶ್ರೀ ಹರಿಹರಪುರ ಶ್ರೀಧರ ಮತ್ತು ಶ್ರೀ ಕ.ವೆಂ.ನಾಗರಾಜರ ಮಾರ್ಗದರ್ಶನದಲ್ಲಿ ಉತ್ತಮ ಸಹಕಾರ ನೀಡಿದ ವೇದಭಾರತಿಯ ಎಲ್ಲಾ ವೇದಾಭ್ಯಾಸಿಗಳೂ, ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ ಎಲ್ಲಾ ಮಿತ್ರರುಗಳೂ ಕಾರಣರಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರಾಗಿದ್ದಾರೆ.
     ಶಿಬಿರದ ಕೆಲವು ದೃಷ್ಯಗಳು:

ಶಿಬಿರಾರ್ಥಿಗಳು
ದೇಶಭಕ್ತಿ ಗೀತೆಗಳ ಕಲಿಕೆ
 ಮೊಳಗಿತು ಓಂಕಾರ - ವೇದಾಧ್ಯಾಯಿಗಳ ಮಾರ್ಗದರ್ಶನದಲ್ಲಿ
  ಸಹಕಾರಿಗಳು, ಸಂಪನ್ಮೂಲ ವ್ಯಕ್ತಿಗಳು - ಇವರಷ್ಟೇ ಅಲ್ಲ!
 ತಾಯಿ-ತಂದೆ, ಪೋಷಕರಿಗೆ ಗೌರವಾರ್ಪಣೆ

 ಪೋಷಕರು
 ಭಾರತ ಮಾತೆಗೆ ನಮನ

 ಶಿಬಿರಾರ್ಥಿಗಳ, ಪೋಷಕರ ಅನಿಸಿಕೆ
 ಒಂದು ಚಮತ್ಕಾರ ಪ್ರದರ್ಶನ - ಶಿಬಿರಾರ್ಥಿಗಳಿಂದ
 ಅಗ್ನಿಹೋತ್ರ -  ಪ್ರಾತ್ಯಕ್ಷಿಕೆ
 ನಿತ್ಯ ಮಕ್ಕಳಿಗೆ ಉಪಾಹಾರ, ಪಾನೀಯ ವಿತರಣೆ

ಹರಿಹರಪುರ ಶ್ರೀಧರರ ಸಾಂದರ್ಭಿಕ ನುಡಿ, ವೇದಿಕೆಯಲ್ಲಿ ಕವಿನಾಗರಾಜ್, 
ಸಿ.ಎಸ್.ಕೃಷ್ಣಸ್ವಾಮಿ ಮತ್ತು ಡಾ. ವಾಮನರಾವ್ ಬಾಪಟ್.


ಸೋಮವಾರ, ಏಪ್ರಿಲ್ 1, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೨


     ಎಂಟನೆಯದು  ಚೂಡಾಕರ್ಮ. ಹುಟ್ಟಿನಿಂದ ಬಂದ ತಲೆಕೂದಲು ಆರೋಗ್ಯಕರವಲ್ಲ. ಅದನ್ನು ತೆಗೆದುಬಿಟ್ಟರೆ, ಮಗು ನಾನಾ ರೋಗಗಳ ಆಕ್ರಮಣಕ್ಕೆ ಗುರಿಯಾಗುವುದು ತಪ್ಪುತ್ತದೆ. ಮತ್ತೆ ಬೆಳೆಯುವ ಕೂದಲು ಪುಷ್ಕಳವಾಗಿಯೂ ಸುಂದರವಾಗಿಯೂ ಇರುತ್ತದೆ. ಈ ಸಂಸ್ಕಾರದಲ್ಲಿಯೂ ವಿಶೇಷ ಹೋಮ ಮಾಡಿ, 'ಮಗು ದೀರ್ಘಾಯುವೂ, ಕೀರ್ತಿಶಾಲಿಯೂ ಆಗಲಿ' -  ಎಂಬ ಪ್ರಾರ್ಥನೆ ಸಲ್ಲಿಸಲ್ಪಡುತ್ತದೆ.
     ಒಂಬತ್ತನೆಯ ಸಂಸ್ಕಾರ ಕರ್ಣವೇಧ. ಮಗುವಿನ ಕಿವಿಗಳನ್ನು ಯುಕ್ತವಾದ ಸ್ಥಳದಲ್ಲಿ ಚುಚ್ಚಲಾಗುತ್ತದೆ. ಇದರಿಂದ ಅಂತ್ರವೃದ್ಧಿರೋಗವು ಬರುವ ಅವಕಾಶ ತಪ್ಪುತ್ತದೆ. ಒಡವೆ ಹಾಕುವುದರಿಂದ ಮಗುವಿನ ಸೌಂದರ್ಯವೂ ಹೆಚ್ಚುತ್ತದೆ. ಈ ಸಂಸ್ಕಾರದಲ್ಲಿಯೂ ಹೋಮ ಮಾಡಿ 'ಶಿಶುವಿನ ಕಿವಿಗಳ ಮೇಲೆ ಒಳ್ಳೆಯ ಮಾತುಗಳೇ ಬೀಳಲಿ' - ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ. 
     ಹತ್ತನೆಯ ಸಂಸ್ಕಾರ ಮಾನವ ಜೀವನದಲ್ಲಿ ಒಂದು ಹೊಸ ಘಟ್ಟವನ್ನು ಪ್ರಾರಂಭಿಸುತ್ತದೆ. ಅದನ್ನು ಉಪನಯನ ಸಂಸ್ಕಾರ ಎನ್ನುವುದೂ ಉಂಟು. ಆಚಾರ್ಯನು ಗರ್ಭಾಷ್ಟಮ ಅಂದರೆ, ಎಂಟು ವರ್ಷದ ಬಾಲಕ ಅಥವಾ ಬಾಲಿಕೆಗೆ, ಮಂತ್ರಪೂರ್ವಕವಾಗಿ ಮೂರೆಳೆಯ ಯಜ್ಞೋಪವೀತವನ್ನು ಧಾರಣೆ ಮಾಡಿಸುತ್ತಾನೆ. ಆ ಮಂತ್ರದಲ್ಲಿ, 'ಯಜ್ಞೋಪವೀತ, ಸತ್ಕರ್ಮಗಳೊಂದಿಗೇ ಉದ್ಣವಿಸುವಂತಹದು. ಮೂರು ಎಳೆಗಳು ಮನಃಶುದ್ಧಿ, ವಚಃಶುದ್ಧಿ, ಕಾಯಶುದ್ಧಿ - ಈ ಮೂರು ಪವಿತ್ರತೆಗಳನ್ನು ಸೂಚಿಸುತ್ತವೆ. ಶುಭ್ರವೂ, ಗತಿಶೀಲವೂ ಆದ ಜೀವನ ನಡೆಸು' - ಎಂದು ಹೇಳುತ್ತದೆ. ಸಂಸ್ಕಾರದೊಂದಿಗೇ ಬಾಲಕ-ಬಾಲಿಕೆಯರ ಧಾರ್ಮಿಕ ಜೀವನ ಪ್ರಾರಂಭವಾಗುತ್ತದೆ. ವಿಶೇಷ ಹವನ ಮಾಡಿ, ಬಾಲಕ-ಬಾಲಿಕೆ, "ಅನೃತಾತ್ ಸತ್ಯಮುಪೈ"|| (ಯಜು.೧.೫.) -  ಅಸತ್ಯದಿಂದ ಸರಿದು ಸತ್ಯದ ಕಡೆಗೆ ಅಡಿಯಿಡುತ್ತೇನೆ -  ಎಂಬ ಮಹಾವ್ರತವನ್ನು ಸ್ವೀಕರಿಸುತ್ತಾರೆ. 'ಉಪನಯನ' ಎಂದರೆ, ಹತ್ತಿರ ಕರೆದುಕೊಳ್ಳುವುದು ಎಂದರ್ಥ. ಆಚಾರ್ಯ, ಈ ಸಂಸ್ಕಾರ ನೀಡಿ, ಬಾಲಕ-ಬಾಲಿಕೆಯರನ್ನು ಶಿಕ್ಷಣಕ್ಕಾಗಿ ತನ್ನ ಬಳಿ ಕರೆದುಕೊಳ್ಳುತ್ತಾನೆ.
     ಇದಾದ ಕೂಡಲೇ ಹನ್ನೊಂದನೆಯ ಸಂಸ್ಕಾರ ವೇದಾರಂಭ ಮಾಡಲ್ಪಡುತ್ತದೆ. ಇದು ಅದ್ಯಯನದ ಉದ್ಘಾಟನಾ ಸಮಾರಂಭ ಎನ್ನಬಹುದು. ಈ ಸಂಸ್ಕಾರದಲ್ಲಿಯೇ ಆಚಾರ್ಯನು ಶಿಷ್ಯ-ಶಿಷ್ಯೆಯರಿಗೆ, ಜಗತ್ತಿನ ಪ್ರಾರ್ಥನೆಗಳಲ್ಲೆಲ್ಲಾ ಅತ್ಯಂತ ಉತ್ಕೃಷ್ಟವಾದ, ಸರ್ವಥಾ ಅನುಪಮವಾದ, ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ, ಅದ್ಭುತ ಗಾಯತ್ರೀ ಮಂತ್ರವನ್ನು ಉಪದೇಶಿಸುತ್ತಾನೆ. ವೈದಿಕ ದರ್ಮದ ಸೌಂದರ್ಯವಾದ ಗಾಯತ್ರೀ ಮಂತ್ರವಿದು:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | 
ಧಿಯೋ ಯೋ ನಃ ಪ್ರಚೋದಯಾತ್ || (ಯಜು. ೩೬.೩.)
     ಪರಮಾತ್ಮನು, [ಓಮ್] ಸರ್ವರಕ್ಷಕನು, [ಭೂಃ] ಪ್ರಾಣಸ್ವರೂಪನು, [ಭುವಃ] ದುಃಖ ನಿವಾರಕನು, [ಸ್ವಃ] ಆನಂದಸ್ವರೂಪನು. [ಸವಿತುಃ ದೇವಸ್ಯ] ಸರ್ವ ಜಗದುತ್ಪಾದಕನೂ, ಪ್ರೇರಕನೂ ಆದ ಆ ಸರ್ವದಾತೃ ಜ್ಯೋತಿರ್ಮಯನ, [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಿಸಲರ್ಹವಾದ ಪಾಪದಾಹಕ ಜ್ಯೋತಿಯನ್ನು, [ಧೀಮಹಿ] ಧ್ಯಾನಿಸೋಣ, ಧರಿಸೋಣ. [ಯಃ] ಯಾವ ಆ ಪ್ರಭುವು, [ನಃ ಧಿಯಃ] ನಮ್ಮ ಬುದ್ಧಿಯನ್ನು ಉತ್ತಮ ಕರ್ಮಗಳತ್ತ, [ಪ್ರಚೋದಯಾತ್] ಪ್ರೇರೇಪಿಸಲಿ.
     ಈ ವಿಚಿತ್ರ ಪ್ರಾರ್ಥನೆ ಕ್ರಿಯಾರೂಪಕ್ಕಿಳಿದು ಬಂದಲ್ಲಿ, ಬುದ್ಧಿ ಶುದ್ಧಿ ಸಿದ್ಧಿಸಿದಲ್ಲಿ ನಮಗೆ ಸಿಕ್ಕದಿರುವ ವಸ್ತುವಾದರೂ ಯಾವುದು ಉಳಿದೀತು?
     ಈ ಸಂಸ್ಕಾರವಾದ ಮೇಲೆ ಬಾಲಕ-ಬಾಲಿಕೆಯರು ವಿದ್ಯಾಭ್ಯಾಸವನ್ನಾರಂಭಿಸಿ ಬ್ರಹ್ಮಚರ್ಯಪೂರ್ವಕವಾಗಿ ಸಾಧನಾಮಯವಾದ ಜೀವನವನ್ನು ನಿರ್ವಹಿಸುತ್ತಾ ಸಮಸ್ತ ವಿದ್ಯೆಗಳನ್ನು ಕಲಿಯುತ್ತಾರೆ. 
     ವಿದ್ಯಾಭ್ಯಾಸ ಪೂರ್ಣವಾದ ಮೇಲೆ, ಹನ್ನೆರಡನೆಯದಾದ ಸಮಾವರ್ತನ ಸಂಸ್ಕಾರ ನಡೆಯುತ್ತದೆ. ವಿಶಿಷ್ಟ ಹೋಮಾನಂತರ ಯುವಕ-ಯುವತಿಯರು ಎಂಟು ಕುಂಭಗಳಲ್ಲಿಟ್ಟ ನೀರಿನಿಂದ ಸ್ನಾನ ಮಾಡುತ್ತಾರೆ. ಎಂಟು ದಿಕ್ಕಿನಲ್ಲಿ ಎಲ್ಲೇ ಹೋದರೂ, ಜಲದ ಶಾಂತಿಯನ್ನೂ, ಪವಿತ್ರತೆಯನ್ನೂ ಪ್ರಸರಿಸುತ್ತೇವೆ ಎಂಬ ಸಂಕಲ್ಪವೇ ಈ ಸಂಸ್ಕಾರದ ರಹಸ್ಯ. ಈ ಸ್ನಾನವಾದ ಮೇಲೆ ಅವರು 'ಸ್ನಾತಕ'ರು ಅಥವಾ 'ಸ್ನಾತಿಕೆ'ಯರು ಎನ್ನಿಸಿಕೊಳ್ಳುತ್ತಾರೆ. ಇಲ್ಲಿಗೆ ಬ್ರಹ್ಮಚರ್ಯಾಶ್ರಮ ಸಮಾಪ್ತವಾಗುತ್ತದೆ. 
-ಪಂ. ಸುಧಾಕರ ಚತುರ್ವೇದಿ.
*******************