ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಫೆಬ್ರವರಿ 11, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೩.ಪಿತೃಯಜ್ಞ


     ಇನ್ನು ಮೂರನೆಯ ಮಹಾಯಜ್ಞ - ಪಿತೃಯಜ್ಞ. ಈ ವಿಷಯದಲ್ಲಿ ಜನಸಾಮಾನ್ಯಕ್ಕೆ ಬಹಳ ಭ್ರಾಂತಿಯಿದೆ. ತೀರಿಹೋದ ತಂದೆ-ತಾಯಿಗಳಿಗೆ ಶ್ರಾದ್ದ ಮಾಡಿ, ಪಿಂಡದಾನ - ತಿಲತರ್ಪಣ ಕೊಡುವುದೇ ಪಿತೃಯಜ್ಞವೆಂಬ ಬುದ್ಧಿವಿರುದ್ದವೂ, ಅವೈದಿಕವೂ ಆದ ನಂಬಿಕೆ ಬಹುಮಂದಿಗಿದೆ. ಪ್ರತಿಯೊಬ್ಬ ಜೀವನೂ ತನ್ನ ಸತ್ಕರ್ಮ - ದುಷ್ಕರ್ಮಗಳಿಗೆ ಉತ್ತರದಾತೃ; ಪ್ರತಿಯೊಬ್ಬ ಜೀವನಿಗೂ ಅವನವನ ಕರ್ಮಾನುಸಾರ ಜನ್ಮಾಂತರದಲ್ಲಿ ಊರ್ಧ್ವಗತಿ-ಅಧೋಗತಿಗಳು ಪ್ರಾಪ್ತವಾಗುತ್ತವೆ. ಈ ವಿಷಯದ ಬಗೆಗೆ ಅನ್ಯರು ಮಾಡುವ ಯಾವ ಕರ್ಮವೂ ಭಗವಂತನ ಕರ್ಮಫಲದಾನದ ನ್ಯಾಯಸಿದ್ಧಾಂತವನ್ನು ಪರಿವರ್ತಿಸಲಾರದು. ಮೃತರಾದ ತಂದೆ-ತಾಯಿಗಳು ಪುಣ್ಯಾತ್ಮರಾಗಿದ್ದ ಪಕ್ಷದಲ್ಲಿ ಅವರ ಊರ್ಧ್ವಗತಿಗೆ ಇಲ್ಲಿ ಹಾಕುವ ಪಿಂಡ, ತಿಲತರ್ಪಣಗಳು ಅನಾವಶ್ಯಕ. ಅವರು ಪಾಪಾತ್ಮರಾಗಿದ್ದ ಪಕ್ಷದಲ್ಲಿ, ಅವರ ಅಧೋಗತಿಯನ್ನು ಇಲ್ಲಿನ ಶ್ರಾದ್ಧಕರ್ಮಗಳಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗೆ ಮೃತರ ಶ್ರಾದ್ಧ ಒಂದು ಅರ್ಥರಹಿತವಾದ ಆಡಂಬರ ಕ್ರಿಯೆ ಮಾತ್ರ. 
     ಶ್ರಾದ್ಧ ಎಂದರೆ, ಶ್ರದ್ಧೆಯಿಂದ ಸಲ್ಲಿಸುವ ಸೇವೆ, ತರ್ಪಣ ಎಂದರೆ ತೃಪ್ತಿ ನೀಡುವ ಕಾರ್ಯ. ಇವೆರಡೂ ಸಶರೀರರಾದ ಜೀವಂತರಾದ ಮಾತಾ-ಪಿತೃಗಳಿಗೆ ಸಲ್ಲಬೇಕಾದ ಸೇವೆಗಳೇ ಹೊರತು, ಮೃತರಿಗಲ್ಲ. ಮೃತರಿಗೆ ನಾವು ಸದ್ಗತಿಯನ್ನು ಕೊಡಲಾರೆವು. ಅವರಿಂದ ನಮಗಾದ ಉಪಕಾರಗಳನ್ನು ಸ್ಮರಿಸುವುದು; ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಯಾವುದಾದರೂ ಸತ್ಕಾರ್ಯ ಮಾಡುವುದು ತಪ್ಪಲ್ಲ. ಆದರೆ ಕರ್ಮಗತಿಯನ್ನು ಪರಿವರ್ತಿಸಬಲ್ಲೆವೆಂದು ಮಾತ್ರ ಕನಸಿನಲ್ಲಿಯೂ ಭಾವಿಸಬಾರದು.
     ಪಿತೃಯಜ್ಞ, ವೈದಿಕ ಸಿದ್ಧಾಂತಾನುಸಾರ, ಜೀವಂತ ಮಾತಾ-ಪಿತೃಗಳಿಗೆ ಮಕ್ಕಳು ಸಲ್ಲಿಸುವ ಸೇವೆ. ಗುರುಕುಲದಲ್ಲಿರುವ ಬ್ರಹ್ಮಚಾರಿಗಳಿಗೂ, ವಾನಪ್ರಸ್ಥಿಗಳಿಗೂ, ಸಂನ್ಯಾಸಿಗಳಿಗೂ ಇದು ಸಂಬಂಧಿಸುವುದಿಲ್ಲ. ಇದು ಕೇವಲ ಗೃಹಸ್ಥರಿಗೆ ಮಾತ್ರ ಸಂಬಂಧಿಸಿದ ಯಜ್ಞ. ಋಗ್ವೇದ ಹೇಳುತ್ತಲಿದೆ:-
ಸ ವಹ್ನೀ ಪುತ್ರಃ ಪಿತ್ರೋಃ ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ || (ಋಕ್.೧.೧೬೦.೩)
[ಪಿತ್ರೋಃ] ಮಾತಾ-ಪಿತೃಗಳನ್ನು, ಸೇವಾಶುಶ್ರೂಷೆಗಳಿಂದ, [ವಹ್ನಿಃ] ಎತ್ತಿ ಹಿಡಿಯುವವನೇ, [ಪುತ್ರಃ] ನಿಜವಾದ ಮಗನು. [ಸ ಧೀರಃ] ಆ ಮಾತಾ-ಪಿತೃಸೇವಕನಾದ, ಬುದ್ಧಿಯಿಂದ ಪ್ರೇರಿತನಾದ ಸುಪುತ್ರನೇ, [ಮಾಯಯಾ] ತನ್ನ ಪ್ರಜ್ಞೆಯಿಂದ [ಪವಿತ್ರವಾನ್] ಪವಿತ್ರಶಕ್ತಿಯುತನಾಗಿ [ಭುವನಾನಿ ಪುನಾತಿ] ಲೋಕಗಳನ್ನು ಪವಿತ್ರಗೊಳಿಸುತ್ತಾನೆ. 
ಮಾತಾ-ಪಿತೃಗಳಿಗೆ ಭಕ್ತಿ ತೋರದ ಪುತ್ರ ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳೇ ಉದಿಸವು. ಇನ್ನು ಅವನು ಜಗತ್ತನ್ನು ಪಾವನಗೊಳಿಸುವುದಾದರೂ ಹೇಗೆ?
     ಗೃಹಸ್ಥ-ಗೃಹಿಣಿಯರು, ಮನೆಯಲ್ಲಿರುವ ತಂದೆ-ತಾಯಿಗಳನ್ನು ತ್ರಿಕರಣಶುದ್ಧಿ ಪೂರ್ವಕವಾಗಿ ಉಪಚರಿಸಬೇಕು. ಅವರ ಮನಸ್ಸಿಗೆ ನೋವಾಗದಂತೆ, ಶರೀರಗಳಿಗೆ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಪಾರಿವಾರಿಕ ಜೀವನವನ್ನು ಸುಖಮಯವಾಗಿ ಮಾಡಲು, ಅಥರ್ವವೇದ ಕೊಡುವ ಈ ಆದೇಶಗಳನ್ನು ನೆನಪಿನಲ್ಲಿಡಬೇಕಾದುದು ಆವಶ್ಯಕ.
ಅನುವ್ರತಃ ವಿತುಃ ಪುತ್ರೋ ಮಾತ್ರಾ ಭವತು ಸಂಮನಾ | 
ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್ || (ಅಥರ್ವ.೩.೩೦.೨)
     [ಪುತ್ರಃ] ಮಗನು, [ಪಿತುಃ ಅನುವ್ರತಃ] ತಂದೆಗೆ ಅನುಕೂಲವಾದ ಸಂಕಲ್ಪವುಳ್ಳವನೂ, [ಮಾತ್ರಾ] ತಾಯಿಯೊಂದಿಗೆ [ಸಮ್ಮನಾಃ] ಸಮಾನ ಚಿತ್ತನೂ, [ಭವತು] ಆಗಿರಲಿ. [ಜಾಯಾ] ಪತ್ನಿಯು [ಪತ್ಯೇ] ಪತಿಗೆ [ಮಧುಮತೀಂ ಶಂತಿವಾಂ ವಾಚಮ್] ಮಧುರವೂ, ಶಾಂತಿದಾಯಕವೂ ಆದ ಮಾತನ್ನು, [ವದತು] ಆಡಲಿ.
ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ | 
ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ || (ಅಥರ್ವ.೩.೩೦.೩)
     [ಭ್ರಾತಾ] ಸೋದರನು [ಭ್ರಾತರಮ್] ಸೋದರನನ್ನು [ಮಾ ದ್ವಿಕ್ಷತ್] ದ್ವೇಷಿಸದಿರಲಿ. [ಉತ] ಅಂತೆಯೇ [ಸ್ವಸಾರಮ್] ಸಹೋದರಿಯು [ಸ್ವಸಾ] ಸಹೋದರಿಯೊಂದಿಗೆ (ದ್ವೇಷಭಾವನೆ ಹೊಂದದಿರಲಿ). [ಸಮ್ಯಂಚಃ] ಪರಸ್ಪರ ಪ್ರೀತಿಯುಕ್ತರೂ [ಸವ್ರತಾಃ] ಒಂದೇ ಸಂಕಲ್ಪವುಳ್ಳವರೂ [ಭದ್ರಯಾ] ಶುಭವಾದ ರೀತಿಯಲ್ಲಿ [ವಾಚಂ ವದತ] ಮಾತನ್ನಾಡಿರಿ.
     ಪತಿ-ಪತ್ನಿಯರಲ್ಲಿ, ಸೋದರ-ಸೋದರಿಯರಲ್ಲಿ ಪರಸ್ಪರ ವೈಮನಸ್ಯವಿದ್ದರೆ, ಅವರು ಮಾತಾ-ಪಿತೃಗಳನ್ನು ಉಪಚರಿಸುವುದಾದರೂ ಎಂತು? ಗೃಹದ ವಾತಾವರಣವನ್ನು ಮಧುರವಾಗಿಟ್ಟುಕೊಂಡು, ಪ್ರತಿದಿನವೂ ಮಾತಾ-ಪಿತೃಗಳನ್ನು ಎಲ್ಲ ರೀತಿಯಲ್ಲಿಯೂ ಪ್ರಸನ್ನರಾಗಿಯೂ, ತೃಪ್ತರನ್ನಾಗಿಯೂ ಇಟ್ಟುಕೊಂಡಿರುವುದೇ ನಿಜವಾದ ಪಿತೃಯಜ್ಞ.
ಹಿಂದಿನ ಲೇಖನಕ್ಕೆ ಲಿಂಕ್ದೇವಯಜ್ಞ

ಬುಧವಾರ, ಫೆಬ್ರವರಿ 6, 2013

ದೂರವಾಣಿ ಮೂಲಕ ವೇದ ಮಂತ್ರ ಕಲಿಕೆ

ದೂರವಾಣಿ ಮೂಲಕ ಹಾಸನದ ತಾತನಿಂದ ಕಲಿತ ವೇದ ಮಂತ್ರಗಳನ್ನು ಹೇಳುತ್ತಿರುವ ಮೊಮ್ಮಗಳು ಅಕ್ಷಯ:



-ಬಿಂದು ರಾಘವೇಂದ್ರ, ಬೆಂಗಳೂರು.

ಶುಕ್ರವಾರ, ಫೆಬ್ರವರಿ 1, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೨.ದೇವಯಜ್ಞ


     ಎರಡನೆಯ ಮಹಾಯಜ್ಞ ದೇವಯಜ್ಞ. ಇದೂ ಕೂಡ ಸೂರ್ಯೋದಯ-ಸೂರ್ಯಾಸ್ತ ಸಮಯಗಳಲ್ಲಿ ಮಾಡಬೇಕಾದ ದೈನಿಕ ಕ್ರಿಯೆ. ಇದನ್ನು ಹವನ, ಹೋಮ, ಅಗ್ನಿಹೋತ್ರ ಈ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ಇದು ಆಧ್ಯಾತ್ಮಿಕ ಹಾಗೂ ಭೌತಿಕ - ಎರಡೂ ದೃಷ್ಟಿಗಳಿಂದಲೂ ಆಚರಣೀಯ. ಹಸನಾದ ಗೋವಿನ ತುಪ್ಪ, ಶಾಸ್ತ್ರೋಕ್ತವಾಗಿ ನಿರ್ಮಿಸಿದ ಹವ್ಯದ್ರವ್ಯ, ಉತ್ತಮವಾದ ಸಮಿತ್ತು - ಇವುಗಳನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುವುದರಿಂದ ಹೋಮಧೂಮ ವಾತಾವರಣದಲ್ಲಿನ ರೋಗಾಣುಗಳನ್ನು ನಾಶಪಡಿಸಿ, ಸುಗಂಧವನ್ನು ಹರಡಿ, ಮನಸ್ಸಿಗೆ ಉಲ್ಲಾಸವನ್ನೂ, ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ. ಒಬ್ಬನು ತಿನ್ನಬಹುದಾದ ಪ್ರಮಾಣದ ಘೃತ ನೂರಾರು ಉಸಿರಾಡುವ ಮಂದಿಗಳಿಗೆ ಲಾಭವನ್ನುಂಟುಮಾಡುತ್ತದೆ. ಆಧ್ಯಾತ್ಮಿಕ ದ್ಟೃಂದ, ಈ ದೇವಯಜ್ಞ ಒಂದು ಅದ್ಭುತ ವರದಾನವೇ ಆಗಿದೆ. ವಿನಿಯೋಗಿಸುವ ಒಂದೊಂದು ಮಂತ್ರದಲ್ಲಿಯೂ ಆಧ್ಯಾತ್ಮಿಕ ತತ್ತ್ವ ತುಳುಕುತ್ತದೆ. ಅಗ್ನ್ಯುದ್ದೀಪನದ ಮಂತ್ರ ಆತ್ಮವನ್ನು ಸುಪ್ತಾವಸ್ಥೆಯಿಂದ ಹೊಡೆದೆಬ್ಬಿಸುತ್ತದೆ:- ಉದ್ಬುಧಸ್ಯಾಗ್ನೇ ಪ್ರತಿ ಜಾಗೃಹಿತ್ವಮ್|| (ಯಜು. ೧೫.೫೪) ಓ ಶರೀರನೇತೃ ಜೀವ, ಎಚ್ಚರನಾಗು, ಜಾಗರೂಕನಾಗು. ಮತ್ತು 'ಇದಂ ನ ಮಮ' ಎಂಬ ಘೋಷಣೆ, ಹೃದಯದಲ್ಲಿನ ಸ್ವಾರ್ಥಭಾವನೆಯ ಬುಡಕ್ಕೆ ಕೊಡಲಿಪೆಟ್ಟು ಹಾಕಿ, ಹೃದಯವನ್ನು ಉದಾರವಾಗಿ ಮಾಡುತ್ತದೆ. ಅಗ್ನಿಹೋತ್ರದ ವಿಷಯದಲ್ಲಿ, ಈ ಕೆಳಗಿನ ವೇದಮಂತ್ರಗಳು ಸದಾ ಮನನೀಯ:-

ಸಾಯಂಸಾಯಂ ಗೃಹಪತಿನೋ ಅಗ್ನಿಃ ಪ್ರಾತಃಪ್ರಾತಃ ಸೌಮನಸಸ್ಯ ದಾತಾ |
ವಸೋರ್ವಸೋರ್ವಸುದಾನ ಏಧಿ ವಯಂ ತ್ವೇಂಧಾನಾಸ್ತನ್ವಂ ಪುಷೇಮ | (ಅಥರ್ವ.೧೯.೫೫.೩.)
     [ಸಾಯಂಸಾಯಂ] ಸಂಜೆ ಸಂಜೆ ಹೊತ್ತಿಸಿದ [ನಃ ಗೃಹಪತಿಃ ಅಗ್ನಿಃ] ನಮ್ಮ ಗೃಹರಕ್ಷಕವಾದ ಹೋಮಾಗ್ನಿ, [ಪ್ರಾತಃಪ್ರಾತಃ] ಬೆಳಗು ಬೆಳಗಿನವರೆಗೆ [ಸೌಮನಸಸ್ಯ ದಾತಾ] ಮಾನಸಿಕ ಉಲ್ಲಾಸವನ್ನು ಕೊಡುವಂತಹದಾಗಿದೆ. ಹೇ ಯಜ್ಞಾಗ್ನಿ, [ವಸೋರ್ವಸೋರ್ವಸುದಾನಃ] ಜೀವ ಜೀವನಿಗೂ ಸಂಪತ್ತನ್ನು ನೀಡುತ್ತಾ, [ಏಧಿ] ಪ್ರಾಪ್ತನಾಗು. [ವಯಮ್] ನಾವು [ತ್ವಾಂ ಇಂಧಾನಾಃ} ನಿನ್ನನ್ನು ಪ್ರದೀಪ್ತಗೊಳಿಸುತ್ತಾ [ತನ್ವಂ ಪುಷೇಮ] ದೇಹಶಕ್ತಿಯನ್ನು ಪೋಷಿಸಿಕೊಳ್ಳೋಣ.

ಪ್ರಾತಃಪ್ರಾತರ್ಗೃಹಪತಿನೋ ಅಗ್ನಿಃ ಸಾಯಂಸಾಯಂ ಸೌಮನಸಸ್ಯ ದಾತಾ |
ವಸೋರ್ವಸೋರ್ವಸುದಾನ ಏಧೀಂಧಾನಾಸ್ತ್ಯಾ ಶತಂಹಿಮಾ ಋಧೇಮ || (ಅಥರ್ವ.೧೯.೫೫.೪)
     [ಪ್ರಾತಃ ಪ್ರಾತಃ] ಬೆಳಗ್ಗೆ ಬೆಳಗ್ಗೆ ಹೊತ್ತಿಸಿದ, [ನಃ ಗೃಹಪತಿಃ ಅಗ್ನಿಃ] ನಮ್ಮ ಗೃಹರಕ್ಷಕ ಹೋಮಾಗ್ನಿ [ಸಾಯಂ ಸಾಯಂ] ಸಂಜೆ ಸಂಜೆಯವರೆಗೆ [ಸೌಮನಸಸ್ಯ ದಾತಾ] ಮನಃಪ್ರಸಾದವನ್ನು ಕೊಡುವಂತಹುದಾಗಿದೆ. [ವಸೋರ್ವಸೋರ್ವಸುದಾನಃ] ಜೀವ ಜೀವನಿಗೂ ಐಶ್ವರ್ಯವನ್ನು ತುಂಬಿಸಿಕೊಡುತ್ತಾ [ಏಧಿ] ಪ್ರಾಪ್ತನಾಗು. [ತ್ವಾ ಇಂಧಾನಾಃ] ನಿನ್ನನ್ನು ಉಜ್ವಲಗೊಳಿಸುತ್ತಾ [ಶತಂ ಹಿಮಾ ಋಧೇಮ] ನೂರು ವರ್ಷಗಳವರೆಗೆ ವೃದ್ಧಿ ಹೊಂದೋಣ.

     ಹೋಮದಲ್ಲಿ ಹಾಕಿದ ವಸ್ತುಗಳು ಹಾಳಾಗುತ್ತವೆಂದು ಹೇಳುವವರಿಗೆ ಪದಾರ್ಥವಿಜ್ಞಾನದ ಅರಿವಿಲ್ಲ. ಯಾವ ವಸ್ತುವೂ ನಾಶವಾಗುವುದಿಲ್ಲ. ರೂಪಾಂತರ ಹೊಂದಿ, ವಾಯುಮಂಡಲದಲ್ಲಿ ಸೂಕ್ಷ್ಮ ರೂಪದಿಂದ ಸೇರಿ, ಎಲ್ಲರಿಗೂ ಹಿತವನ್ನುಂಟುಮಾಡುತ್ತದೆ. ಹೋಮಾಗ್ನಿಯಿಂದ ಮನಸ್ಸು ಶರೀರಗಳಿಗೆ ಉಲ್ಲಾಸ; ಆಧ್ಯಾತ್ಮಿಕ ದೃಷ್ಟಿಯಿಂದ, ಜಗನ್ನಿಯಾಮಕನಾದ ತೇಜಃಸ್ವರೂಪ ಪರಮಾತ್ಮನ ಧ್ಯಾನ, ಚಿಂತನ, ಮನನಗಳಿಂದ ಆತ್ಮನಿಗೆ ಉತ್ಕರ್ಷ. ಹೀಗೆ ದ್ವಿವಿಧ ಲಾಭದಾಯಕ ಈ ದೇವಯಜ್ಞ. ಇದು ಬ್ರಹ್ಮಚಾರಿಗಳು, ಗೃಹಸ್ಥರು ಮತ್ತು ವಾನಪ್ರಸ್ಥಿಗಳಿಗೆ ಅನಿವಾರ್ಯ. ಸಂನ್ಯಾಸಿಗಳು ಸದಾ ಸಂಚಾರಿಗಳಾದ ಕಾರಣ ಮತ್ತು ಹೋಮದ ಸಲಕರಣೆಗಳನ್ನು ಹೊತ್ತು ತಿರುಗುವ ವಿಧಾನವಿಲ್ಲದ ಕಾರಣ, ದೇವಯಜ್ಞ ಅವರಿಗಿಲ್ಲ.
-ಪಂ. ಸುಧಾಕರ ಚತುರ್ವೇದಿ.
**************************