ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಅಕ್ಟೋಬರ್ 28, 2010

ಮೊರೆ






ಸರಿಸಿಬಿಡು ಮೂಢಮನ ಆವರಿತ ಪೊರೆಯಾ|
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು|
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|
ಸರ್ವದೂಷಿತನಾಗಿ ನೆಲೆಗಾಣದಿದೆ ಮನವು||
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||


ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||
ಹುಲುಮನುಜ ನಾನಾಗಿ ಭಾವಬಂಧಿಯು ನಾನು|
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.

ಬುಧವಾರ, ಅಕ್ಟೋಬರ್ 20, 2010

ಮೂಢ ಉವಾಚ -20

ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ*
ಕಂಡವರನು ಸುಡುವನೆ ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು
ನರರ ಕುಬ್ಜರಾಗಿಸುವುದು ಮೂಢ||
[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 3, 2010

ಮೂಢ ಉವಾಚ -19

ಮದಭರಿತ ಮನುಜನ ಪರಿಯೆಂತು ನೋಡು
ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು|
ಮೇಲರಿಮೆಯಾ ಭೂತ ಅಡರಿಕೊಂಡಿಹುದು
ಭೂತಕಾಟವೇ ಬೇಡ ದೂರವಿರು ಮೂಢ||


ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು|
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ||


ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ|
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ||


ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ|
ವಿಕಟನರ್ತನಗೈವ ಮದವದವನತಿ ತರದೆ?|
ನರಾರಿ ಮದದೀಪರಿಯ ನೀನರಿ ಮೂಢ||
**************
-ಕವಿನಾಗರಾಜ್.

ಶನಿವಾರ, ಅಕ್ಟೋಬರ್ 2, 2010

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||


ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|


ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|


ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|


ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|


ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|


ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.