ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ
**************
-ಕವಿನಾಗರಾಜ್.

ಭಾನುವಾರ, ಆಗಸ್ಟ್ 15, 2010

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ|
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು|
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು|
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ|

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು|
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ||


-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 12, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಮಂಗಳವಾರ, ಆಗಸ್ಟ್ 10, 2010

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು 
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು 
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು 
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು 
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ 
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ |
ಬಯಕೆ ಜೀವನವು ಬಯಸುವುದು ತಪ್ಪಲ್ಲ 
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

ಶನಿವಾರ, ಆಗಸ್ಟ್ 7, 2010

ಮೂಢ ಉವಾಚ -1

ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ 
ಏಕಮುಖ ಬಹುಮುಖ ಸುಮುಖ ಕುಮುಖ !
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||

ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ 
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ |
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ 
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||

ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು 
ಸೇವೆಯನು ಗೈಯುವರು ನಂಬಿಕೆಯ ನಟಿಸುವರು |
ನೀನೆ ಗತಿ ನೀನೆ ಮತಿ ಪರದೈವವೆನ್ನುವರು 
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||

ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು |
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು 
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು


ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ
-ಕ.ವೆಂ.ನಾಗರಾಜ್.