ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜನವರಿ 25, 2016

ಸಾಧನಾ ಸೋಪಾನ 21: ಸತ್ಯಾನ್ವೇಷಣೆ- 1


ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!
     ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ ಶಿಖರ, ಜ್ಞಾನದ ಶಿಖರವಾಗಿರುತ್ತದೆ. ವಾಸ್ತವತೆಯನ್ನು ಆಧರಿಸಿ ನಮ್ಮ ಮಾತುಗಳಿದ್ದರೆ ಅದು ವಾಸ್ತವವಾಗಿ ಗೋಚರಿಸುತ್ತವೆ. ಸತ್ಯ ಮತ್ತು ಜ್ಞಾನಗಳು ಒಂದೇ ಆಗಿರುತ್ತವೆ. ಸತ್ಯದ ಜ್ಞಾನದ ಆಧಾರದಲ್ಲಿ ನಮ್ಮ ಮಾತುಗಳಿದ್ದರೆ ಅವು ನಿಜವಾಗುತ್ತವೆ. ವಾಸ್ತವತೆ ಅಥವ ಸತ್ಯ ಎಂದರೆ ಯಾವುದು? ಏನು? ಸತ್ಯ ಎಂದರೇನೆಂದು ತಿಳಿಯದೆ ನಮ್ಮ ಜ್ಞಾನವನ್ನು ಸತ್ಯದೊಂದಿಗೆ ಅಥವ ಸತ್ಯವನ್ನು ಜ್ಞಾನದೊಂದಿಗೆ ಗುರುತಿಸುವುದಾದರೂ, ತಿಳಿಯುವುದಾದರೂ ಹೇಗೆ? ಮತ್ತೆ ನಾವು ವಿಚಿತ್ರ ತರ್ಕದ ಸುಳಿಗೆ ಸಿಕ್ಕಿಬಿಟ್ಟೆವು. ಸತ್ಯ ಅನ್ನುವುದು ಹೇಗಿದೆಯೋ ಹಾಗೆ ಗೊತ್ತಾಗಬೇಕು, ಹೇಗೆ ಕಾಣಿಸುತ್ತದೆಯೋ ಹಾಗಲ್ಲ!
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
     ನಮ್ಮ ಮುಂದೆ ವಿಧ-ವಿಧವಾದ ಸತ್ಯಗಳು ಕಂಡುಬರುತ್ತವೆ. ಒಬ್ಬರು ಹೇಳುತ್ತಾರೆ, "ಇದೇ ಸತ್ಯ". ಇನ್ನೊಬ್ಬರು, "ಅದು ಸತ್ಯ" ಎನ್ನುತ್ತಾರೆ. "ಎಲ್ಲವೂ ಸತ್ಯ" ಎಂದು ಮತ್ತೊಬ್ಬರು ಹೇಳುತ್ತಾರೆ. ಆದರೆ ಅಂತಿಮ ಸತ್ಯ ಯಾವುದು? ಅಂತಿಮ ಸತ್ಯ ಯಾವುದು ಎಂಬುದನ್ನು ಅರಿಯಲು ನಮಗೆ ಅಗತ್ಯವಾದ ಸ್ಪಷ್ಟವಾದ ಜ್ಞಾನ ಹೊಂದಿರಬೇಕಾಗುತ್ತದೆ. ಇಡೀ ಪ್ರಪಂಚವೇ ಮಾಯೆ, ಅದೇ ಅಂತಿಮ ಸತ್ಯವಲ್ಲ ಅನ್ನುತ್ತಾರೆ. ಹಾಗಾದರೆ ಈ ಪ್ರಪಂಚದಲ್ಲಿನ ಯಾವುದನ್ನೇ ಆಗಲಿ ಸತ್ಯವೆಂದು ಹೇಗೆ ಹೇಳುವುದು? ನಾವು ಏನು ಮಾತನಾಡುತ್ತೇವೋ ಅದೂ ಸತ್ಯವಾಗಲಾರದು! ಓಹ್! ಎಷ್ಟೊಂದು ಗೋಜಲಾಯಿತು, ಈ ಸಿಕ್ಕು ಬಿಡಿಸುವುದಾದರೂ ಹೇಗೆ? ಸತ್ಯವೆಂದರೇನು ಎಂಬ ಜ್ಞಾನ ಇಲ್ಲಿ ಅಗತ್ಯವಾಗುತ್ತದೆ. ನಮಗೆ ಜ್ಞಾನ ಬೇಕು, ಏಕೆಂದರೆ ಅದೇ ಸತ್ಯದೆಡೆಗೆ ನಮ್ಮನ್ನು ಕರೆದೊಯ್ಯುವುದು. ಯಾವುದು ಜ್ಞಾನ ಮತ್ತು ಯಾವುದು ಸತ್ಯ ಎಂಬ ಕ್ಲಿಷ್ಟ ವಿಷಯದೆಡೆಗೆ ನಾವೀಗ ಹೊರಳುತ್ತಿದ್ದೇವೆ.
     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
-ಕ.ವೆಂ.ನಾಗರಾಜ್.
***************
ದಿನಾಂಕ 06.01.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಜನವರಿ 17, 2016

ಸಾಧನಾ ಸೋಪಾನ - 20: ನಾವು ಯಾರು?-3


     ಪುನರ್ಜನ್ಮವಿಲ್ಲವೆಂದಾದರೆ ಹುಟ್ಟುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಡವ, ಶ್ರೀಮಂತ, ಹೀನ-ದೀನ, ಅಂಗವಿಕಲ, ಇತ್ಯಾದಿಯಾಗಿ ತಮ್ಮ ಯಾವುದೇ ತಪ್ಪಿಲ್ಲದೆ ಹುಟ್ಟುವುದಕ್ಕೆ ಸಮಂಜಸ ಕಾರಣ ಕೊಡುವುದು ಕಷ್ಟವಾಗುತ್ತದೆ. ಜೀವಾತ್ಮ ಅವಿನಾಶಿ, ಆದಿ-ಅಂತ್ಯಗಳಿಲ್ಲದುದು ಎಂದು ವೇದ ಹೇಳುತ್ತದೆ. ಮಾಡಿದ ಕರ್ಮಕ್ಕನುಸಾರವಾಗಿ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ವೇದ ಸಾರುತ್ತದೆ. ಕರ್ಮಫಲಭೋಗ ಅನಿವಾರ್ಯ ಎಂದು ಗೀತೆ ಘೋಷಿಸುತ್ತದೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರದ ಆರ್ಥ. ಮಾಡಿದ್ದುಣ್ಣೋ ಮಹರಾಯ! ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಇದನ್ನು ಒಪ್ಪುವುದಾದರೆ, ಹುಟ್ಟುವಾಗಲೇ ಮೇಲೆ ಹೇಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದಕ್ಕೆ ಕಾರಣ ಸಿಗುತ್ತದೆ. ಇದಲ್ಲದೆ ಬೇರೆ ಕಾರಣಗಳು ಅಷ್ಟೊಂದು ಸಮಂಜಸವಾಗಿ ತೋರಲಾರವು.
     ತಮ್ಮ ಯಾವುದೇ ತಪ್ಪಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದೇ ಪುನರ್ಜನ್ಮವನ್ನು ಸಮರ್ಥಿಸಬಹುದಾದ ಒಂದು ಪ್ರಬಲ ಕಾರಣವೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಬ್ಬರೇ ತಂದೆ-ತಾಯಿಗಳಿಗೆ ಜನಿಸಿದ ಎಲ್ಲಾ ಮಕ್ಕಳೂ ಒಂದೇ ರೀತಿಯ ಗುಣ-ಸ್ವಭಾವದವರಾಗಿರುವುದಿಲ್ಲ. ಪುನರ್ಜನ್ಮವಿಲ್ಲವೆಂದಾದರೆ ಒಬ್ಬ ತಂದೆ-ತಾಯಿಗಳಿಗೆ ಹುಟ್ಟಿದ, ಒಂದೇ ರೀತಿಯ ಪರಿಸರದಲ್ಲಿ ಬೆಳೆದ ಮಕ್ಕಳೆಲ್ಲರೂ ಒಂದೇ ರೀತಿಯ ಗುಣ-ಸ್ವಭಾವದವರಾಗಬೇಕಿತ್ತು. ಹೀಗೆ ಇರುವ ಸಂಭವ ಅತಿ ಕಡಿಮೆಯೆಂದೇ ಹೇಳಬೇಕು. ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು ಅಲ್ಲವೇ? ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?
     ಋಗ್ವೇದದ ಈ ಮಂತ್ರ ನೋಡಿ: ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್| ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅಂತಃಸ್ಥಿತವಾದ ಪರಮಾತ್ಮ ತತ್ವ ಅತ್ಯಂತ ಚೈತನ್ಯಯುತವಾಗಿದ್ದು, ಜೀವದಾನ ಮಾಡುವಲ್ಲಿ, ಲೋಕ ಲೋಕಾಂತರಗಳಲ್ಲಿ ಸಂಚರಿಸುವಲ್ಲಿ ಪ್ರಧಾನವಾಗಿದೆ. ಮೃತರಾದವರ ಜೀವಾತ್ಮಕ್ಕೆ ಸಾವಿಲ್ಲದೆ ಇದ್ದು, ನಂತರದಲ್ಲಿ ಅದು ಸಾವು ಇರುವ ಶರೀರದಲ್ಲಿ ಪ್ರವೇಶಿಸಿ, ತನಗೆ ಪ್ರಾರಬ್ಧ ರೀತಿಯಲ್ಲಿ (ಕರ್ಮ ಫಲಾನುಸಾರವಾಗಿ) ಸಿಕ್ಕಿದ ಪರಿಸರದಲ್ಲಿ ಸಂಚರಿಸುತ್ತಿರುತ್ತದೆ ಎಂಬುದು ಈ ಮಂತ್ರದ ಅರ್ಥ. ಈ ರೀತಿಯಲ್ಲಿ ಪ್ರತಿ ಜೀವಿಯೂ ಹಿಂದೆ ಎಷ್ಟು ಜನ್ಮಗಳನ್ನು ಹಾದು ಬಂದಿದೆಯೋ, ಮುಂದೆ ಎಷ್ಟು ಜನ್ಮಗಳನ್ನು ಎತ್ತಬೇಕಿದೆಯೋ ಯಾರಿಗೆ ಗೊತ್ತು? ಶಂಕರಾಚಾರ್ಯರ 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂಬ ಉಕ್ತಿ ಹೇಳುವುದೂ ಇದನ್ನೇ!
     ಪುರುಷರು ಪುರುಷರಾಗಿಯೇ ಜನಿಸುತ್ತಾರೆಯೇ? ಸ್ತ್ರೀ ಸ್ತ್ರೀಯಾಗಿಯೇ ಜನಿಸುತ್ತಾಳೆಯೇ? ಇಲ್ಲ, ವೇದದ ಪ್ರಕಾರ ಜೀವಾತ್ಮಕ್ಕೆ ಲಿಂಗ ಭೇದವಿಲ್ಲ, ಜೀವಭೇದವೂ ಇಲ್ಲ. ಗಳಿಸಿದ ಕರ್ಮಫಲಾನುಸಾರವಾಗಿ ಯಾವ ಜೀವಿಯಾಗಿಯಾದರೂ ಜನಿಸಬಹುದಾಗಿರುತ್ತದೆ. ಈ ಮಂತ್ರ ನೋಡಿ: ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ| ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭). ಜೀವಾತ್ಮವು ಸ್ತ್ರೀಯೂ ಆಗಿದೆ, ಪುರುಷನೂ ಆಗಿದೆ, ಕುಮಾರನೂ ಆಗಿದೆ, ಕುಮಾರಿಯೂ ಆಗಿದೆ. ವೃದ್ಧಾಪ್ಯದ ನಂತರದಲ್ಲಿ ಮೃತನಾದ ಮೇಲೆ ಮತ್ತೆ ಜನ್ಮವೆತ್ತಿ ಎಲ್ಲೆಡೆಯೂ ಪ್ರವೇಶಿಸುವುದಾಗಿದೆ ಎಂದು ಈ ಮಂತ್ರ ಹೇಳುತ್ತದೆ. ಲಿಂಗರಹಿತವಾದ ಜೀವಾತ್ಮವು ತಾನು ಹೊಂದಿದ ಶರೀರಕ್ಕೆ ಅನುಗುಣವಾಗಿ ಸ್ತ್ರೀ, ಪುರುಷ, ಕುಮಾರ ಅಥವ ಕುಮಾರಿ ಎಂದು ಕರೆಸಿಕೊಳ್ಳುತ್ತದೆ. ಜೀವಾತ್ಮವು ಅನೇಕ ಜನ್ಮಗಳನ್ನೆತ್ತುತ್ತಾ ವಿಕಾಸವಾಗುತ್ತಾ ಹೋಗಿ, ಜ್ಞಾನ, ಕರ್ಮ, ಉಪಾಸನೆಗಳ ಫಲವಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಾ ಸತ್ಕರ್ಮದ ಫಲವಾಗಿ ಮೋಕ್ಷ ಸ್ಥಿತಿ ತಲುಪುತ್ತದೆ ಎಂದು ವೇದ ಸಾರುತ್ತದೆ.
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
     ಒಂದಂತೂ ನಮಗೆ ಅರ್ಥವಾಗುತ್ತದೆ, ಅದೇನೆಂದರೆ ನಾವು ಇಂದು ಇರುವ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳು ಕಾರಣೀಭೂತವಾಗಿವೆ ಎನ್ನುವುದಾದರೆ, ಮುಂದೆ ಏನಾಗಬೇಕು ಎಂದು ನಾವು ಬಯಸುತ್ತೇವೆಯೋ ಅದಕ್ಕೆ ನಮ್ಮ ಇಂದಿನ ಕರ್ಮಗಳು ನೆರವಾಗುತ್ತವೆ ಅಲ್ಲವೇ? ಜನ್ಮ ಜನ್ಮಾಂತರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸುವೆ. ಜೀವಾತ್ಮ ಅವಿನಾಶಿ ಎಂದರೆ ನಾವು ಎಂದೆಂದೂ ಇದ್ದೆವು, ಮುಂದೆಯೂ ಇರುತ್ತೇವೆ ಅಲ್ಲವೇ? ಅಂದರೆ, ನಾವು ಈಗ ದೇವರೆಂದು ಪೂಜಿಸುವ ರಾಮ, ಕೃಷ್ಣ, ಶಿವರ ಕಾಲದಲ್ಲಿಯೂ ಇದ್ದೆವು. ನಾವು ಆಗ ರಾಮನೇ ಆಗಿದ್ದಿರಬಹುದು, ರಾವಣನೇ ಆಗಿರಬಹುದು, ವಾಲಿ, ಸುಗ್ರೀವರಾಗಿದ್ದಿರಬಹುದು ಅಥವ ಇನ್ನು ಯಾರೋ ಆಗಿದ್ದಿರಬಹುದು. ಬುದ್ಧ, ಮಹಾವೀರ, ಬಸವಣ್ಣ, ಏಸುಕ್ರಿಸ್ತರವರಂತವರುಗಳ ಕಾಲದಲ್ಲಿಯೂ ನಾವು ಯಾವುದೋ ರೀತಿಯಲ್ಲಿ ಇದ್ದೆವು ಅಲ್ಲವೇ? ರಾಮ ಒಳಿತಿನ ಸಂಕೇತ ಮತ್ತು ರಾವಣ ಕೆಡುಕಿನ ಸಂಕೇತವೆಂದು ಇಟ್ಟುಕೊಂಡರೆ, ರಾವಣತ್ವ ಕಳೆದುಕೊಂಡರೆ ರಾವಣನೂ ರಾಮ ಆಗುತ್ತಾನಲ್ಲವೇ? ರಾಮನಾಗುವುದೋ ಅಥವ ರಾವಣನಾಗುವುದೋ ಅಥವ ನಾವು ಬಯಸಿದಂತೆ ಮತ್ತೇನೋ ಆಗುವುದೋ ಎಂಬುದು ನಮ್ಮ ಕೈಯಲ್ಲಿಯೇ ಇದೆ.
-ಕ.ವೆಂ.ನಾಗರಾಜ್.
***************
ದಿನಾಂಕ 30.12.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜನವರಿ 15, 2016

ಸಾಧನಾ ಸೋಪಾನ - 19: ನಾವು ಯಾರು? -2


     ದೇವರು ಏನು ಬೇಕಾದರೂ ಮಾಡಬಲ್ಲ, ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲ. ಜೀವಿಗಳನ್ನು ಸೃಷ್ಟಿಸಿದ್ದೂ ಹೀಗೆಯೇ ಅನ್ನುವವರಿದ್ದಾರೆ. ವಾದದ ಸಲುವಾಗಿ ಇದನ್ನು ಒಪ್ಪಿಕೊಂಡರೂ, ಹೀಗೆ ವಾದಿಸುವವರನ್ನು ನಾವು ಪ್ರಶ್ನಿಸಲು ಅವಕಾಶವಿದೆ. ದೇವರು ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲನಾದರೆ ಇನ್ನೊಬ್ಬ ದೇವರನ್ನು, ತನಗಿಂತ ಬಲಶಾಲಿಯಾದ ಇನ್ನೊಬ್ಬ ದೇವರನ್ನು ಸೃಷ್ಟಿಸಲು ಅವನಿಗೆ ಸಾಧ್ಯವಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ. ಆಗ ಸರ್ವಶಕ್ತನಿಗಿಂತ ಸರ್ವಶಕ್ತ ಸೃಷ್ಟಿಯಾಗುವುದರಿಂದ ದೇವರನ್ನು ಸರ್ವಶಕ್ತ ಎನ್ನಲು ಕಷ್ಟವಾಗುತ್ತದೆ. ಶೂನ್ಯದಿಂದ ಸೃಷ್ಟಿ ಸಾಧ್ಯ ಅನ್ನುವುದು ವೈಜ್ಞಾನಿಕವಾಗಿ ವಿಚಾರ ಮಾಡಿದರೂ ನಿಲ್ಲುವಂತಹ ವಾದವಾಗುವುದಿಲ್ಲ.
     ಹಾಗಾದರೆ ಜೀವಿಗಳನ್ನು ದೇವರು ಜಡಪ್ರಕೃತಿಯಿಂದ ಸೃಷ್ಟಿಸಿದನೇ? ಇದೂ ಸಹ ಒಪ್ಪಲು ಕಷ್ಟವೆನಿಸುತ್ತದೆ. ಜಡ ವಸ್ತುಗಳಿಂದ ಮತ್ತೊಂದು ಜಡವಸ್ತುವನ್ನು ನಿರ್ಮಿಸಬಹುದೇ ಹೊರತು ಜೀವಚೈತನ್ಯ ಒಡಗೂಡಿದ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜಡವಸ್ತುಗಳಿಗೆ ಜೀವಚೈತನ್ಯದಿಂದ ಅರ್ಥ ಬಂದೀತೇ ಹೊರತು, ಜಡವಸ್ತುಗಳಿಂದ ಚೈತನ್ಯಶೀಲ ವಸ್ತುವಿನ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದೂ ಆಗದು. ಹಾಗಾದರೆ ಜೀವಿಯ ಸೃಷ್ಟಿ ಹೇಗೆ ಆಗಿರಬಹುದು?
     ಲೋಕದ ಜೀವಿಗಳೆಲ್ಲಾ ಪರಮಾತ್ಮನ ಅಂಶದಿಂದ ಸೃಷ್ಟಿಯಾಗಿದೆ ಎಂಬ ವಾದವೂ ಇದೆ. ಈ ವಿಚಾರದಲ್ಲಿ ತರ್ಕಿಸೋಣ. ಸುಮಾರು 84 ಲಕ್ಷ ಬಗೆಯ ಜೀವಜಂತುಗಳಿವೆ ಎನ್ನುತ್ತಾರೆ. ಇದರಲ್ಲಿ ಮಾನವ ಜೀವಿಯೂ ಒಂದು ಜೀವಿಯಾಗಿದೆ. ಅದೆಷ್ಟು ಜೀವಿಗಳಿವೆಯೋ ಆ ದೇವರಿಗೇ ಗೊತ್ತು. ಈ ಜೀವಿಗಳನ್ನೆಲ್ಲಾ ದೇವರು ತನ್ನ ಅಂಶದಿಂದಲೇ ಸೃಷ್ಟಿಸಿದ ಎಂದರೆ ಆತನ ಎಷ್ಟು ಅಂಶ ಈ ಜೀವಿಗಳಲ್ಲಿ ಹಂಚಿಹೋಗಿರಬೇಕು! ಇಷ್ಟವಾಗದ ಪ್ರಶ್ನೆ ಇಲ್ಲಿ ಹುಟ್ಟುತ್ತದೆ, ಇಷ್ಟೆಲ್ಲಾ ಅಂಶವನ್ನು ಜೀವಿಗಳಲ್ಲಿ ಹಂಚಿದ ಮೇಲೂ ದೇವರು ಪರಿಪೂರ್ಣ ಎನ್ನಬಹುದೇ? ಪರಿಪೂರ್ಣನಲ್ಲವೆಂದರೆ ಆತನು ದೇವರಾಗಲಾರ ಅಲ್ಲವೇ? ಇಲ್ಲಿ ಇಂತಹ ಅನೇಕ ಉಪಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಇವುಗಳಿಗೆ ಸಮಂಜಸ ಉತ್ತರ ಕಲ್ಪಿಸಿಕೊಳ್ಳುವುದು ಕಷ್ಟ.
     'ಗೊಂಬೆಯಾಟವಯ್ಯಾ, ಈ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ'- ಲೋಕದ ಎಲ್ಲಾ ಸಂಗತಿಗಳಿಗೂ ದೇವರೇ ಕಾರಣ, ಆತನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಅರ್ಥದ ಮಾತುಗಳನ್ನು ಕೇಳುತ್ತೇವೆ. 'ನಮ್ಮ ಕೈಯಲ್ಲೇನಿದೆ, ಎಲ್ಲಾ ಅವನು ಹೇಳಿದಂತೆ ನಡೆಯುತ್ತದೆ' ಎಂದು ಹೇಳುತ್ತೇವೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
     ಜೀವಿಗಳಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಸುತರಾಂ ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಪುನರ್ಜನ್ಮವಿಲ್ಲವೆನ್ನುವ, ಇರುವುದೊಂದೇ ಜನ್ಮವೆನ್ನುವ ವಾದಗಳಿಗೆ ಇಂತಹ ನ್ಯೂನತೆಯಿಂದ ಒಡಗೂಡಿದ ಜೀವಜಂತುಗಳ ಸೃಷ್ಟಿಗಳಿಗೆ ಸ್ಪಷ್ಟನೆ ಕೊಡಲಾಗುವುದಿಲ್ಲ.
     ಇನ್ನೊಂದು ವಾದವಿದೆ. ಅದೆಂದರೆ 'ಜೀವಚೈತನ್ಯ ಅನ್ನುವುದು ಶರೀರಕ್ಕೆ ಸಂಬಂಧಿಸಿದುದೇ ಆಗಿದೆ., ಶರೀರದೊಂದಿಗೇ ಹುಟ್ಟುತ್ತದೆ ಮತ್ತು ಶರೀರದೊಂದಿಗೇ ಸಾಯುತ್ತದೆ' ಎಂಬುದೇ ಆಗಿದೆ. ಇಲ್ಲೂ ಸಂದೇಹಗಳು ಬರುತ್ತವೆ. ಈ ಪ್ರಾಣಚೈತನ್ಯ ಶರೀರದೊಂದಿಗೇ ಹುಟ್ಟುವುದಾಗಿದ್ದರೆ, ಶರೀರದೊಂದಿಗೇ ನಷ್ಟವಾಗಬೇಕು. ಅಂದರೆ, ಜೀವಿ ಸತ್ತಾಗ ಶರೀರ ಇರುತ್ತದೆ. ಚೈತನ್ಯವೂ ಇರಬೇಕಿತ್ತಲ್ಲವೇ? ಇದೆಂತಹ ಚೋದ್ಯ! ಈ ಚೈತನ್ಯ ಅನ್ನುವುದು ಶರೀರದ ಗುಣವೇ ಅಥವ ಹೊರಗಿನ ಮತ್ತಾವುದೋ ಸಂಗತಿಯೋ? ಶರೀರ ಜಡವಸ್ತುವಾಗಿದೆ. ಆದರೆ ಈ ಚೈತನ್ಯ ಜಡವಸ್ತುವಲ್ಲ. ಜಡವಸ್ತುವಿನಿಂದ ಚೈತನ್ಯಮಯಿ ವಸ್ತು ಜನಿಸುವುದಾದರೂ ಹೇಗೆ? ಅದು ಶರೀರದಿಂದ ಹೊರತಾದ ಸಂಗತಿಯಾಗಿದ್ದು ಶರೀರದೊಂದಿಗೆ ಸಂಯೋಜಿಸಲ್ಪಟ್ಟಿದೆಯೆಂದರೆ ಶರೀರಕ್ಕೂ ಅದಕ್ಕೂ ಸಂಬಂಧ ಹೇಗೆ? ಶರೀರಕ್ಕಾದರೋ ವಿವೇಚನಾಶಕ್ತಿಯಿಲ್ಲ, ಆದರೆ ಈ ಪ್ರಾಣಚೈತನ್ಯ ವಿವೇಚಿಸಬಲ್ಲದುದಾಗಿದೆ. ಹೇಗೆ ತರ್ಕಿಸಿದರೂ ಶರೀರದ ಭಾಗವಾಗಿ ಈ ಜೀವಾತ್ಮ ಹುಟ್ಟುತ್ತದೆ, ಶರೀರದೊಂದಿಗೇ ಸಾಯುತ್ತದೆ ಎಂಬುದು ನಿಲ್ಲುವಂತಹ ವಾದವಾಗದು.
ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||
     ಈ ಜೀವಾತ್ಮ ಅನ್ನುವುದು ದೇವರಿಂದ ಹೊಸದಾಗಿ ಸೃಷ್ಟಿಸಿದುದಲ್ಲ, ಶೂನ್ಯದಿಂದ ಸೃಷ್ಟಿಯಾದುದಲ್ಲ, ಜಡ ಪ್ರಕೃತಿಯ ನಿರ್ಮಿತವಲ್ಲ, ಪರಮಾತ್ಮನ ಅಂಶವಲ್ಲ, ಜೀವಿಗಳ ಎಲ್ಲಾ ಚಟುವಟಿಕೆಗಳಿಗೂ ದೇವರೇ ಹೊಣೆಯಲ್ಲ, ಹುಟ್ಟಿನ ರೀತಿಗೆ ದೇವರು ಕಾರಣನಲ್ಲ, ಶರೀರದ ಹುಟ್ಟಿನೊಂದಿಗೇ ಬರುವುದಲ್ಲವೆಂದರೆ ಅದರ ಅಸ್ತಿತ್ವಕ್ಕೆ ವಿವರಣೆ ಕೊಡುವುದಾದರೂ ಹೇಗೆ? ಒಂದು ಸಮಂಜಸವೆನ್ನಿಸುವ ವಾದವಿದೆ. ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿ ಮತ್ತು ಅನಂತವಾದುದು ಎಂಬ ಈ ವಾದಕ್ಕೆ ಮೇಲಿನ ತರ್ಕಗಳು ಪುಷ್ಟಿ ನೀಡುತ್ತವೆ. ವಿಭಿನ್ನ ರೀತಿಯ ಹುಟ್ಟು, ಸ್ಥಿತಿ-ಗತಿಗಳಿಗೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಸಮಂಜಸವೆನ್ನುವಂತಹ ವಿವರಣೆ ಕೊಡುತ್ತವೆ. ಜೀವಾತ್ಮನ ಕುರಿತು ಮತ್ತಷ್ಟು ವಿಷಯಗಳ ಬಗ್ಗೆ ಹಾಗೂ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳ ಕುರಿತು ಮುಂದೆ ಚರ್ಚಿಸೋಣ.
ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಜೀವಾತ್ಮದ ಸ್ವರೂಪದ ಕುರಿತ ಹಲವಾರು ವಾದಗಳ ಬಗ್ಗೆ ಚರ್ಚಿಸಿದೆವು. ತರ್ಕದ ಎದುರಿಗೆ ಜೀವಾತ್ಮ ಅನ್ನುವುದು ದೇವರ ಹೊಸ ಸೃಷ್ಟಿ, ಶೂನ್ಯದಿಂದ ಆದ ಸೃಷ್ಟಿ, ಪ್ರಕೃತಿಯ ಕೊಡುಗೆ, ಪರಮಾತ್ಮನ ಅಂಶ, ಶರೀರದ ಹುಟ್ಟಿನೊಂದಿಗೆ ಉದಯಿಸುವಂತಹದು, ಇತ್ಯಾದಿ ವಾದಗಳು ನಿಲ್ಲುವುದಿಲ್ಲವೆಂದು ಕಂಡುಕೊಂಡೆವು. ಇದಲ್ಲ, ಇದಲ್ಲ ಎಂದು ಒಂದೊಂದಾಗಿ ಹಲವು ವಾದಗಳನ್ನು ಒರೆಗೆ ಹಚ್ಚಿ ನೋಡಿ ತಿಳಿದ ನಂತರದಲ್ಲಿ ಉಳಿಯುವುದು ಒಂದೇ ವಾದ, ಅದೆಂದರೆ ಈ ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿಯಾದುದು ಮತ್ತು ಅನಂತವಾದುದು ಎಂಬ ವಾದ. ಇದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಪುಷ್ಟಿ ನೀಡುವುದು ವಿಶೇಷವಾಗಿದೆ.
     ಜೀವಾತ್ಮ ಅಥವ ಪ್ರಾಣಚೈತನ್ಯ ಅನಾದಿ ಮತ್ತು ಅನಂತವಾದುದು ಎಂಬ ವಾದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಹೇಗೆ ಪೂರಕವಾಗಿವೆ ಎಂಬುದನ್ನು ನೋಡೋಣ. ಈ ಲೋಕದಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಕೆಲವರು ಹುಟ್ಟುತ್ತಲೇ  ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಟರಾಗಿರುತ್ತಾರೆ. ಕೆಲವರು ದಡ್ಡರಾಗಿರುತ್ತಾರೆ, ಕೆಲವರು ಬುದ್ಧಿವಂತರಾಗಿರುತ್ತಾರೆ, ಕೆಲವರು ಸುಂದರರಾಗಿದ್ದರೆ, ಕೆಲವರು ಕುರೂಪಿಗಳಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
     ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು?
-ಕ.ವೆಂ.ನಾಗರಾಜ್.
*************** 
ದಿನಾಂಕ 23.12.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜನವರಿ 7, 2016

ಸಾಧನಾ ಸೋಪಾನ - 18: ನಾವು ಯಾರು? -1


ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ ||

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ನಾವು ಯಾರು? ಜಗತ್ತು ಅಂದರೆ ಏನು? ದೇವರು ಯಾರು? ಈ ಮೂರು ಪ್ರಶ್ನೆಗಳು ಅನಾದಿ ಕಾಲದಿಂದಲೂ ನರರನ್ನು ಕಾಡುತ್ತಲೇ ಇವೆ. ಮುಂದೂ ಕಾಡುತ್ತಲೇ ಇರುತ್ತವೆ. ದಾರ್ಶನಿಕರು, ಸಾಧು-ಸಂತರು, ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು, ಧರ್ಮಗ್ರಂಥಗಳು, ಇತ್ಯಾದಿಗಳೆಲ್ಲವೂ ಮತ್ತು ಎಲ್ಲರೂ ವಿವರಿಸಲು ಪ್ರಯತ್ನಿಸಿರುವುದು ಮತ್ತು ವಿವರಿಸಿರುವುದು ಈ ಮೂರು ಅಂಶಗಳ ಕುರಿತೇ ಆಗಿದೆ. ಬೈಬಲ್ಲು, ಕುರಾನು, ವಿವಿಧ ಪುರಾಣ/ಪುಣ್ಯ ಕಥೆಗಳು ಈ ಜಗತ್ತು, ಜೀವಿಗಳೆಲ್ಲವನ್ನೂ ಸೃಷ್ಟಿಸಿದ್ದು ದೇವರೇ ಎಂದು ಹೇಳುತ್ತವೆ. ಏಕದೇವವಾದ, ಬಹುದೇವವಾದ, ನಿರೀಶ್ವರವಾದ, ದ್ವೈತ, ಅದ್ವೈತ, ತ್ರೈತವಾದ, ಒಂದೇ, ಎರಡೇ? ಅಸಂಖ್ಯವಾದ ವಿಚಾರಗಳು, ತರ್ಕಗಳು, ಜಿಜ್ಞಾಸೆಗಳು, ಚರ್ಚೆಗಳು ಎಂದಿನಿಂದಲೂ ನಡೆಯುತ್ತಲೇ ಇವೆ, ಮುಂದೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಸತ್ಯ, ಮಿಕ್ಕಿದ್ದೆಲ್ಲವೂ ಸುಳ್ಳು ಎನ್ನುತ್ತಾರೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ನೂರೆಂಟು ತರ್ಕ-ವಿತರ್ಕಗಳ ಸಾಲಿನಲ್ಲಿ ಈ ಲೇಖನವೂ ಸೇರಿಕೊಂಡುಬಿಡಲಿ, ಏನಂತೀರಿ?
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||
     ಹಿಂದಿನ ಲೇಖನವೊಂದರಲ್ಲಿ 'ನಾವು' ಎಂದು ಅಂದುಕೊಂಡಿರುವ ಶರೀರವಾಗಲೀ, ನಮ್ಮ ಮನಸ್ಸಾಗಲೀ ವಾಸ್ತವವಾಗಿ 'ನಾವು' ಆಗಿರದೆ ನಮ್ಮೊಳಗಿನ ಪ್ರಾಣವೇ ವಸ್ತುಶಃ ನಾವಾಗಿರುತ್ತೇವೆ ಎಂಬ ಬಗ್ಗೆ ಚರ್ಚಿಸಿದೆವು. ದೇಹದಲ್ಲಿ ಪ್ರಾಣಚೈತನ್ಯ ಇರುವವರೆಗೆ ಆ ದೇಹಕ್ಕೆ ಬೆಲೆ, ಪ್ರಾಣ ಹೋದ ನಂತರ ಅದಕ್ಕೆ ಮೊದಲಿನ ಪ್ರಾಮುಖ್ಯತೆ ಇರುವುದಿಲ್ಲ. ನಾವು ಅಂದರೆ ನಮ್ಮೊಳಗಿನ ಪ್ರಾಣಚೈತನ್ಯ ಅಥವ ಜೀವಾತ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಈ ಜೀವಾತ್ಮ ಅನ್ನುವುದಾದರೂ ಏನು? ನಮ್ಮೊಳಗಿನ ಕೌತುಕವನ್ನು ನಾವೇ ಪೂರ್ಣವಾಗಿ ಅರಿಯಲಾಗದಿರುವುದು ಕೌತುಕವೇ ಆಗಿದೆ.
ಕಾಣದದು ನಯನ ಕೇಳಿಸದು ಕಿವಿಗೆ
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
     ಈ ಜೀವಾತ್ಮದ ಕುರಿತು ಹಲವಾರು ಧರ್ಮಗ್ರಂಥಗಳು ಹಲವು ರೀತಿ ತಿಳಿಸಿವೆ, ಹಲವರು ಹಲವು ರೀತಿಯಲ್ಲಿ ವಿವರಿಸುತ್ತಾರೆ. ಯಾವುದು ಸರಿ? ಈ ಕುರಿತು ವಿವಿಧ ವಿಚಾರಗಳ ಅಧ್ಯಯನ, ಮನನ, ಮಂಥನಗಳಿಂದ ನಮಗೊಪ್ಪುವ ವಿಚಾರವನ್ನು ನಾವು ಸತ್ಯಕ್ಕೆ ಹತ್ತಿರವೆಂದುಕೊಳ್ಳಬೇಕಾಗುತ್ತದೆ. ಏಕೆಂದರೆ 'ಇದು ಹೀಗೇನೇ' ಎಂದು ಖಚಿತವಾಗಿ ಸಾಧಿಸಿ ತೋರಿಸುವುದು ಮಾನವನ ಸೀಮಿತ ಬುದ್ಧಿಶಕ್ತಿಗೆ ಅಶಕ್ಯವಾಗಿದೆ. "ನಮ್ಮ ಗುರುಗಳು ದೊಡ್ಡ ಪಂಡಿತರು, ಅವರು ಹೀಗೆ ಹೇಳಿದ್ದಾರೆ ಎಂದ ಮೇಲೆ ಅದು ಸರಿಯಾಗಿಯೇ ಇರುತ್ತದೆ; ನಮ್ಮ ಧರ್ಮಶಾಸ್ತ್ರದಲ್ಲಿ ಹೀಗೆ ಹೇಳಿದೆ, ಅದನ್ನು ನಾವು ಒಪ್ಪಲೇಬೇಲ್ಲವೇ?" ಎಂಬಂತಹ ವಾದಗಳೂ ಕೇಳಿಬರುತ್ತವೆ. ತರ್ಕದಲ್ಲಿ ತೊಡಗುವ ಮನಸ್ಸೇ ಸತ್ಯ ಅನ್ವೇಷಿಸಲು ಸಾಧ್ಯ. ಪೂರ್ವಾಗ್ರಹ ಪೀಡಿತರಾಗದೆ, ನಾವು ನಂಬಿದ್ದೇ ಸತ್ಯವೆಂದು ವಾದಿಸಹೋಗದೆ ನಿಜಸತ್ಯವನ್ನು ತಿಳಿಯುವ ಕುತೂಹಲ, ಆಸಕ್ತಿ ಮತ್ತು ಅಧ್ಯಯನಗಳೇ ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿರುತ್ತವೆ. ಈ ವಿಷಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಈ ವೇದಮಂತ್ರದ ಕರೆ ಆಪ್ಯಾಯಮಾನವೆನಿಸುತ್ತದೆ: ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಛ ಶಸ್ಯತೇ | ವಿಶ್ವಸ್ಯ ತಸ್ಯ ಭವತಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತಃ || (ಋಕ್.೫.೫೫.೮) 'ಯಾವುದು ಪ್ರಾಚೀನವೋ, ಯಾವುದು ನವೀನವೋ, ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ ಮತ್ತು ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ, ಆ ಎಲ್ಲದಕ್ಕೂ ಕಿವಿಗೊಡಿ. ಆದರೆ ಕಲ್ಯಾಣಮಾರ್ಗದಲ್ಲಿ ನಡೆಯುವವರ ಹಿಂದೆ ನಿಮ್ಮ ಜೀವನ ರಥ ಸಾಗಲಿ' ಎಂಬುದು ಇದರ ಅರ್ಥ. ಇತಿಹಾಸದಿಂದ ಪಾಠ ಕಲಿಯೋಣ; ವರ್ತಮಾನದ ಸಂಗತಿಗಳನ್ನೂ ಅವಲೋಕಿಸೋಣ; ಯಾವುದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆಯೋ ಅದನ್ನೂ ಆಲಿಸೋಣ. ನಮ್ಮ ಅಂತರಂಗದ ಧ್ವನಿಗೂ ಕಿವಿಗೊಟ್ಟು ಒಳ್ಳೆಯ ದಾರಿಯಲ್ಲಿ ನಡೆಯುವವರ ಮಾರ್ಗವನ್ನು ಅನುಸರಿಸೋಣ ಎಂಬುದರಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಬೇಕೆಂಬ ಕರೆಯಿದೆ. ಈ ಮಂತ್ರವೂ ಸಹ ಹೇಳುತ್ತದೆ: ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯) ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ ಎಂಬುದು ಇದರ ಅರ್ಥ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ?
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
     ವಿಚಾರ ಮಾಡೋಣ. ಜೀವಿಗಳು ದೇವರ ಸೃಷ್ಟಿ, ದೇವರು ಸೃಷ್ಟಿಸುವ ಮುನ್ನ ಜೀವಿಗಳು ಇರಲಿಲ್ಲ ಎಂದು ಒಂದು ವಾದವಿದೆ. ಇಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ದೇವರು ಸೃಷ್ಟಿಸಿದ್ದಾದರೆ ಏಕೆ ಸೃಷ್ಟಿಸಿದ? ಸುಮ್ಮನೆ ಸೃಷ್ಟಿಸಿದನೆ? ತನಗೆ ಬೇಕಾಗಿತ್ತು, ಸೃಷ್ಟಿಸಿದ ಎಂದರೆ, 'ಬೇಕು/ಬೇಕಾಗಿತ್ತು' ಎಂಬ ಭಾವನೆ ಇದ್ದಲ್ಲಿ ಸೃಷ್ಟಿಕರ್ತನನ್ನು ದೇವರೆನ್ನಲಾಗುವುದಿಲ್ಲ. ಏಕೆಂದರೆ 'ಏನಾದರೂ ಬೇಕು' ಎಂದರೆ ಅವನಿಗೆ ಏನೋ ಕೊರತೆಯಿತ್ತು ಅನ್ನಿಸುವುದಿಲ್ಲವೇ? ಇದು ಸರ್ವತೃಪ್ತ ದೇವರಿಗೆ ವಿರುದ್ಧವಾದವಾಗುತ್ತದೆ.
-ಕ.ವೆಂ.ನಾಗರಾಜ್.
***************
ದಿನಾಂಕ 16.12.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜನವರಿ 6, 2016

ಸಾಧನಾ ಸೋಪಾನ - 17: ಪ್ರಾಣ ಅರ್ಥಾತ್ ಜೀವ


ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||      
     ಜೀವ ಎಂದರೇನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರಾಣ ಎಂದು ಕರೆಯಲ್ಪಡುವ ಜೀವ ಎಂಬ ಪದವನ್ನು ಬಹಳ ಸಲ ಪ್ರಯೋಗಿಸುತ್ತೇವೆ, ಆದರೆ ಅದು ಏನು ಎಂಬುವುದನ್ನು ನಮಗೆ ವಿವರಿಸಲಾಗುವುದಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಜೀವ ಎಂದ ಗುರುತಿಸುವುದು ನಮ್ಮ ತಪ್ಪು ಗ್ರಹಿಕೆ. ಈ ಜೀವ ನಿಗೂಢವಾದುದು. ಜೀವ ಅಥವ ಪ್ರಾಣ ಅನ್ನುವುದು ನಿಜವಾದ ನಾವು! ಅದು ಉಸಿರಾಡುವ ಕ್ರಿಯೆಯಲ್ಲ, ಆದರೆ ಜೀವತತ್ತ್ವವೇ ಆಗಿದ್ದು ಅದಿಲ್ಲದಿದ್ದರೆ ಸ್ವಪ್ರಜ್ಞೆಯಾಗಲೀ, ಯಾವುದೇ ಚಟುವಟಿಕೆಯಾಗಲೀ ಸಾಧ್ಯವೇ ಇಲ್ಲ. ಈ ನಮ್ಮ ಜೀವ ಅನ್ನುವುದು ಅನಂತದ ಮತ್ತು ಅಂತ್ಯದ ಗಡಿರೇಖೆ ಎಂದುಕೊಂಡರೆ ನಮ್ಮ ವ್ಯಕ್ತಿತ್ವದ ಅಸ್ತಿತ್ವಕ್ಕೆ ಕಾರಣವಾದ ಜೀವ ಅನಂತವನ್ನು ಅಂತದೊಂದಿಗೆ ಸಂಕುಚಿಸಿದಂತೆ ಅಥವ ಅಂತವು ಅನಂತದೆಡೆಗೆ ಧಾವಿಸುವ ಪ್ರಾರಂಭಿಕ ರೀತಿಯಂತೆ ಭಾವಿಸಿದರೆ ಉಂಟಾಗುವ ಭಾವನೆ ಅನಿರ್ವಚನೀಯ. ಈ ಕೂಡುವ ಸ್ಥಳ ಇದೆಯಲ್ಲಾ, ಅದೇ ಜೀವ! ಅದು ಅಂತವನ್ನೂ ಪ್ರತಿನಿಧಿಸುತ್ತದೆ, ಅನಂತವನ್ನೂ ಪ್ರತಿನಿಧಿಸುತ್ತದೆ. ಹಾಗಾಗಿ ಈ ಜೀವವನ್ನು ನಿಗೂಢ ಎಂದಿರುವುದು! ಅದು ವ್ಯಕ್ತಿಗತವೂ ಅಲ್ಲ, ಇಡೀ ವಿಶ್ವದ್ದೂ ಅಲ್ಲ. ಅದೇನೆಂದು ನಮಗೆ ಗೊತ್ತಿಲ್ಲ, ಅದನ್ನು ವಿವರಿಸಲೂ ನಮಗೆ ಆಗದು. ಆದರೂ ಅದೇನೇ ಇರಲಿ, ಈ ಜೀವ ಅಥವ ಪ್ರಾಣ ಅನ್ನುವುದು ಇತರ ಎಲ್ಲಕ್ಕಿಂತಲೂ ಹಿರಿದಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನೇ ಜೀವದ ಮಹತ್ವ ಎನ್ನುವುದು. ಈ ಜೀವ ಅನ್ನುವುದು ಕೇವಲ ಜೈವಿಕ ಚಟುವಟಿಕೆಯಲ್ಲ, ಜೈವಿಕ ಕೆಲಸವಲ್ಲ, ವೈಯಕ್ತಿಕ ಅಥವ ಸಾಮಾಜಿಕ ಜೀವನವಲ್ಲ, ಆದರೆ ಅದಕ್ಕೂ ಮೀರಿದ್ದಾಗಿದೆ.
     'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ' 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ!' ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು 'ನಾವು' ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ 'ನಾವು' ಆಗಿರುವುದಿಲ್ಲ. ಆ 'ನಾವು' ಅನ್ನುವುದು ವಾಸ್ತವವಾಗಿ 'ಪ್ರಾಣ'ವೇ ಆಗಿದೆ.
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ||
     ಯಾರಾದರೂ ತನ್ನ ತಂದೆ ಅಥವ ತಾಯಿಗೆ ಕೆಟ್ಟದಾಗಿ ಮಾತನಾಡಿದರೆ, "ಎಂತಹ ಕೃತಘ್ನ ಅವನು! ತನ್ನ ತಂದೆಗೇ/ತಾಯಿಗೇ ಅಸಂಬದ್ಧವಾಗಿ ಮಾತನಾಡುತ್ತಾನೆ" ಎಂದೆನ್ನುತ್ತಾರೆ. ತಂದೆ-ತಾಯಿಗಳಿಗೆ, ಹಿರಿಯರಿಗೆ, ವಿದ್ವಜ್ಜನರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯದಲ್ಲೇ ಬಂದಿದೆ. ಅಂತಹವರನ್ನು ಅಗೌರವಿಸಿ ಮಾತನಾಡಿದರೆ ತಿಳಿದವರು ಹಾಗೆ ಮಾಡದಿರಲು ಎಚ್ಚರಿಸುತ್ತಾರೆ. ಈ ಪ್ರಪಂಚದಲ್ಲಿ ನಾವು ಮಾನವತೆಗೆ, ಸಾಮಾಜಿಕ ಜೀವನಕ್ಕೆ ಬೆಲೆ ಕೊಡುತ್ತೇವೆ. ಇದಕ್ಕೆ ವಿರುದ್ಧವಾಗಿ ಹೋಗುವವರನ್ನು, ಹಿರಿಯರನ್ನು ಧಿಕ್ಕರಿಸುವವರನ್ನು ನಾವು ಶಪಿಸುತ್ತೇವಲ್ಲವೇ? 'ನೋಡು, ಜನರನ್ನು ನೋಯಿಸಬೇಡ' ಎಂದು ಉಪದೇಶಿಸುತ್ತೇವೆ. ಈ 'ಜನರು' ಅಂದರೆ ಯಾರು? 'ನೋಯಿಸುವುದು' ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಅಸಭ್ಯ ವ್ಯಕ್ತಿಯಿಂದ ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಆತನು ಹೊಂದಿರುವ ಸುಂದರ ಶರೀರವಲ್ಲ, ಅವನಲ್ಲಿರುವ 'ಪ್ರಾಣ'ವೇ ಹೊರತು ಬೇರೆ ಅಲ್ಲ. ಯಾರಾದರೂ ಮನಸ್ಸಿಗೆ ಘಾಸಿಯಾಗುವಂತೆ ಮಾತನಾಡಿದರೆ, 'ಅಯ್ಯೋ, ಸುಮ್ಮನಿರು, ನನ್ನ ಪ್ರಾಣ ಹಿಂಡಬೇಡ' ಎನ್ನುತ್ತೇವೆ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ! ಅವರುಗಳ ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, 'ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ' ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? "ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ" ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! 'ಅಯ್ಯೋ, ನಮ್ಮ ತಂದೆ ಹೋಗಿಬಿಟ್ಟರು' ಎಂದು ಶೋಕಿಸುತ್ತೇವೆ. ಎಲ್ಲಿಗೆ ಹೋದರು? ತಂದೆ ಅನ್ನುವುದು ಅವರು ಹೊಂದಿದ್ದ ಶರೀರವಲ್ಲ, ಆ ಶರೀರದೊಳಗಿನ ಪ್ರಾಣತತ್ವ ಎಂಬ ಅರಿವು ಮೂಡಿದಾಗ, ಆ ಪ್ರಾಣತತ್ವಕ್ಕೆ ಸಾವಿಲ್ಲ ಎಂದುಕೊಂಡಾಗ ನಮ್ಮ ಚಿಂತನಾಧಾಟಿಯೇ, ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡುತ್ತದೆ. ಮನಸ್ಸು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತದೆ.
ಕಾಣದದು ನಯನ  ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
     ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ನಾವು ನಿಜವಾಗಿಯೂ ಎಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದ ಹಂತದಲ್ಲಿ ಬಂದು ನಿಂತಿದ್ದೇವೆ. ನಾವು ಯಾವುದರ ಬಗ್ಗೆ ಚರ್ಚಿಸುತ್ತಿದ್ದೇವೆಯೋ ಅದರ ಬಗ್ಗೆ ಸಹ ನಮಗೆ ಪೂರ್ಣ ಜ್ಞಾನವಿಲ್ಲ. ಈ ಪ್ರಾಣತತ್ವದ ಬಗ್ಗೆ ಯಾರಿಗೆ ಅರಿವಿದೆಯೋ, ಯಾರು ಈ ರಹಸ್ಯಾತ್ಮಕ ಪ್ರಾಣತತ್ವವು ಎಲ್ಲಕ್ಕಿಂತಲೂ ಹಿರಿದೆಂಬ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಹೊಂದಿರುತ್ತಾರೋ ಅವರನ್ನು ಜ್ಞಾನದ ಒಡೆಯರೆನ್ನಬಹುದು. ಅಂತಹವರ ಉದ್ಗಾರಗಳು ಸಾಮಾನ್ಯವಾಗಿ ಸತ್ಯವಾದುದಾಗಿರುತ್ತವೆ.
     ಜೀವದ ಬಗ್ಗೆ, ಜೀವತತ್ವದ ಬಗ್ಗೆ ಜ್ಞಾನ ಹೊಂದಿರುವವರು ನಿಜಕ್ಕೂ ಶ್ರೇಷ್ಠ ಜ್ಞಾನಿಗಳಾಗಿರುತ್ತಾರೆ. ಏಕೆಂದರೆ ಈ ಜ್ಞಾನ ನಮ್ಮಂತಹ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲಾರದು. ಅಂತಹ ಜ್ಞಾನ ನಿಜಕ್ಕೂ ಅತೀಂದ್ರಿಯದ್ದಾಗಿರುತ್ತದೆ. ಅಂತಹವರು ಆಡುವ ಮಾತುಗಳು ಸತ್ಯದಿಂದ ತುಂಬಿ ತುಳುಕುತ್ತಿರುತ್ತವೆ. ಅವರು ಹೇಳುವ ಮಾತುಗಳು ಸತ್ಯವಾಗುತ್ತವೆ, ಹೇಳಿದಂತೆ ನಡೆಯುತ್ತವೆ, ಏಕೆಂದರೆ ಅವರು ಹೊಂದಿರುವ ಜ್ಞಾನ ಅಂತಹುದಾಗಿರುತ್ತದೆ. ಅವಧೂತರುಗಳು, ಮಹಾಮಹಿಮರ ವಿಚಾರದಲ್ಲಿ ಇಂತಹ ಅನುಭವ ಕಂಡಿರುವ ನೂರಾರು ನಿದರ್ಶನಗಳಿವೆ. ಅವರು ಆಡುವ ಕೆಲವು ಮಾತುಗಳು ಸಾಮಾನ್ಯರಿಗೆ ಅರ್ಥವಾಗದಾದಾಗ, "ಸ್ವಾಮಿ, ನಿಮ್ಮ ಮಾತು ನಮಗೆ ಅರ್ಥವಾಗಲಿಲ್ಲ" ಎಂದರೆ ಅವರಿಂದ ಬರಬಹುದಾದ ಉತ್ತರ, "ಅರ್ಥ ಕಟ್ಟಿಕೊಂಡು ನಿನಗೇನಾಗಬೇಕು? ಇದು ನಿನಗೆ ಅರ್ಥವಾಗಲೂಬಾರದು". ನಿಜ, ಇಂತಹ ಸಂಗತಿಗಳು ನಾವೇ ಅರ್ಥ ಮಾಡಿಕೊಳ್ಳುವ ಹಂತಕ್ಕೆ ನಾವು ಏರಿದಾಗ ಮಾತ್ರ ನಮಗೆ ಅರ್ಥವಾಗಬಹುದು. ನಾವು ಅಂತರಂಗದಲ್ಲಿ ಬೆಳೆಯುತ್ತಾ ಹೋದಂತೆ ಸತ್ಯದ ಹತ್ತಿರ ಹತ್ತಿರಕ್ಕೆ ತಲುಪುತ್ತಾ ಹೋಗುತ್ತೇವೆ.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಜನವರಿ 1, 2016

ಸಾಧನಾ ಸೋಪಾನ - 16: 'ಬದುಕುವ' ಆಸೆ!


ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ ||
     ನಮ್ಮ ಅಸ್ತಿತ್ವ ಎಷ್ಟು ಮಹತ್ವದ್ದಾಗಿದೆ, ನಮ್ಮ ಅಸ್ತಿತ್ವವಿದ್ದರೆ ಎಲ್ಲವೂ ಇರುತ್ತದೆ, ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಚಮತ್ಕಾರಿಕ ಸಂಗತಿಯ ಬಗ್ಗೆ ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. ಈ ಅಸ್ತಿತ್ವಕ್ಕಿಂತಲೂ ಮಹತ್ವವಾಧ ಸಂಗತಿ ಇದ್ದು, ಅದು ನಮ್ಮ ಅಸ್ತಿತ್ವಕ್ಕೆ ಮೂಲಕಾರಣವಾಗಿದೆ. ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ.
     ಈ ಅಸ್ತಿತ್ವ ಅನ್ನುವುದು ತನ್ನಿಂದ ತಾನೇ ಪರಿಪೂರ್ಣವಲ್ಲ. ಅಸ್ತಿತ್ವದಲ್ಲಿರುವ ಬಯಕೆ ಅದಕ್ಕೂ ಮೊದಲು ಇರುವುದಾಗಿದ್ದು ಅಸ್ತಿತ್ವ ಅದನ್ನು ಅವಲಂಬಿಸಿದೆ. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ 'ಆಸೆ'ಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ 'ಆಸೆ'!
     ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಸಾಯಲು ಇಚ್ಛಿಸುವವರು ಯಾರಾದರೂ ಇದ್ದಾರೆಯೇ? ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ನೀವು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ 'ಬದುಕಲಿಕ್ಕಾಗಿಯೇ' ಎಂದು ನನ್ನ ಉತ್ತರವಿದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಜನರು ಬದುಕಿರಬಯಸುತ್ತಾರೆ. 'ದೀರ್ಘಾಯುಷ್ಮಾನ್ ಭವ' ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. 'ದೇವರೇ, ನನಗೆ (ನಮಗೆ ಎಂದು ನಮ್ಮ ಕುಟುಂಬದವರನ್ನೂ ಸೇರಿಸುತ್ತೇವೆ) ದೀರ್ಘಾಯಸ್ಸು, ಆರೋಗ್ಯ, ಸಂಪತ್ತು ಕೊಡು' ಎಂದು ಪ್ರಾರ್ಥನೆಯನ್ನೂ ಮಾಡುತ್ತೇವೆ. ಈ ದೀರ್ಘಾಯಸ್ಸು ಅಂದರೆ ಏನಿರಬಹುದು? ಅದು ಬಹುಷಃ ನಾವು ಭಾವಿಸಿರುವಂತೆ ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಾವು ಗೊತ್ತಿಲ್ಲದಂತೆಯೇ, ನಮಗೇ ಅದು ಏನೆಂದು ನಮ್ಮ ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೇವೆ. ನಾವು ನಮ್ಮ ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೇವೆ. ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಯಾವುದು ಎಂದು ನಾವು ಖಚಿತವಾಗಿ ಹೇಳಲಾರೆವು ಮತ್ತು ಅದೇ ಸ್ಥಿತಿಯಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಮಗೆ ಇರುತ್ತದೆ. ಆದರೂ ನಮಗೆ ದೀರ್ಘಾಯಸ್ಸು ಬೇಕು!
ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೇ ತಾವೆಂದು ಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕಾಗಿ ಕರ್ಮಗೈವರು ಮೂಢ||
     ನಮ್ಮ ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ನಮ್ಮ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ವಿಚಾರ ಮಾಡಿದರೆ, ಶರೀರದ ಮೂಲಕ ನಾವು ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ನಾವು ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ನಮ್ಮ ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿ(ಸಾಮ್ರಾಜ್ಯ ಅಂದುಕೊಳ್ಳೋಣ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ನಾವು ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಅದು ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬವರೆಗೆ ಈ ಆಸೆ ಅನ್ನುವುದು ಅಪ್ರಜ್ಞಾತ್ಮಕವಾಗಿ ನಮ್ಮಲ್ಲಿ ಸುಪ್ತವಾಗಿರುತ್ತದೆ. ಆದರೆ ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ನಮ್ಮದು ಎಂದು ಅಂದುಕೊಂಡುಬಿಡುತ್ತೇವೆ. ಚತುರ್ವಿಧ ಪುರುಷಾರ್ಥಗಳಲ್ಲಿ ಈ ಕಾಮ/ಆಸೆಗೂ ಪ್ರಧಾನ ಸ್ಥಾನವಿರುವುದನ್ನು ಗಮನಿಸಬಹುದು. ಸಣ್ಣ ಸಣ್ಣ ಅಸೆಗಳನ್ನು ಬಿಟ್ಟು ಅತ್ಯಂತ ಗರಿಷ್ಠವಾದುದನ್ನು ಪಡೆಯಲು ನೆರವಾಗುವ ದೊಡ್ಡ ಆಸೆಯೇ ಪುರುಷಾರ್ಥ ಸಾಧನೆಗೆ ನೆರವಾಗುವ ಕಾಮವಾಗಿದೆ.
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಬದುಕುವ ಆಸೆ ಅನ್ನುವುದು ನಮ್ಮ ಅಸ್ತಿತ್ವಕ್ಕೆ ಆಧಾರ ಎಂದು ಮೇಲಿನ ತರ್ಕದಿಂದ ತಿಳಿಯುತ್ತದೆ. ಆದರೆ ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬೇಕೆ? ಸ್ವಾಮಿ ದಯಾನಂದರು ಹೇಳುತ್ತಾರೆ: 'ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ.' ಎಷ್ಟು ಸತ್ಯ!
     ಬದುಕುವ ಆಸೆ ನಮ್ಮನ್ನು ಬದುಕಿಸಿದೆ. ಒಂದು ಗುರಿಯನ್ನು ತಲುಪಲು ನಾವು ಬಯಸಿದರೆ ಅದು ಕಷ್ಟಸಾಧ್ಯವೇನಲ್ಲ. ಯಾವುದೇ ಬಯಕೆ ಈಡೇರಲಾರದಂತಹುದೇನೂ ಅಲ್ಲ. ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕಷ್ಟೆ. ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ನಮ್ಮ ಲಕ್ಷ್ಯವಿದ್ದರೆ ನಮ್ಮ ಶಾರೀರಿಕ ಅಸ್ತಿತ್ವವನ್ನು ಮೀರಿ ನಮ್ಮ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಇದನ್ನೇ 'ಬದುಕುವುದು' ಅನ್ನಬಹುದು.
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
-ಕ.ವೆಂ.ನಾಗರಾಜ್.