ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಸೆಪ್ಟೆಂಬರ್ 11, 2016

ಸಮಯದ ಕ್ಷಣಕ್ಷಣವೂ ಅಂತಿಮ!


ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     "ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?" ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, "ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ". ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಅಷ್ಟಕ್ಕೂ ಈ ಪುರುಸೊತ್ತು ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೂ ನಮಗೆ ಸಮಯವಿರುವುದಿಲ್ಲ! ಈ ಸಮಯ ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ 24 ಗಂಟೆ, ಇನ್ನೊಬ್ಬರಿಗೆ 20 ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ‍್ವೇದಿಯವರು, ನರೇಂದ್ರ ಮೋದಿ ಮುಂತಾದವರಿಗೂ ಇರುವುದು ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಬಲಿತರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ.
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರಾಗಿರುತ್ತಾರೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತಾಸ ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಸಮಯ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎಂದಲ್ಲ. ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ!
     ಹೇಗೋ ಜೀವನ ನಡೆಸಿದರಾಯಿತು ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. ಹುಟ್ಟಿದ, ಇದ್ದ, ಒಂದು ದಿನ ಸತ್ತ ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ 80ರಿಂದ90 ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುವಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ. ನಿಜವಾದ ಸಂಗತಿಯೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
     ಹೊತ್ತೇ ಹೋಗುವುದಿಲ್ಲ ಎನ್ನುವವರು, ಟೈಮ್ ಕಳೆಯಲು ಏನಾದರೂ ಮಾಡಬೇಕಲ್ಲಾ ಅನ್ನುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆ ಕಂಡುಬರುತ್ತಾರೆ. ಇವರಿಗೆ ಮಾಡಬೇಕಾದ ಕೆಲಸಗಳಿಗೆ ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಟೈಮ್ ಪಾಸ್ ಅಲ್ಲ, ಲೈಫ್ ಲಾಸ್! ಇದರಿಂದಾಗಿ ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ ಆಗಿರುತ್ತದೆ. ನಮ್ಮ ಟೈಮೇ ಸರಿಯಿಲ್ಲ ಎಂದು ಉದ್ಗರಿಸುತ್ತಾರೆ. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, ದುಡಿಯದೇ ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.      ಕಾಲಾಯ ತಸ್ಮೈ ನಮಃ. ಕನಸು ನನಸಾಗಬೇಕಾದರೆ ಅದಕ್ಕಾಗಿ ನಿಶ್ಚಿತ ಸಮಯವನ್ನು ಕೊಡಲೇಬೇಕು.
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.

ಮುಕ್ತಿಪಥ



      ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು  40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.  
     ಮುಕ್ತಿಪಥ 
(ಆದಿಗುರು ಶ್ರೀ  ಶಂಕರಾಚಾರ್ಯರ ಸಾಧನಾ ಪಂಚಕದ 
ಕನ್ನಡ ಭಾವಾನುವಾದ - ಮೂಢನ ಮುಕ್ತಕಗಳ ರೂಪದಲ್ಲಿ)
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ || 

ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೨ ||

ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೩ ||

ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||

ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು 
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೫ ||

ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ || 

ವಿತಂಡವಾದದೊಡೆ ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೭ ||

ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೮ ||

ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೯ || 

ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೦ || 

ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |   
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೧ ||

ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೨ ||

ಪೂರ್ವಕರ್ಮಗಳ ಫಲವನನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೩ || 

ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || ೧೪ ||
-ಕ.ವೆಂ.ನಾಗರಾಜ್.
***************
'ಸಾಧನಾ ಪಂಚಕಮ್'
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

ಶನಿವಾರ, ಸೆಪ್ಟೆಂಬರ್ 3, 2016

ಹೀಗೆಯೇ ಇರುವುದಿಲ್ಲ!


ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
     'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಈ ಭೂಮಿಯನ್ನು ಎಂತೆಂತಹ ರಾಜರು, ಮಹಾರಾಜರು, ಚಕ್ರವರ್ತಿಗಳು ಆಳಿಹೋಗಿದ್ದಾರೆ| ಒಬ್ಬರಿಗಿಂತ ಒಬ್ಬರು ಪ್ರಚಂಡರೇ! ಸಮುದ್ರಕ್ಕೇ ಸೇತುವೆ ಕಟ್ಟಿ ದುಷ್ಟ ರಾವಣನನ್ನು ಸದೆಬಡಿದ ರಾಮಚಂದ್ರ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠರಾಗಿದ್ದ ಕೌರವರನ್ನು ಸೋಲಿಸಿ ಚಕ್ರಾಧಿಪನೆನಿಸಿದ ಧರ್ಮರಾಯ ಮುಂತಾದವರು ಈ ಭೂಮಿಗೆ ಒಡೆಯರೆನಿಸಿದ್ದರು. ಸೂರ್ಯ ಮುಳುಗದ ಸಾಮ್ಯಾಜ್ಯದ ನಾಯಕರೆನಿಸಿದ್ದ ಬ್ರಿಟಿಷರು ಶತಮಾನಗಳ ಕಾಲ ಈ ದೇಶವನ್ನು ಆಳಿದ್ದರು. ಹಲವು ಶತಮಾನಗಳ ಕಾಲ ಮೊಗಲರ ಅಧಿಪತ್ಯದಲ್ಲಿ ದೇಶವಿತ್ತು. ಛತ್ರಪತಿ ಶಿವಾಜಿ, ಅಶೋಕ, ವಿಷ್ಣುವರ್ಧನ, ಕೃಷ್ಣದೇವರಾಯ, ರಾಣಾ ಪ್ರತಾಪಸಿಂಹರಂತಹವರೂ ದೊಡ್ಡ ಸಾಮ್ರಾಜ್ಯಗಳಿಗೆ ರಾಜರಾಗಿದ್ದರು. ಅವರುಗಳು ಯಾರೂ ಈಗ ಇಲ್ಲ. ಆದರೆ ಅವರು ಆಳಿದ್ದ ಭೂಮಿ ಮಾತ್ರ ಅವರೊಡನೆ ಹೋಗದೆ ಇಲ್ಲಿಯೇ ಇದೆ. ಹುಟ್ಟುವಾಗ ನಮ್ಮೊಡನೆ ಏನೂ ಇರಲಿಲ್ಲ, ಸಾಯುವಾಗಲೂ ನಮ್ಮೊಡನೆ ಯಾವುದೂ ಬರುವುದಿಲ್ಲ. ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಹೆಸರುಗಳನ್ನು ಕೇಳುತ್ತಿರುತ್ತೇವೆ. ಅವರ ಶ್ರೀಮಂತಿಕೆ ಅವರು ಬದುಕಿರುವವರೆಗೆ ಮಾತ್ರ! ಸತ್ತಾಗ ಒಂದು ಗುಂಡುಸೂಜಿಯನ್ನೂ ಅವರು ತೆಗೆದುಕೊಂಡುಹೋಗಲಾರರು! ಸ್ವಿಸ್ ಬ್ಯಾಂಕಿನಲ್ಲಿ ಗುಟ್ಟಾಗಿ ಸಾವಿರಾರು ಕೋಟಿ ಸಂಪತ್ತು ಇಟ್ಟು ದೇಶಕ್ಕೆ ಮೋಸ ಮಾಡಬಹುದು. ಆದರೆ ಸಾಯುವಾಗ ಗುಟ್ಟಾಗಿ ತೆಗೆದುಕೊಂಡು ಹೋಗಲು ಮಾತ್ರ ಆಗದು!
     'ಹೀಗೆಯೇ ಇರುವುದಿಲ್ಲ!' -  ನೀವು ಒಬ್ಬ ದೊಡ್ಡ ಅಧಿಕಾರಸ್ಥಾನದಲ್ಲಿರುವಿರೇ? ಈ ಅಧಿಕಾರ ನಿಮ್ಮೊಂದಿಗೆ ಸದಾ ಇರಲಾರದು. ಮುಂದೊಮ್ಮೆ ನಿಮಗಿಂತ ಅರ್ಹ ವ್ಯಕ್ತಿಯೊಬ್ಬರು ಆ ಸ್ಥಾನದಲ್ಲಿ ಬಂದು ಕುಳಿತಾರು! ಯಾವುದೋ ಕಾರಣದಿಂದ ನೀವು ಅಧಿಕಾರ ಕಳೆದುಕೊಳ್ಳಬಹುದು. ಅದಕ್ಕೆ ನಿಮ್ಮ ವಯಸ್ಸು, ಅನಾರೋಗ್ಯ, ವೈಫಲ್ಯ ಇತ್ಯಾದಿಗಳು ಕಾರಣವಾಗಬಹುದು. ಗಳಿಸಿಕೊಂಡ ಅಧಿಕಾರ ಕಳೆದುಹೋಗುವುದು ಅಸಹಜವಲ್ಲ, ಆದರೆ ನೋವು ಕೊಡುವಂತಹದು. ಅಧಿಕಾರ ಶಾಶ್ವತವಲ್ಲ ಎಂಬ ಅರಿವಿದ್ದರೆ ದುಃಖದ ಪ್ರಮಾಣ ಕಡಿಮೆಯಾಗುತ್ತದೆ.
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ನಿಜ, ಸ್ವತಃ ನಾವು ಹೀಗೆಯೇ ಇರುತ್ತೇವೆಯೇ? ಹುಟ್ಟಿದಾಗ ಸಣ್ಣ ಮಗುವಾಗಿ ಮುದ್ದು ಮುದ್ದಾಗಿದ್ದವರು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತೇವೆ. ತುಂಟಾಟ ಮಾಡುವ ಬಾಲಕರಾಗುತ್ತೇವೆ, ಏನು ಬೇಕಾದರೂ ಮಾಡಬಲ್ಲೆವೆಂಬ ಹುಮ್ಮಸ್ಸಿನ ತರುಣರಾಗುತ್ತೇವೆ, ಪ್ರೌಢರಾಗಿ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ, ಮುಂದೊಮ್ಮೆ ವೃದ್ಧರಾಗಿ ಕೈಕಾಲುಗಳಲ್ಲಿ ಶಕ್ತಿ ಕುಂದಿ ನಿತ್ರಾಣರಾಗುತ್ತೇವೆ. ವಯಸ್ಸಿನಲ್ಲಿದ್ದಾಗ, ಅಧಿಕಾರವಿದ್ದಾಗ ಯಜಮಾನರಾಗಿ ಮೆರೆದಿದ್ದವರು ಇತರರ ಆಶ್ರಯ ಬಯಸುವ ಪ್ರಸಂಗ ಬರುತ್ತದೆ. ನಡು ವಯಸ್ಸಿನಲ್ಲಿ ಇರುವ ಒಳ್ಳೆಯ ವರಮಾನ ಬರುವ ನೌಕರಿ ಅಥವ ವಹಿವಾಟು, ಸುಂದರ ಪತ್ನಿ, ಚುರುಕಿನ ಮಕ್ಕಳು, ಭವ್ಯವಾದ ವಾಸದ ಬಂಗಲೆ, ಓಡಾಡಲು ಐಷಾರಾಮಿ ಕಾರು, ಇತ್ಯಾದಿಗಳೆಲ್ಲವೂ ಮೊದಲು ಇರಲಿಲ್ಲ ಅಲ್ಲವೇ? ಕಾಲ ಸರಿದಂತೆ ನಮಗೂ ವಯಸ್ಸಾಗುತ್ತದೆ, ಪತ್ನಿಗೂ ವಯಸ್ಸಾಗುತ್ತದೆ. ಸೌಂದರ್ಯ ಮಾಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಿವಿಧ ಕಾಯಿಲೆಗಳು ಅಡರಿಕೊಳ್ಳುತ್ತವೆ, ತಲೆಕೂದಲು ನೆರೆಯುತ್ತದೆ, ಉದುರುತ್ತದೆ. ಇದು ಸಹಜ ಕ್ರಿಯೆ. ಮೊದಲು ಇಲ್ಲದುದು ಕೊನೆಯಲ್ಲೂ ಇರುವುದಿಲ್ಲ. ಈ ಅರಿವು ಇದ್ದರೆ ಪೂರ್ವ ತಯಾರಿ ಮಾಡಿಕೊಂಡು ಸಂಧ್ಯಾಕಾಲವನ್ನು ಸಾಧ್ಯವಾದಷ್ಟು ಹಿತವಾಗಿ ಕಳೆಯಲು ಅವಕಾಶವಿರುತ್ತದೆ.
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ಹಗಲು, ರಾತ್ರಿಗಳು ಒಂದಾದ ನಂತರ ಒಂದು ಬರುತ್ತವೆ, ಹೋಗುತ್ತವೆ. ಕಷ್ಟಗಳು ಬಂದು ಅನುಭವಿಸಲಾಗದೆ ಒದ್ದಾಡುವಾಗ ತಾಳ್ಮೆಯಿಂದಿರಲು ಈ ಸೂತ್ರ ನೆರವಾಗುತ್ತದೆ. ಕಷ್ಟಗಳು ಹೊಸದಾಗಿ ಬಂದದ್ದಲ್ಲವೇ? ಒಂದೊಮ್ಮೆ ಹೋಗುತ್ತವೆ. ಅಲ್ಲಿಯವರೆಗೂ ಸಹಿಸುವ ಮತ್ತು ಅದನ್ನು ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕಷ್ಟೆ. ಈಸಬೇಕು, ಇದ್ದು ಜೈಸಬೇಕು! ಬಂದದ್ದು ಹೋಗಲೇಬೇಕು, ಹೋದದ್ದು ಬರಲೇಬೇಕು, ಇದು ಪ್ರಕೃತಿನಿಯಮವೆಂದು ಅರಿತರೆ ಅರ್ಧ ಕಷ್ಟ ಕಡಿಮೆಯಾದಂತೆಯೇ.
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢs ||
     'ಹೀಗೆಯೇ ಇರುವುದಿಲ್ಲ!' - ಇದು ಸಮದರ್ಶಿಗೆ, ಸಾಧಕನಿಗೆ ಅರ್ಥವಾಗುವ ವಿಚಾರ. ಜನಸಾಮಾನ್ಯರಾದ ನಮಗೆ ಇದು ಅರ್ಥವಾಗುವುದು ಕಷ್ಟ. ಆ ದೇವರು ಅದು ಯಾವ ಭ್ರಾಮಕ ಅಂಶವನ್ನು ನಮ್ಮೊಳಗೆ ತುರುಕಿದ್ದಾನೋ ಗೊತ್ತಿಲ್ಲ. ನಾವು ಚಿರಂಜೀವಿಗಳಂತೆ ವರ್ತಿಸುತ್ತೇವೆ, ಎಲ್ಲವೂ ನಮಗೆ ಬೇಕು ಎಂಬ ಹಪಾಹಪಿಯಲ್ಲೇ ಜೀವನ ಕಳೆದುಬಿಡುತ್ತೇವೆ. ಕಳೆದುಕೊಳ್ಳಲು ಏನೂ ಇರದವನಿಗೆ ಇರುವ ನೆಮ್ಮದಿ ಎಲ್ಲವೂ ಇರುವ ಶ್ರೀಮಂತನಿಗೆ ಇರಲಾರದು. ನೈಜ ಪರಿವ್ರಾಜಕರು, ಅವಧೂತರಲ್ಲಿ ಈ ಗುಣವನ್ನು ಕಾಣಬಹುದು. ಯಾವುದೇ ವಸ್ತು, ಸಂಗತಿ, ಜೀವಿ ಇರುವಂತೆಯೇ ಇರುವುದಿಲ್ಲ, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಎಂಬ ಅರಿವು ಮೂಡಿದಾಗ ಅದು ಚಮತ್ಕಾರವನ್ನೇ ಮಾಡುತ್ತದೆ. ನವಕೋಟಿ ನಾರಾಯಣನೆಂದು ಹೆಸರು ಪಡೆದಿದ್ದ ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತನಾಗಿದ್ದವನು ಎಲ್ಲವನ್ನೂ ದಾನ ಮಾಡಿ ತಂಬರಿ ಹಿಡಿದು ಮನೆ ಬಿಟ್ಟು ಹೊರಟು ಪುರಂದರದಾಸನಾದದ್ದು, ಪರರನ್ನು ದೋಚಿ ಜೀವಿಸುತ್ತಿದ್ದ ಬೇಟೆಗಾರ ವಾಲ್ಮೀಕಿಯಾದದ್ದು, ಬುದ್ಧ ಮತ್ತು ಮಹಾವೀರರು ಐಹಿಕ ಸುಖ-ಭೋಗಗಳನ್ನು ತ್ಯಜಿಸಿ ವಿರಾಗಿಗಳಾದದ್ದು, ಇತ್ಯಾದಿಗಳೆಲ್ಲವೂ ಈ ಅರಿವು ಅವರಲ್ಲಿ ಮೂಡಿದುದರ ಫಲವೇ ಆಗಿದೆ. ಶಾಂತರಾಗಿ ಕುಳಿತು ಚಿಂತಿಸಿದರೆ ಮೂಡುವ ಈ ಅರಿವು ಕಷ್ಟ ಬಂದರೆ ಅಳುಕದ, ಸುಖದಲ್ಲಿ ಹಿಗ್ಗದ, ನಮ್ಮಲ್ಲಿ ಮಾನವೀಯತೆಯ ಒರತೆಯನ್ನು ಚಿಮ್ಮಿಸುವ ಸಾಧನವಾಗದೇ ಇರದು.
-ಕ.ವೆಂ.ನಾಗರಾಜ್.
**************
ದಿನಾಂಕ 18.05.2016 ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಆಗಸ್ಟ್ 6, 2016

ರಾಕ್ಷಸತ್ವ


     ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು, ರಕ್ತಪಿಪಾಸು ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ರಾಕ್ಷಸರು ನಿಜವಾಗಿ ಹೀಗಿರುತ್ತಾರೆಯೇ?
     ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆಗಳನ್ನು, ದುರ್ವಿಚಾರಗಳನ್ನು ಹೊಂದಿರುತ್ತಾರೋ, ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರೇ ರಾಕ್ಷಸರು. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆಯಲ್ಲ. ಒಬ್ಬ ರಾಕ್ಷಸನಾಗುವುದು ಅಥವ ಮಾನವನಾಗುವುದು ನಡವಳಿಕೆಯಿಂದ ಅಷ್ಟೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳೇ ರಕ್ಷಸ್ಸುಗಳು. ಅದಕ್ಕೆ ಬಲಿಯಾಗಿ ಕುಕೃತ್ಯಗಳನ್ನು ಎಸಗುವವರೇ ರಾಕ್ಷಸರು.
     ಧೃತರಾಷ್ಟ್ರನ ಪುತ್ರಮೋಹ ಅವನ ನೂರು ಮಕ್ಕಳನ್ನೂ ಅವನು ಬದುಕಿದ್ದಾಗಲೇ ಬಲಿ ತೆಗೆದುಕೊಂಡಿತು. ದೃಷ್ಟಿಹೀನನಾಗಿದ್ದ ಆತ ದುರ್ಯೋಧನನ ಮೇಲಿನ ಅತಿಯಾದ ಮೋಹದಿಂದ ನ್ಯಾಯ, ನೀತಿ, ಧರ್ಮಗಳ ವಿಷಯದಲ್ಲೂ ಸಹ ಕುರುಡನಾಗಿದ್ದ. ಮತಾಂಧರು ಸಹಮಾನವರನ್ನೇ ಕಿಂಚಿತ್ತೂ ಕರುಣೆಯಿಲ್ಲದೆ ಹಿಂಸಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿರುವುದನ್ನೂ ಕಾಣುತ್ತಿದ್ದೇವೆ. ಅಜ್ಞಾನದ ಪರಮಾವಧಿಯೆನ್ನಬಹುದಾದ ಈ ಮೋಹ ಮಾನವನನ್ನು ದಾನವನನ್ನಾಗಿ ಮಾಡುತ್ತದೆ.
     ಕೋಪದಿಂದಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿವೇಚಿಸುವ ಶಕ್ತಿಯನ್ನು ಹೊಸಕಿಹಾಕಿ ಪಶುವಿನಂತೆ ವರ್ತಿಸುವ ವ್ಯಕ್ತಿಗೆ ಸ್ನೇಹಿತ-ವೈರಿ, ತನ್ನವರು-ಬೇರೆಯವರು, ಸೋದರ-ಸೋದರಿ, ಹಿರಿಯರು-ಕಿರಿಯರು ಮುಂತಾದ ಯಾವ ವ್ಯತ್ಯಾಸವೂ ಗೊತ್ತಾಗದು. ಗೊತ್ತಾಗುವಷ್ಟರಲ್ಲೇ ಅನಾಹುತ ಜರುಗಿಬಿಟ್ಟಿರುತ್ತದೆ. ಸಭ್ಯತೆ, ಸಂಸ್ಕೃತಿ, ಸ್ಥಾನ-ಮಾನಗಳ ಪರಿವೆಯೂ ಕ್ರೋಪಿಷ್ಠನಿಗೆ ಇರುವುದಿಲ್ಲ. ಕೋಪವೆಂಬ ರಕ್ಕಸನಿಂದ ಎಲ್ಲೆಲ್ಲೂ ಅಪಕಾರ, ಎಲ್ಲೆಲ್ಲೂ ಹಾಹಾಕಾರ!
     ಮತ್ಸರದ ಕುರಿತು ಹೇಳಲೇಬೇಕಿಲ್ಲ. ಪೃಥ್ವೀರಾಜನ ಏಳಿಗೆ ಸಹಿಸದ ಜಯಚಂದ್ರನ ಮತ್ಸರ ಭಾರತವನ್ನು ಶತಮಾನಗಳ ಕಾಲ ದಾಸ್ಯಕ್ಕೆ ದೂಡಿತು. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಮತ್ಸರ ಅನ್ನುವುದು ನಮ್ಮ ಒಳಗಿನ ಕಲ್ಮಶ, ನಿವಾರಿಸಿಕೊಂಡರೆ ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
     ಇನ್ನು ಕಾಮದ ವಿಷಯ ಹೇಳುವುದೇ ಬೇಡ. ರಾವಣನ ವಧೆಯಾದ ಸಂದರ್ಭದಲ್ಲಿ ಮಂಡೋದರಿ ಶೋಕಿಸಿದ ಪರಿ ಇದು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು.' ಜೀವನಕ್ಕೆ ಬೇಕಾದ ಅಮೂಲ್ಯ ಪಾಠ ಈ ಮಾತಿನಲ್ಲ್ಲಿದೆ. ಕಾಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.
     ಮದ ಸೊಕ್ಕಿ ಮೆರೆಯುವವರನ್ನು ಯಾರು ಇಷ್ಟಪಡುತ್ತಾರೆ? ಮದಕ್ಕೆ ಹಲವು ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ. ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮದದ ಕಾಯಿಲೆಯಿಂದ ನರಳುತ್ತಿರುವವರಿಂದ ದೂರವಿರುವುದೇ ಕ್ಷೇಮ.
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ.
     ರಾಕ್ಷಸರು ಹೊರಗೆ ಎಲ್ಲೋ ಇಲ್ಲ. ನಮ್ಮೊಳಗೇ ಇದ್ದಾರೆ. ಅವರನ್ನು ಹತ್ತಿಕ್ಕಬೇಕಾದವರು ನಾವೇ! ಅವಿವೇಕದ ರಕ್ಕಸನನ್ನು ಹತ್ತಿಕ್ಕಲು ವಿವೇಕದ ಪರಮಾತ್ಮನೇ ಬರಬೇಕು. ವಿವೇಚಿಸಿ ನಡೆಯುವುದು, ಸತ್ಸಂಗ, ಸಜ್ಜನ ಸಹವಾಸ, ಸಾತ್ವಿಕ ಆಹಾರ, ಸಂಸ್ಕಾರಯುತ ಮನೆ, ಉತ್ತಮ ಮಾರ್ಗದರ್ಶನ, ನೈತಿಕ ಮೌಲ್ಯ ಬೋಧಿಸುವ ಶಿಕ್ಷಣ- ಇವು ಒಳಗಿನ ರಾಕ್ಷಸರನ್ನು ಹತ್ತಿಕ್ಕಲು ಇರುವ ಪರಿಣಾಮಕಾರಿ ಆಯುಧಗಳಾದರೆ, ಹೊರಗಿನ ರಾಕ್ಷಸರನ್ನು ನಿಯಂತ್ರಿಸಲು ಉಪಯೋಗಿಸಬಹುದಾದ ಆಯುಧಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಒಬ್ಬ ದುರ್ಜನನನ್ನು ಮನ ಪರಿವರ್ತಿಸಿ, ಯೋಗ್ಯ ತಿಳುವಳಿಕೆ ನೀಡಿ ಸಜ್ಜನನನ್ನಾಗಿಸಿದರೆ, ಒಬ್ಬ ರಾಕ್ಷಸ ಕಡಿಮೆಯಾಗುವುದರ ಜೊತೆಗೆ ಒಬ್ಬ ಸಜ್ಜನನ ಸಂಖ್ಯೆ ಹೆಚ್ಚಾಗುತ್ತದೆ. ಮನ ಪರಿವರ್ತನೆ ಸಾಧ್ಯವೇ ಇಲ್ಲ, ಅವನಿಂದ ಸಮಾಜಕ್ಕೆ ಹಾನಿ ತಪ್ಪಿದ್ದಲ್ಲ ಅನ್ನಿಸಿದರೆ, ಸಾಮ, ದಾನ, ಭೇದದ ಪ್ರಯೋಗಗಳು ಉಪಯೋಗಕ್ಕೆ ಬರದಿದ್ದರೆ ದಂಡಪ್ರಯೋಗ ಸಮಾಜದ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಮೌಲ್ಯಯುತ ಆಡಳಿತ ಬಂದರೆ ಇದೂ ಸಹ ಸಾಧ್ಯ.
-ಕ.ವೆಂ.ನಾಗರಾಜ್.
****************
ದಿನಾಂಕ 11.05.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಆಗಸ್ಟ್ 1, 2016

ಚಿಂತೆಯ ಸಂತೆಯಲ್ಲಿ!


     ಅನುಗಾಲವೂ ಚಿಂತೆ ಜೀವಕೆ ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಹೀಗೆ ಹಾಡಬಹುದೇನೋ - ಚಿಂತೆಯೇ ನಮ್ಮ ತಾಯಿ ತಂದೆ, ಚಿಂತೆಯೇ ನಮ್ಮ ಬಂಧು ಬಳಗ, ಚಿಂತೆಯಿಲ್ಲದ ಮನುಜನಿದ್ದೊಡೆ, ಅವನೆ ನಿಜ ಪರಮಾತ್ಮನು! ಈ ಚಿಂತೆ ಅನ್ನುವುದು ಮನಸ್ಸಿನಲ್ಲಿ ಮುಂಬರಲಿರುವ ಅಪಾಯಗಳು, ಅಹಿತಕರ ಸನ್ನಿವೇಶಗಳನ್ನು ಎದುರಿಸುವ ಉಪಾಯಗಳ ಕುರಿತು ನಡೆಯುವ ತಾಕಲಾಟಗಳು. ಆ ಸಮಸ್ಯೆಗಳು ಆರೋಗ್ಯದ್ದಾಗಿರಬಹುದು, ವೃತ್ತಿಗೆ ಸಂಬಂಧಿಸಿದ್ದಿರಬಹುದು, ಆರ್ಥಿಕ, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿರಬಹುದು, ಇಂತಹ ಮತ್ತಾವುದೋ ಆಗಿರಬಹುದು. ನೈಜ ಸಮಸ್ಯೆಗಿಂತ ಕಾಲ್ಪನಿಕ ಸಮಸ್ಯೆ ಮನುಷ್ಯನನ್ನು ಹಿಂಡಿಬಿಡುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಂತೆ ಸಮಸ್ಯೆಯನ್ನು ಎದುರಿಸಿ ಗೆಲ್ಲಲು ಸಹಾಯಕವಾಗಬಹುದು. ಆದರೆ, ಹೀಗಾದರೆ ಏನು?, ಹಾಗಾದರೆ ಏನು?, ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಏನು ಮಾಡುವುದು? ಇತ್ಯಾದಿ ತಾಕಲಾಟಗಳು ಅಪಾಯಕಾರಿ. ಅವು ಜೀವನದಲ್ಲಿನ ಆಸಕ್ತಿಯನ್ನು ಕಳೆದುಬಿಡುತ್ತವೆ, ಆತಂಕ, ದುಗುಡ, ಉದ್ವೇಗಗಳು ಶಕ್ತಿಯನ್ನು ಬಸಿದುಬಿಡುತ್ತವೆ, ದಿನನಿತ್ಯದ ಚಟುವಟಿಕೆಗಳು ಏರುಪೇರಾಗುವಂತೆ ಮಾಡುತ್ತವೆ, ನಿದ್ದೆ ಬರುವದಿಲ್ಲ, ಖಿನ್ನತೆ ಕಾಡುತ್ತದೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ರಚನಾತ್ಮಕ ಶಕ್ತಿ ಕುಂದುತ್ತದೆ. ಸಮಸ್ಯೆಯನ್ನು ಆಪ್ತರೊಡನೆ ಹಂಚಿಕೊಂಡರೆ ಪರಿಹಾರ ಹುಡುಕಲು ಸುಲsವಾಗಬಹುದು. ಒಳ್ಳೆಯ ಸಹವಾಸಗಳು, ಒಳ್ಳೆಯ ಆಹಾರ, ಒಳ್ಳೆಯ ನಿದ್ದೆ ಚಿಂತೆಯನ್ನು ಹಗುರಗೊಳಿಸಬಲ್ಲವು. ಆದರೆ, ಈ ಚಿಂತೆ ಇದಕ್ಕೆ ಅವಕಾಶ ಕೊಟ್ಟೀತೇ ಅನ್ನುವುದೂ ಪ್ರಶ್ನೆಯಾಗುತ್ತದೆ.
     ಸತತ ಚಿಂತೆಯಿಂದ ನರಳುವವರು ಚಿಂತೆಯ ಬಗ್ಗೆ ಧನಾತ್ಮಕವಾದ ಮತ್ತು ಋಣಾತ್ಮಕವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಸತತವಾಗಿ ಚಿಂತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಅದು ನಿರಂತರವಾಗಿರುತ್ತದೆ ಎಂಬುದು ಋಣಾತ್ಮಕ ನಂಬಿಕೆಯಾಗಿದೆ. ಚಿಂತಿಸುವುದರಿಂದ ಕೆಟ್ಟ ಸಂಗತಿಗಳನ್ನು ನಿವಾರಿಸಿಕೊಳ್ಳಬಹುದು, ಸಮಸ್ಯೆಗಳನ್ನು ಪರಿಹರಿಸುತ್ತದೆ, ಅತಿ ಕೆಟ್ಟ ಸನ್ನಿವೇಶಗಳಲ್ಲೂ ಸಿದ್ಧರಿರುವಂತೆ ಮಾಡುತ್ತದೆ, ಸಮಸ್ಯೆಗೆ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಧನಾತ್ಮಕ ನಂಬಿಕೆಯೆನಿಸುತ್ತದೆ. ಈ ಎರಡೂ ಒಳ್ಳೆಯವಲ್ಲ. ಋಣಾತ್ಮಕ ನಂಬಿಕೆ ಆತಂಕವನ್ನು ಹೆಚ್ಚಿಸುತ್ತದೆ, ಚಿಂತೆ ಮುಂದುವರೆಯುವಂತೆ ಮಾಡುತ್ತದೆ. ಧನಾತ್ಮಕ ನಂಬಿಕೆ ಸಹ ಅಷ್ಟೇ ಹಾನಿ ತರಬಲ್ಲದು. ಚಿಂತೆ ಮಾಡುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುತ್ತದೆ ಎಂಬ ಭಾವನೆ ಚಿಂತಿಸುವ ಸ್ವಭಾವವನ್ನು ಉತ್ತೇಜಿಸುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕೆಂದರೆ ಚಿಂತೆ ಅನ್ನುವುದು ಒಂದು ಸಮಸ್ಯೆ, ಪರಿಹಾರವಲ್ಲ ಎಂಬುದನ್ನು ಅರಿಯಬೇಕಿದೆ.
     ಸತತ ಚಿಂತೆಯಿಂದ ಪಾರಾಗುವುದು ಸುಲಭವಲ್ಲವೆಂದು ಅರಿವಿಗೆ ಬಂದಾಗ ನಿರಾಶೆ ಮೂಡುತ್ತದೆ. ಚಿಂತೆಯನ್ನು ಮರೆಯುವ ಪ್ರಯತ್ನ ಅಷ್ಟು ಸುಲಭವಲ್ಲ. ಮರೆಯಬೇಕೆಂದಷ್ಟೂ ಚಿಂತೆಯ ಸುತ್ತಲೇ ಮನಸ್ಸು ಸುಳಿದಾಡುತ್ತಿರುತ್ತದೆ. ಆದ್ದರಿಂದ ಚಿಂತೆಯನ್ನು ಮರೆಯಲು ಪ್ರಯತ್ನಿಸುವ ಬದಲು ಅದನ್ನು ನಿಯಂತ್ರಿಸಲು ಬೇರೆ ಮಾರ್ಗವನ್ನೇ ಹುಡುಕಬೇಕಿದೆ. ಚಿಂತೆ ಮಾಡಲು ದಿನದ ಒಂದು ನಿರ್ದಿಷ್ಟ ಅವಧಿಯನ್ನು, ಉದಾಹರಣೆಗೆ ಸಂಜೆಯ ೫ ಗಂಟೆಯಿಂದ ೬ ಗಂಟೆಯವರೆಗೆ ಅಥವ ರಾತ್ರಿಯ ೯ ಗಂಟೆಯಿಂದ ೧೦ ಗಂಟೆಯವರೆಗೆ, ಹೀಗೆ ನಿಗದಿಪಡಿಸಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಚಿಂತೆಯನ್ನು ಬದಿಗಿಟ್ಟು ಮುಂದೂಡಲು ಸಹಾಯವಾಗುತ್ತದೆ. ಚಿಂತೆಗಾಗಿ ಸಮಯವಿರುವುದರಿಂದ ಇತರ ಸಂಗತಿಗಳಿಗೆ ಗಮನ ಕೊಡೋಣ ಎಂದು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗೆ ಮುಂದೂಡುವ ಶಕ್ತಿ ರೂಢಿಸಿಕೊಂಡರೆ ಚಿಂತೆಯನ್ನು ನಿಯಂತ್ರಿಸುವ ಶಕ್ತಿ ಇದೆಯೆಂಬ ಅರಿವು ಮೂಡಿ ಹುರುಪು ಬರುತ್ತದೆ.
     ಮುಂದಿನ ಹಂತವಾಗಿ ಸಮಸ್ಯೆಯ ಅಂತರಾಳಕ್ಕಿಳಿದು ಪರಿಸ್ಥಿತಿಯ ಅವಲೋಕನ ಮಾಡಿ, ಏನು ಮಾಡಬಹುದೆಂಬ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಕ್ರಿಯಾರೂಪಕ್ಕೆ ತರುವ ಮಾರ್ಗಗಳನ್ನು ಹುಡುಕಬೇಕು. ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು.
***ಸಮಸ್ಯೆ ಕೇವಲ ಊಹಾತ್ಮಕ ಮತ್ತು ಕಲ್ಪನೆಯದೇ?
*** ಕಲ್ಪನೆಯ ಸಮಸ್ಯೆಯಾದರೆ, ಅದು ನಿಜಕ್ಕೂ ಸಂಭವಿಸಬಹುದೇ?
*** ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬಹುದೇ ಅಥವ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ? ಅಥವ ಅದು ನಮ್ಮ ನಿಯಂತ್ರಣಕ್ಕೆ ಹೊರತಾದುದೇ?
ಪರಿಹರಿಸಬಹುದಾದ ಸಮಸ್ಯೆಯಾದರೆ ಏನು ಮಾಡಬಹುದೆಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅದರ ಬಗ್ಗೆಯೇ, ಪರಿಪೂರ್ಣ ಪರಿಹಾರದ ಬಗ್ಗೆಯೇ, ತಲೆ ಕೆಡಿಸಿಕೊಳ್ಳದೆ, ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿಗಳನ್ನು ಬಿಟ್ಟು ಉಳಿದಂತೆ ಏನು ಬದಲಾವಂಣೆ ತರಬಹುದೋ ಅಂತಹುದರ ಬಗ್ಗೆ ಕೇಂದ್ರೀಕರಿಸಿ ಪ್ರಯತ್ನಿಸಬೇಕು. ಒಮ್ಮೆ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಪ್ರವೃತ್ತರಾದೆವೆಂದರೆ ಅರ್ಧ ಚಿಂತೆಯಿಂದ ಮುಕ್ತರಾದಂತೆಯೇ ಸರಿ.
     ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಏನು ಮಾಡುವುದು? ಇಂತಹ ಸಂದರ್ಭಗಳಲ್ಲಿ, ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅವಶ್ಯಕ. ಚಿಂತೆ ಸಮಸ್ಯೆ ಪರಿಹರಿಸಲಾಗದಿದ್ದರೂ ಭಾವನೆಗಳನ್ನು ನಿಯಂತ್ರಿಸಲು ಸಹಕಾರಿ. ಆದರೆ ಅದು ಅಹಿತಕರ ಭಾವನೆಗಳನ್ನು ಹೋಗಲಾಡಿಸಲಾರದು. ಈ ವಿಷವೃತ್ತದಿಂದ ಹೊರಬರಬೇಕೆಂದರೆ ಅಹಿತಕರ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಳ್ಳಬೇಕಷ್ಟೆ. ಈ ಭಾವನೆಗಳು ಜೀವನದಂತೆಯೇ ಗೋಜಲು ಗೋಜಲಾಗಿರುತ್ತವೆ ಎಂಬ ಸತ್ಯ ಮನಗಾಣಬೇಕು. ಭಾವನೆಗಳು ಯಾವಾಗಲೂ ಅರ್ಥವತ್ತಾಗಿರಲಾರದು, ಹಿತವಾಗಿರಲಾರದು. ಅವು ಮಾನವಸಹಜವೆಂದು ತಿಳಿದು ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಗಮನಿಸಬೇಕು.
     ಸತತ ಚಿಂತೆಯಿಂದ ಬಳಲುತ್ತಿರುವವರ ಮೂಲ ಸಮಸ್ಯೆಯೆಂದರೆ ಅವರು ಅನಿಶ್ಚಿತತೆಯನ್ನು ತಾಳಿಕೊಳ್ಳಲಾರರು. ಮುಂದೆ ಏನಾಗಬಹುದು ಎಂಬ ಕುರಿತು ಅವರು ಶೇಕಡ ನೂರರಷ್ಟು ಖಚಿತಪಡಿಸಿಕೊಳ್ಳಬಯಸುವವರು. ಅದನ್ನು ತಿಳಿಯುವ ಸಲುವಾಗಿಯೇ ಮತ್ತು ಅಂತಹ ಅಹಿತಕರ ಸನ್ನಿವೇಶಗಳನ್ನು ತಡೆಯುವುದು ಹೇಗೆ ಎಂಬ ಕುರಿತಾಗಿಯೇ ಚಿಂತೆಯಿಂದ ಬಳಲುತ್ತಾರೆ. ಆದರೆ ಸಮಸ್ಯೆಯೆಂದರೆ ಅಂತಹ ಚಿಂತೆ ಉಪಯೋಗಕ್ಕೆ ಬರುವುದಿಲ್ಲ. ಮುಂದೆ ಆಗಬಹುದಾದ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಭವಿಷ್ಯ ತಿಳಿಯಲಾಗದು. ಹಾಗೆ ಚಿಂತಿಸುವುದರಿಂದ ಒಳ್ಳೆಯ ಸ್ಥಿತಿ ಬಂದೀತೆಂದು ಭಾವಿಸುವುದಾದರೂ, ಅದು ಕೇವಲ ಭ್ರಮೆಯಾಗಿರುತ್ತದೆ. ಕೆಟ್ಟ ಸಂಭವನೀಯ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಅದನ್ನು ನಡೆಯುವುದನ್ನು ನಿಲ್ಲಿಸಲಾಗದು. ಅಂತಹ ಚಿಂತೆ ನಮ್ಮ ಈಗಿನ ಸುಖ-ಸಂತೋಷಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಈಗ ಏನು ಮಾಡಬಹುದೆಂಬ ಬಗ್ಗೆ ಮಾತ್ರ ಯೋಚಿಸಿ, ಕ್ರಮೇಣ ನಿಶ್ಚಿತ ಮತ್ತು ಉಪಯುಕ್ತ ಕ್ರಮಗಳ ಬಗ್ಗೆ ಮುಂದುವರೆಯುವುದು ಸೂಕ್ತ.
     ಸತತ ಚಿಂತೆಯಿಂದ ಬಳಲುವವರಿಗೆ ಸಮಸ್ಯೆ ವಾಸ್ತವಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತದೆ. ಸಮಸ್ಯೆಯನ್ನು ನಿಭಾಯಿಸುವುದು ದುಸ್ತರವಾಗಿ ತೋರುತ್ತದೆ. ಸಮಸ್ಯೆಯ ಅಪಾಯಗಳ ಕುರಿತು ಯಾವ ಸಂಗತಿ ಭಯಕ್ಕೆ ಕಾರಣವಾಗಿದೆಯೋ ಅದನ್ನು ವಸ್ತುಸ್ಥಿತಿಯೆಂದು ಭಾವಿಸದೆ, ಅದರ ಕುರಿತು ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿದರೆ ಸಮತೋಲಿತವಾಗಿ ಯೋಚಿಸಲು ಸಾಧ್ಯವಾಗಬಹುದು. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ:
*** ಚಿಂತೆಗೆ ಕಾರಣವಾದ ಸಂಗತಿ ಎಷ್ಟರಮಟ್ಟಿಗೆ ಸತ್ಯ? ಎಷ್ಟು ಅಸತ್ಯ?
*** ಈಗಿನ ಪರಿಹಾರಕ್ಕಿಂತ ಬೇರೆ ರೀತಿಯ ಪರಿಹಾರಕ್ಕೆ ಅವಕಾಶವಿದೆಯೇ?
*** ಭಯಕ್ಕೆ ಕಾರಣವಾದ ಸಂಗತಿ ನಡೆಯುವ ಸಾಧ್ಯತೆ ಎಷ್ಟು?
*** ಅಂತಹ ಸಾಧ್ಯತೆ ಕಡಿಮೆಯಿದ್ದರೆ, ಇತರ ಪರಿಣಾಮಗಳಾದರೂ ಎಂತಹವು?
*** ಚಿಂತಿಸುವುದು ಸಹಕಾರಿಯೇ? ಚಿಂತೆ ಮಾಡುವುದರಿಂದ ಎಷ್ಟರ ಮಟ್ಟಿಗೆ ಅನುಕೂಲ/ತೊಂದರೆ?
*** ಇಂತಹುದೇ ಸಮಸ್ಯೆ ನನ್ನ ಸ್ನೇಹಿತನಿಗೆ ಇದ್ದರೆ ನಾನು ಏನು ಸಲಹೆ ಕೊಡುತ್ತಿದ್ದೆ?
     ಸಮಸ್ಯೆ ಉಂಟುಮಾಡುವವರಿಂದ ಹಿತಕರವಾದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಸಮಸ್ಯೆ ಉಲ್ಬಣವಾಗದಂತೆ ಅಂತಹವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಆಪ್ತರು, ಸ್ನೇಹಿತರು, ಹಿತಚಿಂತಕರುಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಚಿಂತೆಗೆ ಭವಿಷ್ಯದಲ್ಲಿ ಏನಾಗಬಹುದು ಮತ್ತು ಅದಕ್ಕೆ ನಾವು ಏನು ಮಾಡಬೇಕು ಎಂಬುದೇ ಮುಖ್ಯ ಕಾರಣವಾಗಿದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಅದಕ್ಕೆ ತರಬೇತಿ ನೀಡಿದರೆ ಸಮಸ್ಯೆ ಹಗುರವಾದೀತು. ಮನಸ್ಸಿನ ಆತಂಕಗಳು, ಉದ್ವೇಗಗಳನ್ನು ಉಪೇಕ್ಷಿಸದೆ, ಹತ್ತಿಕ್ಕದೆ ಅವುಗಳನ್ನು ಹೊರಗಿನ ವ್ಯಕ್ತಿಯ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳಿತಾದೀತು. ಇಂತಹ ಅಭ್ಯಾಸ ಬೆಳೆಸಿಕೊಂಡರೆ ಸಮಸ್ಯೆಗಳು ಮೋಡ ಆಕಾಶದಲ್ಲಿ ಸರಿದುಹೋದಂತೆ ಸರಿದು ಹೋಗಬಹುದು. ಚಿಂತೆ ಭವಿಷ್ಯದ ದುಃಖಗಳನ್ನು ನಿವಾರಿಸುತ್ತದೋ ಇಲ್ಲವೋ ತಿಳಿಯದು, ಆದರೆ ಇಂದಿನ ಸಂತೋಷವನ್ನು ಮಾತ್ರ ಹಾಳು ಮಾಡುತ್ತದೆ. ಮುಂದಿನ ಸಂಗತಿಗಳಿಗಿಂತ ಇಂದಿನ ಪರಿಸ್ಥಿತಿಯ ಬಗ್ಗೆ ಗಮನ ನೀಡಿದರೆ ಮುಂದಿನದೂ ಸರಾಗವಾಗಿ ಸಾಗಬಹುದು. ಹಳೆಯ ಚಿಂತೆಗಳಿಗೆ ಮನಸ್ಸು ಮರಳಿದರೂ, ವಿಚಲಿತರಾಗದೆ ಪ್ರಯತ್ನ ಮುಂದುವರೆಸಿದರೆ ಚಿಂತೆಯಿಂದ ಮುಕ್ತವಾಗುವ ದಾರಿ ಸಿಕ್ಕೀತು. ಚಿಂತೆಯದೇ ಚಿಂತೆಯಾಗಿರುವಾಗ ಪ್ರಯತ್ನಪಟ್ಟು ಚಿಂತಿಸದಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 04.05.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಜುಲೈ 22, 2016

ಅಸಹಿಷ್ಣುತೆಯ ಗುಮ್ಮ


     ಭಾರತದಲ್ಲಿ ಈಗ ಅಸಹಿಷ್ಣುತೆಯ ಬಗ್ಗೆ ದೊಡ್ಡ ಗುಲ್ಲೆದ್ದಿದೆ. ಇದನ್ನು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗಂಭೀರವಾದ ಸಮಸ್ಯೆಯೆಂಬಂತೆ ಕೆಲವು ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರುಗಳು ಬಿಂಬಿಸುತ್ತಿರುವದಲ್ಲದೆ ಹಲವರು ತಾವು ಪಡೆದಿದ್ದ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಬಲವಾಗಿ ಖಂಡಿಸುವವರ ಸಂಖ್ಯೆಯೂ ಗಣನೀಯವಾಗಿದೆ. ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು ಬರೆದ ಪುಸ್ತಕಗಳನ್ನು ಅವರಿಗೇ ಹಿಂತಿರುಗಿಸುವ ಚಳುವಳಿಯೂ ಆರಂಭವಾಗಿದೆ. ಒಂದಂತೂ ನಿಜ, ಪ್ರಪಂಚದ ಇತರ ದೇಶಗಳತ್ತ ಕಣ್ಣು ಹಾಯಿಸಿದರೆ ಕಾಣುವುದೇನೆಂದರೆ ಭಾರತದಂತಹ ಸಹಿಷ್ಣುತೆ ಮೈಗೂಡಿಸಿಕೊಂಡಿರುವ ದೇಶ ಮತ್ತೊಂದು ಇಲ್ಲವೆಂಬುದು! ಆದರೂ ಹೀಗೇಕೆ ಎಂಬುದಕ್ಕೆ ಪರ-ವಿರೋಧದ ಹೇಳಿಕೆಗಳು, ಲೇಖನಗಳು ಸಾಕಷ್ಟು ಬೆಳಕು ಕಂಡಿವೆ. ಈ ಕೊಂಡಿಗೆ ಮತ್ತೊಂದು ಲೇಖನದ ಸೇರ್ಪಡೆ ಮಾಡದೆ ಮೂಲ ವಿಷಯವಾದ ಅಸಹಿಷ್ಣುತೆ ಎಂದರೇನು ಎಂಬ ಕುರಿತು ಇಲ್ಲಿ ತಡಕಾಡಿರುವೆ.
     ಅಸಹಿಷ್ಣುತೆ ಕುರಿತು ಮಾತನಾಡುವ ಮುನ್ನ ಸಹಿಷ್ಣುತೆಯ ಬಗ್ಗೆ ತಿಳಿದುಕೊಳ್ಳಬೇಕು. ಸಹಿಸಿಕೊಳ್ಳಲಾಗದಿದ್ದಾಗ ಅಸಹನೆ ಜನಿಸುತ್ತದೆ. ಸಹನೆ ಸಜ್ಜನರ ಆಸ್ತಿ ಮತ್ತು ಅವರ ಆಯುಧವೂ ಕೂಡಾ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ. ಸಮಾಜದ ಹಿತಕ್ಕೆ ಇದು ಅಗತ್ಯವಾದುದಾಗಿದೆ.
     ಅಸಹನೆ ದುರ್ಬಲತೆಯ ದ್ಯೋತಕ ಮತ್ತು ಇತರರಿಗಿಂತ ಕೀಳು ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಅಸಹಿಷ್ಣುಗಳು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಒತ್ತಡವನ್ನು ಸಹಿಸರು. ತಾಳ್ಮೆ ಕಳೆದುಕೊಂಡು ಉದ್ರಿಕ್ತರಾಗುತ್ತಾರೆ, ವಿವೇಕ ಮರೆಯಾಗಿ ತಮ್ಮ ಒಳಗಿನ ಅಸಹನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಗೆಡವುತ್ತಾರೆ ಮತ್ತು ಇದರಿಂದಾಗಿ ಇತರರ ಎದುರಿಗೆ ಹಗುರವಾಗಿಬಿಡುತ್ತಾರೆ. ವಿಚಿತ್ರವೆಂದರೆ ಅಸಹಿಷ್ಣುಗಳು ಮತ್ತು ಸಣ್ಣ ಮನಸ್ಸಿನ ವ್ಯಕ್ತಿಗಳೇ ತಮ್ಮ ಸಹನಾಶೀಲತೆ ಮತ್ತು ವಿಶಾಲ ಮನೋಭಾವದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ! ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದವರೊಬ್ಬರು ನೆರೆಯ ಶತ್ರುದೇಶಕ್ಕೆ ಹೋಗಿ ಅಲ್ಲಿನ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ನಾಚಿಕೆಯಿಲ್ಲದೆ ಹೇಳಿಬಿಡುತ್ತಾರೆ. ಇದು ಅವರ ಅಧಿಕಾರದ ಹಪಾಹಪಿ ಮತ್ತು ಅಸಹಿಷ್ಣುತೆ ಪರಾಕಾಷ್ಠೆಯ ಮಟ್ಟ ತಲುಪಿರುವುದನ್ನು ತೋರಿಸುತ್ತದೆ. ಸ್ವಂತ ದೇಶದ ಜನರಿಂದ ಚುನಾಯಿತವಾದ ಸರ್ಕಾರದ ಪದಚ್ಯುತಿಗೆ ಶತ್ರುದೇಶದ ಸಹಾಯ ಬಯಸುವ ಮನಸ್ಥಿತಿಯಿಂದ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆಂದೂ ಅವರಿಗೆ ಅನ್ನಿಸದು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಅಸಹಿಷ್ಣುತೆ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳ್ಳಬೇಕಿದೆ. ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾವು ಮೂರ್ಖರೇ ಸರಿ.
     ಮತೀಯ ಅಥವ ಧಾರ್ಮಿಕ ಅಸಹಿಷ್ಣುತೆ ಇಂದು ಜಾಗತಿಕ ಭಯೋತ್ಪಾದನೆಯ ರೂಪದಲ್ಲಿ ಕಾಡುತ್ತಿದೆ. ಧರ್ಮ ಅಥವ ಮತದ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಎಳೆಯ ಕಂದಮ್ಮಗಳನ್ನೂ ನಿರ್ದಯದಿಂದ ಹೊಸಕಿಹಾಕುತ್ತಿರುವ ವಿಡಿಯೋಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತವೆ. ಅದನ್ನು ಬೆಂಬಲಿಸುವ ವಿಕೃತರ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಉಗ್ರರು ಯಾವಾಗ ಎಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಜ್ಞಾವಂತರ ಆತಂಕವಾಗಿದೆ. ೪೦ ದೇಶಗಳಿಂದ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಸರಬರಾಜಾಗುತ್ತಿದೆಯಂತೆ. ನಮ್ಮ ದೇಶದಲ್ಲೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವ, ಸಹಾಯ ಮಾಡುವ ಜನರಿಗೆ ಕೊರತೆಯಿಲ್ಲ. ವಿವಿಧ ರಾಜಕೀಯ ಪಕ್ಷಗಳೂ ವೋಟಿನ ಸಲುವಾಗಿ ಮಾಡುವ ಮತೀಯ ಓಲೈಕೆ ಭಯೋತ್ಪಾದನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಜನನಾಯಕರುಗಳಿಗೆ ದೇಶ ಮತ್ತು ಜನಸಾಮಾನ್ಯರ ಹಿತ ಮುಖ್ಯವೆನ್ನುವ ಪರಿಸ್ಥಿತಿ ಬಂದರೆ ಮಾತ್ರ ಸುಧಾರಣೆ ಕಾಣಬಹುದು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ರಾಜಕಾರಣಿಗಳೇ ಇಂದು ಹೆಚ್ಚಾಗಿರುವುದು ಸುಳ್ಳಲ್ಲ. ಸಹಿಷ್ಣುತೆ ಒಮ್ಮುಖದ ದಾರಿಯಾದರೆ ಅದು ಸಾಂಸ್ಕೃತಿಕ ಆತ್ಮಹತ್ಯೆಯಾಗುತ್ತದೆ. ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳನ್ನು ಟೀಕಿಸಿದರೆ ಸಹಿಸಿಕೊಳ್ಳಬೇಕು ಎಂದು ಬಯಸುವವರು ಇದೇ ನೀತಿಯನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಅನ್ವಯಿಸುವರೇ ಎಂದರೆ ಅದಕ್ಕೆ ಉತ್ತರ ಸಿಗದು. ಇಂತಹ ತಾರತಮ್ಯವೂ ಅಸಹಿಷ್ಣುತೆಗೆ ಪ್ರಚೋದನೆಯಾಗುತ್ತದೆ.
     ಜಾತಿ ಆಧಾರಿತ ರಾಜಕೀಯ ಸಂವಿಧಾನದ ಜಾತ್ಯಾತೀತತೆಗೆ ಕೊಡಲಿಪೆಟ್ಟು ಹಾಕುತ್ತಿದೆ. ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನು ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಇದನ್ನು ರಾಜಕೀಯ ಅಧಿಕಾರ ಗಳಿಕೆಗೆ ಬಳಸುವ ರಾಜಕಾರಣಿಗಳು ಜಾತೀಯತೆಯನ್ನು ಪೋಷಿಸುತ್ತಿವೆ. ಪ್ರತಿಭಾ ಪಲಾಯನ, ಜಾತಿ-ಜಾತಿಗಳಲ್ಲಿ ವೈಮನಸ್ಯ, ಸಂಘರ್ಷಗಳು, ಅಸಹಿಷ್ಣುತೆ ಈ ಜಾತಿ ರಾಜಕೀಯದ ಫಲಗಳಾಗಿವೆ. ಸಹಿಷ್ಣುತೆ ಭಾರತೀಯರ ರಕ್ತದಲ್ಲಿ ಬಂದ ಗುಣವಾಗಿದೆ. ಅದನ್ನು ಕುಟಿಲ ರಾಜಕಾರಣಿಗಳು, ಅವಕಾಶವಾದಿ ಸಾಹಿತಿಗಳು, ಕಲಾವಿದರುಗಳು ಹಾಳು ಮಾಡದಿರುವಂತೆ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ, ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿರುವ ದೇಶಗಳಲ್ಲಿ, ಇಸ್ಲಾಮ್ ಧರ್ಮೀಯ ರಾಷ್ಟ್ರಗಳಲ್ಲಿ ಭಿನ್ನ ವಿಚಾರಗಳನ್ನು ಹೊಂದಿರುವವರನ್ನು ಹಿಂಸಿಸಲಾಗುತ್ತ್ತದೆ, ಬಲವಂತವಾಗಿ ವಿರುದ್ಧ ವಿಚಾರ ಒಪ್ಪುವಂತೆ ಮಾಡಲಾಗುತ್ತದೆ, ಗಡೀಪಾರು ಮಾಡಲಾಗುತ್ತದೆ, ಅವಮಾನಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂಬುದಕ್ಕೆ ಹೇರಳ ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಭಾರತದ ಉದಾತ್ತತೆಯಾದ ಸಹಿಷ್ಣುತಾ ಗುಣವನ್ನು ಗುರುತಿಸೋಣ, ಗೌರವಿಸೋಣ, ಉಳಿಸೋಣ.
ಸಹಿಷ್ಣುತೆಯೆಂದರೆ ನೀವು ನಿಮಗೆ ಏನು ಬೇಕೆನ್ನುತ್ತೀರೋ, ಯಾವ ಹಕ್ಕು ಇರಬೇಕೆನ್ನುತ್ತೀರೋ ಅವು ಇತರರಿಗೂ ಇರಬೇಕೆನ್ನುವುದು! ನಿಮಗೆ ಮಾತ್ರ ಇರಲಿ ಇತರರಿಗೆ ಬೇಡ ಅನ್ನುವುದೇ ಅಸಹಿಷ್ಣುತೆ!
-ಕ.ವೆಂ.ನಾಗರಾಜ್.
***************
ದಿನಾಂಕ 27.04.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಜುಲೈ 16, 2016

ಅನ್ಯಾಯವನ್ನು ಸಹಿಸದಿರೋಣ


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     'ಎಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ!
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಈ ಜಗತ್ತು ಭಿನ್ನತೆಗಳ ಗೂಡು. ಭಿನ್ನತೆಯಿಂದಲೇ ಜಗತ್ತು ನಡೆಯಲು ಸಾಧ್ಯ. ಎಲ್ಲರೂ ಬುದ್ಧಿವಂತರು, ಜ್ಞಾನವಂತರಾಗಬೇಕು ಎಂದು ಬಯಸಿದರೂ ಅದು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿರುತ್ತಾರೆಯೇ? ಎಲ್ಲರೂ ಶಕ್ತಿವಂತರಾಗಿರುತ್ತಾರೆಯೇ? ಎಲ್ಲರೂ ವ್ಯಾಪಾರಿಗಳಾಗಲು ಸಾಧ್ಯವೇ? ಎಲ್ಲರೂ ಧೃಢಕಾಯರಾಗಿರುವ ಯೋಧರಾಗಬೇಕೆಂದು ಇಷ್ಟಪಟ್ಟರೂ ಆಗುತ್ತದೆಯೇ? ಹೀಗಿರುವಾಗ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಪರಸ್ಪರ ಪೂರಕರಾಗಿ ಕೆಲಸ ಮಾಡಿದರೆ ದೇಶಕ್ಕೆ ಒಳಿತಲ್ಲವೇ? ಇವರೆಲ್ಲರನ್ನೂ ಸಮನ್ವಯದಿಂದ ಕರೆದೊಯ್ಯಬಲ್ಲ ಆಡಳಿತವೇ ಉತ್ತಮ ಆಡಳಿತವೆನಿಸಿಕೊಳ್ಳುತ್ತದೆ. ಸ್ವಾರ್ಥಕ್ಕಾಗಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದರೆ ಅಥವ ಅಂತಹವರೇ ಆಡಳಿತಗಾರರಿಗೆ ಸಲಹೆ ಕೊಡುವವರಾದರೆ ದೇಶ ಅಧಃಪತನದ ಹಾದಿ ಹಿಡಿದಂತೆಯೇ! ಆಡಳಿತ ಮಾಡುವ ಸ್ಥಾನದಲ್ಲಿರುವವರು ತಾವು ಪ್ರತಿನಿಧಿಸುವ ಸಮೂಹದ ಅಥವ ಜನಾಂಗದ ಅಥವ ತಮ್ಮನ್ನು ಬೆಂಬಲಿಸುವವರ ಹಿತವನ್ನು ಮಾತ್ರ ಪ್ರಧಾನವಾಗಿರಿಸಿಕೊಂಡರೆ ಉಳಿದವರು ಸಹಜವಾಗಿ ಅಸಂತುಷ್ಟರಾಗುತ್ತಾರೆ. ಶಾಸನಾಧೀಶರು ಇಡೀ ಸಮಾಜದ ಹಿತವನ್ನು ಸಮಾನವಾಗಿ ನೋಡುವವರಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ದ್ವನಿಯೆತ್ತಿದಾಗ ದೇಶದ ವಿದ್ವಜ್ಜನರು ಮತ್ತು ಪ್ರಚಂಡ ಯುವಶಕ್ತಿ ಅವರ ಬೆನ್ನಿಗೆ ನಿಂತಿತ್ತು. ದೇಶದಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆಂದು ಬಹುಜನರು ನಿರೀಕ್ಷಿಸಿದ್ದರು. ಆದರೆ ಆಡಳಿತಶಾಹಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ಚಳುವಳಿಯನ್ನು ಹತ್ತಿಕ್ಕಿಬಿಟ್ಟಿತು. ಅದರ ಪರಿಣಾಮವನ್ನು ಆಡಳಿತ ಪಕ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಸೋಲುವ ಮೂಲಕ ಅನುಭವಿಸಿತು.
     ಅಧಿಕಾರದ ಬಲದಿಂದ ಬಹುಜನರ ಅಭಿಪ್ರಾಯಗಳನ್ನು ಮೀರಿ ನಡೆದುಕೊಳ್ಳುವ ನಡವಳಿಕೆಗಳನ್ನು ಆಡಳಿತಗಾರರಲ್ಲಿ ಕಾಣುತ್ತಿದ್ದೇವೆ. ಭ್ರಷ್ಠಾಚಾರದ ಆರೋಪಗಳನ್ನು ಹೊತ್ತ ಮಂತ್ರಿಗಳು, ಶಾಸಕರನ್ನು ರಾಜಾರೋಷಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಎಲ್ಲರನ್ನೂ ಸಮನಾಗಿ ಕಾಣಬೇಕಾದ ಕಾನೂನುಗಳನ್ನು ಸರ್ಕಾರದ ಕ್ರಮಗಳನ್ನು ಒಪ್ಪದವರ ವಿರುದ್ಧ ಕಠಿಣವಾಗಿ ಬಳಸುವುದನ್ನು ಮತ್ತು ಸಮರ್ಥಕರ ಅಪರಾಧಗಳನ್ನು ಕಾಣದಂತಿರುವುದು ಅಥವ ಮುಚ್ಚಿ ಹಾಕುವ ಪ್ರಯತ್ನಗಳನ್ನು ಎಗ್ಗಿಲ್ಲದೆ ಮಾಡುವುದನ್ನು ಕಾಣುತ್ತಿದ್ದೇವೆ. ಭ್ರಷ್ಠಾಚಾರ ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಠಾಚಾರದ ಕೂಪವಾಗುವುದಕ್ಕೆ ಆಡಳಿತದಲ್ಲಿರುವವರು ಸಹಕಾರಿಗಳಲ್ಲವೆಂದು ಹೇಳಲಾಗುವುದಿಲ್ಲ. ತನಿಖಾ ಸಂಸ್ಥೆಗಳು, ಆಯೋಗಗಳು ಆಡಳಿತದ ಮರ್ಜಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡೂ ಕಾಣದಂತೆ ಇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಗೆ ಆಡಳಿತಗಾರರಿಗೆ ಸಲಹೆ ಕೊಡುವವರ, ಅವರ ಬೆನ್ನಿಗೆ ನಿಂತಿರುವ ಸ್ವಹಿತಾಸಕ್ತಿ ಪ್ರಧಾನ ಶಕ್ತಿಗಳ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿವೆ. ಇಂದು ಅಸಹನೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಅಸಹನೆ ಅನ್ನುವುದು ಒಮ್ಮುಖವಾಗಿಲ್ಲ ಎಂಬುದನ್ನು ಅಸಹನೆಯನ್ನು ದಾಳವಾಗಿ ಬಳಸುತ್ತಿರುವವರ ವಿರುದ್ಧದ ಅಸಹನೆಯೂ ಪ್ರಖರವಾಗಿರುವುದು ತೋರಿಸುತ್ತಿದೆ.
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಇಂದು ಅಂತರ್ಜಾಲ ತಾಣಗಳು ಪ್ರಭಾವಿಯಾಗಿವೆ. ಸಮಯಸಾಧಕರ ಬಂಡವಾಳಗಳು ಬಯಲಾಗುತ್ತಿವೆ. ಇದರ ಮುಂದೆ ಎಷ್ಟೋ ಸಲ ಮಾಧ್ಯಮಗಳೂ ಮಂಕಾಗಿವೆ. ನಮ್ಮ ಗೋಳು ಕೇಳುವವರಾರು ಎಂದು ಹತಾಶೆಗೊಳ್ಳುತ್ತಿದ್ದ ಸ್ಥಿತಿ ಈಗ ಬದಲಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.
***************
ದಿನಾಂಕ 20.04.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜುಲೈ 11, 2016

ಸಾಧಕನ ದಾರಿ - 2


ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು". ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ ||
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ.
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ? ಎಂಬ ಪ್ರಶ್ನೆ ಮೂಡುತ್ತದೆ. ಹೌದು, ಇನ್ನೂ ಇದೆ ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು ತಾನೇ ಸರಿ, ತನ್ನದೇ ಸರಿ ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ ಕೇಳುವ ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ ಪೂಜ್ಯರುಗಳನ್ನು ಹೊರಗೆ ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಮಾಡುವ ಸಾಧನೆಯೇ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 13-04-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜುಲೈ 8, 2016

ಸಾಧಕನ ದಾರಿ - 1


ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ ||
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧsಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ, ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ! ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ.
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
-ಕ.ವೆಂ.ನಾಗರಾಜ್.
*****************
ದಿನಾಂಕ 06-04-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಜುಲೈ 2, 2016

ತಪ್ಪು ಯಾರದು?


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು, ಅವನು ಶ್ರೀರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ, ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಅಂಶವೆಂದರೆ ತಪ್ಪು ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ನಿಜವಾಗಿಯೂ ಹಾಳಾಗುತ್ತಾರೆಯೇ? ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರುತ್ತದೆ. ಒಂದು ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ ಆದರೂ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು.
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಿಜವಾದ ದೋಷ ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ ಒಳಗೆ ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ?
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುತ್ತೇವೆ. ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ? ಅಂದರೆ ಸಿಗಬಹುದಾದ ಉತ್ತರ, ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಎಂಬುದೇ. ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ. ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಪ್ರಯತ್ನ ಮಾಡೋಣ.
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 30.03.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜೂನ್ 29, 2016

ಪುರೋಹಿತರಾಗೋಣ!


     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ ಪುರೋಹಿತಶಾಹಿ ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ ಪುರೋಹಿತ ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ ಪುರಸ್ ಎಂದರೆ ಮುಂದೆ ಹಿತ ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ. 
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?
ಮಾಧವ ಉತ್ತರಿಸಿದ್ದ: ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ.  
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ. 
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ! ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು! 
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ ಸ್ತೇಯ(ಕಳ್ಳತನ)ವೆನಿಸುತ್ತದೆ. ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 23.03.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜೂನ್ 23, 2016

ಕ್ಷಮಿಸಿ ಮರೆಯೋಣ


     ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಹಾಗೂ ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿದ್ದಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. ಲೋಕೋ ಭಿನ್ನರುಚಿಃ ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹದಿನೈದು ವರ್ಷಗಳ ಹಿಂದಿನ ಪ್ರಸಂಗವಿದು. ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲಿಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪಿ ಜಮೀನಿನ ಮೇಲಿನ ಹಕ್ಕು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ಕಣ್ಣೀರಿಡುತ್ತಾ ಕೃತಜ್ಞತೆ ವ್ಯಕ್ತಪಡಿಸಿದ್ದಳು. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಚರ್ಚಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಿರಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ, ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ.
      ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡದಿರವುದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರುವುದು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸದಿರುವುದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳುವುದು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡದಿರುವುದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರುವುದು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     ಬಾಳು, ಬಾಳಗೊಡು ಎಂದ ಮಹಾವೀರ, ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು ಎಂದ ಏಸುಕ್ರಿಸ್ತ, ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ ಎಂದ ಬಸವಣ್ಣ,  ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ. ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
     ಇತರರಿಗೆ ಒಳಿತು ಮಾಡುವುದೇ ಧರ್ಮ; ಇತರರನ್ನು ಘಾಸಿಗೊಳಿಸುವುದು ಅಧರ್ಮ. ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ.  ಎಂತಹ ಸತ್ವಯುತವಾದ, ಸತ್ಯವಾದ ಮಾತಿದು! 
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು||
ಗಡಿಬಿಡಿಯಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||
 -ಕ.ವೆಂ. ನಾಗರಾಜ್.
***************
ದಿನಾಂಕ 16.03.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ [ಪ್ರಕಟಿತ:

ಶನಿವಾರ, ಜೂನ್ 18, 2016

ಉದಾತ್ತ ವಿಚಾರದ ಬಲಿವೈಶ್ವದೇವಯಜ್ಞ


ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
     ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ ಮಾಡುತ್ತಿರಲಿಲ್ಲ. ಯಾರೂ ಬರದಿದ್ದರೆ ಯಜಮಾನನೇ ಅಂತಹವರನ್ನು ಹುಡುಕಿಕೊಂಡು ಹೋಗುತ್ತಿದ್ದುದೂ ಉಂಟು. ಅನ್ನ ಮತ್ತು ವಿದ್ಯೆಗಳನ್ನು ಮಾರಾಟ ಮಾಡಬಾರದೆಂಬುದು ಅಂದು ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವಾಗಿತ್ತು. ಆಹಾರ ಮತ್ತು ಶಿಕ್ಷಣ ವ್ಯಾಪಾರದ ಸರಕಾಗಿರುವ ಇಂದಿನ ಕಾಲದಲ್ಲಿ ಇಂತಹ ಆಚಾರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ.
     ಯಜ್ಞ ಎಂದಾಕ್ಷಣ ಹೋಮಕುಂಡದ ಮುಂದೆ ಕುಳಿತು ಮಂತ್ರ ಪಠಿಸುತ್ತಾ ಹವನ, ಹೋಮಗಳನ್ನು ನಡೆಸುವುದು ಮಾತ್ರ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೆಲ್ಲಾ ಶ್ರೇಷ್ಠತಮವಾದ ಕಾರ್ಯಗಳೋ ಅವೆಲ್ಲವೂ ಯಜ್ಞವಾಗುತ್ತದೆ. ಬ್ರಹ್ಮಯಜ್ಞ (ಸಂಧ್ಯಾಕಾಲದಲ್ಲಿ, ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮಾಡುವ ಸಂಧ್ಯಾವಂದನೆ), ದೇವಯಜ್ಞ (ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಜಲ, ಅಗ್ನಿಗಳ ಸಂರಕ್ಷಣೆ, ಪೋಷಣೆಯ ಸಂಕಲ್ಪದೊಡನೆ ಮಾಡುವ ಪರಮಾತ್ಮನ ಸ್ತುತಿ), ಪಿತೃಯಜ್ಞ (ಹಿರಿಯರು ಸತ್ತ ನಂತರ ಮಾಡುವ ಶ್ರಾದ್ಧಕಾರ್ಯಗಳಾಗಿರದೆ ಅವರು ಬದುಕಿರುವಾಗ ಅವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು), ಬಲಿವೈಶ್ವದೇವಯಜ್ಞ (ಮುಂದೆ ವಿವರಿಸಿದೆ) ಮತ್ತು ಅತಿಥಿ ಯಜ್ಞ (ಆಕಸ್ಮಿಕವಾಗಿ ಆಗಮಿಸುವ ಸಜ್ಜನರು, ಸಾಧು-ಸಂತರು, ವಿದ್ವಜ್ಜನರು, ಹಿರಿಯರು ಮುಂತಾದವರನ್ನು ಯಥೋಚಿತವಾಗಿ ಸತ್ಕರಿಸುವುದು) ಇವುಗಳನ್ನು ಪಂಚಮಹಾಯಜ್ಞಗಳೆಂದು ಹೆಸರಿಸಲಾಗಿದೆ.
     ಪಂಚಮಹಾಯಜ್ಞಗಳಲ್ಲಿ ನಾಲ್ಕನೆಯದಾದ ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ, ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಶಕ್ತಿಮೂಲವಾದ ಆಹಾರದ ಕಣಗಳು ಅಗ್ನಿಯಲ್ಲಿ ವಿಭಜಿತವಾಗಿ ವಾತಾವರಣದಲ್ಲಿ ಹರಡಿ ಸೇವಿಸುವವರಿಗೆ ಶಕ್ತಿಯನ್ನು ಉತ್ತೇಜಿಸುತ್ತವೆಯೆನ್ನಲಾಗಿದೆ. ಆ ಸಂದರ್ಭದಲ್ಲಿ ಹೇಳಲಾಗುವ ೧೦ ಮಂತ್ರಗಳು:
     ಓಂ ಅಗ್ನಯೇ ಸ್ವಾಹಾ|| ಓಂ ಸೋಮಾಯ ಸ್ವಾಹಾ|| ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ|| ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ|| ಓಂ ಧನ್ವಂತರಯೇ ಸ್ವಾಹಾ|| ಓಂ ಕುಹ್ವೈ ಸ್ವಾಹಾ|| ಓಂ ಅನುಮತ್ಯೈ ಸ್ವಾಹಾ|| ಓಂ ಪ್ರಜಾಪತಯೇ ಸ್ವಾಹಾ|| ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ|| ಓಂ ಸ್ವಿಷ್ಟಕೃತೇ ಸ್ವಾಹಾ||
     ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ| ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ.
     ನೋಡುವ ಕಣ್ಣುಗಳಿದ್ದರೆ ನಮಗೆ ಬಲಿವೈಶ್ವದೇವ ಯಜ್ಞದ ಉದ್ದೇಶವನ್ನು ಬದುಕಿನ ಅಂಗವಾಗಿಸಿಕೊಂಡ ಹಲವಾರು ಮಹನೀಯರು ಕಂಡುಬರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದ ಪಾಲಂ ಕಲ್ಯಾಣಸುಂದರಮ್ ತಮ್ಮ 30 ವರ್ಷಗಳ ಸೇವೆಯಲ್ಲಿ ಪಡೆದ ಸಂಬಳದ ಹಣವನ್ನು ಪೂರ್ಣವಾಗಿ ಬಡಬಗ್ಗರ ಸೇವೆಗಾಗಿ ವಿನಿಯೋಗಿಸಿದವರು. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಅಗತ್ಯಗಳಿಗಾಗಿ ಹೋಟೆಲ್ ಮಾಣಿಯಂತಹ ಕೆಲಸಗಳನ್ನೂ ಮಾಡಿದವರು. ಪೆನ್ಶನ್ ಮತ್ತು ನಿವೃತ್ತಿ ಸಂಬಂಧವಾಗಿ ಬಂದ ಸುಮಾರು 10 ಲಕ್ಷ ರೂಗಳನ್ನೂ ಜಿಲ್ಲಾಧಿಕಾರಿಯವರ ನಿಧಿಗೆ ಕೊಟ್ಟು ನಿರಾಳರಾದವರು. ವಿಶ್ವಸಂಸ್ಥೆ ಇವರನ್ನು 20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು ಎಂದು,  ಅಮೆರಿಕಾದ ಒಂದು ಸಂಸ್ಥೆ ಸಹಸ್ರಮಾನದ ಪುರುಷ,  ಭಾರತ ಸರ್ಕಾರ 1990ರಲ್ಲಿ ಭಾರತದ ಅತ್ಯುತ್ತಮ ಗ್ರಂಥಪಾಲಕರೆಂದು ಇವರನ್ನು ಸನ್ಮಾನಿಸಿದೆ. ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು ಎಂದು ಗುರುತಿಸಲ್ಪಟ್ಟವರಿವರು. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು ಪ್ರಪಂಚದ ಅತ್ಯುನ್ನತ (Noble) ಉದಾತ್ತರಲ್ಲೊಬ್ಬರು ಎಂದು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ 2011ರಲ್ಲಿ ಇವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಸಹಸ್ರಮಾನದ ವ್ಯಕ್ತಿ ಎಂದು ಗೌರವಿಸಿದಾಗ ಇವರಿಗೆ ಕೊಡಲಾಗಿದ್ದ 30 ಕೋಟಿ ರೂ.ಗಳನ್ನೂ ಬಿಡಿಗಾಸೂ ಇಟ್ಟುಕೊಳ್ಳದೆ ಸಮಾಜಕ್ಕೇ ಧಾರೆ ಎರೆದುಬಿಟ್ಟ ಪುಣ್ಯಾತ್ಮ ಇವರು. ಯಾರು ಯಾರನ್ನೋ ಹೀರೋಗಳು ಎಂದು ಭಾವಿಸುವ ನಮಗೆ ಕಲ್ಯಾಣಸುಂದರಮ್‌ರಂತಹವರು ಹೀರೋಗಳಾಗಬೇಕು.
-ಕ.ವೆಂ.ನಾಗರಾಜ್.
**************
ದಿನಾಂಕ 09-03-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: