ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜನವರಿ 29, 2015

ಸಾಮರಸ್ಯದ ಕೊಂಡಿಗಳಾಗೋಣ


     ಲಭ್ಯ ಸಾಹಿತ್ಯಗಳಲ್ಲಿ ಅತಿ ಪುರಾತನವೆಂದು ಪರಿಗಣಿಸಲ್ಪಟ್ಟಿರುವ ವೇದಗಳಲ್ಲಿ ಒಟ್ಟು 20,379 ಮಂತ್ರಗಳಿವೆಯೆಂದು ಹೇಳಲಾಗಿದೆ. ಋಗ್ವೇದ ಸಂಹಿತೆಯಲ್ಲಿ 10,552 ಮಂತ್ರಗಳು, ಯಜುರ್ವೇದ ಸಂಹಿತೆಯಲ್ಲಿ 1,975 ಮಂತ್ರಗಳು, ಸಾಮವೇದ ಸಂಹಿತೆಯಲ್ಲಿ 1,875 ಮಂತ್ರಗಳು ಮತ್ತು ಅಥರ್ವವೇದ ಸಂಹಿತೆಯಲ್ಲಿ 5,977 ಮಂತ್ರಗಳಿವೆ. ನಂತರದಲ್ಲಿ ರಚಿತಗೊಂಡ ಪುರಾಣಗಳು, ಪುಣ್ಯ ಕಥೆಗಳು, ರಾಮಾಯಣ, ಮಹಾಭಾರತಗಳನ್ನು ವೇದ ಸಾಹಿತ್ಯದೊಡನೆ ಥಳುಕು ಹಾಕಿ ಚರ್ಚೆ, ವಿಮರ್ಶೆ ಮಾಡುವುದು ಸೂಕ್ತವಾಗಲಾರದು. ಅವುಗಳಿಗೆ ವೇದವೇ ಆಧಾರವೆನಿಸಿದರೂ, ಅವುಗಳಲ್ಲಿ ಕಂಡು ಬರುವ ಎಲ್ಲಾ ಸಂಗತಿಗಳೂ ವೇದದ ಆಶಯವೇ ಆಗಿವೆ ಎನ್ನಲಾಗದು. ವೇದದ 20,379 ಮಂತ್ರಗಳಲ್ಲಿ ಎಲ್ಲಿಯೂ, ಹುಟ್ಟಿನಿಂದ ಬರುವ ಜಾತಿಯ ಕುರಿತು ಉಲ್ಲೇಖಗಳು, ಪ್ರಮಾಣಗಳು ಕಾಣಲಾರದು. ಮಂತ್ರಗಳಲ್ಲಿ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯ, ದಾಸ, ದಸ್ಯು ಇಂತಹ ಪದಗಳ ಬಳಕೆಯಾಗಿರುವುದು ಕಂಡು ಬಂದರೂ ಅವು ಹುಟ್ಟಿನಿಂದ ಬಂದ ಜಾತಿ ಸೂಚಕ ಪದಗಳಾಗಿವೆಯೆಂದು ಹೇಳಲಾಗುವುದಿಲ್ಲ. ನಮ್ಮ ಕಲ್ಪನೆಗೆ ಮೀರಿದ ಹಿಂದಿನ ಯಾವುದೋ ಒಂದು ಕಾಲಘಟ್ಟದಲ್ಲಿ ವರ್ಣ ವ್ಯವಸ್ಥೆ ವಿರೂಪಗೊಂಡು ಪ್ರಚಲಿತ ಜಾತಿ ಪದ್ಧತಿ ಮೈತಳೆದು ಬಂದಿರಬಹುದು. ವೇದಸಾಹಿತ್ಯದ ಮೂಲಪುರುಷನೆಂದು, ಗುರುಗಳ ಗುರುವೆಂದು ಕರೆಯಲ್ಪಡುವ ವ್ಯಾಸ ಮಹರ್ಷಿಯೇ ಹುಟ್ಟಿನಿಂದ ಬ್ರಾಹ್ಮಣನಲ್ಲ, ಅದು ಗಳಿಸಿದ ಬ್ರಾಹ್ಮಣಿಕೆ. ಸಪ್ತರ್ಷಿಗಳೂ  ಸಹ ಹುಟ್ಟಿನ ಬ್ರಾಹ್ಮಣರಲ್ಲವೆಂಬುದು ವಿಶೇಷ. ಇವಲ್ಲದೆ ಇಂತಹ ಅನೇಕಾನೇಕ ದೃಷ್ಟಾಂತಗಳು ಕಾಣಸಿಗುತ್ತವೆ.  'ಶಾಸ್ತ್ರಾದ್ರೂಢಿರ್ಬಲೀಯಸಿ' ಎಂಬ ಮಾತು ಸತ್ಯ. ಶಾಸ್ತ್ರಗಳಿಗಿಂತ ರೂಢಿಗತ ಸಂಪ್ರದಾಯ ಹೆಚ್ಚು ಬಲಶಾಲಿಯಂತೆ. ಇಂತಹ ರೂಢಿಗತವಾಗಿ ಬಂದ ಜಾತಿ ಪದ್ಧತಿ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಇತರ ಧರ್ಮಗಳಲ್ಲೂ ಇವು ಪ್ರಚಲಿತವಿವೆ. ರೂಢಿಗತವಾಗಿ ಬಂದ ಸಂಪ್ರದಾಯಗಳನ್ನೇ ಧರ್ಮವೆನ್ನುತ್ತಾ, ಅದಕ್ಕೆ ಪೋಷಕ ಅಂಶಗಳನ್ನು ಸೇರಿಸುತ್ತಾ ಬಂದ ಸಂಪ್ರದಾಯವಾದಿಗಳು ಈ ಸ್ಥಿತಿಗೆ ಕಾರಣವೆಂದರೆ ತಪ್ಪಾಗಲಾರದು. ಹೊಸ ಹೊಸ ಸಂಪ್ರದಾಯಗಳು ದಿನೇ ದಿನೇ ಜಾರಿಗೆ ಬರುತ್ತಲೇ ಇವೆ, ಪ್ರಬಲವಾಗುತ್ತಲೂ ಇವೆ. ಪ್ರತಿ ತಿಂಗಳ ಚತುರ್ಥಿ ದಿನದಂದು ಮಾಡಲಾಗುತ್ತಿರುವ ಸಂಕಷ್ಟಹರ ಗಣಪತಿ ಪೂಜೆ ಇದಕ್ಕೆ ತಾಜಾ ಉದಾಹರಣೆ. ಈ ಸಂಪ್ರದಾಯ ಆರಂಭವಾದ ನಂತರದಲ್ಲಿ ಅನೇಕ ಸಂಕಷ್ಟಹರ ಗಣಪತಿ ದೇವಾಲಯಗಳು ನಿರ್ಮಾಣಗೊಂಡಿವೆ/ಗೊಳ್ಳುತ್ತಿವೆ. ಒಬ್ಬೊಬ್ಬ ದೇವಮಾನವರು/ದೇವಮಾನವರೆನಿಸಿಕೊಂಡವರು  ಪ್ರಬುದ್ಧಮಾನಕ್ಕೆ ಬರುತ್ತಿದ್ದಂತೆ ಅವರ ವಿಚಾರಗಳಿಗನುಗುಣವಾಗಿ ಹೊಸ ಹೊಸ  ಸಂಪ್ರದಾಯಗಳು, ಹೊಸ ಹೊಸ ಜಾತಿಗಳು, ಹೊಸ ಹೊಸ ದೇವಾಲಯಗಳು ಹುಟ್ಟಿವೆ, ಹುಟ್ಟುತ್ತಲಿವೆ, ಮುಂದೆಯೂ ಹುಟ್ಟುತ್ತವೆ. ಇವು ಎಲ್ಲಾ ಮತ/ಧರ್ಮಗಳಿಗೂ ಅನ್ವಯಿಸುವ ವಿಚಾರ. ಸಮಾಜ ಸುಧಾರಣೆಯ ದೃಷ್ಟಿಯಿಂದ ಹೊಸ ಸಂಪ್ರದಾಯಗಳು, ಜಾತಿಗಳು ಜನಿಸಿದರೂ, ಅನುಸರಿಸುವವರು ವಿಚಾರಕ್ಕೆ ಪ್ರಾಧಾನ್ಯತೆ ಕೊಡದೆ ಕೇವಲ ಆಚಾರಕ್ಕೆ ಪ್ರಾಧಾನ್ಯತೆ ಕೊಡುವ ಪರಿಸ್ಥಿತಿ ಇರುವವರೆಗೂ ಸುಧಾರಣೆ ಕನಸಿನ ಮಾತಾಗಿ ಉಳಿಯುತ್ತದೆ. 
      ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವವರಾದರೆ, ನಡೆಯುವುದಾದರೆ ಈ ಜಗತ್ತು ನಡೆಯುವುದಾದರೂ ಹೇಗೆ? ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪಲೇಬೇಕೆಂದಿಲ್ಲ. ಅವರವರ ವಿಚಾರ ಅವರಿಗಿರಲಿ. ನನ್ನ ವಿಚಾರವೇ ಸರಿ, ಅದನ್ನು ಎಲ್ಲರೂ ಒಪ್ಪಲೇಬೇಕೆಂಬ ಆಗ್ರಹ ಮಾತ್ರ ಸರಿಯೆನಿಸುವುದಿಲ್ಲ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ. ಎರಡು ಮುಖಗಳೂ ವಿರುದ್ಧ ದಿಕ್ಕಿನಲ್ಲಿದ್ದರೂ ಪರಸ್ಪರ ಪೂರಕವಾಗಿರುತ್ತವೆ.  ದೂಷಿಸುವವರು ಮತ್ತು ದೂಷಿಸಲ್ಪಡುವವರ ನಡುವಣ ಸಮನ್ವಯದ ಕೊಂಡಿಗಳಾಗೋಣ. ಇದು ಬಹಳ ಕಷ್ಟದ ಕೆಲಸ, ಧೈರ್ಯವೂ ಇರಬೇಕು. ಏಕೆಂದರೆ ಇಂತಹವರು ಎರಡೂ ಕಡೆಗಳಿಂದ ಪೆಟ್ಟು ತಿನ್ನುತ್ತಾರೆ, ದೂಷಣೆಗೊಳಗಾಗುತ್ತಾರೆ. ಆದರೆ ಒಂದೊಮ್ಮೆ ಇಂತಹ ಕೊಂಡಿಗಳು ಬಲಶಾಲಿಯಾದರೆ ಎರಡೂ ಕಡೆಯವರು ಇವರ ಮಾತು ಕೇಳುತ್ತಾರೆ, ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ವೈಚಾರಿಕ ಸಂಘರ್ಷವಿದ್ದರೂ ಅದು ವ್ಯಕ್ತಿಗತ ಸಂಘರ್ಷಕ್ಕೆ ತಿರುಗದಂತೆ ಎಚ್ಚರ ವಹಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಯಾವುದು ಒಳ್ಳೆಯದೋ ಅದನ್ನು ಸೀಕರಿಸುವ ಮನಸ್ಸು ಹೊಂದೋಣ. ಪೂರ್ವಾಗ್ರಹ ಪೀಡಿತರಾಗದಿರೋಣ. ಒಳ್ಳೆಯ ಸಂಗತಿಗಳು, ವಿಚಾರಗಳು ಯಾರಿಂದಲೇ ಬರಲಿ, ಎಲ್ಲಿಂದಲೇ ಬರಲಿ ಅದನ್ನು ಸ್ವಾಗತಿಸೋಣ.
     ಸಮಾನತೆಯ ಅಂಶವನ್ನು ಒತ್ತಿ ಹೇಳುವ ಕೆಲವು ವೇದಮಂತ್ರಗಳನ್ನು ಉದಾಹರಿಸುವೆ. ಮಂತ್ರಗಳ ಅರ್ಥ ವಿವರಣೆ ಪಂ. ಸುಧಾಕರ ಚತುರ್ವೇದಿಯವರದು.

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
     ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.

ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ 
ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ  ಮರುದ್ಭ್ಯಃ || [ಋಗ್. ೫.೬೦.೫]
     ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.

ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
     ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ. 

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.

ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
     ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.

ಅಯಂ ನಾಭಾ ವದತಿ ವಲ್ಗು ವೋ ಗೃಹೇ | ದೇವಪುತ್ರಾ ಋಷಯಸ್ತಚ್ಛೃಣೋತನ || ಸುಬ್ರಹ್ಮಣ್ಯಮಂಗೀರಸೋ ವೋ ಅಸ್ತು | ಪ್ರತಿಗೃಭ್ಣೀತ ಮಾನವಂ ಸುಮೇಧಸಃ || [ಋಗ್.೧೦.೬೨.೪]
     ಭಗವಂತನ ಮಕ್ಕಳೇ, ಪ್ರಗತಿಶೀಲರೇ, ತತ್ತ್ವದರ್ಶನಸಮರ್ಥರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ದೇಹಧಾರಿಗಳಿಗೆ ದಾನ ಮಾಡುವ ಉದಾರಾತ್ಮರೇ, ವಿಶ್ವಬ್ರಹ್ಮಾಂಡಕ್ಕೆ ಕೇಂದ್ರಭೂತನಾದ ಈ ಪ್ರಭುವು, ನಿಮ್ಮ ಗೃಹಗಳಲ್ಲಿ/ಗ್ರಾಹ್ಯನಾದ ಆತ್ಮನಲ್ಲಿ ವ್ಯಾಪಕನಾಗಿ ಒಳ್ಳೆಯದನ್ನು ಪ್ರೇರಿಸುತ್ತಿದ್ದಾನೆ. ಆ ಒಳಕರೆಯನ್ನು ಆಲಿಸಿರಿ. ನಿಮ್ಮ ವೇದಜ್ಞಾನ ಕಲ್ಯಾಣಕಾರಿಯಾಗಲಿ. ಮಾನವೀಯ ಜ್ಞಾನ ಗ್ರಹಿಸಿರಿ.

ದ್ಯೌರ್ವಃ ಪಿತಾ ಪೃಥಿವಿ ಮಾತಾ ಸೋಮೋ ಭ್ರಾತಾದಿತಿ ಸ್ವಸಾ | ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಟತೇಳಯತಾ ಸು ಕಮ್ || 
[ಋಗ್.೧.೧೯೧.೬]
     ಮಾನವರೇ, ಜ್ಯೋತಿರ್ಮಯ ಪರಮಾತ್ಮನು ತಂದೆ, ಭೂಮಿಯೇ ತಾ, ವಿವೇಕವೇ ಸೋದರ, ಅಖಂಡತೆ/ಪ್ರಾಮಾಣಿಕತೆ ಬಾಳಿಗೊದಗಿದ ಸೋದರಿ, ಕಣ್ಣಿಗೆ ಕಾಣುವವರೂ, ಕಾಣದಿರುವವರೂ ಸುಖದಿಂದ ಉಪಭೋಗಿಸಿರಿ, ಒಳ್ಳೆಯ ರೀತಿಯಲ್ಲಿ ಬಾಳಿರಿ.

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿ ಚಿಕಿತ್ಸತಿ || [ಯಜು.೪೦.೬.]
     ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖ-ಜ್ಞಾನಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ.

ಯೇನ ದೇವಾ ನ ವಿಯಂತಿ ನೋ ಚ ವಿದ್ವಿಷತೇ ಮಿಥಃ | ತತ್ಕೃಣ್ಮೋ ಬ್ರಹ್ಮ ವೋ ಗೃಹೇ ಸಂಜ್ಞಾನಂ ಪುರುಷೇಭ್ಯಃ || 
[ಅಥರ್ವ.೩.೩೦.೪.]
     ಯಾವುದರಿಂದ ಉದಾರಾತ್ಮರಾದ ವಿದ್ವಾಂಸರು, ಒಡೆದು ಬೇರೆ ಬೇರೆಯಾಗುವುದಿಲ್ಲವೋ ಮತ್ತು ಪರಸ್ಪರ ವೈರ ಕಟ್ಟಿಕೊಳ್ಳುವುದಿಲ್ಲವೋ ಅಂತಹ ಅರಿವು ಕೊಡುವ ವೇದಜ್ಞಾನವನ್ನು ಮಾನವರಾದ ನಿಮ್ಮ ಸಲುವಾಗಿ ಉಂಟುಮಾಡುತ್ತೇವೆ.

     ಸದ್ವಿಚಾರಿಗಳಾಗೋಣ, ಸರಿಯೆಂದು ಕಂಡುದನ್ನು ಅನುಸರಿಸೋಣ, ನಿಜಮಾನವರಾಗೋಣ.
-ಕ.ವೆಂ. ನಾಗರಾಜ್.
***************
ದಿನಾಂಕ 21.1.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



ಭಾನುವಾರ, ಜನವರಿ 18, 2015

ಆತ್ಮಾವಲೋಕನ

     "ಛೇ! ಎಂತಹ ಕೆಲಸವಾಯಿತು! ನಾನು ಹೀಗೆ ಮಾಡಬಾರದಿತ್ತು" -ಈ ರೀತಿ ತಮಗೆ ತಾವೇ ಹೇಳಿಕೊಳ್ಳುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಬಾಳಿನಲ್ಲಿ ಘಟಿಸುತ್ತಿರುತ್ತವೆ. ಸ್ವಸ್ಥ ಮನಸ್ಥಿತಿಯಲ್ಲಿ ನಡೆದ ಘಟನೆಯನ್ನು/ಪರಿಸ್ಥಿತಿಯನ್ನು ಅವಲೋಕಿಸಿದಾಗ ಮೂಡುವ ಭಾವನೆಗಳಿವು. ಈ ಅವಲೋಕಿಸುವ, ವಿವೇಚಿಸುವ ಶಕ್ತಿ ಮಾನವಜೀವಿಗಳಿಗೆ ಮಾತ್ರ ಅನ್ನುವುದು ವಿಶೇಷ. ಮಾನವ ಪಶು-ಪಕ್ಷಿಗಳಿಗಿಂತ, ಕ್ರಿಮಿ-ಕೀಟಗಳಿಗಿಂತ ಭಿನ್ನವಾಗಿರುವುದು ಈ ವಿಷಯದಿಂದಲೇ. ಒಂದು ಹಸು ತನ್ನ ಹಸಿವು ಹಿಂಗಿಸಿಕೊಳ್ಳುವ ಮುನ್ನ ತಾನು ಸಸ್ಯಾಹಾರಿಯಾಗಿಯೇ ಇರಲೋ, ಮಾಂಸಾಹಾರಿಯಾಗಿರಲೋ ಎಂದು ಯೋಚಿಸುತ್ತಾ ಕೂರುವುದಿಲ್ಲ. ಹಾಗೆಯೇ ಒಂದು ಮಾಂಸಾಹಾರಿ ಪ್ರಾಣಿ ಇನ್ನೊಂದು ಪ್ರಾಣಿಯ ಪ್ರಾಣವನ್ನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ತೆಗೆಯುವುದು ನ್ಯಾಯವೇ ಎಂದು ಚಿಂತಿಸುತ್ತಾ ಕೂರುವುದಿಲ್ಲ. ಈ ಕೆಲಸ ಸರಿಯೋ, ತಪ್ಪೋ ಎಂದು ಯೋಚಿಸುವ, ಯಾವುದೇ ಸಂಗತಿಯನ್ನು ಅದು ಹಾಗೆ ಏಕೆ, ಹೀಗೆ ಏಕಿರಬಾರದು, ಇತ್ಯಾದಿ ತರ್ಕ ಮಾಡುವ ವಿಕಾಸದ ಸ್ಥಿತಿ ಮಾನವನಿಗೆ ಮಾತ್ರ ಲಭ್ಯವಾದ ವರವಾಗಿದೆ.
ಅದು ಏಕೆ ಹೇಗೆಂದು ಭೂತಕಾಲವ ಕೇಳಿ
ಸರಿಯಿಲ್ಲವೆಂದು ವರ್ತಮಾನವ ದೂರಿ |
ಭವಿಷ್ಯವನು ನೆನೆದು ಭಯಪಡುವ ಪರಿಯ
ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ || 
     ವಿವೇಚನೆ ಮಾಡಲು ಜಾಗೃತ ಮನಸ್ಸು ಇರಬೇಕು, ಯಾವುದು ಸರಿ ಎಂದು ತರ್ಕಿಸುವ ಶಕ್ತಿ ಇರಬೇಕು, ಮೇಲಾಗಿ ಅನುಭವಿಯಾಗಿರಬೇಕು, ಸೂಕ್ತ ನಿರ್ಣಯ ತೆಗೆದುಕೊಳ್ಳುವ ಇಚ್ಛೆಯಿರಬೇಕು. ಹೀಗಿದ್ದಲ್ಲಿ ಫಲಿತಾಂಶ ಒಳ್ಳೆಯದಾಗಿರುತ್ತದೆ. ಇಲ್ಲದಿದ್ದಲ್ಲಿ ಮತ್ತು ಮೇಲೆ ತಿಳಿಸಿದ ಯಾವುದೊಂದರಲ್ಲಿ ಕೊರತೆಯಿದ್ದಲ್ಲಿ ಅಷ್ಟರ ಮಟ್ಟಿಗೆ ಫಲಿತಾಂಶವೂ ಭಿನ್ನವಾಗಿರುತ್ತದೆ. ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಅದರ ಮುಂದಿನ ಸಾಧ್ಯಾಸಾಧ್ಯತೆ ಬಗ್ಗೆ ಯೋಚಿಸಿ ಪ್ರಾರಂಭಿಸಿದಲ್ಲಿ ಕೆಲಸದಲ್ಲಿ ಅನಿರೀಕ್ಷಿತ ತೊಡಕುಗಳು ಬಂದಲ್ಲಿ ನಿವಾರಿಸಿಕೊಳ್ಳಲು ಸುಲಭವಾಗುತ್ತದೆ. ಚಿಂತಿಸುವ ಕೆಲಸಕ್ಕೆ ಚಾಲನೆ ಕೊಡುವುದು ಹೃದಯ ಅನ್ನುವುದು ಎಷ್ಟು ಜನರಿಗೆ ತಿಳಿದಿದೆ? ಜ್ಞಾನ ಮತ್ತು ಬುದ್ಧಿ ಹೊರ ತೋರಿಕೆಯವು, ಮೇಲ್ಭಾಗ ಕೇವಲ ಹೊಳೆಯುತ್ತದೆ, ಅದರೆ ಎಲ್ಲಾ ಶಕ್ತಿಯ ಸ್ಥಾನ ಹೃದಯವೇ ಆಗಿದೆ. ಅರಿವು, ಶಕ್ತಿ ಮತ್ತು ಚಟುವಟಿಕೆಗಳನ್ನು ಹೊಂದಿರುವ ಆತ್ಮದ ನೆಲೆ ಇರುವುದು ಮೆದುಳಿನಲ್ಲಲ್ಲ, ಹೃದಯದಲ್ಲಿ. ಮೊದಲು ಹೃದಯ ಏನು ಮಾಡಬೇಕೆಂದು ನಿರ್ಧರಿಸುತ್ತದೆ ಮತ್ತು ನಂತರ ತಲೆಗೆ ಅ ಕೆಲಸ ಹೇಗೆ ಸರಿ ಎಂಬುದನ್ನು ಸಮರ್ಥಿಸಲು ಕಾರಣಗಳನ್ನು ಹುಡುಕಲು ಹೇಳುತ್ತದೆ! ಮಾನವನ ಒಂದು ಸ್ವಭಾವವೆಂದರೆ ತಾನು ಹೊಂದಿರುವ ನಂಬಿಕೆಗಳು, ಅನಿಸಿಕೆಗಳಿಗೆ ಪೂರಕವಾದ ವಿಚಾರಗಳು, ವಾದಗಳನ್ನು ಹುಡುಕುತ್ತಾ ಹೋಗುವುದು. ಈ ಕಾರಣಕ್ಕಾಗಿಯೇ ವಿವಿಧ ಮತಗಳು, ಧರ್ಮಗಳನ್ನು ಅನುಸರಿಸುವವರು ತಮ್ಮದೇ ಸರಿ ಹೇಗೆ ಎಂದು ಸಮರ್ಥಿಸಿಕೊಳ್ಳಲು ಹೆಣಗುತ್ತಲೇ ಇರುತ್ತಾರೆ. ಒಂದಂತೂ ಸತ್ಯ, ದೇವರು ಕೊಟ್ಟಿರುವ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಲು ಅವಕಾಶವಿರುವ ಧರ್ಮವೇ ನಿಜವಾದ ಧರ್ಮ. ಸತ್ಯಾನ್ವೇಷಣೆಗೆ ಇರುವ ನಿಜವಾದ ತೊಡಕೆಂದರೆ ಚಿಂತಿಸುವ ಶಕ್ತಿಯಲ್ಲಿನ, ಗ್ರಹಿಸುವ ಶಕ್ತಿಯಲ್ಲಿನ ಕೊರತೆಯಲ್ಲ, ಕಾಣುವ ಸಂಗತಿಗಳ ವೈಪರೀತ್ಯವಲ್ಲ, ಬದಲಾಗಿ ಹೊಂದಿರುವ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು! ಸತ್ಯಾನ್ವೇಷಣೆಗೆ ಸರಿಯಾದ ದಾರಿಯೆಂದರೆ ಶ್ರವಣ, ಮನನ, ಮಥನಗಳಿಂದ ಮತ್ತು  ಅನುಭವಗಳಿಂದ ಮನಸ್ಸು ಕಂಡುಕೊಳ್ಳುವ ತೀರ್ಮಾನವನ್ನು ಒಪ್ಪುವುದು.   
     ಏನು, ಏಕೆ, ಹೇಗೆ ಎಂಬ ಪ್ರಶ್ನೆಗಳು, ತರ್ಕಗಳಿಂದಲೇ ಇಂದು ವಿಜ್ಞಾನ ವಿಜೃಂಭಿಸಿರುವುದು. ಮಾನವನ ಅತಿ ಕನಿಷ್ಠ ಅಗತ್ಯತೆಯಿಂದ ಹಿಡಿದು ಗಗನಚುಂಬಿ ಕಟ್ಟಡಗಳವರೆಗೆ ಮತ್ತು ಅತ್ಯುನ್ನತ ಧಾರ್ಮಿಕ ನಂಬಿಕೆಗಳವರೆಗೆ, ನಾವು ಈಗ ಏನಾಗಿದ್ದೇವೋ, ಏನೆಲ್ಲಾ ಹೊಂದಿದ್ದೇವೋ ಇವೆಲ್ಲವೂ ಬಂದಿರುವುದು ಮಾನವನ ಸಣ್ಣ ಮೆದುಳಿನ ಚಿಂತನೆಯ, ಮಾನಸಿಕ ಅನ್ವೇಷಣೆಯ ಫಲಗಳು. ನಮ್ಮ ಅದ್ಭುತ ಚಿಂತನೆ ಕೊನೆಗೆ ಎಲ್ಲಿಗೆ ತಲುಪುತ್ತದೆಂದರೆ, ಈ ಬೃಹತ್ ಬ್ರಹ್ಮಾಂಡದಲ್ಲಿ ಮಾನವ ಎಷ್ಟು ಸಣ್ಣವನು ಎಂಬುದರ ಅರಿವಿನಲ್ಲಿ! 
     ವಿವೇಕರಹಿತ ವ್ಯಕ್ತಿ ತಾನು ನಾಶ ಹೊಂದುವುದಲ್ಲದೆ ಇತರರಿಗೂ ಹಾನಿಯುಂಟುಮಾಡುತ್ತಾನೆ. ಇದೇ ತತ್ವ ಒಂದು ಸಮಾಜಕ್ಕೂ, ದೇಶಕ್ಕೂ ಅನ್ವಯವಾಗುತ್ತದೆ. ತಾನು ಹೊಂದಿರುವ ನಂಬಿಕೆಯನ್ನೇ ಇತರರು ಹೊಂದಬೇಕು ಎಂದು ಬಯಸುವ ವ್ಯಕ್ತಿಗಳು, ಧರ್ಮ/ಮತಾವಲಂಬಿಗಳು, ದೇಶಗಳು ವೈಚಾರಿಕತೆಗೆ ಕಂಟಕರಾಗುತ್ತಾರೆ. ಇದು ಸಂಘರ್ಷ, ರಕ್ತಪಾತಗಳಿಗೆ ಎಡೆ ಮಾಡುತ್ತವೆ. ಜೀವಿಮಾತ್ರರಲ್ಲಿ ಯಾರಿಗೂ ಇಲ್ಲದ ವಿಚಾರ ಮಾಡುವ ಶಕ್ತಿಯನ್ನು ಹೊಂದಿರುವ ಏಕೈಕ ಜೀವಿಯಾದ ಮಾನವನ ವೈಚಾರಿಕತೆಗೆ ಅಂಕುಶ ಹಾಕುವ ಯಾವುದೇ ವ್ಯಕ್ತಿಯ, ಸಮಾಜದ, ಧರ್ಮದ, ದೇಶದ ಪ್ರಯತ್ನಗಳು ಮಾನವಕುಲಕ್ಕೆ ಹಾನಿ ಮಾಡುವಂತಹವು ಎಂಬುದು ಪೂರ್ವಾಗ್ರಹ ಪೀಡಿತರಾಗದೆ ವಿವೇಚಿಸುವ ಎಲ್ಲರಿಗೂ ಅರ್ಥವಾಗುವ ಸಂಗತಿ.
     ಸಿಂಹಾವಲೋಕನ ಎಂಬ ಪದವನ್ನು ನಾವು ಕೇಳಿರುತ್ತೇವೆ. ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಹಿಂತಿರುಗಿ ತಾನು ಬಂದ ದಾರಿಯನ್ನು ಒಮ್ಮೆ ವೀಕ್ಷಿಸಿ ಮತ್ತೆ ಗಂಭೀರವಾಗಿ ಮುಂದೆ ಸಾಗುತ್ತದೆ. ಮುಂದೆ ಸಾಗುವ ಮುನ್ನ ಹಿಂದಿನ ದಾರಿಯನ್ನು ಅವಲೋಕಿಸಿ ಮುಂದಿನ ದಾರಿಯನ್ನು ನಿರ್ಧರಿಸಬೇಕು ಎಂಬುದು ಇದರ ಸಾರ. ನಾವು ಸಾಗಿದ ದಾರಿಯನ್ನು ಅವಲೋಕಿಸುವುದಕ್ಕೆ ಆತ್ಮಾವಲೋಕನ ಎನ್ನುತ್ತೇವೆ. ಈ ಆತ್ಮಾವಲೋಕನ ನಮ್ಮ ತಪ್ಪು ನಡೆಗಳನ್ನು ತಿದ್ದಿಕೊಳ್ಳುವುದಕ್ಕೆ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುವುದಕ್ಕೆ ಅತ್ಯಾವಶ್ಯಕ. ಹರೆಯದ ಹುಮ್ಮಸ್ಸಿನಲ್ಲಿ ಈ ವಿವೇಚನಾಶಕ್ತಿ ಕಡಿಮೆಯಿರುತ್ತದೆ ಅಥವ ಇದ್ದರೂ ಅದಕ್ಕೆ ಕೊಡುವ ಮಹತ್ವ ಕಡಿಮೆ. ಮಧ್ಯವಯಸ್ಸಿನಲ್ಲಿ ಮತ್ತು ಇಳಿ ವಯಸ್ಸಿನಲ್ಲಿ ಈ ಶಕ್ತಿ ಪ್ರಬುದ್ಧಮಾನ ಸ್ಥಿತಿಯಲ್ಲಿರುತ್ತದೆ. ಮಧ್ಯ ವಯಸ್ಸಿನಲ್ಲಿದ್ದಾಗಲೂ ವಿವೇಚನಾಶಕ್ತಿಗೆ ಕೆಲಸ ಕೊಡದಿದ್ದರೆ, ಇಳಿವಯಸ್ಸಿನಲ್ಲಿ ಶೋಕ ಕಟ್ಟಿಟ್ಟ ಬುತ್ತಿಯೇ ಸರಿ. 
ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಈ ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಮೂರು ಋಣಗಳನ್ನು ತೀರಿಸಲೇಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ದೇವಋಣವೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಮಾಡಿ ಕಾಣಿಕೆ ಅರ್ಪಿಸುವುದಲ್ಲ. ಪಂಚಭೂತಗಳಿಂದ ಆದ ಈ ಶರೀರದಲ್ಲಿರುವ ಆತ್ಮದ ಸಹಾಯದಿಂದ ಜೀವನ ನಡೆಸಿರುವ ನಾವು ಈ ಪಂಚಭೂತಗಳು -ಭೂಮಿ, ಆಕಾಶ, ನೀರು, ಅಗ್ನಿ, ವಾಯು- ಇವುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಇದು ದೇವ ಋಣವನ್ನು ತೀರಿಸುವ ರೀತಿ. ಅದೇ ರೀತಿ ನಮ್ಮನ್ನು ಪೋಷಿಸಿ ಸಲಹಿದ ಮಾತಾ-ಪಿತೃಗಳು, ಹಿರಿಯರುಗಳ ಸೇವೆ ಮಾಡುವುದು ಪಿತೃಋಣ ತೀರಿಸುವ ಪರಿಯಾದರೆ, ನಮಗೆ ಜ್ಞಾನ ನೀಡಿ ದಾರಿ ತೋರಿದ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ತಿಳಿದ ಜ್ಞಾನವನ್ನು ಇತರರಿಗೆ ಹಂಚುವುದು ಗುರುಋಣ ತೀರಿಸಲು ಸಹಕಾರಿ. ಈ ವೇದಮಂತ್ರ ಗಮನಿಸೋಣ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ. ಈ ಕೆಲಸವನ್ನು ನಾವು ಮಾಡುತ್ತಿದ್ದೇವೆಯೇ ಎಂಬುದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. 
     ಅವಲೋಕನದಿಂದ ಸುತ್ತಮುತ್ತಲಿನ ಆಗುಹೋಗುಗಳ ಓರೆಕೋರೆಗಳು ಗೋಚರವಾಗುತ್ತವೆ; ಆತ್ಮಾವಲೋಕನದಿಂದ ಆ ಓರೆಕೋರೆಗಳ ಮೂಲ ನಾವೇ ಆಗಿರುವುದು ತಿಳಿಯುತ್ತದೆ. ಅದು ಹಾಗಿರಬೇಕು, ಅವರು ಹಾಗಿರಬೇಕು, ಇವರು ಹೀಗಿರಬೇಕು ಎಂದು ಇತರರಲ್ಲಿ ಬಯಸುವ ಗುಣಗಳು ಮೊದಲು ನಮ್ಮಲ್ಲಿ ಇವೆಯೇ ಎಂಬುದನ್ನು ನೋಡಿಕೊಳ್ಳಬೇಕು. ನಾವು ಮಾತ್ರ ಬೇರೆ ರೀತಿಯಲ್ಲಿ ಇದ್ದು, ಇತರರು ಮಾತ್ರ ಸರಿಯಾಗಿರಬೇಕು ಎಂದು ಬಯಸುವುದರಲ್ಲಿಯೇ ಲೋಪವಿದೆಯೆಂದು ನಮಗೆ ಅರಿವಾಗುವುದು ಆತ್ಮಾವಲೋಕನದಿಂದ ಮಾತ್ರ. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕೆಂದು ಬಯಸುವುದು ತರವಲ್ಲ. ಬದಲಾಗಬೇಕಾದವರು ನಾವು ಮಾತ್ರ. ನಾವು ಕೇಳಬೇಕಾಗಿರುವುದು ಇತರರ ಮಾತುಗಳನ್ನಲ್ಲ, ನಮ್ಮ ಹೃದಯದ ಮಾತುಗಳನ್ನು! ನಾವು ಬದಲಾದರೆ ಸಮಾಜವನ್ನು ನಾವು ನೋಡುವ ದೃಷ್ಟಿಯೂ ಬದಲಾಗುತ್ತದೆ. ಸಮಾಜದಲ್ಲಿ ಒಳಿತೂ ಇರುತ್ತದೆ, ಕೆಡಕೂ ಇರುತ್ತದೆ. ಒಳಿತಾಗಬೇಕೆಂದು ನಾವು ಬಯಸುವುದಾದರೆ ನಾವು ಒಳ್ಳೆಯ ಸಂಗತಿಗಳನ್ನು ಮಾತ್ರ ಗಮನಿಸಬೇಕು, ಅದಕ್ಕೆ ಮಾತ್ರ ಮಹತ್ವ ಕೊಡಬೇಕು. ವಿವೇಕಾನಂದರ ಈ ಮಾತನ್ನು ನೆನಪಿನಲ್ಲಿಡಬೇಕು: "ಪ್ರಪಂಚ ನಮಗೆ ಏನಾಗಿ ತೋರುವುದೋ ಅದಕ್ಕೆ ಕಾರಣ ನಮ್ಮದೇ ಆದ ನಮ್ಮ ಮನಸ್ಸಿನ ಸ್ಥಿತಿ. ನಮ್ಮ ಯೋಚನೆಗಳು ಸಂಗತಿಗಳನ್ನು ಸುಂದರಗೊಳಿಸುತ್ತವೆ; ನಮ್ಮ ಯೋಚನೆಗಳೇ ಸಂಗತಿಗಳನ್ನು ಕುರೂಪಿಯನ್ನಾಗಿಸುತ್ತವೆ. ಇಡೀ ಪ್ರಪಂಚ ನಮ್ಮ ಮನಸ್ಸುಗಳಲ್ಲೇ ಇದೆ." ಆತ್ಮಾವಲೋಕನ ಮಾಡಿಕೊಳ್ಳೋಣ.
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನೆ ಮೊದಲಾಗು |
ಬದಲಾಗು ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಇಲ್ಲಿಹುದು ಮೂಢ ||
-ಕ.ವೆಂ.ನಾಗರಾಜ್.
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು]
******************************
14.01.2015ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



ಗುರುವಾರ, ಜನವರಿ 15, 2015

ಸಂಕ್ರಮಣದ ನಿರೀಕ್ಷೆ


ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ|
ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
     ಈ ಜೀವನವೇ ಹಾಗೆ. ಬದಲಾವಣೆಯನ್ನು ನಿರೀಕ್ಷಿಸುತ್ತಲೇ ಇರುತ್ತದೆ. ಈಗ ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಹೋಗಲು ಎಲ್ಲರೂ ತವಕಿಸುತ್ತಲೇ ಇರುತ್ತಾರೆ. ಜಗತ್ತನ್ನು ಬೆಳಗುವ ಸೂರ್ಯ ತನ್ನ ಉತ್ತರ ದಿಕ್ಕಿನ ಚಲನೆಯನ್ನು ಪ್ರಾರಂಭಿಸುವ, ಮಕರ ರಾಶಿಗೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎನ್ನುತ್ತಾರೆ. ಇದನ್ನೇ ಸಂಕ್ರಾಂತಿ ಎಂದು ಆಚರಿಸುತ್ತಾರೆ. ಉತ್ತರಾಯಣ ಪುಣ್ಯಕಾಲವೆಂದು ಹೇಳುವ ಈ ಸಮಯದಲ್ಲಿ ಚಳಿಗಾಲ ಮುಗಿದು ವಸಂತ ತನ್ನ ಇರುವನ್ನು ಪ್ರಕಟಿಸುವ ಸಮಯವಾಗಿದ್ದು, ಶುಭಕಾರ್ಯಗಳಿಗೆ ಪ್ರಶಸ್ತವೆಂದು ಹೇಳುತ್ತಾರೆ. ಇದು ಬದಲಾವಣೆಯ ಸಮಯ, ಬದಲಾವಣೆಗಳನ್ನು ನಿರೀಕ್ಷಿಸುವ ಸಮಯ.
     'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು' ಎಂಬ ಪ್ರಸಿದ್ಧ ಆಡುನುಡಿಯಿದೆ. ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬು, ಹಣ್ಣುಗಳನ್ನು ಬೀರುವ ವಿಶೇಷ ಮತ್ತು ಆನಂದಕರ ಸಂಪ್ರದಾಯ ಎಲ್ಲರಿಗೂ ಮುದ ಕೊಡುತ್ತದೆ. ಬಂಧು-ಮಿತ್ರರುಗಳನ್ನು ಭೇಟಿ ಮಾಡಿ ಪರಸ್ಪರ ಸಂತೋಷ ವಿನಿಮಯ ಮಾಡಿಕೊಳ್ಳಲು ಈ ಆಚರಣೆ ಸಹಕಾರಿಯಾಗಿದೆ. ಹಳ್ಳಿಗಳಲ್ಲಂತೂ ದನ-ಕರುಗಳಿಗೆ ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ, ಕಿಚ್ಚು ಹಾಯಿಸುತ್ತಾರೆ, ಕೋಲಾಟವಾಡುತ್ತಾರೆ. ಜಾನಪದ ಕಲೆಗಳಿಗೆ ಜೀವಂತಿಕೆ ಈ ಸಂದರ್ಭದಲ್ಲಿ ಬರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಗಳಲ್ಲಿ ಈ ಸಂಕ್ರಾಂತಿಯನ್ನು ಆಚರಿಸುತ್ತಾರೆ.
     ಹಿಂದೆ ಮನೆಗಳಿಗೆ ಸುಣ್ಣ-ಬಣ್ಣ ಹಚ್ಚಿ, ನೆಲಕ್ಕೆ ಸಗಣಿಯಿಂದ ಸಾರಿಸಿ, ಗೋಡೆಗಳಿಗೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವ, ಮನೆಯ ಮುಂದೆ ಆಕರ್ಷಕ ರಂಗವಲ್ಲಿ ಹಾಕುತ್ತಿದ್ದ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ಈಗಲೂ ಮನೆಗಳನ್ನು ತೊಳೆದು, ಸಾರಿಸಿ ಅಕರ್ಷಕವಾಗಿ ಮತ್ತು ಶುಭ್ರವಾಗಿಸಿ ರಂಗೋಲಿ ಹಾಕುತ್ತಾರೆ. ಮನೆಮಂದಿಯೆಲ್ಲಾ ಅಭ್ಯಂಜನ ಮಾಡಿ ಹೊಸ ಬಟ್ಟೆ ಧರಿಸಿ ದೇವರ ಪೂಜೆ ಮಾಡಿ ಎಳ್ಳು-ಬೆಲ್ಲ ಹಂಚುತ್ತಾರೆ, ಸವಿಯುತ್ತಾರೆ, ಸಂಭ್ರಮಿಸುತ್ತಾರೆ. ತನು ಶುದ್ಧಿ, ಮನೆ ಶುದ್ಧಿಯೊಂದಿಗೆ ಮನಸ್ಸೂ ಶುದ್ಧವಾಗಲಿ ಎಂಬುದೇ 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು' ಎಂಬ ನುಡಿಯ ಹಿಂದಿರುವ ಸದುದ್ದೇಶ.
     ಈ ಸಂಕ್ರಾಂತಿಯ ಶುಭಪರ್ವದಲ್ಲಿ ಒಳ್ಳೆಯ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ದೇಶ ಇಂದು ನಿಜವಾಗಿಯೂ ಪರ್ವಕಾಲದಲ್ಲಿದೆ. ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗಬೇಕಾದರೆ ಇದಕ್ಕೆ ನಮ್ಮ ಯೋಗದಾನವೂ ಅತ್ಯಗತ್ಯವಾಗಿದೆ. ದೇಶದಲ್ಲಿ ಬದಲಾವಣೆ ಆಗಬೇಕೆಂದರೆ ಅದು ರಾಜ್ಯಗಳಲ್ಲಿ ಮೊದಲು ಆಗಬೇಕು. ರಾಜ್ಯದಲ್ಲಿ ಆಗಬೇಕೆಂದರೆ ನಗರ, ಪಟ್ಟಣ, ಗ್ರಾಮಗಳಲ್ಲಿ ಬದಲಾವಣೆ ಬರಬೇಕು. ಈ ಬದಲಾವಣೆ ಬರಬೇಕಾದರೆ ಮೊದಲು ನಾವುಗಳು ಬದಲಾಗಬೇಕು. ಈ ಸಂಕ್ರಾಂತಿಯ ಸಮಯದಲ್ಲಿ ಸಜ್ಜನಶಕ್ತಿ ಎಚ್ಚರಗೊಳ್ಳಲಿ, ಸಾಮಾನ್ಯ ಜನತೆಯ ಈ ನಿರೀಕ್ಷೆಗಳು ಸಾಕಾರಗೊಳ್ಳಲಿ ಎಂದು ಆಶಿಸೋಣ.
೧. ಮಾತೃಭಾಷೆಯ ಅಭಿವೃದ್ಧಿ: ನಮ್ಮ ಮಾತೃಭಾಷೆಯ ಅಭಿವೃದ್ಧಿ ಆಗಬೇಕಾದರೆ ನಾವು ನಮ್ಮ ಮಾತೃಭಾಷೆಯನ್ನು ಬಳಸುವ ಮೂಲಕ ಉಳಿಸಬೇಕು ಅನಿವಾರ್ಯವಾದ ಸಂದರ್ಭ ಹೊರತುಪಡಿಸಿ ಉಳಿದಂತೆ ಮಾತೃಭಾಷೆಯಲ್ಲೇ ವ್ಯವಹರಿಸುವ ಮನಸ್ಸು ಮಾಡಬೇಕು.
೨. ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಒತ್ತಡದಲ್ಲಿ ಕಲಿಯಬೇಕಿದೆ. ಸ್ಪರ್ಧಾತ್ಮಕ ರೀತಿಯಲ್ಲಿ ಯಾವುದೋ ಪದವಿ, ಪ್ರಮಾಣಪತ್ರಗಳನ್ನು ಕೊಡುವ ಮತ್ತು ಕೇವಲ ಹಣ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನೈತಿಕ ಮೌಲ್ಯಗಳಿಗೆ ಅರ್ಥ ಉಳಿದಿಲ್ಲ. ವಿದ್ಯಾಭ್ಯಾಸ ಪೂರ್ಣಗೊಳಿಸಿದವನು ದೇಶಕ್ಕೆ ಸತ್ಪ್ರಜೆಯಾಗುತ್ತಾನೆಂಬ ಭರವಸೆ ಇಲ್ಲ. ಕನಿಷ್ಠ ಪಕ್ಷ ಮನೆಗಳಲ್ಲಾದರೂ ಉತ್ತಮ ಸಂಸ್ಕಾರ ಕಲಿಸಲು ಗಮನ ಕೊಡಬೇಕಿದೆ. ಮೊದಲು ಪೋಷಕರು ಸಂಸ್ಕಾರವಂತರಾಗಬೇಕಿದೆ. ಶಿಕ್ಷಣ ಪದ್ಧತಿಯ ಸುಧಾರಣೆಗೆ ಒತ್ತಡ ತರುವ ಕೆಲಸ ಮಾಡಬೇಕಿದೆ.
೩. ಭಯೋತ್ಪಾದನೆಯ ದಮನ: ನಾನಾ ರೀತಿಯ ಭಯೋತ್ಪಾದನೆಗಳು ಕಂಡುಬಂದರೂ ಪ್ರಮುಖವಾಗಿ ಮತಾಂಧರ ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ಸವಾಲಾಗಿದೆ. ಬಾಂಬುಗಳನ್ನು ಸ್ಫೋಟಿಸುವ, ಗುಂಡಿನ ಸುರಿಮಳೆಗೈಯುವ ಮೂಲಕ ಅಮಾಯಕರ ಪ್ರಾಣಹರಣ ಮಾಡಲಾಗುತ್ತಿದೆ. ಪಾಕಿಸ್ತಾನದ ಪೆಶಾವರಿನಲ್ಲಿ ನಡೆದ ೨೩೫ ಎಳೆಯ ಮಕ್ಕಳ ದಾರುಣ ಹತ್ಯೆ, ನೈಜೀರಿಯಾದಲ್ಲಿ ನಡೆದ ೨೦೦೦ಕ್ಕೂ ಹೆಚ್ಚಿನವರ ನರಮೇಧಗಳು ಇತ್ತೀಚಿನ ಉದಾಹರಣೆಗಳು. ಫೇಸ್ ಬುಕ್, ಟ್ವಿಟರ್, ವಾಟ್ಸಪ್‌ಗಳಲ್ಲಿ ವಿಕೃತರು ಸಂಬಂಧವೇ ಇಲ್ಲದ ಅಮಾಯಕರನ್ನು ಭೀಕರ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಸಾಯಿಸುವ ಮತ್ತು ಆ ಸಂದರ್ಭದಲ್ಲಿ ಅದನ್ನು ಸಂತಸದಿಂದ ವೀಕ್ಷಿಸುವ ಜನರ ಅನೇಕ ವಿಡಿಯೋಗಳು ಹರಿದಾಡುತ್ತಿವೆ, ಮನ ಕಲಕುತ್ತಿವೆ. ಮತಾಂಧರ ಅಟ್ಟಹಾಸ ಮತ್ತು ಅದನ್ನು ಬೆಂಬಲಿಸುವ ಅದೇ ಮನೋಭಾವದ ಜನರನ್ನು ಕಾಣುತ್ತಿರುವುದು ವಿಶ್ವದ ದೌರ್ಭಾಗ್ಯವೇ ಸರಿ. ನಮ್ಮ ದೇಶದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಮತ್ತು ಮತಗಳಿಕೆಯ ಸ್ವಾರ್ಥ ಕಾರಣಗಳಿಗಾಗಿ ಮತಾಂಧರನ್ನು ಓಲೈಸುವ ಕಾರ್ಯ ರಾಜಕಾರಣಿಗಳಿಂದ ಆಗುತ್ತಿರುವುದು ದುರ್ದೈವ. ಇದೂ ಅವರಿಗೆ ಶ್ರೀರಕ್ಷೆಯಾಗಿದೆ. ಮತಾಂಧತೆ, ನಕ್ಸಲ್‌ವಾದಗಳನ್ನು ಪರೋಕ್ಷವಾಗಿ ಬೆಂಬಲಿಸುವ ಪ್ರಗತಿಪರರೆಂದು ಹೇಳಿಕೊಳ್ಳುವ ಜನರು ಸಹ ಭಯೋತ್ಪಾದಕರಿಗೆ ಸಹಾಯ ನೀಡುವವರೇ ಆಗಿದ್ದಾರೆ. ನಿರಂತರ ಎಚ್ಚರಿಕೆ ಇಂದಿನ ಅಗತ್ಯ. ಸಾಮಾನ್ಯ ಜನರೂ ಸಹ ಜಾಗೃತರಾಗಿದ್ದು, ಸಂದೇಹದ ಸಂದರ್ಭಗಳಲ್ಲಿ ಸಂಬಂಧಿಸಿದ ಪೋಲಿಸ್ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ಕೊಡುವ ಕೆಲಸ ಮಾಡಬೇಕು. ಭಯೋತ್ಪಾದಕರು ಸಾಮ, ದಾನ, ಭೇದಗಳಿಗೆ ಜಗ್ಗುವವರಲ್ಲವೆಂಬುದು ಗೊತ್ತಾಗಿಹೋಗಿದೆ. ನಿರ್ದಾಕ್ಷಿಣ್ಯವಾಗಿ ದಂಡಪ್ರಯೋಗದಿಂದ ಹತ್ತಿಕ್ಕುವ ಕೆಲಸ ಆಗಬೇಕಿದೆ. ಬಂಧಿಸಲ್ಪಟ್ಟ ಭಯೋತ್ಪಾದಕರ ವಿಚಾರಣೆ ಕ್ಷಿಪ್ರಗತಿಯಲ್ಲಿ ನಡೆಯಬೇಕು. ಇಲ್ಲದಿದ್ದಲ್ಲಿ ಅವರನ್ನು ಬಿಡಿಸಲು ಮತ್ತಷ್ಟು ಹಿಂಸಾಚಾರಗಳಿಗೆ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಉದ್ಯುಕ್ತರಾಗುತ್ತಾರೆ.
೪. ಮಾಧ್ಯಮಗಳ ನಿಯಂತ್ರಣ: ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳು ಜನರ ಮೇಲೆ ಪ್ರಭಾವ ಬೀರುವಂತಹವು. ಆದರೆ ಇವುಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆಯೆಂದು ಹೇಳುವುದು ಕಷ್ಟ. ಟಿವಿಗಳಲ್ಲಿ ಬರುತ್ತಿರುವ ಧಾರಾವಾಹಿಗಳು ವಿಕೃತ ಮನಸ್ಸುಗಳನ್ನು ವೈಭವೀಕರಿಸುತ್ತಿವೆ. ಋಣಾತ್ಮಕ ಸುದ್ದಿಗಳಿಗೆ ಬಣ್ಣ ಹಚ್ಚಿ ದಿನಗಟ್ಟಲೆ ಬಿತ್ತರಿಸಲಾಗುತ್ತಿದೆ. ಧನಾತ್ಮಕ ವಿಷಯಗಳು ನೂರಾರು ಇದ್ದರೂ ಅವುಗಳನ್ನು ಪ್ರಚುರಿಸುವ ಮತ್ತು ಇತರರನ್ನು ಪ್ರೇರಿಸುವ ಕಾರ್ಯದಲ್ಲಿ ಬಹಳ ಹಿಂದೆ ಇವೆ. ಪಟ್ಟಭದ್ರರ ಹಿಡಿತದಲ್ಲಿರುವ ಇವು ಬಿತ್ತರಿಸುವ ಸುದ್ದಿಗಳು ಮತ್ತು ವಿಮರ್ಶೆಗಳು ಪಟ್ಟಭದ್ರರ ಅನುಕೂಲಕ್ಕೆ ತಕ್ಕಂತೆ ಇರುತ್ತವೆಯೆಂದು ಅನ್ನಿಸುತ್ತಿದೆ. ಪಕ್ಷಪಾತರಹಿತ ಮತ್ತು ಧನಾತ್ಮಕ ಸಂಗತಿಗಳಿಗೆ ಒತ್ತು ಕೊಡುವ ಮಾಧ್ಯಮಗಳನ್ನು ಬೆಳೆಸಿ ಪ್ರೋತ್ಸಾಹಿಸಬೇಕಿದೆ.
೫. ಭ್ರಷ್ಠಾಚಾರಕ್ಕೆ ಕಡಿವಾಣ: ತನ್ನ ಜಮೀನಿನ ಖಾತೆ ಮಾಡಿಸಿಕೊಳ್ಳಲು ಲಂಚ ಕೊಡುವ ಸಲುವಾಗಿ ಅಸಹಾಯಕ ಮಹಿಳೆಯೊಬ್ಬಳು ತನ್ನ ಕಿಡ್ನಿಯನ್ನೇ ಮಾರಿದ ಪ್ರಸಂಗ ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಎಂತಹ ಹೀನಸ್ಥಿತಿಗೆ ದೇಶ ಜಾರುತ್ತಿದೆ ಎಂಬುದಕ್ಕೆ ಇದು ಒಂದು ಪುಟ್ಟ ಉದಾಹರಣೆಯಾಗಿದೆ. ಭ್ರಷ್ಠಾಚಾರಿಗಳೇ ಆಡಳಿತದ ಚುಕ್ಕಾಣಿ ಹಿಡಿದರೆ ಹೀಗಾಗದೆ ಇನ್ನು ಬೇರೆ ಹೇಗಾಗಲು ಸಾಧ್ಯ? ಜನರು ಜಾಗೃತರಾಗಿ ಇಂತಹವರನ್ನು ಮಟ್ಟ ಹಾಕುವ ಕಾಲ ಎಂದು ಬಂದೀತು?
೬. ಜಾತ್ಯಾತೀತತೆಯ ನೈಜ ಅನುಷ್ಠಾನ: ಹಿಂದುಳಿದಿರುವಿಕೆಗೆ ಜಾತಿ ಕಾರಣ ಎಂಬುದು ವೈಜ್ಞಾನಿಕವಾಗಿ ನಿಲ್ಲುವಂತಹುದಲ್ಲ. ಆದರೆ ಪ್ರತಿ ಹಂತದಲ್ಲಿ ಜಾತಿ ಲೆಕ್ಕಾಚಾರಗಳು ಮೇಲುಗೈ ಸಾಧಿಸುತ್ತಿವೆ. ಹಿಂದುಳಿದಿರುವುದಕ್ಕೆ ಅಥವ ಮುಂದುವರೆಯುವುದಕ್ಕೆ ಜೀವನಶೈಲಿ ಪ್ರಧಾನ ಕಾರಣವಾಗಿದೆಯೇ ಹೊರತು ಜಾತಿಯಲ್ಲ. ಆರ್ಥಿಕವಾಗಿ ಹಿಂದುಳಿದವರನ್ನು ಮುಂದೆ ತರುವ ಪ್ರಯತ್ನ ಒಳ್ಳೆಯದೇ. ಅದಕ್ಕೆ ಜಾತಿ ಲೆಕ್ಕಾಚಾರ ಸರ್ವಥಾ ಸಲ್ಲದು. ಇದು ಸಮಾಜವನ್ನು ವಿಘಟಿಸುವ ಕಾರ್ಯ. ಮಾಯಾವತಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರನ್ನು ದಲಿತರೆಂದು ಈಗಲೂ ಪರಿಗಣಿಸಬೇಕೆ? ಮುಲಾಯಂ ಸಿಂಗ್, ಲಾಲೂ ಪ್ರಸಾದ ಯಾದವ್, ಶರದ್ ಯಾದವ್ ಮುಂತಾದವರನ್ನು ಹಿಂದುಳಿದವರೆಂದು ಈಗಲೂ ತಿಳಿಯಬೇಕೇ? ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಸದೃಢ ಹಂತ ತಲುಪಿದವರನ್ನು ಈ ಹಣೆಪಟ್ಟಿಗಳಿಂದ ಕಳಚುವ ಕೆಲಸ ಮೊದಲು ಆಗಬೇಕು. ಇದು ಮತಗಳಿಕೆಯ ಉದ್ದೇಶದಿಂದ ಜಾತಿ ಆಟವಾಡುವ ರಾಜಕಾರಣಿಗಳಿಂದ ಸಾಧ್ಯವಿಲ್ಲ. ಜನರು ಈ ದಿಸೆಯಲ್ಲಿ ಎಚ್ಚೆತ್ತು ಅವರಿಂದ ಈ ಕೆಲಸ ಮಾಡಿಸಬೇಕಿದೆ. ನೈಜ ಜಾತ್ಯಾತೀತತೆ ಜಾರಿಯಾಗಿ ಸಂವಿಧಾನದ ಆಶಯ ಪೂರ್ಣವಾಗಲೆಂದು ಆಶಿಸೋಣ. ಈಗ ರಾಜ್ಯ ಸರ್ಕಾರ ಮಾಡಲಿರುವ ಜಾತಿಗಣತಿ ಸಹ ಜಾತಿವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದೇ ಆಗಿದೆ.
೭. ಸ್ವಚ್ಛ ಭಾರತ ನಿರ್ಮಾಣ: ಇದು ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವೆಂದು ಅಸಡ್ಡೆ ಮಾಡುವಂತಿಲ್ಲ. ನಿಜಕ್ಕೂ ಇದು ಒಂದು ಒಳ್ಳೆಯ ಕಾರ್ಯಕ್ರಮವಾಗಿದ್ದು ಎಲ್ಲರೂ ಕೈಜೋಡಿಸಿದಲ್ಲಿ ಉತ್ತಮ ಫಲಿತಾಂಶ ಸಿಕ್ಕೀತು. ನಮ್ಮ ನಮ್ಮ ಮನೆಯ ಪರಿಸರವನ್ನು ಚೊಕ್ಕಟವಾಗಿಟ್ಟುಕೊಂಡಲ್ಲಿ ಬೀದಿ ಸ್ವಚ್ಛವಿರುತ್ತದೆ, ಬೀದಿಗಳು ಸ್ವಚ್ಛವಿದ್ದಲ್ಲಿ ಗ್ರಾಮ, ಪಟ್ಟಣ, ನಗರಗಳು ಸ್ವಚ್ಛವಿರುತ್ತವೆ. ನಮ್ಮ ನಾಗರಿಕ ಪ್ರಜ್ಞೆ ಜಾಗೃತಗೊಂಡಲ್ಲಿ ಇದು ಕಠಿಣ ಸವಾಲೇನಲ್ಲ.
    ಒಟ್ಟಾರೆಯಾಗಿ ಸಂಕ್ಷಿಪ್ತಗೊಳಿಸಬೇಕೆಂದರೆ, ಕುಟುಂಬ ಹಿತ, ಗ್ರಾಮಹಿತ, ನಗರಹಿತ, ರಾಜ್ಯಹಿತ, ರಾಷ್ಟ್ರಹಿತಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮನಸ್ಸು ನಮಗೆ ಬರಲಿ. ಇತರರು ಹೀಗೆ ಮಾಡುತ್ತಾರೋ ಇಲ್ಲವೋ, ನಾವೊಬ್ಬರು ಮಾಡಿಬಿಟ್ಟರೆ ಆಯಿತೇ ಎಂದುಕೊಂಡು ಹತ್ತರಲ್ಲಿ ಒಬ್ಬರಾಗದೆ ನಾವಾದರೂ ಹೀಗೆ ಮಾಡುವ ಮನಸ್ಸು ಮಾಡಿದಲ್ಲಿ ಅದು ಕೆಲವರಿಗಾದರೂ ಪ್ರಭಾವ ಬೀರದೇ ಇರುವುದಿಲ್ಲ. ಇದು ಕಡಿಮೆ ಸಾಧನೆಯಲ್ಲ. ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯ ಮಾತುಗಳನ್ನಾಡೋಣ; ಅದೀನಾ ಸ್ಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಸ್ವತಂತ್ರವಾಗಿ, ಆತ್ಮಗೌರವದಿಂದ ಜೀವಿಸೋಣ; ಭೂಯಶ್ಚ ಶರದಃ ಶತಾತ್ - ಈ ರೀತಿಯಲ್ಲಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿರೋಣ. ಸಂಕ್ರಾಂತಿ ಸತ್ ಕ್ರಾಂತಿಗೆ, ಸಮ್ಯಕ್ ಕ್ರಾಂತಿಗೆ ನಾಂದಿಯಾಗಲಿ.
-ಕ.ವೆಂ.ನಾಗರಾಜ್.

ಗುರುವಾರ, ಜನವರಿ 8, 2015

ಭಕ್ತಿಯೆಂಬ ಭಾವ


ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     'ಸಂಕಟ ಬಂದಾಗ ವೆಂಕಟರಮಣ!' ಮನುಷ್ಯನಿಗೆ ಕಷ್ಟಗಳು, ದುಃಖಗಳು ಬಾರದಿದ್ದರೆ ಅವನು ದೇವರನ್ನು ಸ್ಮರಿಸುತ್ತಿದ್ದನೋ ಇಲ್ಲವೋ ಎಂಬುದು ಯೋಚಿಸಬೇಕಾದ ವಿಷಯವೇ. ಇರಲಿ ಬಿಡಿ, ಸದ್ಯಕ್ಕೆ ಇದನ್ನು ಒಂದು ಪಕ್ಕಕ್ಕೆ ಇಟ್ಟುಬಿಡೋಣ. ಭಕ್ತಿಯ ಕುರಿತು ಚರ್ಚಿಸುವ ಪೂರ್ವದಲ್ಲಿ ಪೂರಕವಾದ ಮೂಲ ಸಂಗತಿಗಳ ಬಗ್ಗೆ ಗಮನಹರಿಸಲೇಬೇಕು. ಜ್ಞಾನ, ಕರ್ಮ ಮತ್ತು ಉಪಾಸನೆಗಳು ನಾಗರಿಕ ಮಾನವಧರ್ಮದ ಮೂರು ಅಭಿನ್ನ ಅಂಗಗಳೆಂದು ಹೇಳುತ್ತಾರೆ. ಈ ಮೂರೂ ಒಂದಕ್ಕೊಂದು ಪೂರಕವಾಗಿವೆ. ಮಾನವನಿಗೂ ಇನ್ನಿತರ ಪಶು, ಪಕ್ಷಿ, ಕ್ರಿಮಿ-ಕೀಟಗಳಿಗೂ ಇರುವ ಎದ್ದು ಕಾಣುವ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ತನಗನ್ನಿಸಿದ್ದನ್ನು ಮಾಡಬಲ್ಲ, ಮಾಡದಿರಲೂ ಬಲ್ಲ, ಇನ್ನೇನನ್ನೋ ಮಾಡಬಲ್ಲ. ಏನು, ಏಕೆ, ಹೇಗೆ ಇತ್ಯಾದಿಗಳನ್ನು ಕೇಳುವ, ತಿಳಿದುಕೊಳ್ಳುವ ಶಕ್ತಿ ಅವನಿಗೆ ಇದ್ದು, ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಜ್ಞಾನಸಂಪತ್ತು ಹೆಚ್ಚಿಸಿಕೊಳ್ಳುವ ಸೌಭಾಗ್ಯ ಅವನಿಗೆ ಇದೆ. ಇಂತಹ ಆಸಕ್ತಿ ಇಲ್ಲದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುವರೂ ಇರುತ್ತಾರೆ. ಅಜ್ಞಾನದ ಅಂಧಕಾರವನ್ನು ಕಳೆದುಕೊಳ್ಳಲು, ದುರಾಚಾರದಿಂದ ಸದಾಚಾರಕ್ಕೆ ಬದಲಾಗಲು, ಇರುವ ಸ್ಥಿತಿಗಿಂತ ಮೇಲಕ್ಕೇರಲು ಜ್ಷಾನ ನೆರವಾಗುತ್ತದೆ.
     ತಿಳಿವಳಿಕೆಯಿದೆ, ಆದರೆ ಅದು ಆಚರಣೆಗೆ ಬರುವುದಿಲ್ಲವೆಂದರೆ ಅದಕ್ಕೆ ಅರ್ಥವಿಲ್ಲ. ಹೀಗಾಗಿ ಕರ್ಮ ಮಾನವಧರ್ಮದ ಮತ್ತೊಂದು ಅಮೂಲ್ಯ ಭಾಗ. ಜ್ಞಾನ ಅನ್ನುವುದು ಮಾನವಧರ್ಮದ ತಲೆಯಿದ್ದಂತೆ ಅನ್ನುವುದಾದರೆ, ಕರ್ಮವನ್ನು ಅದರ ಕೈಕಾಲುಗಳು ಅನ್ನಬಹುದು. ಜ್ಞಾನ ಆಚರಣೆಗೆ ಬರದಿದ್ದರೆ ಅದೊಂದು ಸಿದ್ಧಾಂತ ಅಥವ ತತ್ವವಾಗಿಯೇ ಉಳಿಯುತ್ತದೆ. ಕರ್ಮವಿಲ್ಲದ ಧರ್ಮ ಕೈಕಾಲುಗಳಿಲ್ಲದ ಅಂಗವಿಕಲನಂತೆ ಅರ್ಥ ಕಳೆದುಕೊಳ್ಳುತ್ತದೆ. ಶರೀರ ಮತ್ತು ಆತ್ಮ ಒಟ್ಟಿಗೆ ಇರುವವರೆಗೆ ಆಹಾರ, ಬಟ್ಟೆ, ಆಶ್ರಯ ಇತ್ಯಾದಿಗಳಿಗಾಗಿ ಕೆಲಸ ಮಾಡಲೇಬೇಕು. ಇವನ್ನೆಲ್ಲಾ ಪಡೆಯಲು ಸುತ್ತಲಿನ ಸಮಾಜದ ಅವಲಂಬಿಗಳಾಗುತ್ತೇವಾದ್ದರಿಂದ, ಇವುಗಳನ್ನು ಕೊಡುವ ಸಮಾಜಕ್ಕೆ ಪ್ರತಿಯಾಗಿ ಏನೂ ಮಾಡದಿದ್ದರೆ ಪಾಪವಲ್ಲದೇ ಮತ್ತೇನು? ಕರ್ಮ ಮಾಡದವನು ಸಮಾಜದ ಋಣ ಉಳಿಸಿಕೊಂಡು ಸಮಾಜದ್ರೋಹಿಯಾಗುವುದಲ್ಲದೆ, ಆಧ್ಯಾತ್ಮಿಕ ಉನ್ನತಿ ಹೊಂದಲೂ ಅನರ್ಹನಾಗುತ್ತಾನೆಂದರೆ ತಪ್ಪಿಲ್ಲ. ಹೀಗಾಗಿ ಕರ್ಮ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ..
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳು ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ ||
     ಈಗ ವಿಷಯಕ್ಕೆ ಬರೋಣ. ಮಾನವಧರ್ಮದ ಮೂರನೆಯ ಮಹತ್ತಾದ ಭಾಗ ಉಪಾಸನೆ. ಉಪಾಸನಾ ಪದದ ಅರ್ಥ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು ಎಂದು. ಭಗವಂತನಿಗೆ ಹತ್ತಿರವಾಗಿರುವುದು ಎಂದರೆ ಭಗವಂತ ನಮ್ಮಿಂದ ದೂರದಲ್ಲಿದ್ದಾನೆಂದು ಅರ್ಥವಲ್ಲ. ಎಲ್ಲೆಲ್ಲೂ ಇರುವ ದೇವರು ನಮ್ಮಿಂದ  ದೂರವಿರಲು ಹೇಗೆ ಸಾಧ್ಯ. ಆದರೆ ಹುಲುಮನುಜರಾದ ನಾವು ಮಾನಸಿಕವಾಗಿ ಅವನಿಂದ ದೂರವಿದ್ದೇವಷ್ಟೆ. ಈ ಜ್ಞಾನಸಂಬಂಧಿತ ದೂರವನ್ನು ಕಡಿಮೆ ಮಾಡಿಕೊಳ್ಳುವುದೇ ಉಪಾಸನೆಯ ಮೂಲ ಉದ್ದೇಶ. ದಿನದ ಕೆಲ ಸಮಯವಾದರೂ ಮನಸ್ಸನ್ನು ಧ್ಯಾನ, ಅರ್ಚನೆ, ಇತ್ಯಾದಿಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಇದರ ಗುರಿ. ಉಪಾಸನೆಯ ಅಗತ್ಯ ಕಾಣುವುದು ಇಲ್ಲಿಯೇ. ಈ ಉಪಾಸನೆಯನ್ನೇ ಭಕ್ತಿ, ಪೂಜೆ, ಅರ್ಚನೆ ಮುಂತಾದ ರೀತಿಯಲ್ಲೂ ಹೆಸರಿಸುತ್ತಾರೆ.  
    ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ (ಶ್ರವಣ, ಮನನ, ಮಥನ, ಮಂಥನ, ಇತ್ಯಾದಿ) ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಭಕ್ತಿ ಹಲವಾರು ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು ಅವಲಂಬಿಸಿರುತ್ತದೆ. 'ಅವರವವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಭಗವಂತ' ಎಂಬ ಕವಿವಾಣಿ ಅದೆಷ್ಟು ಸಮಂಜಸವಾಗಿ ತೋರುತ್ತದೆ! ದೇವಸ್ಥಾನಗಳಲ್ಲಿ ಪ್ರದರ್ಶಿಸುವ ದಾನಿಗಳ ಪಟ್ಟಿ, ಭಕ್ತರು ಮಾಡಿಸಿಕೊಡುವ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಮುಂತಾದುವನ್ನು ಭಕ್ತಿಯ ಯಾವ ಪ್ರಾಕಾರಕ್ಕೆ ಸೇರಿಸಬೇಕು ಅನ್ನುವುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ. ದೇವರಂತೂ ಏನನ್ನೂ ಬಯಸಲಾರ, ಬಯಸಿದರೆ ಅವನು ದೇವರಾಗಲಾರ. ಆದರೂ ಭಕ್ತರು ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಳ್ಳುವ ರೀತಿಗಳಲ್ಲಿ ಇವೂ ಒಂದಾಗಿವೆ. 
     ಮೇಲೆ ಹೇಳಿದಂತೆ ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ. ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷಭಕ್ತಿಗೆ ಉದಾಹರಿಸಬಹುದಾದರೆ ಹನುಮಂತನನ್ನು ದಾಸಭಕ್ತಿಗೆ ಹೆಸರಿಸಬಹುದು. ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ). ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ. 
     ಪ್ರಾಸಂಗಿಕವಾಗಿ ನೀವು ಕೇಳಿರಬಹುದಾದ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪುತ್ತದೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ!"
     ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ: ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆರಲಿಲ್ಲ.
     ನಿಷ್ಕಾಮ ಪ್ರೀತಿಯೆಂದರೆ ಯಾವುದೇ ಪ್ರತಿಫಲ ಬಯಸದೆ ದೇವರನ್ನು ಪೂಜಿಸುವುದು. ವಿವೇಕಾನಂದರು ಹೀಗೆ ಹೇಳುತ್ತಿದ್ದರು: "ನನ್ನ ಸ್ವಭಾವ 'ಅವನನ್ನು' ಪ್ರೀತಿಸುವುದು. ಆದ್ದರಿಂದ 'ಅವನನ್ನು' ಪ್ರೀತಿಸುತ್ತೇನೆ. ನಾನು ಯಾವುದಕ್ಕಾಗಿಯೂ ಪ್ರಾರ್ಥಿಸುವುದಿಲ್ಲ. ನಾನು ಯಾವುದನ್ನೂ ಬೇಡುವುದಿಲ್ಲ. 'ಅವನು' ನನ್ನನ್ನು ಎಲ್ಲಿಡಬಯಸುವನೋ ಅಲ್ಲಿ ಇಡಲಿ. ನಾನು ;ಅವನನ್ನು' ಪ್ರೀತಿಯ ಸಲುವಾಗಿ ಪ್ರೀತಿಸುತ್ತೇನೆ. ನಾನು ಪ್ರೀತಿಯಲ್ಲಿ ವ್ಯವಹರಿಸಬಯಸುವುದಿಲ್ಲ". ದೇವರು ಮತ್ತು ಭಕ್ತರ ನಡುವಣ ನೈಜ, ನಿಷ್ಕಾಮ ಪ್ರೀತಿಯ ಬಂಧ ವಾಸ್ತವವಾಗಿ ಮನುಷ್ಯನನ್ನು ಪ್ರಾಪಂಚಿಕ ಬಂಧನಗಳಿಂದ ಬಿಡಿಸುತ್ತದೆ. 
ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ ||
     ಭಕ್ತಿ ದೇವರನ್ನು ಕಾಣುವ ಪ್ರಯತ್ನದಲ್ಲಿ ಅತ್ಯಂತ ಸಹಜವಾದ, ಸುಲಭವಾದ ಮತ್ತು ಪ್ರಯತ್ನದಲ್ಲೇ ಆನಂದವನ್ನು ಕಾಣಬಲ್ಲ ಸರಳವಾದ ಮಾರ್ಗ; ಆದರೆ ಭಕ್ತಿಯ ಕೆಳಹಂತದಲ್ಲಿರುವವರು ತಾವು ನಂಬಿದ ತತ್ವ, ಆದರ್ಶಗಳಿಗೆ ಕಟ್ಟುಬಿದ್ದು ಇತರರ ನಂಬಿಕೆಗಳನ್ನು ವಿರೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಅಪಾಯವಿದೆ. ಪ್ರೀತಿಯ ವಸ್ತುವಿಗೆ ತೋರುವ ಅವರ ಏಕನಿಷ್ಠೆ ಹೆಚ್ಚಿನ ಸಂದರ್ಭಗಳಲ್ಲಿ ಇತರರನ್ನು ದ್ವೇಷಿಸುವಲ್ಲಿ, ಅನೇಕ ಹುಚ್ಚಾಟಗಳಿಗೆ ಇಳಿಯುವಲ್ಲಿ ಕೊನೆಗೊಳ್ಳುತ್ತದೆ. ಇಂತಹ ಹುಚ್ಚಾಟದ ಮತ್ತ್ಠು ಅಮಾಯಕರ ರಕ್ತ ಹರಿಸುವ ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗುವ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನರು, ಇತರ ಮತೀಯರುಗಳು ಇಂತಹ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ದುರ್ಬಲ ಮತ್ತು ಅವಿಕಸಿತ ಮನಸ್ಸುಗಳವರು ತಮ್ಮ ನಂಬಿಕೆಯನ್ನು ಪ್ರೀತಿಸುವ ರೀತಿಯೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟಗಳ, ಭಯೋತ್ಪಾದನೆಗಳ ಮೂಲಕಾರಣ ಇದೇ ಆಗಿದೆ.
     ನಿಜವಾಗಿ ಹೇಳಬೇಕೆಂದರೆ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಕಾರಿ ಸಾಧನಗಳೇ ಹೊರತು ಅವೇ ಅಂತ್ಯವಲ್ಲ. ನಿಜವಾದ ಅರಿವು ಮೂಡಿದಾಗ, ನಿಜವಾದ ದೈವಿಕ ಆನಂದವನ್ನು ಸವಿಯುತ್ತಿರುವಾಗ ಅವುಗಳ ಯಾವುದರ ಆಸರೆಯೂ ಬೇಕೆನಿಸುವುದಿಲ್ಲ, ಯಾವ ಧರ್ಮಗ್ರಂಥಗಳೂ ಬೇಕಿರುವುದಿಲ್ಲ ಮತ್ತು ಯಾವ ಉಪದೇಶಗಳ ಅಗತ್ಯವೂ ಇರುವುದಿಲ್ಲ. ಆಗ ದೇವರು ಹೃದಯದಲ್ಲೇ ಇರುತ್ತಾನೆ. ಮತ್ತೆ ಬೇರೆ ಎಲ್ಲಿ ಅವನನ್ನು ಹುಡುಕಬೇಕು?
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
-ಕ.ವೆಂ.ನಾಗರಾಜ್.
***************
7.1.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಜನವರಿ 4, 2015

ವೇದಭಾರತಿಯ ಸತ್ಸಂಗದಲ್ಲಿ ಡಾ. ಜೆಸ್ಸಿ(ಮಾಯಾ) ಜೆ. ಮರ್ಸೆ


     ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ,  ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ ಸಂಸ್ಥೆಗಳಿಗೆ ಸಲಹಾಕಾರರಾಗಿಯೂ ಹೆಸರು ಮಾಡಿದ್ದ ಅವರು ವಾಸ್ತುವ್ಯಾಸ ಡಾ. ಗಣಪತಿ ಸ್ಥಪತಿಯವರ ಶಿಷ್ಯೆಯಾಗಿ ವಾಸ್ತುಶಾಸ್ತ್ರದಲ್ಲಿ ಪರಿಣಿತಿ ಗಳಿಸಿದವರು. ಈ ವಿಷಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ಈಗ ಮೇಲೆ ತಿಳಿಸಿದ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಿತ್ರ ಹರಿಹರಪುರ ಶ್ರೀಧರರೊಂದಿಗೆ ಆಗಾಗ್ಗೆ ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದರು. ಪಂ. ಸುಧಾಕರ ಚತುರ್ವೇದಿ ಮತ್ತು ವೇದಾಧ್ಯಾಯಿ ಸುಧಾಕರ ಶರ್ಮರವರೊಂದಿಗೆ ಭೇಟಿಗೂ ಶ್ರೀಧರ್ ಸ್ವತಃ ವ್ಯವಸ್ಥೆ ಮಾಡಿದ್ದರು. ಅವಕಾಶವಾದಾಗ ಹಾಸನಕ್ಕೂ ಬರಲು ಅವರು ಆಹ್ವಾನಿಸಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ ಅವರು ೨.೧.೨೦೧೫ ರಂದು ಹಾಸನದ ವೇದಭಾರತಿಯ ಸತ್ಸಂಗಕ್ಕೂ ಬರುವುದಾಗಿ ತಿಳಿಸಿ ಅದರಂತೆ ಬಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆಗಳು, ಸೆಮಿನಾರುಗಳಲ್ಲಿ ಭಾಗವಹಿಸಿ ವಿದ್ವತ್ ಪೂರ್ಣ ವಿಚಾರ ಮಂಡಿಸುವ ಅವರು ಹಾಸನದಲ್ಲಿ ನಡೆಯುವ ಸತ್ಸಂಗಕ್ಕೂ ಅದೇ ಮಹತ್ವ ನೀಡಿ ಬಂದದ್ದು ವಿಶೇಷವೇ ಸರಿ. ದೊಡ್ಡವರು ದೊಡ್ಡವರಾಗಿಯೇ ಇರುತ್ತಾರೆ, ಸಣ್ಣ ವಿಷಯಕ್ಕೂ ಮಹತ್ವ ನೀಡುವುದರಿಂದಲೇ ಅವರು ದೊಡ್ಡವರಾಗುತ್ತಾರೆ ಎಂಬುದು ಇಲ್ಲಿ ವೇದ್ಯವಾಯಿತು.
     ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಬಂದ ಅವರು ಸೀರೆ ಉಡಲು ಬಾರದಿದ್ದರೂ ಕಷ್ಟಪಟ್ಟು ಸೀರೆ ಧರಿಸಿ ಬಂದಿದ್ದರು. ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿನಾಗರಾಜರು ಡಾ. ಜೆಸ್ಸಿಯವರ ಪರಿಚಯವನ್ನು ಸತ್ಸಂಗದಲ್ಲಿ ಹಾಜರಿದ್ದ ವೇದಾಸಕ್ತರು ಮತ್ತು ವೇದಾಧ್ಯಾಯಿಗಳಿಗೆ ಮಾಡಿಕೊಟ್ಟದ್ದಲ್ಲದೆ, ಸತ್ಸಂಗದಲ್ಲಿ ಪ್ರತಿನಿತ್ಯ ಮಾಡಲಾಗುವ ಅಗ್ನಿಹೋತ್ರದ ವಿವರ, ಮಹತ್ವಗಳನ್ನು ಡಾ. ಜೆಸ್ಸಿ ಮತ್ತು ಅವರ ಸಂಗಡಿಗರಿಗೆ ವಿವರಿಸಿದರು. ಅಗ್ನಿಹೋತ್ರ ಮತ್ತು ಎರಡು ಭಜನೆಗಳ ನಂತರದಲ್ಲಿ ಡಾ. ಜೆಸ್ಸಿಯವರನ್ನು ಮಾತನಾಡಲು ಕೋರಲಾಯಿತು. ವಾಸ್ತು ಹಿಂದಿರುವ ವಿಜ್ಞಾನ ಎಂಬ ವಿಷಯದಲ್ಲಿ ಅವರು ಮಾತನಾಡಿದ್ದು, ಅವರು ಪ್ರಸ್ತಾಪಿಸಿದ ಸಂಗತಿಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ತಿಳಿಸುವ ಪ್ರಯತ್ನ ಇಲ್ಲಿ ಮಾಡಿದೆ. (ಡಾ.ಜೆಸ್ಸಿಯವರ ಇಂಗ್ಲಿಷ್ ಉಚ್ಛಾರಣೆ ನಮ್ಮ ಇಂಗ್ಲಿಷಿನಂತೆ ಅಲ್ಲವಾದ್ದರಿಂದ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ತಿಳಿಸಿರುವುದರಲ್ಲಿ ಏನಾದರೂ ತಪ್ಪಿದ್ದರೆ ಅದು ಡಾ. ಜೆಸ್ಸಿಯವರ ತಪ್ಪಲ್ಲ, ಈ ಲೇಖಕನದು.) 
ವಾಸ್ತು ಹಿಂದಿರುವ ವಿಜ್ಞಾನ
     ಋಗ್ವೇದದ ಮೊದಲನೆಯ ಮಂತ್ರ 'ಅಗ್ನಿಮೀಳೇ ಪುರೋಹಿತಮ್ . .' ಸಮರ್ಪಣಾ ಮನೋಭಾವವನ್ನು ಹೊಂದಲು ಹೇಳುತ್ತದೆ. ಈ ತ್ಯಾಗ ಮನೋಭಾವದಿಂದ ಮಾಡುವ ಕೆಲಸಗಳು ಸತ್ಪ್ರಭಾವ ಬೀರುತ್ತವೆ. ಈಗ ಅಗ್ನಿಹೋತ್ರ ಮಾಡಿದಿರಿ. ಅಗ್ನಿಹೋತ್ರದ ಜ್ವಾಲೆ, ಹರಡಿದ ಧೂಮದ ಪರಿಮಳ, ಹೇಳಿದ ಮಂತ್ರಗಳು ನಿಮ್ಮ ಮೇಲೆ ಪ್ರಭಾವ ಬೀರಿದವು ಅಲ್ಲವೇ? ಇದಕ್ಕೆ ಕಾರಣ ಇಲ್ಲಿ ಉಂಟಾದ ತರಂಗಗಳು (vibrations). ಈ ವಿಶ್ವದ ಸೃಷ್ಟಿ ಸಹ ತರಂಗಗಳಿಂದಲೇ ಆದದ್ದು. 
     ಸಾವಿರಾರು ವರ್ಷಗಳ ಹಿಂದೆ ಇದ್ದ ಮಹಾಮುನಿ ಮಾಯನ್ ವಾಸ್ತುಶಾಸ್ತ್ರದ ಪ್ರಥಮ ಕೃತಿಕಾರರಾಗಿದ್ದಾರೆ. ಖಾಲಿ ಇರುವ ಸ್ಥಳ ಶಕ್ತಿಯ ಕೇಂದ್ರೀಕೃತ ಕ್ಷೇತ್ರವಾಗಿದ್ದು, ಈ ಭೌತಿಕ ಪ್ರಪಂಚದಲ್ಲಿನ ವಸ್ತುಗಳು ಮತ್ತು ಎಲ್ಲಾ ರೀತಿಗಳ ಉಗಮಕ್ಕೆ ಮೂಲವಾಗಿರುತ್ತದೆ ಎಂಬುದು ಆ ಋಷಿವಾಣಿಯಾಗಿದೆ. ಈ ಖಾಲಿ ಸ್ಥಳದಲ್ಲಿ ಶಕ್ತಿ ತರಂಗಗಳಿದ್ದು ಅದು ಗಣಿತದ ಲೆಕ್ಕಾಚಾರಕ್ಕೆ ಒಳಪಟ್ಟಿರುತ್ತದೆ. ವಿವಿಧ ರೀತಿಯ ಜೀವಿಗಳು ಇದ್ದು ಇವುಗಳು ಪಂಚಭೂತಗಳಿಂದ -ಆಕಾಶ, ವಾಯು, ಅಗ್ನಿ, ನೆಲ, ಜಲ- ಆದದ್ದು. ವಿವಿಧ ಜೀವಿಗಳ ಗುಣ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತವೆ. ಬೆಕ್ಕಿನ ಸ್ವಭಾವವೇ ಬೇರೆ, ನಾಯಿಯ ಸ್ವಭಾವವೇ ಬೇರೆ, ಮನುಷ್ಯನ ಸ್ವಭಾವವೇ ಬೇರೆ. ಮನುಷ್ಯರಲ್ಲೂ ವಿವಿಧ ಸ್ವಭಾವದವರನ್ನು ಕಾಣುತ್ತೇವೆ. ಈ ವ್ಯತ್ಯಾಸಗಳಿಗೂ ಕಾರಣ ತರಂಗಗಳೇ ಆಗಿವೆ. ‘Birds of same feather flock together’ ಎಂಬಂತೆ ನೀವುಗಳು ಇಲ್ಲಿ ಒಟ್ಟಿಗೇ ಸೇರುವುದಕ್ಕೂ ನಿಮ್ಮಲ್ಲಿನ ತರಂಗಗಳು ಹೊಂದಾಣಿಕೆಯಾಗಿರುವುದೇ ಕಾರಣ.
     ವಾಸ್ತು (ವಾಸ್ತುಬ್ರಹ್ಮ ಅಥವ ವಾಸ್ತು ಪುರುಷ) ಅನ್ನುವುದು ಒಂದು ಶಕ್ತಿಯಾಗಿದ್ದು, ಇದರಿಂದಲೇ, ಇದರ ಮೂಲಕವೇ ಭೌತಿಕ ಸೃಷ್ಟಿ ಸಂಭವಿಸುತ್ತದೆ. ಇದನ್ನು ಧಾರ್ಮಿಕವಾಗಿ ದೇವರು ಅನ್ನುತ್ತಾರೆ, ಸೃಷ್ಟಿಕರ್ತ ಅನ್ನುತ್ತಾರೆ, ವೈಜ್ಞಾನಿಕವಾಗಿ ಕೇಂದ್ರೀಕೃತ ಶಕ್ತಿ ಕೇಂದ್ರ ಅನ್ನುತ್ತಾರೆ. ವಾಸ್ತು ಅನ್ನುವ ಪದದ ನಿಖರ ಅರ್ಥವೆಂದರೆ ಶಾಶ್ವತವಾಗಿ ಇರುವಂತಹದು. 
     ಭಾರತದಲ್ಲಿನ ದೇವಸ್ಥಾನಗಳು, ಈಜಿಪ್ಟಿನಲ್ಲಿನ ಪಿರಮಿಡ್ಡುಗಳು, ಮುಂತಾದವು ಗಣಿತದ ಲೆಕ್ಕಾಚಾರಗಳನ್ನು ಆಧರಿಸಿ ನಿರ್ಮಿಸಿದ್ದಾಗಿವೆ. ಆ ಸ್ಥಳಗಳಿಗೆ ಹೋದಾಗ ಆಗುವ ನಮ್ಮ ಅನುಭವಗಳಿಂದಲೇ ಇದನ್ನು ತಿಳಿಯಬಹುದು. ಅಲ್ಲಿನ ಕಟ್ಟಡ ರಚನೆಯ ರೀತಿಯ ಕಾರಣಗಳಿಂದ ಉಂಟಾಗುವ ತರಂಗಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿರುವ ಪ್ರಬಾವೀ ತರಂಗಗಳೇ ಬೇರೆ ರೀತಿಯಲ್ಲಿರುತ್ತವೆ. ವಾಸ್ತು ಪ್ರಕಾರ, ಗಣಿತದ ಲೆಕ್ಕಾಚಾರಗಳಿಗೆ ಅನುಗುಣವಾಗಿ ಕಟ್ಟಡಗಳನ್ನು ರಚಿಸಿದರೆ ಅದಕ್ಕೆ ತಕ್ಕಂತೆ ಮನುಷ್ಯನ ಸ್ವಭಾವಗಳ ಮೇಲೂ ಅದು ಪ್ರಭಾವ ಬೀರುತ್ತವೆ. ಅಪರಾಧಗಳ ಪ್ರಮಾಣವನ್ನೂ ಲೆಕ್ಕಾಚಾರದ ರಚನೆಗಳು ತಗ್ಗಿಸುತ್ತವೆ. ಇದನ್ನು ಪರಿಶೀಲಿಸಬಹುದಾಗಿದೆ. ಜೀವಿಗಳಿಗೆ ಆಯಸ್ಸಿನ ಮಿತಿ ಇರುಂತೆ ಕಟ್ಟಡದ ವಾಸ್ತುವಿಗೂ ಮಿತಿ ಇರುತ್ತದೆ.
     ಸೀಮಿತ ಅವಧಿಯಲ್ಲಿ ಈ ವಿಷಯದ ಕುರಿತು ತಿಳಿಸುವುದು ಸುಲಭವಲ್ಲ. ಡಾ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನಾಲಜಿ ವಿದ್ಯಾಲಯದಲ್ಲಿ ವಾಸ್ತುಶಾಸ್ತ್ರವನ್ನು ವೈಜ್ಞಾನಿಕವಾಗಿ ಕಲಿಸುವ ಕೆಲಸ ನಡೆಯುತ್ತಿದೆ. ವಾಸ್ತುವಿಗೆ ಸಂಬಂಧಿಸಿದ ಸಂದೇಹ, ಸಲಹೆಗಳಿಗೆ ಮುಕ್ತವಾಗಿ ಸಂಪರ್ಕಿಸಿ ಪರಿಹಾರ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಹಲವಾರು ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಆನ್ ಲೈನ್ ಮೂಲಕ ಶಿಕ್ಷಣ ಕೊಡಲಾಗುತ್ತಿದೆ ಮತ್ತು ಪ್ರತ್ಯಕ್ಷ ತರಗತಿಗಳಿಗೂ, ತರಬೇತಿಗೂ ಅವಕಾಶ ಮಾಡಲಾಗಿದೆ. ಆಸಕ್ತರು ಪ್ರಯೋಜನ ಹೊಂದಬಹುದು. 
     ಸೂರ್ಯ ಸಿದ್ಧಾಂತದಲ್ಲಿ ಹೇಳಿರುವಂತೆ ಖಾಲಿ ಸ್ಥಳದಲ್ಲಿನ ಪ್ರತಿಯೊಂದು ಕಣವೂ ಒಂದೊಂದು ಶಕ್ತಿಯ ಕಣಜವಾಗಿದ್ದು, ಶೃತಿಬದ್ಧವಾಗಿ ಚಲಿಸುತ್ತಿರುತ್ತದೆ/ಕುಣಿಯುತ್ತಿರುತ್ತದೆ. ಇಡೀ ವಿಶ್ವವು ಇಂತಹ ಕಣಗಳಿಂದ ತುಂಬಿದೆ. ವಾಸ್ತುಶಾಸ್ತ್ರ ಅನ್ನುವುದು ಇದನ್ನು ಭೌತಿಕ ಪ್ರಪಂಚಕ್ಕೆ ಕಲೆ, ಸಂಗೀತ, ನೃತ್ಯ, ಬರಹ, ಕಟ್ಟಡ ವಿನ್ಯಾಸ, ಮುಂತಾದುವುಗಳಿಂದ ಅಳವಡಿಸುವ ವಿಜ್ಞಾನವಾಗಿದೆ. ಜೀವಿಗಳ ಒಳಗೂ ಸಹ ಇಂತಹ ತರಂಗಗಳನ್ನು ಉಂಟುಮಾಡುವ ಕಣಗಳಿದ್ದು ಅವು ಶರೀರ ವೀಣೆಯ ತಂತಿಗಳಾಗಿ ಕೆಲಸ ಮಾಡುತ್ತವೆ. ಮಹಾಮುನಿ ಹೇಳುವಂತೆ ಮನುಷ್ಯನ ಶರೀರದ ತರಂಗಗಳು (ಜೀವಾತ್ಮನ ತರಂಗಗಳು) ಪರಮಾತ್ಮನ ತರಂಗಗಳೊಂದಿಗೆ ಹೊಂದಾಣಿಕೆಯಾದರೆ ಮೋಕ್ಷ ಸಾಧ್ಯ.


-ಕ.ವೆಂ.ನಾಗರಾಜ್.
**************
ಸತ್ಸಂಗದ ಕೆಲವು ಚೇತೋಹಾರಿ ದೃಷ್ಯಗಳು:

















ವಿಶಿಷ್ಟ ವ್ಯಕ್ತಿತ್ವದ ಡಾ. ಜೆಸ್ಸಿ(ಮಾಯಾ) ಜೆ.ಮರ್ಸೆ


     ಡಾ. ಜೆಸ್ಸಿ ಜೆ.ಮರ್ಸೆ ಪ್ರಸ್ತುತ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಲಿ. ಯೂನಿವರ್ಸಿಟಿಯ ಚಾನ್ಸಲರ್ ಆಗಿದ್ದಾರೆ. ಅವರ ಗುರುಗಳಾದ ವಾಸ್ತು ವ್ಯಾಸ ದಿ. ಡಾ. ಗಣಪತಿ ಸ್ಥಪತಿ ಇವರ ಸಹಯೋಗದಲ್ಲಿ ಸಿದ್ಧಪಡಿಸಿದ ಸಿಲಬಸ್ಸಿನಂತೆ ಈ ಸಂಸ್ಥೆಯಲ್ಲಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತುಶಾಸ್ತ್ರ, ಸ್ಥಾಪತ್ಯವೇದದ ಅನುಸಾರ ಕಟ್ಟಡ ರಚನೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ವಿಷಯಗಳ ಕುರಿತು ಡಾ. ಮರ್‍ಸೇಯವರು ಹಲವಾರು ಪಠ್ಯಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ವೇದಿಕೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ. ಹಲವಾರು ವರ್ಷಗಳ ಕಾಲ ಡಾ. ಗಣಪತಿ ಸ್ಥಪತಿಯವರ ಮತ್ತು ಮಹಾಮುನಿ ಮಾಯನ್‌ರವರ ಬರಹಗಳನ್ನು ಆಳವಾಗಿ ಅಧ್ಯಯನ ನಡೆಸಿದ್ದಾರೆ. ಡಾ. ಗಣಪತಿ ಸ್ಥಪತಿ ಇವರನ್ನು ಮಹಾಮುನಿ ಮಾಯನ್ ನೆನಪಿನಲ್ಲಿ ಮಾಯಾ ಎಂದು ಕರೆಯುತ್ತಿದ್ದರು.
     ಇವರು ಪ್ರಾಕೃತಿಕ ಚಿಕಿತ್ಸಾ ಮತ್ತು ವೈದ್ಯಪದ್ಧತಿಯಲ್ಲಿ ಸುಮಾರು ೨೫ ವರ್ಷಗಳ ಕಾಲ ಚಿಕಿತ್ಸಕರಾಗಿದ್ದರು. ಹಲವಾರು ಚಿಕಿತ್ಸಾ ಪದ್ಧತಿಗಳನ್ನು ಅಭಿವೃದ್ಧಿಪಡಿಸಿ ಕಾಯಿಲೆಗಳನ್ನು ಗುಣಪಡಿಸುವ ಇವರ ರೀತಿಗಳಿಗೆ ಇತರ ವೃತ್ತಿಪರರಿಂದಲೂ ಬೇಡಿಕೆಯಿತ್ತು. ಇದಕ್ಕೂ ಮುನ್ನ ಕಾಲೇಜಿನ ಪ್ರೊಫೆಸರ್ ಆಗಿ ಅಮೆರಿಕಾದ ಹಲವು ಯೂನಿವರ್‍ಸಿಟಿಗಳಲ್ಲಿ ರಚನಾತ್ಮಕತೆ, ಮಾಧ್ಯಮ, ಸಮಾಜಿಕತೆ ಮತ್ತು ದೃಷ್ಯ ಅಧ್ಯಯನಗಳ ಕುರಿತು ಬೋಧಿಸಿದ್ದರು. ಸುಮಾರು ೩೮ ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಮಾನಸಿಕ ಕೇಂದ್ರಿತ ವ್ಯಕ್ತಿತ್ವ ಗುಣವರ್ಧನಾ ವಿಷಯಗಳು, ಧ್ಯಾನ, ಯೋಗ, ಅತೀಂದ್ರಿಯ ವಿಷಯ ಮತ್ತು ಚಿಕಿತ್ಸಾ ವಿಷಯಗಳಲ್ಲಿ ಅಮೆರಿಕಾದ್ಯಂತ ಹಲವಾರು ಸೆಮಿನಾರುಗಳನ್ನು ನಡೆಸಿದ್ದಾರೆ. ೧೯೮೦ರ ದಶಕದಲ್ಲಿ ಡಾ. ಮರ್‍ಸೇಯವರು ಹಲವಾರು ಕಂಪೆನಿಗಳಿಗೆ ತಂಡದ ರಚನೆ ಮತ್ತು ವ್ಯಕ್ತಿಗತ ಅಭಿವೃದ್ಧಿಗಳ ಕುರಿತು ಸಲಹಾಕಾರರಾಗಿ ಕೆಲಸ ಮಾಡಿದ್ದಾರೆ. ೧೯೭೦ರ ಅಂತ್ಯದಲ್ಲಿ ಅವರು ಚಿತ್ರೀಕರಣ, ವಿಡಿಯೋ ಹಾಗೂ ವ್ಯವಹಾರ ಮತ್ತು ಶಿಕ್ಷಣದ ಸಲುವಾಗಿ ಬಹುವಿಧ ಮಾಧ್ಯಮವನ್ನು ಸ್ಥಾಪಿಸಿ ಕಾರ್ಯ ಮಾಡಿದ್ದರು. 
     ಡಾ.ಮರ್‍ಸೇಯವರು ಒಬ್ಬ ಸೈನ್ಯದ ಅಧಿಕಾರಿಯೂ ಆಗಿ ೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಸೈನ್ಯದಲ್ಲಿ ಅವರು ಸಿಬ್ಬಂದಿ ವ್ಯವಸ್ಥೆ ಮತ್ತು ತರಬೇತಿಯ ಜವಾಬ್ದಾರಿ ಹೊಂದಿ ತರಬೇತಿ ಮತ್ತು ಪರೀಕ್ಷೆಗಳಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. ಸಿಬ್ಬಂದಿ ವ್ಯವಸ್ಥಾಪಕರಾಗಿ ಅವರು ೧೭೦೦೦ ಸಿಬ್ಬಂದಿ ನೇಮಕಾತಿಗೆ ಕಾರಣರಾಗಿದ್ದರು.
     ಚಿಕ್ಕ ವಯಸ್ಸಿನಲ್ಲೇ ನ್ಯೂಯಾರ್ಕಿನ ತಮ್ಮ ತಂದೆಯ ಡೈರಿ ಫಾರ್ಮಿನಲ್ಲಿ ಕಟ್ಟಡಗಳನ್ನು ರಚಿಸಲು ಅವರು ಪ್ರಾರಂಭಿಸಿದ್ದರು. ಈ ಕಟ್ಟಡಗಳ ರಚನೆ, ಪುನರ್ನಿರ್ಮಾಣಗಳ ಪ್ರವೃತ್ತಿಯನ್ನು ಜೀವನಪೂರ್ತಿ ಮುಂದುವರೆಸಿಕೊಂಡು ಅವರು ೪೦ ವರ್ಷಗಳಿಗೂ ಹೆಚ್ಚುಕಾಲದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೯೦ರಲ್ಲಿ ಅವರು ಮನೆಗಳನ್ನು ಖರೀದಿಸಿ ಪುನರ್ವಿನ್ಯಾಸಗೊಳಿಸಿ ಮಾರುವ ಒಂದು ಕಂಪೆನಿಯನ್ನು ಪ್ರಾರಂಭಿಸಿದರು. ಕಾಲಾಂತರದಲ್ಲಿ ಡಾ. ಸ್ಥಪತಿಯವರೊಂದಿಗೆ ಅಧ್ಯಯನದ ನಂತರ ಅದು ವಾಸ್ತು ಪ್ರಕಾರ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ಅನುಸರಿಸಿ ಪುನರ್ವಿನ್ಯಾಸಗೊಳಿಸುವಲ್ಲಿ ಬದಲಾಯಿತು.
     ಡಾ. ಮರ್‍ಸೇಯವರು ಸಮಾಜವಿಜ್ಞಾನ ಮತ್ತು ಸಾಮಾಜಿಕ ಕಾರ್ಯದ ವಿಷಯಗಳಲ್ಲಿ ಬಿ.ಎ. ಪದವಿ, ಸಂವಹನ ಮತ್ತು ಮಲ್ಟಿ ಮಿಡಿಯಾಗಳಲ್ಲಿ ಎಂ.ಎ. ಪದವಿ, ಪ್ರಾಕೃತಿಕ ವೈದ್ಯದಲ್ಲಿ ಡಾಕ್ಟೊರೇಟ್ ಮತ್ತು ಸೈಕಾಲಜಿಕಲ್ ಅಂಡ್ ಕ್ವಾಂಟಿಟೇಟಿವ್ ಫೌಂಡೇಶನ್ನುಗಳಲ್ಲಿ ಪಿ.ಹೆಚ್.ಡಿ. ಗಳಿಸಿದ್ದು, ದೃಶ್ಯ ಶಿಕ್ಷಣ ವಿಸುಯಲ್ ಆಂಥ್ರೊಪಾಲಜಿ (ಕ್ರಿಯಾತ್ಮಕತೆ ಮತ್ತು ಮಾನವ ಸಂವೇದನೆ) ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸೂಚನಾತ್ಮಕ ವಿನ್ಯಾಸ ತಯಾರಿಕೆಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಅವರ ವಿಚಾರಗಳನ್ನು Visualizer –Verbalizer Cognitive Styles ಎಂಬ ರ್ಶೀಕೆಯಲ್ಲಿ ಪ್ರಕಟಿಸಿದ್ದಾರೆ. ಧ್ಯಾನ ಮತ್ತು ವೇದವಿಚಾರಗಳಲ್ಲಿ ೪೦ ವರ್ಷಗಳಿಗೂ ಮೇಲ್ಪಟ್ಟು ಅವಧಿಯ ವಿದ್ಯಾರ್ಥಿಯಾಗಿದ್ದಾರೆ. ಅವರಲ್ಲಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ಪೂರ್ಣಗೊಳಿಸಿದ ಮತ್ತು ಡಾಕ್ಟೊರೇಟ್ ಪಡೆದ ಪ್ರಮಾಣಪತ್ರಗಳಿವೆ. ಆಳವಾದ ಅಧ್ಯಯನ ಮಾಡಿರುವ ಅವರು ಈ ವಿಷಯಗಳ ಕುರಿತು (ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತು ಶಾಸ್ತ್ರಗಳು, ಸ್ಥಾಪತ್ಯ ವೇದದ ಕಟ್ಟಡ ವಿನ್ಯಾಸ) Fabric of The Universe: The Origins, Implications, and Applications of Vastu Science and Vaastu Science and technology  ಎಂಬ ರ್ಶೀಕೆಯ ಪುಸ್ತಕದಲ್ಲಿ ಮಂಡಿಸಿದ ವಿಚಾರಕ್ಕೆ ಪ್ರೋತ್ಸಾಹಕರ ಪುಸ್ತಕ ವಿಮರ್ಶೆಗಳು ಬಂದಿವೆ. 
     ಇವರ ವ್ಯಾಪಕವಾದ ಜೀವನಾನುಭವ ಮತ್ತು ಶಿಕ್ಷಣ ಹಾಗೂ ವಾಸ್ತು ವ್ಯಾಸ ಡಾ. ವಿ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಯೂನಿವರ್‍ಸಿಟಿ ಒಂದು ಉತ್ತಮವಾದ ಮತ್ತು ಘನವಾದ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ವಾಸ್ತುಶಾಸ್ತ್ರ ಮತ್ತು ಸ್ಥಾಪತ್ಯ ವೇದದ ಕಟ್ಟಡ ವಿನ್ಯಾಸ ನಿರ್ಮಾಣ) ಕಲಿಕೆಯ ಕೇಂದ್ರವಾಗಿದೆ. ಡಾ. ಮರ್‍ಸೇಯವರು ಶಾಸ್ತ್ರಗಳಿಂದ ಸಂಕೀರ್ಣವಾದ ಮತ್ತು ವಿವಿಧ ಮಾಹಿತಿಗಳನ್ನು ಕ್ರೋಢೀಕರಿಸಿ ಅದನ್ನು ಪಾಶ್ಚಿಮಾತ್ಯ ಮನಸ್ಸುಗಳಿಗೆ ದೊರೆಯುವಂತೆ ಮಾಡಿದ್ದಾರೆ. ಅವರ ಗುರಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತು ವಿನ್ಯಾಸ, ಪಾರಂಪರಿಕ ಭಾರತೀಯ ವಿನ್ಯಾಸ ಮತ್ತು ಸ್ಥಾಪತ್ಯ ವೇದದ ಅನುಸಾರ ಕಟ್ಟಡ ವಿನ್ಯಾಸ ಕುರಿತು ಒಂದು ಅಧಿಕೃತವಾದ ಮಾದರಿ ಶಿಕ್ಷಣ ಮತ್ತು ಕಲಿಕೆಯನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕಾದಲ್ಲಿ ಪ್ರಚುರಿಸುವುದಾಗಿದೆ. 
-ಕ.ವೆಂ.ನಾಗರಾಜ್.
***************
[ಡಾ. ಜೆಸ್ಸಿಯವರ ಶಿಷ್ಯ ಅಭಿಲಾಷ್ ನೀಡಿದ ವಿವರಗಳನ್ನು ಆಧರಿಸಿದೆ.]

ಶುಕ್ರವಾರ, ಜನವರಿ 2, 2015

ರೋದಿಸುತ್ತಿರುವ ಧರೆ

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ನಮ್ಮ ವಿಚಾರ, ಸಿದ್ಧಾಂತಗಳನ್ನು ಎಲ್ಲರೂ ಒಪ್ಪಬೇಕು ಅನ್ನುವವರು, ನಮ್ಮದೇ ಸರಿ ಅನ್ನುವವರು. ಅದಕ್ಕಾಗಿ ಸಂಘರ್ಷಗಳು, ರಕ್ತಪಾತಗಳು ಹಿಂದಿನಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಈಗಲೂ ಮುಂದುವರೆಯುತ್ತಿವೆ. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆಯಾದಷ್ಟು ಜಡಜಗತ್ತಿನ ಬಗ್ಗೆ ಹೆಚ್ಚು ಚರ್ಚೆಯಾದಂತಿಲ್ಲ. ಈ ಬಗ್ಗೆ ಈ ಇಲ್ಲಿ ಚರ್ಚಿಸೋಣ.
     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ  ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ,  ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು. 
     ಮೊದಲೇ ಪ್ರಸ್ತಾಪಿಸಿದಂತೆ ಮೂರು ಅಂಶಗಳು, ಜಗತ್ತು ಅರ್ಥಾತ್ ಪ್ರಕೃತಿ, ಜೀವ ಮತ್ತು ದೇವ, ಇವುಗಳ ಅಸ್ತಿತ್ವದ ರೀತಿ ತರ್ಕಿಸುವವರಿಗೆ, ಜಿಜ್ಞಾಸೆ ಮಾಡುವವರಿಗೆ ಬಹು ದೊಡ್ಡ ಆಯಾಮವನ್ನು ಒದಗಿಸುತ್ತದೆ. ದೇವರು ಎಂಬ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ, ಅದು ಗೋಚರವೋ, ಅಗೋಚರವೋ, ಆಕಾರವೋ, ನಿರಕಾರವೋ, ಏನೋ ಒಂದು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ದೇವರ ಅಸ್ತಿತ್ವವನ್ನು ನಂಬದ ನಾಸ್ತಿಕರೂ ಸಹ ಅಗೋಚರ ನಿಯಂತ್ರಕ ಶಕ್ತಿಯ ಬಗ್ಗೆ ಒಪ್ಪುತ್ತಾರೆ. ಹಾಗಾದರೆ ಅಂತಹದೊಂದು ಇದೆ, ಅದು ಅನಂತ ಮತ್ತು ಅನೂಹ್ಯ, ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದು ಒಪ್ಪಬಹುದು. ಹಾಗೆಯೇ ಜೀವದ ಅಸ್ತಿತ್ವದ ಬಗ್ಗೆ ಸಹ ಹಿಂದೆ ಚರ್ಚಿಸಲಾಗಿದೆ. (ಲೇಖನ: ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!) ಈಗ ಜಡ ಪ್ರಕೃತಿಯ ಬಗ್ಗೆ ಹೇಳುವುದಾದರೆ ಮೇಲೆ ತಿಳಿಸಿದಂತೆ ಅದು ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ ಎಂಬುದನ್ನು ನಾವು ವ್ಶೆಜ್ಞಾನಿಕ ದೃಷ್ಟಿಯಿಂದ ಯೋಚಿಸಿದರೂ ಒಪ್ಪಲೇಬೇಕಾದ ಸಂಗತಿ. ಹೀಗೆ ಜಗತ್ತು, ಜೀವ ಮತ್ತು ದೇವ ಈ ಮೂರೂ ಸಂಗತಿಗಳು ಶಾಶ್ವತ, ಅನಂತವೆಂಬ ವಾದ ಅತ್ಯಂತ ಸಮಂಜಸವಾಗಿ ತೋರುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಮ್ಪವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ. 
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. 
     ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಈ ದೇಹ ಪಂಚಭೂತಗಳಿಂದ -ನೆಲ, ಜಲ, ಆಕಾಶ, ವಾಯು, ಅಗ್ನಿ- ಆದುದು ಎಂಬುದು ಸರ್ವವಿದಿತ. ಈ ಪಂಚಭೂತಗಳಿಂದ ಸೃಷ್ಟಿಯಾದ ದೇಹದಲ್ಲಿರುವ ಜೀವದಿಂದ ಆ ದೇಹಕ್ಕೆ ಅರ್ಥ ಬರುತ್ತದೆ. ಸತ್ತಾಗ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ, ಅದರೊಳಗಿನ ಜೀವಾತ್ಮ ಇನ್ನೊಂದು ರೂಪದಲ್ಲಿ ಅಸ್ತಿತ್ವ ಹೊಂದುತ್ತದೆ. ಪ್ರತಿ ಮಾನವನೂ ಮೂರು ರೀತಿಯ ಋಣಗಳನ್ನು-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ತೀರಿಸಬೇಕೆಂದು ಹೇಳುತ್ತಾರೆ. ಈ ದೇವಋಣವನ್ನು ತೀರಿಸುವುದಾದರೂ ಹೇಗೆ? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ವಿಚಾರ ಮಾಡಬೇಕಾದ ಸಂಗತಿಯಿದಲ್ಲವೇ?

ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ, ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ ಇದೇ ಹೊರತು ಮತ್ತೊಂದಲ್ಲ. 
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಪ್ರಕೃತಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ!
-ಕ.ವೆಂ.ನಾಗರಾಜ್


[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]
**********************************
ದಿನಾಂಕ 31.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.