ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ವಿಶೇಷ ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಶೇಷ ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 30, 2013

ವಿಷವಿಕ್ಕಿದವಗೆ ದಯೆ ತೋರಿಸಿದ ದಯಾನಂದರು!

ಇಂದು ಮಹರ್ಷಿ ದಯಾನಂದರ ಸ್ಮರಣದಿನ!
     ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು. ಮಾರಿಷಸ್ ಸರ್ಕಾರ ಅವರ ನೆನಪಿನಲ್ಲಿ ಹೊರಡಿಸಿದ್ದ ಅಂಚೆ ಚೀಟಿಗಳ ಚಿತ್ರವಿದು.

ಶನಿವಾರ, ಜನವರಿ 19, 2013

ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ



     ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು:
"ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ:
"ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, 
"ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದರು.
     ಆ ಮಾಧವನೇ ಮುಂದೆ ವಿದ್ಯಾರಣ್ಯರೆಂಬ ಹೆಸರಿನಿಂದ ಪ್ರಸಿದ್ಧನಾಗಿ ವಿಜಯನಗರ ಸಂಸ್ಥಾನದ ಸ್ಥಾಪಕನೆನಿಸಿದ್ದು ಈಗ ಇತಿಹಾಸ. ಮಾಧವನ ಈ ನಿರ್ಧಾರಕ್ಕೆ ದೇಶದ ಅಂದಿನ ಸ್ಥಿತಿ ಗತಿಗಳೇ ಪ್ರಮುಖ ಕಾರಣವಾಗಿದ್ದಿರಬಹುದು. ಪಂಪಾಕ್ಷೇತ್ರದಲ್ಲಿ (ಈಗಿನ ಹಂಪೆ) ಮಾಯನಾಚಾರ್ಯ ಮತ್ತು ಶ್ರೀಮತೀದೇವಿಯವರ ಪುತ್ರನಾಗಿ ಕ್ರಿ.ಶ. ೧೨೬೮ರ ಸುಮಾರಿಗೆ ಜನಿಸಿದ ಮಾಧವನಿಗೆ, ಸಾಯಣ, ಭೋಗನಾಥ ಎಂಬ ತಮ್ಮಂದಿರು ಮತ್ತು ಸಿಂಗಲಾ ಎಂಬ ತಂಗಿಯೂ ಇದ್ದರು. ತುಂಗಭದ್ರಾ ತೀರದಲ್ಲಿದ್ದ ಶಂಕರಾನಂದ ಎಂಬ ಗುರುಗಳಲ್ಲಿ ಹಲವು ವರ್ಷಗಳ ಕಾಲ ಮಾಧವ, ಸಾಯಣ ಮತ್ತು ಭೋಗನಾಥರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರು. ಶಂಕರಾನಂದರು ನಂತರ ಅವರನ್ನು ಉದ್ದೇಶಿಸಿ, "ಮಕ್ಕಳೇ, ನಾನು ಕಲಿಸಿದ್ದ ಎಲ್ಲವನ್ನೂ ನೀವು ಶ್ರದ್ಧೆಯಿಂದ ಕಲಿತಿರುವಿರಿ. ಇನ್ನು ನೀವು ಕಾಂಚಿಯಲ್ಲಿರುವ ನನ್ನ ಗುರುಗಳಾದ ಶ್ರೀ ವಿದ್ಯಾತೀರ್ಥರಲ್ಲಿ ವಿದ್ಯಾಭ್ಯಾಸ ಮುಂದುವರೆಸಿರಿ" ಎಂದು ಹೇಳಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಕೋರಿ ಗುರುಗಳಿಗೆ ಪತ್ರ ಬರೆದು ಕೊಟ್ಟರು. 
     ಆ ಸಮಯದಲ್ಲಿ ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯು ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳನ್ನು ಕಲಿಸುವ ಪ್ರಸಿದ್ಧ ಕ್ಷೇತ್ರವಾಗಿತ್ತು. ವಿದ್ಯಾತೀರ್ಥರ ವಿಶ್ವಾಸ ಗಳಿಸುವಲ್ಲಿ ಮತ್ತು ಅವರನ್ನು ಗುರುವಾಗಿ ಹೊಂದುವಲ್ಲಿ ಮಾಧವ ಅದೃಷ್ಟಶಾಲಿಯಾಗಿದ್ದ. ಶಂಕರಾನಂದ, ಭಾರತೀಕೃಷ್ಣ, ಶ್ರೀಕಂಠನಾಥ, ಮೊದಲಾದ ಗುರುಗಳಿಂದಲೂ ಪಡೆದ ಮಾರ್ಗದರ್ಶನ ಅವನ ಮುಂದಿನ ನಿರ್ಧಾರ ರೂಪಿಸುವಲ್ಲಿ ಪಾತ್ರವಹಿಸಿತ್ತು. ದೇಶಪ್ರೇಮ, ಧೃಢತೆ, ಸೇವಾಮನೋಭಾವ, ಪರಧರ್ಮ ಸಹಿಷ್ಣುತೆ, ಸಮಯೋಚಿತ ನಿರ್ಧಾರ ಕೈಗೊಳ್ಳುವ ಶಕ್ತಿ, ತಾಳ್ಮೆ, ಪ್ರಚಲಿತ ವಿದ್ಯಮಾನಗಳ ಅರಿವು, ಜಗತ್ತಿನ ಒಳಿತಿಗೆ ಕೆಲಸ ಮಾಡುವ ಮನಸ್ಸುಗಳು ಆ ವೇಳೆಗಾಗಲೇ ಮಾಧವನಲ್ಲಿ ರಕ್ತಗತವಾಗಿದ್ದವು. ಇತರರಂತೆ ಕೇವಲ ವಿದ್ಯಾಭ್ಯಾಸ, ಮದುವೆ, ಸಾಮಾನ್ಯ ಜೀವನ ಸಾಗಿಸುವುದಕ್ಕೆ ಮಾತ್ರ ತಾನು ಹುಟ್ಟಿಲ್ಲವೆಂದು, ತಾನು ಸಾಧಿಸಬೇಕಾದುದು ಇನ್ನೂ ಹೆಚ್ಚಿನದೆಂದು ಅವನ ಒಳ ಮನಸ್ಸು ಹೇಳುತ್ತಿತ್ತು. ವೇದ, ಉಪನಿಷತ್ತುಗಳು, ತತ್ವಕಲೆ, ಸಾಹಿತ್ಯಗಳಲ್ಲಿ ಪ್ರಾವೀಣ್ಯತೆ ಪಡೆದ ಮಾಧವನೊಡನೆ ಗುರು ವಿದ್ಯಾತೀರ್ಥರು ಕೇಳಿದ್ದ ಪ್ರಶ್ನೆಯೇ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವ, "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಎಂಬುದು! 'ಕನ್ನಡ ನೆಲದಲ್ಲಿ ತಾಯಿ ಭುವನೇಶ್ವರಿಯ ಕೃಪೆಯಿಂದ ಒಂದು ರಾಜ್ಯಸ್ಥಾಪನೆ ಮಾಡಿ ದಾಳಿಕೋರರನ್ನು ಓಡಿಸಬೇಕು, ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಇರುವ ಅಪಾಯಗಳನ್ನು ನಿಗ್ರಹಿಸಬೇಕು. ಅದಕ್ಕಾಗಿ ಭುವನೇಶ್ವರಿಯನ್ನು ಕುರಿತು ತಪಸ್ಸು ಮಾಡಬೇಕು' ಎಂದು ಮನದೊಳಗೆ ಹುದುಗಿದ್ದ ಭಾವನೆಯನ್ನು ಗುರುಗಳ ಮುಂದೆ ವ್ಯಕ್ತಪಡಿಸಿದಾಗ ಗುರುಗಳು, "ನೀನು ಸಾಮಾನ್ಯನಲ್ಲಪ್ಪ. ನೀನು ಹುಟ್ಟಿರುವುದೇ ಸಾಧನೆ ಮಾಡುವ ಸಲುವಾಗಿ. ನೀನು ಈ ದೇಶ ಮತ್ತು ಧರ್ಮವನ್ನು ರಕ್ಷಿಸುತ್ತೀಯೆ" ಎಂದು ಮನತುಂಬಿ ಹೇಳಿದರು. 
     ಕಾಂಚಿಗೆ ಹೊರಟಿದ್ದ ಸಮಯದಲ್ಲೇ ಮಾಧವನ ತಂದೆ ಮಾಯನಾಚಾರ್ಯ ಸ್ವರ್ಗವಾಸಿಯಾಗಿದ್ದರು, ವಿದ್ಯಾಭ್ಯಾಸದ ನಂತರ ಪಂಪಾಕ್ಷೇತ್ರಕ್ಕೆ ವಾಪಸು ಬಂದ ಮಾಧವ ತನ್ನ ತಾಯಿ ಮತ್ತು ತಂಗಿಯನ್ನು ಸಲಹುವ ಜವಾಬ್ದಾರಿ ವಹಿಸಿಕೊಂಡು, ಅದಕ್ಕಾಗಿ ಪೌರೋಹಿತ್ಯವನ್ನು ಆಶ್ರಯಿಸಿದ. ತಂಗಿಯ ಮದುವೆ ನೆರವೇರಿಸಿದ. ವೀತಿಹೋತ್ರಿಯ ಮಗಳು ವೈತಿಹೋತ್ರಿಯೊಡನೆ ಅವನ ವಿವಾಹವಾತು. ಈ ರೀತಿಯ ಜೀವನದಲ್ಲಿ ಅವನಿಗೆ ಸಮಾಧಾನವಿರಲಿಲ್ಲ. ಗುರುಗಳೊಡನೆ ತಾನು ಹೇಳಿದ್ದ ಮಾತುಗಳು ಅವನನ್ನು ಸದಾ ಎಚ್ಚರಿಸುತ್ತಿದ್ದವು. ಆ ಸಮಯದಲ್ಲಿ ಶ್ರೀರಂಗಮ್ ಮೇಲೆ ದಾಳಿ ಮಾಡಿದ ಡೆಲ್ಲಿ ಸುಲ್ತಾನನ ದಳಪತಿ ಮಲ್ಲಿಕ್ ಕಾಫರ್ ಅಲ್ಲಿ ನಡೆಸಿದ ಭೀಭತ್ಸ ಅತ್ಯಾಚಾರ, ಕೊಲೆಗಳು, ಲೂಟಿ, ದೇವರ ವಿಗ್ರಹಗಳ ಧ್ವಂಸ ಕಾರ್ಯ ಮಾಧವನ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅಲ್ಲಿನ ಜನರು ಕೇವಲ ಕೆಲವು ದಿನ ಶಪಿಸಿ ಸುಮ್ಮನಾಗಿದ್ದಲ್ಲದೆ, ನಂತರದಲ್ಲಿ ಏನೂ ಆಗಿಲ್ಲವೆಂಬಂತೆ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಭಟಿಸಬೇಕೆಂಬ ಮನೋಭಾವವೇ ಅವರಲ್ಲಿ ಇರುತ್ತಿರಲಿಲ್ಲ. ಆಳುವವರೂ ಸಹ ಸ್ವಾರ್ಥಪ್ರೇರಿತರಾಗಿ, ಸ್ವಾಭಿಮಾನರಹಿತರಾಗಿದ್ದರು. ಜನರನ್ನು ಜಾಗೃತಿಗೊಳಿಸುವ ಕೆಲಸ ಅತ್ಯಂತ ಮಹತ್ವದ್ದೆಂದು ಮಾಧವನಿಗೆ ಅರಿವಾಯಿತು.  ಬಹುಷಃ ಅದೇ ಮನೋಭಾವ ಇಂದಿಗೂ ನಮ್ಮ ಜನರಲ್ಲಿ ಕಂಡು ಬರುತ್ತಿದೆ. ಉಗ್ರಗಾಮಿಗಳಿಂದ ಭಯೋತ್ಪಾದಕ ಚಟುವಟಿಕೆಗಳು ನಡೆದಾಗ ಕೆಲವು ಪ್ರತಿಭಟನಾತ್ಮಕ ಹೇಳಿಕೆಗಳನ್ನು ನೀಡಿ, ನಂತರದಲ್ಲಿ ಮರೆತೇ ಬಿಡುವ ಸ್ವಭಾವ ಕಂಡುಬರುತ್ತಿಲ್ಲವೇ?
     ದಕ್ಷಿಣ ಭಾರತದಲ್ಲಿ ಆಗ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಜನರು ನರಸತ್ತವರಂತಿದ್ದರು. ದಾಳಿಕೋರರು ಎಗ್ಗಿಲ್ಲದೆ ಲೂಟಿ, ಆಕ್ರಮಣ, ಕೊಲೆ, ಅತ್ಯಾಚಾರ, ವಿಗ್ರಹಭಂಜನಗಳಲ್ಲಿ ತೊಡಗಿದ್ದರು. ಪ್ರತಿಭಟನೆ ಅತ್ಯಂತ ಕ್ಷೀಣ ಸ್ತರದಲ್ಲಿತ್ತು. ಬೆಂದ ಮನೆಯಲ್ಲಿ ಗಳ ಹಿರಿಯುವ ಮನೋಭಾವದವರಿಂದಾಗಿ ರಾಜಸತ್ತೆಗಳು ದುರ್ಬಲವಾಗಿದ್ದವು. ಇದ್ದಿದ್ದರಲ್ಲಿ ಕರ್ನಾಟಕದವರು ಪ್ರತಿರೋಧ ಒಡ್ಡಿದ್ದರು. ಒಂದು ಕಾಲದಲ್ಲಿ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕದಂಬರು, ಹೊಯ್ಸಳರು ತಮ್ಮ ರಾಜ್ಯವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದರು. ಹೊಸ ರಾಜ್ಯ ಸ್ಥಾಪಿಸುವ ಮಾಧವನ ಕನಸಿಗೆ ಬೆಂಬಲಿಸುವ ಜನರ ಕೊರತೆ, ಸಂಪತ್ತಿನ ಕೊರತೆ ಇತ್ತು. ಸ್ಫೂರ್ತಿ ನೀಡುವ ಕೆಲಸಕ್ಕೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಂಡು, ಅದು ತಮ್ಮ ಕೆಲಸವಲ್ಲವೆಂಬಂತೆ ಸುಮ್ಮನಾಗುತ್ತಿದ್ದರಷ್ಟೆ. ಆದರೆ ಮಾಧವ ನಿರಾಶನಾಗಲಿಲ್ಲ. ಗುರಿ ಸಾಧನೆಗಾಗಿ ಬಲ ಕ್ರೋಢೀಕರಿಸಲು ತಪಸ್ಸು ಮಾಡಬೇಕೆಂದುಕೊಂಡು, ಸೂಕ್ತ ಸ್ಥಳದ ಆಯ್ಕೆಗಾಗಿ ದೇಶದ ಹಲವೆಡೆ ಸುತ್ತಿ ಕೊನೆಗೆ ಪಂಪಾಕ್ಷೇತ್ರಕ್ಕೇ ವಾಪಸು ಬಂದ. ಈ ವೇಳೆಗೆ ಪತ್ನಿ ವೈತಿಹೋತ್ರಿ ಸಹ ನಿಧನಳಾದದ್ದು, ವಿಧಿಯೇ ಅವನನ್ನು ಪ್ರಾಪಂಚಿಕ ಸಂಗತಿಗಳಿಂದ ದೂರ ಮಾಡಿದಂತಾಗಿತ್ತು. ಪಂಪಾಕ್ಷೇತ್ರದ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ, ಹೇಮಕೂಟದಲ್ಲಿ ತಪಸ್ಸಿಗೆ ತೊಡಗಿದ. ಆಹಾರದ ಪರಿವೆಯಿಲ್ಲದಂತೆ ನಡೆಸಿದ ತಪಸ್ಸಿನ ಫಲವಾಗಿ ತಾಯಿ ಭುವನೇಶ್ವರಿಯ ಅಭಯ ಸಿಕ್ಕಿತು. ಅಂತರಂಗಕ್ಕೆ ದೊರೆತ ಆದೇಶದಂತೆ ಸಂನ್ಯಾಸಿಯಾಗಲು ನಿರ್ಧರಿಸಿದ ಮಾಧವ ಶೃಂಗೇರಿಯ ೧೧ನೆಯ ಗುರುಗಳಾದ ಶ್ರೀ ಭಾರತೀಕೃಷ್ಣ ತೀರ್ಥರಿಂದ ದೀಕ್ಷೆ ಪಡೆದು ವಿದ್ಯಾರಣ್ಯರೆಂಬ ಹೆಸರು ಪಡೆದು ಕಾಷಾಯ ವಸ್ತ್ರಧಾರಿಯಾದರು. ನಂತರದಲ್ಲಿ ಪಂಪಾಕ್ಷೇತ್ರದಲ್ಲಿ ಪ್ರತಿನಿತ್ಯ ವಿರೂಪಾಕ್ಷನನ್ನು ಆರಾಧಿಸುತ್ತಾ ತಮ್ಮ ಕನಸು ನನಸು ಮಾಡಬಲ್ಲ ವ್ಯಕ್ತಿಗಳಿಗೆ ನಿರೀಕ್ಷಿಸುತ್ತಾ ದಿನ ಕಳೆಯುತ್ತಿದ್ದರು. ಒಂದೊಂದು ದಿನ ಕಳೆದಾಗಲೂ, 'ಇಂದಿನ ದಿನ ವ್ಯರ್ಥವಾಯಿತಲ್ಲಾ' ಎಂದು ಕೊರಗುತ್ತಿದ್ದರು. 
   ಕೊನೆಗೊಮ್ಮೆ ನಿರೀಕ್ಷಿತ ಘಳಿಗೆ ಬಂದೇಬಿಟ್ಟಿತು. ಹರಿಹರ ಮತ್ತು ಬುಕ್ಕರೆಂಬ ಇಬ್ಬರು ಸೋದರರು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿಬಂದರು. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕರು. ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಮತ್ತು ಬರ್ಬರವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕನ ಹುಚ್ಚು ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಹರಿಹರ, ಬುಕ್ಕರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲಾಗಿತ್ತಂದೂ, ವಿದ್ಯಾರಣ್ಯರು ಅವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿದರೆಂದೂ ಐತಿಹ್ಯವಿದೆ. ತುಘಲಕ್ ಆನೆಗೊಂದಿಯ ರಾಜ ಜಂಬುಕೇಶ್ವರರಾಯನನ್ನು ಸೋಲಿಸಿ, ಅವನನ್ನು ಅವನ ಅರಮನೆಯಲ್ಲೇ ಬಂದಿಯಾಗಿರಿಸಿ, ತನ್ನ ಪ್ರತಿನಿಧಿಯಾಗಿ ಮಲಿಕ್ ನಾಯಬ್ ಎನ್ನುವವನನ್ನು ನೇಮಿಸಿ ಅವನ ಮುಖಾಂತರ ಆನೆಗೊಂದಿಯ ರಾಜ್ಯಭಾರ ಮಾಡುತ್ತಿದ್ದನು. ವಿದ್ಯಾರಣ್ಯರ ಸೂಚನೆ ಅನುಸರಿಸಿ, ಹರಿಹರ, ಬುಕ್ಕರು ಕೆಲವು ದೇಶಪ್ರೇಮಿ ಯುವಕರನ್ನು ಜೊತೆ ಮಾಡಿಕೊಂಡು ಜಾಣತನದಿಂದ ಆನೆಗೊಂದಿಯ ಅರಮನೆ ಪ್ರವೇಶಿಸಿ ಮಲಿಕ್ ನಾಯಬ್ ಪಾನಮತ್ತನಾಗಿದ್ದ ಸಂದರ್ಭ ಉಪಯೋಗಿಸಿಕೊಂಡು, ಅವನನ್ನೇ ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದರು. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು. 
ಚಿತ್ರಕೃಪೆ: ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನ
     ಈ ವಿಜಯದಿಂದ ಉತ್ತೇಜಿತರಾದ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಒಂದು ಸೂಕ್ತ ಸ್ಥಳವನ್ನು ಆರಿಸಿ ಕ್ರಿ.ಶ. ೧೩೩೬ರಲ್ಲಿ ಹೊಸ ನಗರದ ಸ್ಥಾಪನೆಗೆ ಭೂಮಿಪೂಜೆ ಮಾಡಿದರು. ೧೭ನೆಯ ಶತಮಾನದ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ಈ ಸ್ಥಳದ ಮಹಿಮೆ ಕುರಿತು ಹೀಗೆ ಹೇಳಲಾಗಿದೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . '  ಆ ಸಂದರ್ಭದಲ್ಲಿ ಭೂಗತ ನಿಧಿಯೂ ದೊರಕಿ ಕೆಲಸ ಸುಸೂತ್ರವಾಗಿ ಮುಂದುವರೆಯಲು ಅನುಕೂಲವಾಯಿತು. ಹರಿಹರ, ಬುಕ್ಕರು ಆ ನಗರಕ್ಕೆ ವಿದ್ಯಾನಗರ ಎಂದು ಹೆಸರಿಡಬಯಸಿದರೂ, ವಿದ್ಯಾರಣ್ಯರು ಅದಕ್ಕೆ ವಿಜಯನಗರವೆಂಬ ಹೆಸರು ಕೊಟ್ಟರು. ವಿಜಯನಗರ ಸಂಸ್ಥಾನ ಚಿಗುರೊಡೆಯಿತು. ಶ್ರೀ ವಿರೂಪಾಕ್ಷ ಎಂಬ ಅಂಕಿತವಿರುವ ಕ್ರಿ.ಶ. ೧೩೩೬ರ ತಾಮ್ರದ ದತ್ತಿಶಾಸನದಲ್ಲಿ ವಿದ್ಯಾರಣ್ಯರ ಸೂಚನೆಯಂತೆ ಹರಿಹರನನ್ನು ಸಿಂಹಾಸನದ ಮೇಲೆ ಕೂರಿಸಿದ ಉಲ್ಲೇಖವಿದೆ. ಹರಿಹರನಿಗೆ ಆತ್ಮವಿದ್ಯೆ ಬೋಧಿಸಿದ ವಿದ್ಯಾರಣ್ಯರು ಅವನಿಗೆ ಶ್ರೀಮದ್ ರಾಜಾಧಿರಾಜ ಪರಮೇಶ್ವರ, ಅಪರಿಮಿತ ಪ್ರತಾಪವೀರ ಮತ್ತು ನರಪತಿ ಎಂಬ ಬಿರುದುಗಳನ್ನಿತ್ತರೆನ್ನಲಾಗಿದೆ. ಆಗಿನಿಂದ ಶೃಂಗೇರಿಯ ಗುರುಗಳನ್ನು 'ಕರ್ಣಾಟಕ ಸಿಂಹಾಸನ ಪ್ರತಿಷ್ಟಾಪನಾಚಾರ್ಯ' ಎಂದೂ ಸಂಬೋಧಿಸಲಾಗುತ್ತಿದೆ. ಈ ವಿಜಯನಗರ ಮುಂದೆ ೬೪ ಚದರ ಮೈಲುಗಳವರೆಗೆ ಬೆಳೆದಿದ್ದೇ ಅಲ್ಲದೆ ಮುಂದೆ ೨೫೦ ವರ್ಷಗಳವರೆಗೆ ಕರ್ನಾಟಕದ ಹೆಮ್ಮೆಯ ರಾಜಧಾನಿಯಾಗಿ ಮೆರೆಯಿತು.
     ವಿದ್ಯಾರಣ್ಯರು ಪಂಚಾದಶಿ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶಿಕಾ, ಪರಾಶರ ಮಾಧವೀಯ, ಸಂಗೀತಸಾರ, ಮುಂತಾದ ಕೃತಿಗಳನ್ನು ರಚಿಸಿದರು. ಪಂಚಾದಶಿ ಮತ್ತು ಜೀವನ್ಮುಕ್ತಿ ವಿವೇಕ ಕೃತಿಗಳು ಸಾಧಕರಿಗೆ ಉಪಯುಕ್ತ ಮತ್ತು ಮಾರ್ಗದರ್ಶಿಯಾಗಿವೆ. ಶೃಂಗೇರಿ ಶಾರದಾಪೀಠದ ಗುರುಗಳಾದ ಶ್ರೀ ಭಾರತೀ ಕೃಷ್ಣತೀರ್ಥರ ನಿಧನಾನಂತರದಲ್ಲಿ ಕ್ರಿ.ಶ. ೧೩೮೦ರಲ್ಲಿ ೧೨ನೆಯ ಗುರುಗಳಾಗಿ ೧೩೮೬ರವರೆಗೆ ಶಾರದಾ ಪೀಠದ ಮತ್ತು ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನದ ಮುಖ್ಯಸ್ಥರಾಗಿದ್ದರು. ೧೧೮ನೆಯ ವಯಸ್ಸಿನಲ್ಲಿ ಇಹಯಾತ್ರೆ ಮುಗಿಸಿದ ಅವರು ಜೀವನವನ್ನು ಸಾರ್ಥಕರೀತಿಯಲ್ಲಿ ನಡೆಸಿದ, ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ, ಅಂದುಕೊಂಡದ್ದನ್ನು ಸಾಧಿಸಿದ ಧೀರ ಸಂನ್ಯಾಸಿ. 
ಅವಿದ್ಯಾರಣ್ಯಕಾಂತಾರೇ ಭ್ರಮತಾಮ್ ಪ್ರಾಣಿನಾಂ ಸದಾ |
ವಿದ್ಯಾಮಾರ್ಗೋಪದೇಶ್ಟಂ ವಿದ್ಯಾರಣ್ಯಗುರುಮ್ ಶ್ರಯೇ ||
     ಮೌಢ್ಯದ ದಟ್ಟಕಾಡಿನಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವ ಜೀವಾತ್ಮರಿಗೆ ಜ್ಞಾನದ ದಾರಿ ತೋರಿಸುವ ಗುರು ವಿದ್ಯಾರಣ್ಯರಿಗೆ ನಮನಗಳು.
     ಹಣಬಲ, ತೋಳ್ಬಲ, ಜಾತಿಬಲ, ಅಧಿಕಾರಬಲ, ಒಡೆದು ಆಳುವ ನೀತಿಯ ಬಲದಿಂದ ಅಧಿಕಾರಕ್ಕೇರಿದ, ಸ್ವಾರ್ಥವೇ ಪ್ರಧಾನವಾದ ರಾಜಕಾರಣಿಗಳಿಂದ, ನೈತಿಕ ಶಿಕ್ಷಣವನ್ನು ಇಲ್ಲವಾಗಿಸಿ ಮೌಲ್ಯಗಳನ್ನು ಗಾಳಿಗೆ ತೂರುವ ಕೇವಲ ಹಣಕೇಂದ್ರಿತ ಶಿಕ್ಷಣ ಪದ್ಧತಿಯಿಂದ, ಭ್ರಷ್ಟಾಚಾರದ ಕೂಪದಿಂದ, ಅನ್ಯಾಯ, ಅತ್ಯಾಚಾರಗಳಿಂದ ದೇಶವನ್ನು ರಕ್ಷಿಸಿ ಮೇಲೆತ್ತಬಲ್ಲ ವಿದ್ಯಾರಣ್ಯರಂತಹ ಧೀಮಂತ ಮಾರ್ಗದರ್ಶಕರ ಅಗತ್ಯ ದೇಶಕ್ಕೆ ಇಂದು ತುರ್ತಾಗಿ ಬೇಕಾಗಿದೆ. ನವಯುವಕ-ಯುವತಿಯರೇ, ನೀವೇ ಏಕೆ ಅಭಿನವ ವಿದ್ಯಾರಣ್ಯರುಗಳಾಗಬಾರದು? ವಿದ್ಯಾರಣ್ಯರು ವಿಜಯನಗರ ಸಂಸ್ಥಾನಕ್ಕೆ ನಾಂದಿ ಹಾಡಿದಂತೆ ನೀವೇ ಏಕೆ ನವಭಾರತ ನಿರ್ಮಾಣಕ್ಕೆ ಅಡಿಗಲ್ಲುಗಳಾಗಬಾರದು? 
-ಕ.ವೆಂ.ನಾಗರಾಜ್.
**********************
ಆಧಾರ ಮತ್ತು ಪೂರಕ ಮಾಹಿತಿಗಳ ಸಂಗ್ರಹ:
1. ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'
2. http://www.sringeri.net 
3.ಮೋಹಿನಿಪುರಾಣಿಕರ  http://narayankripa.blogspot.in/2012/04/swami-vidyaranya-inspiration-for-all.html 
4. http://www.freeindia.org/biographies/sages/vidyaranya/index.htm 
5. http://www.hampividyaranyamutt.org

ಶುಕ್ರವಾರ, ಮಾರ್ಚ್ 30, 2012

ಅನುಪಮ ಕರ್ಮಯೋಗಿ, ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 116ನೆಯ ವರ್ಷದ ಜನ್ಮದಿನದ ಶುಭಾಶಯಗಳು


      ಶ್ರೀರಾಮನವಮಿಯ ದಿನವಾದ ೦೧-೦೪-೨೦೧೨ರಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ೧೧೫ ವಸಂತಗಳನ್ನು ಕಂಡು ೧೧೬ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಇವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ನರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು.     ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನ, ವೇದಾಭ್ಯಾಸ ಅಧ್ಯಯನ ಮಾಡಿದವರು. ಅವರು ಮಹರ್ಷಿ ದಯಾನಂದ ಸರಸ್ವತಿಯವರಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ’ಚತುರ್ವೇದಿ’ಯಾಗಿ, ಚತುರ್ವೇದಿ ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ಸಾವಿರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ೧೩ ವರ್ಷಗಳ ಕಾಲ ಸೆರೆವಾಸ ಕಂಡವರು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. ವೇದೋಕ್ತ ಜೀವನ ಪಥವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ. ಈ ಕರ್ಮಯೋಗಿ ಸಾಧಕರಿಗೆ ಮತ್ತೊಮ್ಮೆ ನನ್ನ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
***************************
ಪಂ. ಸುಧಾಕರ ಚತುರ್ವೇದಿಯವರ ವಿಚಾರದ ತುಣುಕುಗಳಿಗಾಗಿ ಇಲ್ಲಿ ನೋಡಿ:
1. ವಿಚಾರ ಮಾಡೋಣ: http://vedajeevana.blogspot.in/2011/03/blog-post.html
2. ಕೆಲವು ಮಾಹಿತಿಗಳು: http://vedajeevana.blogspot.in/2011/04/blog-post.html
3. ಬಾಳಿಗೆ ಬೆಳಕು: http://vedajeevana.blogspot.in/2011/06/blog-post_22.html
4. ವಿಚಾರ ಲಹರಿ - 1 http://vedajeevana.blogspot.in/2011/09/blog-post_14.html
5. ವಿಚಾರ ಲಹರಿ - 2 http://vedajeevana.blogspot.in/2011/09/2.html
6. ಸಂದರ್ಶನ - http://vedajeevana.blogspot.in/2011/09/blog-post_30.html
7. ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನೆಯೋಣ: 
           http://vedajeevana.blogspot.in/2012/03/blog-post_23.html   
8. ವೇದೋಕ್ತ ಜೀವನ ಪಥ -ಮಾಲಿಕೆ:     
http://vedajeevana.blogspot.in/search/label/%E0%B2%B5%E0%B3%87%E0%B2%A6%E0%B3%8B%E0%B2%95%E0%B3%8D%E0%B2%A4%20%E0%B2%9C%E0%B3%80%E0%B2%B5%E0%B2%A8%20%E0%B2%AA%E0%B2%A5