ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ವಿಭಿನ್ನ-ವಿಶಿಷ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಭಿನ್ನ-ವಿಶಿಷ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 17, 2016

ಮಿತ್ರ ಪಟ್ಟಾಭಿರಾಮ ಮರೆಯಾದ!


     ಇಂದು ಬೆಳಗ್ಗೆ ಮೊಬೈಲಿನ ಅಲಾರಮ್ ಏಳು ಎಂದು ಎಚ್ಚರಿಸಿದ್ದರೂ ಏಳದೇ ಸುಮ್ಮನೇ ಹೊರಳಾಡುತ್ತಿದ್ದೆ. ಸ್ವಭಾವತಃ ಭಾವಜೀವಿಯಾದ ನನ್ನ ಮನಸ್ಸು ಎಂದಿನಂತೇ ಅನ್ಯಮನಸ್ಕ ಸ್ಥಿತಿಯಲ್ಲಿತ್ತು. ಬೆ. 5.42ರ ಸಮಯಕ್ಕೆ ಮೊಬೈಲಿಗೆ ಮಿತ್ರ ಹರಿಹರಪುರ ಶ್ರೀಧರರ ಸಂದೇಶವೊಂದು ಬಂದಿತು. ಮಲಗಿಕೊಂಡೇ ಸಂದೇಶ ಓದಿದವನು ಧಡಕ್ಕನೆ ಎದ್ದು ಕುಳಿತೆ. ಸಂದೇಶದಲ್ಲಿದ್ದದ್ದು:‘Sadhana Sangama Sri Pattabhi Ram Guruji passed away yesterday night'!  ನನಗಿಂತ 2-3 ವರ್ಷ ಕಿರಿಯನಾದ ಪಟ್ಟಾಭಿ ನಿಧನರಾದ ವಿಷಯ ಅರಗಿಸಿಕೊಳ್ಳಲು ಕಷ್ಟವಾಯಿತು.
     ಪಟ್ಟಾಭಿರಾಮನ ಪರಿಚಯ ನನಗೆ ಆಗಿದ್ದು 1971-72ರ ಸಮಯದಲ್ಲಿ. ಆಗತಾನೇ ನಾನು ಪದವಿ ವಿದ್ಯಾಭ್ಯಾಸ ಮುಗಿಸಿ ನೌಕರಿಗೆ ಸೇರಿದ್ದ ಸಮಯ. ರಾ.ಸ್ವ.ಸಂಘದ ಕಾರ್ಯಕರ್ತನಾಗಿದ್ದ ನನಗೆ ಪಟ್ಟಾಭಿರಾಮ ಮತ್ತು ಹರಿಹರಪುರ ಶ್ರೀಧರರ ಪರಿಚಯವಾದದ್ದೂ ಆಗಲೇ. ನಾನು ಹಾಸನ ನಗರದ ಒಂದು ಭಾಗದ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹ ಆಗಿದ್ದ ಸಂದರ್ಭದಲ್ಲಿ ಇವರಿಬ್ಬರೂ ಒಂದೊಂದು ಸಾಯಂ ಶಾಖೆಗಳ ಮುಖ್ಯ ಶಿಕ್ಷಕರುಗಳಾಗಿದ್ದರು. ನಾನು ಒಂದೊಂದು ದಿನ ಒಂದೊಂದು ಶಾಖೆಗೆ ಭೇಟಿ ಕೊಡುವ ಪರಿಪಾಠ ಇಟ್ಟುಕೊಂಡಿದ್ದು ಇವರುಗಳು ನಡೆಸುತ್ತಿದ್ದ ಶಾಖೆಗಳಿಗೂ ಹೋಗುತ್ತಿದ್ದೆ. ಇವರುಗಳು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದ ರೀತಿ ಅನನ್ಯವಾಗಿತ್ತು. ಮಕ್ಕಳೂ ಇವರನ್ನು ಹಚ್ಚಿಕೊಂಡಿದ್ದರಿಂದ ಶಾಖೆಗಳಲ್ಲಿ ಉತ್ತಮ ಉಪಸ್ಥಿತಿ ಇರುತ್ತಿತ್ತು. ಸಂಘದ ವಿಸ್ತಾರಕ್ಕೆ ಸಾಯಂ ಶಾಖೆಗಳ ಕೊಡುಗೆ ಅಪಾರವಾಗಿದೆ. ನನ್ನ ಅನುಭವದಂತೆ ಯಾರು ಎಳವೆಯಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೋ ಅವರು ಕೊನೆಯ ತನಕ ಸಂಪರ್ಕದಲ್ಲಿ ಉಳಿದುಕೊಳ್ಳುತ್ತಾರೆ. ಪಟ್ಟಾಭಿರಾಮ ಇಂಜನಿಯರಿಂಗ್ ವಿದ್ಯಾರ್ಥಿಯಾಗಿದ್ದರೆ, ಶ್ರೀಧರ್ ಸಂಘದ ಕಾರ್ಯಾಲಯದಲ್ಲಿದ್ದುಕೊಂಡು ಐಟಿಐ ವಿದ್ಯಾರ್ಥಿಯಾಗಿದ್ದರು. ಮೊದಲ ಪರಿಚಯದ ಕುರಿತು ಇಷ್ಟು ಸಾಕೆನಿಸುತ್ತದೆ.
     1975-77ರ ತುರ್ತು ಪರಿಸ್ಥಿತಿ ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಸ್ವಂತದ ಅಧಿಕಾರದ ಉಳಿವಿಗಾಗಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ದೇಶವನ್ನೇ ಅಕ್ಷರಶಃ ಸರ್ವಾಧಿಕಾರಕ್ಕೆ ಒಳಪಡಿಸಿದ್ದ ಕಾಲವದು. ವಿರೋಧ ಪಕ್ಷಗಳ ನಾಯಕರುಗಳೆಲ್ಲಾ ಸೆರೆಮನೆ ಸೇರಿದ್ದರು. ರಾ.ಸ್ವ.ಸಂಘ ಸೇರಿ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಿ ಆ ಸಂಸ್ಥೆಗಳ ಕಾರ್ಯಕರ್ತರನ್ನೂ ರಾಷ್ಟ್ರದ್ರೋಹಿಗಳ ಹಣೆಪಟ್ಟಿ ಹಚ್ಚಿ ಬಂಧಿಸಿದ್ದರು. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಾಗಿತ್ತು. ಕಾಂಗ್ರೆಸ್ ನಾಯಕರ ವಿರುದ್ಧ ಸೊಲ್ಲೆತ್ತಲೂ ಜನ ಹೆದರುತ್ತಿದ್ದರು. ಸಂಘದ ಕಾರ್ಯಕರ್ತನೆಂದು ನನ್ನನ್ನು ಜುಲೈ, 1975ರಲ್ಲಿ ಬಂಧಿಸಿದ್ದರು. ನನ್ನನ್ನು ಸರ್ಕಾರಿ ನೌಕರಿಯಿಂದಲೂ ಅಮಾನತ್ತು ಮಾಡಿದ್ದರು. ಶ್ರೀಧರ್ ಆ ಸಮಯದಲ್ಲಿ ಬೆಂಗಳೂರಿನಲ್ಲಿ ಭೂಗತರಾಗಿ ಕೆಲಸ ಮಾಡುತ್ತಿದ್ದರು. ನಾನು ಜಾಮೀನಿನ ಮೇಲೆ ಹೊರಬಂದರೂ ನಂತರದಲ್ಲಿ ಒಂದರ ಮೇಲೆ ಒಂದರಂತೆ 13 ಕ್ರಿಮಿನಲ್ ಕೇಸುಗಳನ್ನು ಭಾರತ ರಕ್ಷಣಾ ಕಾಯದೆಯನ್ವಯ ನನ್ನ ಮೇಲೆ ಹೂಡಿದ್ದರು. ವಿರೋಧ ಪಕ್ಷಗಳು ಅಕ್ಷರಶಃ ಮರಣಾವಸ್ಥೆಯಲ್ಲಿ ಇದ್ದವೆಂದರೂ ತಪ್ಪಿಲ್ಲ. ಆ ಸಂದರ್ಭದಲ್ಲಿ ರಾ.ಸ್ವ.ಸಂಘ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಯಿತು. ನಂತರದ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದು ಈಗ ಇತಿಹಾಸ. 
     1975ರ ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಜೈಲ್ ಭರೋ ಚಳುವಳಿ ನಡೆಸಲು ಲೋಕ ಸಂಘರ್ಷ ಸಮಿತಿ ನಿರ್ಧರಿಸಿದಂತೆ ಹಾಸನ ಜಿಲ್ಲೆಯಲ್ಲೂ ಚಳುವಳಿಯ ರೂಪುರೇಷೆ ಸಿದ್ಧಪಡಿಸಲು 9-11-1975ರಲ್ಲಿ ಗುಪ್ತವಾಗಿ ಒಂದು ಮನೆಯಲ್ಲಿ ನಾವುಗಳು ಸೇರಿದ್ದೆವು. ಹಾಗೆ ಸೇರಿದ್ದವರಲ್ಲಿ ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ (ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ ಹಿಂಸೆಯ ಕಾರಣದಿಂದ ನಂತರದ ಕೆಲವೇ ವರ್ಷಗಳಲ್ಲ್ಲಿ ಮತಿಭ್ರಮಣೆಗೆ ಒಳಗಾಗಿ ಮೃತರಾದರು), ಜನಾರ್ಧನ ಐಯಂಗಾರ್(ಟೈಲರ್,ಈಗ ಇವರಿಲ್ಲ), ಪಾರಸಮಲ್, ಸದಾಶಿವ, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ (ಇವರೆಲ್ಲಾ ವಿದ್ಯಾರ್ಥಿಗಳು), ನಾನು (ಆಗ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ), ಚಂದ್ರಶೇಖರ್(ಇಂಜನಿಯರಿಂಗ್ ಕಾಲೇಜ್ ಡೆಮಾನಸ್ಟ್ರೇಟರ್), ಜಯಪ್ರಕಾಶ(ಕರ್ನಾಟಕ ಬ್ಯಾಂಕ್), ಕಛ್ ರಾಮಚಂದ್ರ(ವ್ಯಾಪಾರಿ, ಈಗ ಇವರಿಲ್ಲ) ಇವರುಗಳು ಸೇರಿದ್ದು 12ನೆಯವರಾಗಿ ನಮ್ಮೊಡನೆ ಇದ್ದ ನಮ್ಮ ಮಿತ್ರಶತ್ರುವೊಬ್ಬರು ಪೋಲಿಸರಿಗೆ ಮಾಹಿತಿ ನೀಡಿ ಬಂದಿದ್ದರು. ಮನೆಯನ್ನು ಸುತ್ತುವರೆದಿದ್ದ ಪೋಲಿಸರು ನಾವು 11 ಜನರನ್ನು ರಾಷ್ಟ್ರದ್ರೋಹದ ಆಪಾದನೆ ಮೇರೆಗೆ ಬಂಧಿಸಿ ಜೈಲಿಗಟ್ಟಿದ್ದರು. 12ನೆಯ ಮಹಾಶಯ ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಸಾಕ್ಶ್ಯವನ್ನೂ ನುಡಿದಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದಿದ್ದರಿಂದ ಮೂರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿಯೇ ಇರಬೇಕಾಯಿತು. ಚಳುವಳಿ ಪ್ರಾರಂಭದ ಮುನ್ನವೇ ಬಂಧಿತರಾದ ನಮ್ಮನ್ನು ಮಂಗಳಪಾಂಡೆ ತಂಡವೆಂದು ಜೊತೆಗಾರರು ಹಾಸ್ಯ ಮಾಡುತ್ತಿದ್ದರು. ಈ ಅವಧಿಯಲ್ಲಿ ಪಟ್ಟಾಭಿರಾಮ ಮತ್ತು ನಾನು ಸಾಮಾನ್ಯವಾಗಿ ಒಟ್ಟಿಗೇ ಇರುತ್ತಿದ್ದೆವು.
     ಜೈಲಿನಲ್ಲಿ ಅಸಹನೀಯ ತುರ್ತುಪರಿಸ್ಥಿತಿಯನ್ನು ಎದುರಿಸುವ ಕುರಿತು ಗಂಭೀರವಾದ ಚರ್ಚೆಗಳಾಗುತ್ತಿದ್ದವು. ಕಾಂಗ್ರೆಸ್ಸಿಗರಿಂದ, ಪೋಲಿಸರಿಂದ, ಅಧಿಕಾರಿಗಳಿಂದ ನನಗೆ ಆದ ತೊಂದರೆಗಳು ನನ್ನನ್ನು ವ್ಯಗ್ರನನ್ನಾಗಿಸಿದ್ದವು. ಹಿಂಸಾತ್ಮಕವಾಗಿಯೇ ವಿರೋಧಿಸಬೇಕೆಂದು ಒಂದು ಬಣ ವಾದಿಸಿದರೆ ಇನ್ನೊಂದು ಬಣ ಅಹಿಂಸಾತ್ಮಕ ಹೋರಾಟವನ್ನು ಬೆಂಬಲಿಸುತ್ತಿತ್ತು. ಹಿಂಸಾತ್ಮಕವಾಗಿ ವಿರೋಧಿಸಬೇಕೆಂಬ ಬಣದಲ್ಲಿ ನಾನಿದ್ದು ನನ್ನ ವಾದವನ್ನು ಸಕಾರಣಗಳೊಂದಿಗೆ ಉಗ್ರವಾಗಿ ಉದ್ವೇಗದಿಂದ, ಆವೇಶದಿಂದ ಮುಂದಿಡುತ್ತಿದ್ದೆ. ಪಟ್ಟಾಭಿರಾಮ ನಿರ್ಲಿಪ್ತನಾಗಿ ಎಲ್ಲವನ್ನೂ ವೀಕ್ಷಿಸುತ್ತಿದ್ದನಷ್ಟೆ ಹೊರತು ಪ್ರತಿಕ್ರಿಯಿಸುತ್ತಿರಲಿಲ್ಲ. ಇದನ್ನು ಹೊರತುಪಡಿಸಿದರೆ ಉಳಿದ ಚಟುವಟಿಕಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳುತ್ತಿದ್ದ. ಭಜನೆ, ಹಾಡು, ಶಾಖೆ ಎಲ್ಲವೂ ಅಲ್ಲಿಯೇ. ಒಂದು ಸಂಘದ ಶಿಬಿರದಂತೆಯೇ ಜೈಲಿನ ವಾತಾವರಣವನ್ನು ಹೆಚ್ಚಿನ ಸಂಖ್ಯೆಯಲ್ಲಿದ್ದ ಸಂಘದ ತರುಣರು ಮಾರ್ಪಡಿಸಿಬಿಟ್ಟಿದ್ದರು. 
     ಜೈಲಿನಲ್ಲಿದ್ದಾಗ ವಿಚಾರಣೆ ಸಂದರ್ಭದಲ್ಲಿ ನಮ್ಮನ್ನು ಪೋಲಿಸ್ ವ್ಯಾನಿನಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು. ಆಗ ವ್ಯಾನಿನ ಒಳಗಿನಿಂದಲೇ ತುರ್ತುಪರಿಸ್ಥಿತಿಗೆ ಧಿಕ್ಕಾರ, ಇಂದಿರಾಗಾಂದಿಗೆ ಧಿಕ್ಕಾರ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ರಸ್ತೆ ಬದಿಯಲ್ಲಿ ಸಾಗುತ್ತಿದ್ದವರ ಗಮನ ಸೆಳೆಯುತ್ತಾ ಹೋಗುತ್ತಿದ್ದೆವು. ಪಟ್ಟಾಭಿರಾಮನಿಗೂ ನನಗೂ ಸೇರಿ ಕೈಕೋಳ ಹಾಕಿರುತ್ತಿದ್ದರು. ಒಂದು ಸ್ವಾರಸ್ಯಕರ ಸನ್ನಿವೇಶದ ಕುರಿತು ನನ್ನ ಆದರ್ಶದ ಬೆನ್ನು ಹತ್ತಿ . . ಪುಸ್ತಕದಲ್ಲಿ (ಪು.52) ದಾಖಲಿಸಿರುವುದನ್ನು ಯಥಾವತ್ ಇಲ್ಲಿ ಉಲ್ಲೇಖಿಸುವೆ: 
"ಕೈಕೋಳದ ಕಥೆ!
. . .     ಹೀಗೆಯೇ ಒಮ್ಮೆ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನನ್ನ ಎಡಗೈ ಮತ್ತು ಅರಕಲಗೂಡಿನ ಪಟ್ಟಾಭಿರಾಮ ಎಂಬ ವಿದ್ಯಾರ್ಥಿಯ ಬಲಗೈ ಸೇರಿಸಿ ಬೇಡಿ ಹಾಕಿದ್ದರು. ಇಬ್ಬರೂ ಸಣಕಲರಾಗಿದ್ದು ನಮ್ಮ ಕೈಯಿಂದ ಬೀಗ ಹಾಕಿದ್ದ ಬೇಡಿಯನ್ನು ಹಾಗೆಯೇ ತೆಗೆಯಬಹುದಿತ್ತು. ವ್ಯಾನಿನಲ್ಲಿ ಬರುವಾಗ ನರಸಿಂಹರಾಜ ವೃತ್ತದ ಸಮೀಪವಿದ್ದ ದೊಡ್ಡ ತಗ್ಗು ಪ್ರದೇಶದ (ಈಗ ಅಲ್ಲಿ ಅಂಗಡಿಗಳಿವೆ) ಹತ್ತಿರ ಬಂದಾಗ ನಮ್ಮ ಕೈಕೋಳವನ್ನು ತೆಗೆದುಕೊಂಡು ಪೋಲಿಸರಿಗೆ ತೋರಿಸಿ ವ್ಯಾನಿನ ಕಿಂಡಿಯೊಳಗಿಂದ ತಗ್ಗಿನೊಳಗೆ ಎಸೆದುಬಿಟ್ಟೆವು. ಪೋಲಿಸರು ತಕ್ಷಣ ವ್ಯಾನು ನಿಲ್ಲಿಸಿ ನಮ್ಮನ್ನು ಬಯ್ಯುತ್ತಾ ಒಬ್ಬರು ಪೇದೆಯನ್ನು  ಬೇಡಿ ಹುಡುಕಿ ತರಲು ಕಳಿಸಿದರು. ತಗ್ಗಿನಲ್ಲಿ ಕುರುಚಲು ಗಿಡಗಳು, ಹುಲ್ಲು, ಕೊಚ್ಚೆ ಇದ್ದುದರಿಂದ ಅದನ್ನು ಹುಡುಕುವುದು ಸುಲಭವಿರಲಿಲ್ಲ. ಆ ಸಂದರ್ಭ ಉಪಯೋಗಿಸಿಕೊಂಡು ನಾವುಗಳು ಅಲ್ಲಿ ಜೋರಾಗಿ ಇಂದಿರಾಗಾಂಧಿಗೆ ಧಿಕ್ಕಾರ, ತುರ್ತು ಪರಿಸ್ಥಿತಿಗೆ ಧಿಕ್ಕಾರ, ಇತ್ಯಾದಿ ಘೋಷಣೆಗಳನ್ನು ಹಾಕತೊಡಗಿದೆವು. ಸುತ್ತಮುತ್ತಲಿದ್ದ ಜನ ಗುಂಪುಕೂಡಿದರು. ನಮ್ಮ ಉತ್ಸಾಹ ಹೆಚ್ಚಾಗಿ ಇನ್ನೂ ಜೋರಾಗಿ ಘೋಷಣೆ ಹಾಕತೊಡಗಿದೆವು. ಪಕ್ಕದಲ್ಲೇ ಎಸ್.ಪಿ. ಕಛೇರಿಯಿದ್ದುದರಿಂದ ಅಲ್ಲಿಂದ ಹಿರಿಯ ಅಧಿಕಾರಿಯೊಬ್ಬರು ಬಂದು ವಿಷಯ ತಿಳಿದು ನಮ್ಮನ್ನು ಬೈದು ಬೇರೆ ಇಬ್ಬರು ಪೋಲಿಸರನ್ನು ನಿಯೋಜಿಸಿ ನಮ್ಮನ್ನು ಕೂಡಲೇ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಮಾಡಿದರು. ಕೊನೆಗೂ ಎಸೆದಿದ್ದ ಬೇಡಿ ಸಿಕ್ಕಿತೋ ಇಲ್ಲವೋ ಗೊತ್ತಾಗಲಿಲ್ಲ. ಅವತ್ತಿನ ಮಟ್ಟಿಗೆ ನಮಗೆ ಜೈಲಿನಲ್ಲಿ ಇದು ಖುಷಿಯಾಗಿ ಚರ್ಚಿಸುವ ವಿಷಯವಾಯಿತು."
     ನಮ್ಮ 11 ಜನರ ವಿಚಾರಣೆ ನ್ಯಾಯಾಲಯದಲ್ಲಿ ಸ್ವಾರಸ್ಯಕರವಾಗಿರುತ್ತಿತ್ತು. ಅಂತಿಮವಾಗಿ ನಾವು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿ ಬಿಡುಗಡೆ ಮಾಡಿತು. ಸಂತೋಷದಿಂದ ನಾವು ನ್ಯಾಯಾಲಯದ ಹೊರಬರುತ್ತಿದ್ದ ಸಂದರ್ಭದಲ್ಲೇ ಪ್ರಭಾಕರ ಕೆರೆಕೈ, ಪಾರಸಮಲ್ ಮತ್ತು ಪಟ್ಟಾಭಿರಾಮರನ್ನು ೨ ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಮತ್ತೆ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿಬಿಟ್ಟರು. ಇನ್ನೂ ಸರಿಯಾಗಿ ಮೀಸೆಯೇ ಬಾರದಿದ್ದ ಹುಡುಗರನ್ನು ಮೀಸಾ ಕಾಯದೆಗೆ ಒಳಪಡಿಸಿದ್ದು ಇಂದಿರಾಗಾಂಧಿ ಹೇರಿದ್ದ ಸರ್ವಾಧಿಕಾರದ ಅಟ್ಟಹಾಸಕ್ಕೆ ಸಣ್ಣ ಉದಾಹರಣೆಯಷ್ಟೆ. ತುರ್ತು ಪರಿಸ್ಥಿತಿ ಹಿಂತೆಗೆದ ನಂತರದಲ್ಲಿ ಒಂದೆರಡು ಸಲ ನಮ್ಮಿಬ್ಬರ ಭೇಟಿಯಾಗಿತ್ತಷ್ಟೆ. ನಂತರದಲ್ಲಿ ನನಗೆ ಮರಳಿ ನೌಕರಿ ಸಿಕ್ಕಿತು, ವರ್ಗಾವಣೆ ಮೇರೆಗೆ ಊರೂರು ಸುತ್ತಿದೆ. ಪಟ್ಟಾಭಿರಾಮ ಯೋಗದಲ್ಲಿ ಆಸಕ್ತಿ ತಳೆದು ಅದರಲ್ಲೇ ಮುಂದುವರೆದ ಬಗ್ಗೆ ಸುದ್ದಿ ಬರುತ್ತಿತ್ತಷ್ಟೆ. 
     ನಂತರದ ಪಟ್ಟಾಭಿರಾಮ ಯೋಗ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ತಳೆದು ಆ ಕ್ಷೇತ್ರದಲ್ಲೇ ಬಹಳ ಹೆಸರು ಮಾಡಿದ ಕುರಿತು ತಿಳಿದದ್ದು ಹೊರತುಪಡಿಸಿ ವಿವರಗಳು ತಿಳಿಯದೇ ಇರುವುದರಿಂದ ಆ ಕುರಿತು ಹೆಚ್ಚು ಬರೆಯಲು ಹೋಗುವುದಿಲ್ಲ. ಹಿಮಾಲಯದ ಸ್ವಾಮಿ ರಾಮರ ಶಿಷ್ಯರಾಗಿ ಅವರ ಉಪದೇಶಗಳೇ ಮಾರ್ಗದರ್ಶಿಯಾಗಿ ಬೆಂಗಳೂರಿನಲ್ಲಿ ಸಾಧನಾ ಸಂಗಮ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಯೋಗ, ಧ್ಯಾನ, ಶಿಕ್ಷಣ, ಲಲಿತಕಲೆಗಳು, ಸಂಸ್ಕೃತಿ, ಉಪನ್ಯಾಸಗಳು, ವಿಶೇಷ ಕಾರ್ಯಾಗಾರಗಳು ಮುಂತಾದ ವಿವಿಧ ಚಟುವಟಿಕೆಗಳಿಗೆ ಮೂಲಾಧಾರರಾಗಿ ವ್ಯಕ್ತಿಯ ಭೌತಿಕ, ಮಾನಸಿಕ, ಭಾವಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆಂದು ಮಾತ್ರ ಹೇಳಬಯಸುವೆ. ಆಸಕ್ತರು  http://himalayantradition.blogspot.in/  ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ತಿಳಿಯಬಹುದಾಗಿದೆ. ವಿದೇಶಗಳಲ್ಲೂ ಹರಡಿರುವ ಅವರ ಚಟುವಟಿಕೆಗಳು, ಹೊಂದಿರುವ ಅಪಾರ ಶಿಷ್ಯ ಸಮೂಹ ಕಂಡು ಬೆರಗುಗೊಂಡಿರುವೆ. 

     ಪಟ್ಟಾಭಿರಾಮರ ಭೇಟಿ ಆಗಿದ್ದು 4 ದಶಕಗಳ ನಂತರ ಬೆಂಗಳೂರಿನಲ್ಲಿ ಕಳೆದ ವರ್ಷ ವೇದಭಾರತಿ ಆಶ್ರಯದಲ್ಲಿ ವಂದೇ ಮಾತರಮ್ ಹೋಟೆಲಿನ ಸಭಾಂಗಣದಲ್ಲಿ ನಡೆದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ನಡೆಸಿದ ಮುಕ್ತ ಸಂವಾದದ ಸಂದರ್ಭದಲ್ಲಿ. ಅಪರೂಪದ ಭೇಟಿಯಿಂದ ನಮಗೆ ಅತ್ಯಂತ ಆನಂದವಾಗಿತ್ತು. ಪಟ್ಟಾಭಿರಾಮರ ಶಿಷ್ಯರು, ಪರಿಚಿತರು ಗೌರವದಿಂದ ಅವರನ್ನು ಗುರೂಜೀ ಎಂದು ಸಂಬೋಧಿಸುತ್ತಿದ್ದರೂ ನಾನು ಅವರನ್ನು ಪಟ್ಟಾಭಿ ಎಂತಲೇ ಮಾತನಾಡಿಸುತ್ತಿದ್ದೆ. ತಪ್ಪು ತಿಳಿಯಬಾರದೆಂದೂ, ಹಾಗೆ ಕರೆದು ಮಾತನಾಡಿಸಿದರೆ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆಂದು ಮುಕ್ತವಾಗಿ ಅಭಿಪ್ರಾಯ ಹೇಳಿದ್ದಕ್ಕೆ ಅವರಿಂದ ಬಂದದ್ದು ಒಪ್ಪಿಗೆಯ ಮುಗುಳ್ನಗೆ. ದಿನವಿಡೀ ಒಟ್ಟಿಗೇ ಇದ್ದು ನಂತರ ನಾವು ಹಾಸನಕ್ಕೆ ಹಿಂತಿರುಗಿದೆವು. ಅವರ ಆಶ್ರಮಕ್ಕೂ ವೇದಭಾರತಿಯ ಎಲ್ಲಾ ಸದಸ್ಯರಿಗೂ ಬರಲು ಆಹ್ವಾನಿಸಿದ್ದರು. ನಾವುಗಳೂ ಒಮ್ಮೆ ಹೋಗಿಬರಬೇಕೆಂದು ಅಂದುಕೊಂಡದ್ದಷ್ಟೆ, ಹೋಗಲು ಅವಕಾಶ ಬರಲಿಲ್ಲ. ಕಳೆದ ವರ್ಷ ವೇದಭಾರತಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಟ್ಟಾಭಿರಾಮ ಗುರೂಜಿಯವರಿಂದ ಗಾಯತ್ರಿ ಮಹಾಮಂತ್ರ ಯಜ್ಞವನ್ನು ಐದು ದಿನಗಳ ಕಾಲ ಏರ್ಪಡಿಸಿ ಅವರಿಂದ ಗಾಯತ್ರಿ ಮಂತ್ರದ ಅರ್ಥ, ವಿಸ್ತಾರಗಳನ್ನು ತಿಳಿಯುವ ಕಾರ್ಯಕ್ರಮ ಆಯೋಜಿಸಿದ್ದೆವು. ಅದೇ ಸಮಯಕ್ಕೆ ಅವರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರಿದ್ದರಿಂದ ಬದಲಿಗೆ ಬೇರೆ ಕಾರ್ಯಕ್ರಮಗಳನ್ನು ನಡೆಸಿದ್ದೆವು. ನಂತರ ಪಟ್ಟಾಭಿಯ ಭೇಟಿ ಆಗಲೇ ಇಲ್ಲ. ಈಗ ಅವರ ಅಗಲಿಕೆಯ ಸುದ್ದಿ! ಪಟ್ಟಾಭಿರಾಮ, ನಿನ್ನ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ ಎಂದು ಮನದಾಳದಿಂದ ಪ್ರಾರ್ಥಿಸುವೆ.
-ಕ.ವೆಂ.ನಾಗರಾಜ್.

ಬುಧವಾರ, ಫೆಬ್ರವರಿ 6, 2013

ದೂರವಾಣಿ ಮೂಲಕ ವೇದ ಮಂತ್ರ ಕಲಿಕೆ

ದೂರವಾಣಿ ಮೂಲಕ ಹಾಸನದ ತಾತನಿಂದ ಕಲಿತ ವೇದ ಮಂತ್ರಗಳನ್ನು ಹೇಳುತ್ತಿರುವ ಮೊಮ್ಮಗಳು ಅಕ್ಷಯ:



-ಬಿಂದು ರಾಘವೇಂದ್ರ, ಬೆಂಗಳೂರು.

ಸೋಮವಾರ, ಅಕ್ಟೋಬರ್ 15, 2012

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ - ನಿಜವಾದ ಪರಿವ್ರಾಜಕರೆಂದರೆ ಹೀಗಿರಬೇಕು

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ:

     ಕನ್ನಡ ನೆಲದಲ್ಲಿ ಭಾರತ ಪರಿಕ್ರಮ ಯಾತ್ರೆ ,ವೃದ್ಧಾಶ್ರಮಗಳ  ಅಗತ್ಯವಿರುವ  ಹಳ್ಳಿಗಳರಕ್ಷಣೆ,  ಕಾಡು  ನಾಶದಿಂದ ಬರಡಾಗುತ್ತಿರುವ ಗ್ರಾಮಗಳ  ಉಳಿವು,  ಅತಿಯಾದ  ರಾಸಾಯನಿಕ ಉಪಯೋಗದಿಂದ ಸತ್ವ ಕಳೆದುಕೊಂಡಿರುವ ಭೂಮಿಯ  ಪೋಷಣೆ,  ಅಧುನಿಕ  ತಂತ್ರಜ್ಞಾನದ ಅತಿಯಾದ ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ ಗ್ರಾಮ ಪರಂಪರೆಗಳ ಸಂರಕ್ಷಣೆ, ಕ್ಷೀಣಿಸುತ್ತಿರುವ ಗೋಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ-    ಪ್ರಮುಖ  ಆಶಯಗಳನ್ನು ಕೇಂದ್ರೀಕರಿಸಿ ಭಾರತ ಪರಿಕ್ರಮ ಪಾದಯಾತ್ರೆಯನ್ನು   ಶ್ರೀ ಸೀತಾರಾಮ ಕೆದಿಲಾಯರು ಕೈಗೊಂಡಿದ್ದಾರೆ. ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಅನುವರ್ತೀಪ ಕ್ರಿಯೆಯಾಗಿ ಗ್ರಾಮ ಜಾಗೃತಿಯ ಈ ಮಹತ್ವದ  ಪಾದಯಾತ್ರೆಯನ್ನು  ಕೆದಿಲಾಯರು ಕೈಗೊಂಡಿದ್ದಾರೆ
ಅಕ್ಟೋಬರ್ ೧೦ : ಕಾಸರಗೋಡು ಜಿಲ್ಲೆಯ ನೀಲೇಶ್ವರ
ಅಕ್ಟೋಬರ್ ೧೧  :  ಕಾಂಞ್ಞಂಗಾಡು ಬಳಿಯ ಮೂಕಾಂಬಿಕ ದೇಗುಲ
ಅಕ್ಟೋಬರ್ ೧೨  : ಪಳ್ಳಿಕ್ಕರ
ಅಕ್ಟೋಬರ್ ೧೩  : ಪರವನಡ್ಕಂ
ಅಕ್ಟೋಬರ್ ೧೪ : ಬೆಳಗ್ಗೆ ೭ ಗಂಟೆಗೆ ಕಾಸರಗೋಡಿಗೆ ಆಗಮನ
ಸಂಜೆ ಮಾಯಿಪ್ಪಾಡಿ ಬಳಿ ವಾಸ್ತವ್ಯ
ಅಕ್ಟೋಬರ್ ೧೫ : ಪುತ್ತಿಗೆ
ಅಕ್ಟೋಬರ್ ೧೬  : ಧರ್ಮತ್ತಡ್ಕ
ಅಕ್ಟೋಬರ್ ೧೭ :  ಪೆರೋಡಿ, ಬಾಯಾರು ಬಳಿಯ ನೀರ್ಮುಡಿಗದ್ದೆ
ಅಕ್ಟೋಬರ್ ೧೮ : ಬೇಡಗುಡ್ಡ
ಅಕ್ಟೋಬರ್ ೧೯ : ಬಾಕ್ರೆಬೈಲು
ಅಕ್ಟೋಬರ್ ೨೦ : ಕೋಣಾಜೆ
ಅಕ್ಟೋಬರ್ ೨೧ : ಕುತ್ತಾರು ಪದವು
ಅಕ್ಟೋಬರ್ ೨೨ : ಕಡೆಕ್ಕಾರು, ನೇತ್ರಾವತಿ ಸೇತುವೆಬಳಿ
ಅಕ್ಟೋಬರ್ ೨೩ : ಕೋಡಿಕಲ್
ಅಕ್ಟೋಬರ್ ೨೪ :  ತಂಡಂಬೈಲು, ಸುರತ್ಕಲ್‌ಬಳಿ
ಅಕ್ಟೋಬರ್ ೨೫ :  ಸಸಿಹಿತ್ಲು
ಅಕ್ಟೋಬರ್ ೨೬ : ಹೆಜಮಾಡಿ, ಉಡುಪಿ ಜಿಲ್ಲೆ
ನಂತರ  ರಾಷ್ಟ್ರೀಯ  ಹೆದ್ದಾರಿ  ಮೂಲಕ  ಉತ್ತರ  ಕನ್ನಡ  ಜಿಲ್ಲೆಯನ್ನು
ಪ್ರವೇಶಿಸಿ ನಂತರ ಗೋವಾಕ್ಕೆ ಯಾತ್ರೆ ಮುಂದುವರಿಯಲಿದೆ
ಭಾರತ ಪರಿಕ್ರಮ ಯಾತ್ರೆ :
- ಗೋಪಾಲ್ ಚೆಟ್ಟಿಯಾರ್, ಕ್ಷೇತ್ರೀಯ ಸೇವಾ ಪ್ರಮುಖ್,
ಆರೆಸ್ಸೆಸ್ (ಕರ್ನಾಟಕ ಮತ್ತು ಆಂಧ್ರ )
ಯಾತ್ರೆ ಸಾಗುವ ಬಗೆ
     ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸೀತಾರಾಮ ಕೆದಿಲಾಯರು, ಆರೆಸ್ಸೆಸ್‌ನ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಈ ಹಿಂದೆ ಜವಾಬ್ದಾರಿಯಲ್ಲಿದ್ದವರು. ಕಳೆದ ಮಾರ್ಚ್‌ನಲ್ಲಿ ನಾಗಪುರದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ಬಳಿಕ ಭಾರತ ಪರಿಕ್ರಮ ಯಾತ್ರೆಯ ಸಂಕಲ್ಪ ಕೈಗೊಂಡರು. ಸುಮಾರು ೫ ವರ್ಷಗಳಲ್ಲಿ ೧೫೦೦೦ ಕಿಲೋ ಮೀಟರ್‌ನಷ್ಟು ದೂರ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಯೋಜನೆ ಅವರದ್ದು. ಅದಕ್ಕಾಗಿ ಸರಳವಾದ ದಿನಚರಿ ಹೊಂದಿದ್ದಾರೆ. ಬೆಳಗ್ಗೆ ೬.೧೫ಕ್ಕೆ ಗೋ ಪೂಜೆಯಿಂದ ಮೊದಲ್ಗೊಂಡು ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ಗ್ರಾಮಸ್ಥರೊಂದಿಗೆ ಬೆರೆಯುತ್ತಾರೆ ಕೆದಿಲಾಯರು.
     ಬೆಳಗ್ಗೆ ೬.೩೦ಕ್ಕೆ ತಾನಿದ್ದ ಹಳ್ಳಿಯಿಂದ ಪಾದಯಾತ್ರೆ ಆರಂಭಿಸುತ್ತಾರೆ. ೩ ತಾಸಿನ ನಡಿಗೆಯ  ಬಳಿಕ ಅಂದರೆ ಸುಮಾರು ೯.೩೦ಕ್ಕೆ ಇನ್ನೊಂದು ಹಳ್ಳಿಯನ್ನು ಪ್ರವೇಶಿಸುತ್ತಾರೆ. ೯.೩೦ಕ್ಕೆ ಆ ಊರಿನ ದೇಗುಲ ಭೇಟಿ. ಅಲ್ಲೇ ಪರಿಸರದಲ್ಲಿ ಸಸಿಯೊಂದನ್ನು ನೆಡುತ್ತಾರೆ. ೧೨.೩೦ಕ್ಕೆ ಆ ಊರಿನ ಮನೆಯೊಂದರಲ್ಲಿ ಭೋಜನ. ವಿಶೇಷವೆಂದರೆ ಕಳೆದ ಹತ್ತಾರು ವರ್ಷಗಳಿಂದ ಕೆದಿಲಾಯರು ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ. ಮಧ್ಯಾಹ್ನದ ಊಟ ಬಿಟ್ಟರೆ ಬೇರೆ ಯಾವ ಆಹಾರವನ್ನೂ ಅವರು ತೆಗೆದುಕೊಳ್ಳುವುದಿಲ್ಲ .ಯಾವುದೇ ಜಾತಿಯ ಮನೆಯಿರಲಿ, ಆ ಮನೆಯಲ್ಲಿ  ಊಟ, ಒಂದಷ್ಟು ಕುಶಲೋಪರಿ, ವಿಶ್ರಾಂತಿ. ಸಂಜೆ ೩.೩೦ರಿಂದ ಗ್ರಾಮ ಸಂಪರ್ಕ. ೫.೩೦ಕ್ಕೆ ಗ್ರಾಮ ಸಂಕೀರ್ತನೆ. ನಂತರ ಭಜನೆ ಸತ್ಸಂಗ. ನೆರೆದ ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ. ೯ ವಿಷಯಗಳ ಬಗ್ಗೆ ಸರಳ ಭಾಷೆಯಲ್ಲಿ ಭಾಷಣ. ಅವೆಂದರೆ ಭೂ ಸಂರಕ್ಷಣೆ , ಗೋ ಸಂರಕ್ಷಣೆ, ವೃಕ್ಷ ಸಂರಕ್ಷಣೆ , ಜೈವಿಕ ಸಂರಕ್ಷಣೆ , ಜನ ಸಂರಕ್ಷಣೆ , ಜಲ ಸಂರಕ್ಷಣೆ , ಗ್ರಾಮ ಸಂಸ್ಕೃತಿ,  ಗ್ರಾಮೋದ್ಯೋಗ ಮತ್ತು ಗ್ರಾಮ ವೈದ್ಯ. ರಾತ್ರಿ ಅದೇ ಹಳ್ಳಿಯಲ್ಲಿ ವಾಸ್ತವ್ಯ. ಬೆಳಗ್ಗೆ ಇನ್ನೊಂದು ಹಳ್ಳಿಗೆ ಪಯಣ. ಯಾತ್ರೆಗೆ ಬೇಕಾದ ವ್ಯವಸ್ಥೆಗಳನ್ನು ಸ್ಥಾನೀಯ ಆರೆಸ್ಸೆಸ್ ಕಾರ್ಯಕರ್ತರು ಪೂರೈಸುತ್ತಾರೆ. 'Know Bharath, Be Bharth Make Bharath Vishwaguru' ಎನ್ನುವುದು ಯಾತ್ರೆಯ ಧ್ಯೇಯ ವಾಕ್ಯ.
     ಕಣ್ಣೂರಿನಲ್ಲಿ ಚರ್ಚ್‌ಗೆ ಭೇಟಿ ನೀಡಿದ ಕೆದಿಲಾಯರು  ನಂತರ  ಊರಿನ  ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ, ರಾಷ್ಟ್ರೀಯ ವಿಚಾರಗಳ ವಿನಿಮಯ  ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ ಯಾತ್ರೆಗೆ ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ. ಪ್ರತೀ ಗ್ರಾಮದಲ್ಲೂ ವೃಕ್ಷಾರೋಪಣ ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆಯಲ್ಲೇ ಭಾರತದಾದ್ಯಂತ ಹಳ್ಳಿಗಳಲ್ಲಿ ಸಂಚರಿಸುವ ಭಾರತ ಪರಿಕ್ರಮ ಯಾತ್ರೆಗೆ ಕಮ್ಯುನಿಷ್ಟರ ನೆಲೆವೀಡು ಎಂದೇ ಒಂದೊಮ್ಮೆ ಖ್ಯಾತವಾಗಿದ್ದ ಕೇರಳದ ಕಣ್ಣೂರಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಹಿರಿಯ ಆರೆಸ್ಸೆಸ್ ಪ್ರಚಾರಕರಾದ ಸೀತಾರಾಮ ಕೆದಿಲಾಯರ ನೇತೃತ್ವದ  ಭಾರತ ಪರಿಕ್ರಮ ಯಾತ್ರೆಯನ್ನು ಆರೆಸ್ಸೆಸ್ ಕಣ್ಣೂರು ವಿಭಾಗ ಸಂಘಚಾಲಕ ಸಿ. ಚಂದ್ರಶೇಖರ್ ಬರಮಾಡಿಕೊಂಡರು. ಅಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆಯು ಇದೀಗ ಸುಮಾರು ೭೫೦ ಕಿ.ಮೀ. ಹಾದಿಯನ್ನು ಕ್ರಮಿಸಿದೆ. ಅಕ್ಟೋಬರ್ ೨ರಂದು ಕಣ್ಣೂರಿನ  ಓಡತ್ತಿಲ್ ಮಸೀದಿಗೆ ಭೇಟಿಯಿತ್ತ ಕೆದಿಲಾಯರು ಅಲ್ಲಿನ ದಾರುಲ್ ಇಸ್ಲಾಂನ ಯತೀಂಖಾನದ  ಅಧ್ಯಕ್ಷ  ಮೌಲಾನ  ಮೊಹಮ್ಮದ್  ಹಾಜಿಯವರ  ಜೊತೆಗೆ  ಮಾತುಕತೆ  ನಡೆಸಿದರು.  ತಲಶ್ಶೇರಿ ಸಮೀಪದಲ್ಲೇ  ಗಾಂಧೀ  ಪುತ್ಥಳಿಯೊಂದಕ್ಕೆ  ಹಾರಾರ್ಪಣೆ  ಮಾಡುವ  ಮೂಲಕ  ಗ್ರಾಮಸ್ಥರೊಂದಿಗೆ  ಗಾಂಧೀ ಜಯಂತಿಯನ್ನು ಆಚರಿಸಿದರು. ಸಂಜೆ ಊರಿನ ವಿವಿಧ ಜಾತಿ ಮುಖಂಡರೊಂದಿಗೆ ಸಾಮಾಜಿಕ ಸಾಮರಸ್ಯದ ಕುರಿತು ಮಾತುಕತೆ ನಡೆಸಿ, ಗ್ರಾಮಾಭಿವೃದ್ಧಿಗೆ  ಸಾಮರಸ್ಯದ ಅಗತ್ಯವನ್ನು ಮನವರಿಕೆ ಮಾಡಿದರು. ಅಕ್ಟೋಬರ್  ೧೪ರಂದು ಬೆಳಗ್ಗೆ  ೭ ಗಂಟೆಗೆ ಭಾರತ ಪರಿಕ್ರಮ  ಯಾತ್ರೆಯು  ಕಾಸರಗೋಡು ನಗರವನ್ನು ತಲುಪಲಿದ್ದು, ಅಕ್ಟೋಬರ್ ೩ನೇ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಯಾತ್ರೆಗೆ ಇದುವರೆಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತ.  ಕೇರಳದ  ನೂರಾರು  ಹಳ್ಳಿಗಳಲ್ಲಿ  ಓಡಾಡಿದ  ಕೆದಿಲಾಯರು  ಪ್ರತಿ  ಹಳ್ಳಿಯಲ್ಲೂ  ಗ್ರಾಮ  ಜಾಗೃತಿಯ  ಕುರಿತು ಮಾತನಾಡಿದಾಗ, ಗ್ರಾಮಸ್ಥರು ವ್ಯಸನಗಳನ್ನು ತ್ಯಜಿಸಿ, ತಮ್ಮ ಗ್ರಾಮವನ್ನು ಸ್ವಾವಲಂಬೀ  ಗ್ರಾಮವನ್ನಾಗಿ ಮಾಡುವ ಮನಸ್ಸು ಮಾಡಿದ್ದಾರೆ


























-ಹರಿಹರಪುರ ಶ್ರೀಧರ್.

ಸೋಮವಾರ, ಆಗಸ್ಟ್ 13, 2012

ಹೀಗೊಂದು ಅನುಕರಣೀಯ ಶ್ರದ್ಧಾಂಜಲಿ ಕಾರ್ಯಕ್ರಮ



     ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ  ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ನಡೆದುಕೊಂಡು ಬಂದ ಸಂಪ್ರದಾಯದಂತೆ ನೆರವೇರಿಸಿದರು. ಮೂರ್ಛೆ ರೋಗದಿಂದ ಬಳಲುತ್ತಿದ್ದ ರಮೇಶಬಾಬು ಅವಿವಾಹಿತರಾಗಿದ್ದು ನಿಧನರಾದಾಗ ಆತನ ವಯಸ್ಸು ಕೇವಲ ೪೫ ವರ್ಷಗಳು. ದಿನಾಂಕ 11-08-2012 ರಂದು ಪ್ರಭಾಕರ್ ಸೋದರರು ಅಂತಿಮ ಕಲಾಪವನ್ನು (ವೈಕುಂಠ ಸಮಾರಾಧನೆ)  ಶ್ರದ್ಧಾಂಜಲಿ ಕಾರ್ಯಕ್ರಮವಾಗಿ ಆಚರಿಸಿದರು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಕೇವಲ ಮೃತ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಮೀಸಲಾಗಿರದೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವಾಗಿ ನಡೆದುದು ವಿಶೇಷವೇ ಸರಿ. 
     ರಮೇಶಬಾಬು ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದವರು. ಮೂರ್ಛೆರೋಗದ ಬಗ್ಗೆ ಜನರಿಗೆ ಅನೇಕ ತಪ್ಪು ತಿಳುವಳಿಕೆಗಳಿದ್ದು ಅದನ್ನು ಹೋಗಲಾಡಿಸುವ ಕುರಿತು ಅರಿವು ಮೂಡಿಸುವ ಕೆಲಸ ಅಗತ್ಯವೆಂದು ಭಾವಿಸಿ ಮೆದುಳು ಮತ್ತು ನರರೋಗ ತಜ್ಞರಾದ ಡಾ. ಹಾಲಪ್ರಶಾಂತ್‌ರವರನ್ನು, ದೇಹದಾನದ ಮಹತ್ವ ವಿವರಿಸಲು ಹಿಮ್ಸ್ ನ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರನ್ನು ಹಾಗೂ ವೇದದ ಹಿನ್ನೆಲೆಯಲ್ಲಿ ದೇಹ ಮತ್ತು ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂಬುದನ್ನು ತಿಳಿಸಲು ಬೇಲೂರಿನ ವೇದಾಧ್ಯಾಯಿ ಶ್ರೀ ವಿಶ್ವನಾಥಶರ್ಮರವರನ್ನು ಪ್ರಭಾಕರ್ ಸೋದರರು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು. 
     ಮೂರ್ಛೆ ರೋಗದ ಕುರಿತು ಸಾಮಾನ್ಯವಾಗಿ ಇರುವ ತಪ್ಪು ತಿಳಿವಳಿಕೆಗಳನ್ನು ಬಿಡಿಸಿ ಹೇಳಿದ ಡಾ. ಹಾಲಪ್ರಶಾಂತರು ಒಂದು ಅನಿಮೇಟೆಡ್ ಕಿರುಚಲನಚಿತ್ರ ತೋರಿಸಿ ವಿವರಣೆ ನೀಡಿದ್ದು ಗಮನ ಸೆಳೆಯಿತು. ಮೂರ್ಛೆ ತಪ್ಪಿದರೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸಾಧಾರ ಮಾಹಿತಿ ನೀಡಿದ್ದಲ್ಲದೆ ಸಭಿಕರು ಕೇಳಿದ ಸಂದೇಹಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ಗುಣಪಡಿಸಬಹುದೆಂದು ತಿಳಿಸಿದರು.
     ದೇಹದಾನ ಮಾಡುವುದರಿಂದ ಏನು ಪ್ರಯೋಜನ, ಹೇಗೆ ದೇಹದಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಡಾ. ಸಿ.ಎಸ್. ಮಂಜುನಾಥರು ಸಹ ಸಭಿಕರ ಸಂದೇಹಗಳಿಗೆ ಸೂಕ್ತ ವಿವರ ತಿಳಿಸಿದರು. ದೇಹದಾನ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಆಸಕ್ತ ಸಭಿಕರು ಪಡೆದುಕೊಂಡರು.
     ಶ್ರೀ ವಿಶ್ವನಾಥ ಶರ್ಮರವರು ಜೀವಾತ್ಮ ಅವಿನಾಶಿಯಾಗಿದ್ದು ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದೂ, ಅದು ದೇಹದಲ್ಲಿದ್ದಾಗ ಆ ಮಾಧ್ಯಮದ ಮೂಲಕ ಮಾಡುವ ಕರ್ಮಗಳಿಗನುಸಾರವಾಗಿ ಫಲ ಪಡೆಯುವುದೆಂದೂ, ತಾನು ಮಾಡಿದ ಕರ್ಮಕ್ಕೆ ತಾನೇ ಹೊಣೆಯೆಂದೂ, ಇತರರು ಮಾಡುವ ಕರ್ಮಗಳ ಫಲ ಇತರರಿಗೇ ಹೊರತು ಅದಕ್ಕಲ್ಲವೆಂದೂ ವೇದ ಮಂತ್ರಗಳನ್ನು ಉಲ್ಲೇಖಿಸಿ ಹೇಳುತ್ತಾ ಮೃತರ ಆತ್ಮಕ್ಕೆ ಉತ್ತಮ ಫಲ ಸಿಗಲೆಂದು ಆಶಿಸೋಣವೆಂದರು. 
     ಮಿತ್ರ ಪ್ರಭಾಕರ್ ಸ್ವಾಗತ ಮತ್ತು ವಂದನಾರ್ಪಣೆ ಹಾಗೂ ಮಿತ್ರ ಹರಿಹರಪುರ ಶ್ರೀಧರ ನಿರೂಪಣೆ ಮಾಡಿದ ವಿಭಿನ್ನ ರೀತಿಯ ಈ ಶ್ರದ್ಧಾಂಜಲಿ ಸಭೆ ಅನುಕರಣೀಯವೆನ್ನಲೇಬೇಕು. ರೂಢಿಗತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸದಿರುವುದಕ್ಕೆ, ಸಾಂಪ್ರದಾಯಿಕರ ಅಸಮಾಧಾನಗಳನ್ನು ಎದುರಿಸುವುದಕ್ಕೆ ದಿಟ್ಟತನವಿರಬೇಕು. ಅಂತಹ ದಿಟ್ಟತನ ತೋರಿಸಿದ ಪ್ರಭಾಕರ್ ಮತ್ತು ಸೋದರರಿಗೆ ಅಭಿನಂದನೆಗಳು. ಏನೇ ಆಗಲಿ, ಇಂತಹ ಕ್ರಿಯೆಗಳು ಮನಸ್ಸಿನಲ್ಲಿ ವೈಚಾರಿಕ ತರಂಗಗಳನ್ನು ಎಬ್ಬಿಸಿ ಜಿಜ್ಞಾಸೆ ನಡೆಸಲು ಸಹಕಾರಿ ಎಂಬುದಂತೂ ಸತ್ಯ. 
ಶ್ರೀಯುತರಾದ ಪ್ರಭಾಕರ್, ವಿಶ್ವನಾಥಶರ್ಮ, ಡಾ. ಮಂಜುನಾಥ್, ಡಾ. ಹಾಲಪ್ರಶಾಂತ್