ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಅಕ್ಟೋಬರ್ 2, 2012

ಶ್ರೀ ಸುಧಾಕರ ಶರ್ಮರು ಮಾಧ್ಯಮದವರೊಡನೆ ನಡೆಸಿದ ಸಂವಾದ

     ಹಾಸನ ಜನತೆಗೆ  ವೇದಾಧ್ಯಾಯೀ  ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು   ಈಗ್ಗೆ ಎರಡು ವರ್ಷಗಳ ಹಿಂದೆ     'ವೇದಸುಧೆ'ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ, "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ. ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ರ ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತ ಮತ್ತು ಸಹಜ ವಾತಾವರಣದಲ್ಲಿ ನಡೆದ  ಸಂವಾದದ ಆಡಿಯೋ ಇಲ್ಲಿದೆ. ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ  ಬೇಕಾದ ಮಾತುಗಳು. ಎಲ್ಲವೂ  2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.http://www.vedasudhe.com/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%82%e0%b2%b5%e0%b2%be%e0%b2%a6/



ಸೋಮವಾರ, ಅಕ್ಟೋಬರ್ 1, 2012

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ - ಹಾಸನದಲ್ಲೊಂದು ವಿಶಿಷ್ಟ, ಯಶಸ್ವೀ ಕಾರ್ಯಕ್ರಮ

     ದಿನಾಂಕ ೩೦-೦೯-೨೦೧೨ರಂದು ಹಾಸನದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮದ ಸಂಕ್ಷಿಪ್ತ ವರದಿಯಿದು. ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆ. ೯-೩೦ರಿಂದ ೧೦-೦೦ರವರೆಗೆ ಪ್ರಸಾರವಾಗುತ್ತಿರುವ 'ಹೊಸಬೆಳಕು' ಧಾರಾವಾಹಿಯ ಮೂಲಕ ವೇದದ ಉದಾತ್ತತೆ, ರೂಢಿಯಲ್ಲಿರುವ ಅನೇಕ ಅವೈದಿಕ ಸಂಪ್ರದಾಯಗಳು, ಆಚರಣೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ವೇದಾಧ್ಯಾ ಯೀ ಶ್ರೀ ಸುಧಾಕರ ಶರ್ಮರನ್ನು ಹಾಸನಕ್ಕೆ ಆಹ್ವಾನಿಸಿ ಒಂದು ಮುಕ್ತ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಭಾರತೀ ಸಂಸ್ಥೆಯ ಸಂಚಾಲಕರುಗಳಾದ ಶ್ರೀಯುತ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಹೆಚ್.ಎಸ್. ಪ್ರಭಾಕರರವರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಮತ್ತು ಸ್ಥಳೀಯ ಅಮೋಘ್ ವಾಹಿನಿಯ ವ್ಯವಸ್ಥಾಪಕರಾದ ಶ್ರೀ ಕೆ,ಪಿ.ಎಸ್. ಪ್ರಮೋದ್ ರವರು ಕೈಜೋಡಿಸಿದರು. ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ತಮ್ಮ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಅನುಕೂಲಗಳನ್ನು ಒದಗಿಸುವುದರೊಂದಿಗೆ, ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದರೆ, ಅಮೋಘ್ ವಾಹಿನಿಯು ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ನಗರದ ಜನತೆ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ನೋಡುವ ಅನುಕೂಲ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾತು. ಯಾರಿಂದಲೂ ಹಣದ ನಿರೀಕ್ಷೆ ಇಟ್ಟುಕೊಳ್ಳದೆ ಸಂಚಾಲಕರುಗಳೇ ಈ ಕಾರ್ಯಕ್ರಮ ನಡೆಸಲು ಮಾನಸಿಕರಾಗಿ ಸಿದ್ಧರಾಗಿದ್ದರೂ, ಕಾರ್ಯಕ್ರಮ ಆಹ್ವಾನ ಪತ್ರಿಕೆಗಳನ್ನು ಕೊಡುವ ಸಂದರ್ಭದಲ್ಲಿ ಕೇಳದಿದ್ದರೂ ಸಹ ಹಲವು ಗಣ್ಯರು ತಾವಾಗಿ ಮುಂದೆ ಬಂದು ಸಹಾಯ ಹಸ್ತ ಚಾಚಿದ್ದು  ಕಾರ್ಯಕ್ರಮ ಸುಗಮವಾಗಿ, ಸೊಗಸಾಗಿ ನಡೆಯಲು ಕಾರಣವಾಗಿದ್ದಲ್ಲದೆ ಆಯೋಜಕರುಗಳಿಗೆ ಹೆಚ್ಚಿನ ಉತ್ಸಾಹದಿಂದ ಮುಂದಡಿಯಿಡಲು ಪ್ರೇರಿಸಿತು.
     ೧೦.೦೦ಕ್ಕೆ ಸರಿಯಾಗಿ ಹಾಸನದ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋವಿಂದರಾಜ ಶ್ರ್ಠೇಷ್ಠಿಯವರು ವೇದ ಘೋಷದೊಂದಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಾಧ್ಯಾಯಿ  ಶ್ರೀ ಸುಧಾಕರಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿ ವೇದ ಸಾರ್ವಕಾಲಿಕವಾಗಿದ್ದು, ಮಾನವರ ಅಭ್ಯುದಯಕ್ಕಾಗಿ ಮಾರ್ಗದರ್ಶಿಯಾಗಿದೆಯೆಂದು ತಿಳಿಸಿದರು. ನಂತರದಲ್ಲಿ 'ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳು ವೇದೋಕ್ತವಾಗಿವೆಯೇ?' ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಭಿಕರಿಂದ ಮುಕ್ತವಾಗಿ ಪ್ರಶ್ನೆಗಳನ್ನು ಆಹ್ವಾನಿಸಿ, ಅವರ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ಶರ್ಮರವರು ನೀಡಿದರು. ವಿಷಯ ಗಂಭೀರವಾಗಿದ್ದು ಆಳವಾಗಿ ವೇದಾಧ್ಯಯನ ಮಾಡಿರುವ ಶರ್ಮರಂತಹವರಿಗೆ ಮಾತ್ರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯ. ಜಾತಿ ಪದ್ಧತಿ, ವರ್ಣಾಶ್ರಮ, ವೇದದ ಕುರಿತು ಬಂದಿರುವ ಆರೋಪಗಳು, ಮೂರ್ತಿಪೂಜೆ, ಜನಿವಾರ, ಸ್ತ್ರೀಯರು ವೇದಮಂತ್ರ ಹೇಳಬಹುದೇ, ಪುನರ್ಜನ್ಮ, ಪರಮಾತ್ಮ, ಜೀವಾತ್ಮ, ಶ್ರಾದ್ಧ, ಸೂತಕ, ಪೂಜಾವಿಧಾನ, ಪುರಾಣಗಳು, ಇತ್ಯಾದಿ, ಇತ್ಯಾದಿ ಹತ್ತು ಹಲವಾರು ಪ್ರಶ್ನೆಗಳು ಒಂದರ ಮೇಲೊಂದರಂತೆ ಸಭಿಕರು ಮುಂದಿಡುತ್ತಿದ್ದರೆ, ಅವೆಲ್ಲವಕ್ಕೂ ಶರ್ಮರವರು ಸಾಧಾರವಾಗಿ ಉತ್ತರಗಳನ್ನು ಹೇಳುತ್ತಿದ್ದರೆ, ಅವರ ಉತ್ತರಗಳನ್ನು ಸರಿಯಲ್ಲವೆಂದು ಯಾರೂ ಹೇಳುವಂತಿರಲಿಲ್ಲ. ಇಡೀ ಸಭಾಂಗಣ ನಿಶ್ಶಬ್ದವಾಗಿ ಈ ಸಂವಾದವನ್ನು ಆಲಿಸುತ್ತಿತ್ತು. ಎಲ್ಲರಲ್ಲೂ ತಮ್ಮ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ಕಾತುರತೆ ಎದ್ದು ಕಾಣುತ್ತಿತ್ತು. ಮ. ೧.೩೦ರವರೆವಿಗೂ ಈ ಸಂವಾದ ನಡೆಯಿತು. 
     ಮಧ್ಯಾಹ್ನದ ಬೋಜನಾನಂತರದಲ್ಲಿ ಮೂರು ಉಪನ್ಯಾಸಗಳು ಇದ್ದು, ಶ್ರೀ ವಿಶ್ವನಾಥ ಶರ್ಮರವರು 'ವೇದ ಎಲ್ಲರಿಗಾಗಿ' ಎಂಬ ವಿಷಯದ ಕುರಿತು, ಬೆಂಗಳೂರಿನ ಡಾ. ಕವಿತಾರವರು 'ದಂತ ಆರೋಗ್ಯ'ದ ಕುರಿತು ಮತ್ತು ಡಾ. ವಿವೇಕ್ ರವರು 'ಜೀವನ ಶೈಲಿ ಮತ್ತು ಆರೋಗ್ಯ' ಎಂಬ ಕುರಿತು ಮನನೀಯವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ವೇದದ ಕುರಿತು ಪ್ರಚಲಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸುವ ಇಂತಹ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರಬೇಕು, ತಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದು ಹೇಳಿದರು. ಪ್ರಾರಂಭದಲ್ಲಿ ಪ್ರಭಾಕರ್ ಪ್ರಾರ್ಥನೆ ಮಾಡಿದರು. ಹರಿಹರಪುರ ಶ್ರೀಧರ್ ಸ್ವಾಗತ, ಪರಿಚಯ, ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಸೊಗಸಾಗಿ ಮಾಡಿದರು. ಕವಿನಾಗರಾಜ್ ವಂದಿಸಿದರು.
     ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಅದ್ಯಕ್ಷ ಭಾಷಣ ಪ್ರಾರಂಭವಾಗುತ್ತಿದ್ದಂತೆ ಬಂದವರು ಜಾಗ ಖಾಲಿ ಮಾಡಲು ಪ್ರಾರಂಭಿಸಿ, ವಂದನಾರ್ಪಣೆ ಕಾಲದಲ್ಲಿ ಸಭೆಯಲ್ಲಿ ಉಳಿಯುವವರು ವೇದಿಕೆಯಲ್ಲಿರುವವರು ಮಾತ್ರ. ಆದರೆ, ಈ ಕಾರ್ಯಕ್ರಮ ಮ. ೪.೩೦ಕ್ಕೆ ಮುಗಿದರೂ ಸಹ ಸಭಾಸದರು ಹೊರಹೋಗಲೊಲ್ಲದೆ ಶ್ರೀ ಶರ್ಮರವರನ್ನು ಸುತ್ತುವರೆದು ಅವರೊಂದಿಗೆ ಸಾ. ೭.೦೦ರವರೆಗೂ ತಮ್ಮ ಸಂದೇಹಗಳನ್ನು ಹೇಳಿಕೊಂಡು ಅವರ ಸಲಹೆ, ಪರಿಹಾರ, ಉತ್ತರಗಳನ್ನು ಕಾತುರದಿಂದ ಕೇಳುತ್ತಿದ್ದುದು ವಿಶೇಷವೇ ಸರಿ. ಇದು ಕಾರ್ಯಕ್ರಮದ ಯಶಸ್ಸನ್ನು ತೋರಿಸಿದ್ದಲ್ಲದೆ, ಕಾರ್ಯಕ್ರಮದ ಆಯೋಜಕರುಗಳಿಗೆ, ಸಹಕರಿಸಿದವರಿಗೆ ಸಂತೃಪ್ತಿಯನ್ನು ಉಂಟು ಮಾಡಿತು ಎಂದರೆ ಉತ್ಪ್ರೇಕ್ಷೆಯಲ್ಲ. 
-ಕ.ವೆಂ.ನಾಗರಾಜ್.
****************
ಕಾರ್ಯಕ್ರಮದ ಕೆಲವು ದೃಷ್ಯಗಳು:

                                   ಪ್ರಭಾಕರರಿಂದ ಪ್ರಾರ್ಥನೆ
                                       ಜ್ಯೋತಿ ಬೆಳಿಗೆ ಉದ್ಘಾಟನೆ
                                                ವೇದಘೋಷ
                                    ಹರಿಹರ ಪುರ ಶ್ರೀಧರರ ನಿರ್ವಹಣೆ
ಉದ್ಘಾಟಕರ ನುಡಿ: ಶ್ರೀ ಗೋವಿಂದರಾಜ ಶ್ರೇಷ್ಠಿ


                                            ಶ್ರೀ ಸುಧಾಕರ ಶರ್ಮ




                                            ಆಸಕ್ತ ಸಭಾಸದರು
                                            ಶ್ರೀ ವಿಶ್ವನಾಥ ಶರ್ಮ
                                                 ಡಾ. ಕವಿತಾ
                                               ಡಾ. ವಿವೇಕ್
                         ಅದ್ಯಕ್ಷರ ಮಾತು:ಶ್ರೀ  ಸಿ.ಎಸ್. ಕೃಷ್ಣಸ್ವಾಮಿ
                                     ವಂದನೆ: ಕವಿನಾಗರಾಜ್

ಭಾನುವಾರ, ಸೆಪ್ಟೆಂಬರ್ 30, 2012

‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು



ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  ಪ್ರತಿಪಾದಿಸಿದರು.
ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

     ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು. ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.

       ಬ್ರೀಟೀಷರ  ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!

     ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
      ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.
-ಎಚ್.ಎಸ್. ಪ್ರಭಾಕರ 

ಶನಿವಾರ, ಸೆಪ್ಟೆಂಬರ್ 29, 2012

ವೇದಾಧ್ಯಾಯೀ ಶ್ರೀ ಸುಧಾಕರಶರ್ಮ ಕಿರು ಪರಿಚಯ



     ಈಗ್ಗೆ ೧ ವರ್ಷದ ಹಿಂದೆ ‘ಖತಾರ್’ ಎಂಬ ಖಾಸಗಿ ಧಾರ್ಮಿಕ ಟಿ.ವಿ. ವಾಹಿನಿಯಲ್ಲಿ ವಿವಿಧ ಮತ ಧರ್ಮಗಳ ಗುರುಗಳ ನಡುವೆ ಧಾರ್ಮಿಕ ಚರ್ಚೆಯೊಂದು ನೇರ ಸಂವಾದ ರೂಪದಲ್ಲಿ ನಡೆದಿತ್ತು. ಆ ಗುರುಗಳ ನಡುವೆ ‘ಬದುಕುವ ಕಲೆ’ ಕಲಿಸುವ ಓರ್ವ ಗುರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಆದರೆ ಪರಸ್ಪರ ವಾದ ವಿವಾದ ಸಾಗಿದಂತೆ ನಮ್ಮ ಗುರುಗಳಿಗೆ ಸೋಲುಂಟಾಯಿತು! ಈ ಮಹನೀಯರು ನಮ್ಮ ಮನುಕುಲದ ಜ್ಞಾನ ಭಂಡಾರವೆನಿಸಿದ ವೇದಗಳನ್ನು ಬದಿಗಿಟ್ಟು, ನಮ್ಮ ಪರಂಪರೆ ನಡುವೆ ಸಾಗಿ ಬಂದಿರುವ ಕೆಲಸಕ್ಕೆ ಬಾರದ ಪುರಾಣಗಳು-ಪುಣ್ಯ ಕಥೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲು ಯತ್ನಿಸಿದ್ದೇ ಅವರ ಸೋಲಿಗೆ ಕಾರಣವಾಯಿತು. ಅವರ ಜಾಗದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಗಳೋ ಅಥವಾ ಅವರ ಶಿಷ್ಯ ಸುಧಾಕರ ಶರ್ಮರೋ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು! ಅಂದಹಾಗೆ ಯಾರು ಈ ಸುಧಾಕರ ಶರ್ಮ?


     ಪ್ರಳಯದ ಭೀತಿ, ವಾಸ್ತು, ಜ್ಯೋತಿಷ್ಯ, ವ್ರತಾಚರಣೆ, ವಿಶೇಷ ಪೂಜೆ ಅವುಗಳಿಂದ ಸಿಗುತ್ತದೆನ್ನುವ ಪ್ರತಿಫಲ ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕಾತರರಾಗುವ ನಾವು ಟಿ.ವಿ. ಮುಂದೆ ಕುಳಿತು ಅಂತಹ ಕಾರ್ಯಕ್ರಮಗಳನ್ನು ಎವೆಯಿಕ್ಕದೆ ವೀಕ್ಷಿಸುತ್ತೇವೆ. ಇಂತಹ ಅಸಂಬದ್ಧ ಪುರಾಣಗಳು, ಪುಣ್ಯ ಕಥೆಗಳು, ಪೂಜೆ, ಪುನಸ್ಕಾರದಂತಹ ವಿಷಯಗಳಾವುವೂ ವೇದದಲ್ಲಿಲ್ಲ; ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಬೋಧಿಸುವ ‘ಮನುಕುಲದ ಸಂವಿಧಾನ’ವೇ ವೇದ ಎಂಬ ಸತ್ಯ ಸಂಗತಿಗಳನ್ನು ವೇದ ಮಂತ್ರಗಳ ನಿಜವಾದ ಅರ್ಥ ಬಿಡಿಸಿಟ್ಟು ತಿಳಿಸಿಕೊಡುವ ದಾರ್ಶನಿಕರೇ ವೇದಾಧ್ಯಾಯಿ ಸುಧಾಕರಶರ್ಮ! ‘ಚಂದನ’ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೯-೩೦ ರಿಂದ ಪ್ರಸಾರವಾಗುತ್ತಿರುವ ‘ಹೊಸ ಬೆಳಕು’ ಧಾರಾವಾಹಿಯ ಕೇಂದ್ರ ಬಿಂದು- ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇದ, ವಿಜ್ಞಾನ ಹಾಗೂ ವೈಚಾರಿಕತೆ- ಈ ಮೂರನ್ನೂ ಮೇಳೈಸಿಕೊಂಡಿರುವ ಅಪರೂಪದ ವಿಶಿಷ್ಟ ಬಹುಮುಖ ವ್ಯಕ್ತಿತ್ವದ ಜ್ಞಾನ ವೃದ್ಧ ಈ ವ್ಯಕ್ತಿ!!

     ಪ್ರಸ್ತುತ ಭಾರತ ದೇಶ ಸಾಗುತ್ತಿರುವ ಹಾದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ವೇದಗಳ ಕುರಿತು ಚರ್ಚಿಸಲು ಹೊರಟಾಗ ಯಾರಾದರೂ ಮೂಗು ಮುರಿದರೆ ಅಥವಾ ‘ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ’ ಎಂಬಂತೆ ವೇದಗಳನ್ನು ದೂಷಿಸಿದರೆ ಅದು ಸಹಜ ಹಾಗೂ ತಪ್ಪು ಅವರದಲ್ಲ! ಏಕೆಂದರೆ ವೇದಗಳ ಕುರಿತು ಶತ ಶತಮಾನಗಳಿಂದಲೂ ಹರಿದುಬಂದ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ಅರೆಬೆಂದ ಎರವಲು ಜ್ಞಾನ, ಗೊಡ್ಡು ಸಂಪ್ರದಾಯಗಳು, ವಿಚಾರವಿಲ್ಲದ ಆಚರಣೆಗಳು, ಜೀವನ ಶೈಲಿ ಇತ್ಯಾದಿ ಅನಿಷ್ಟ ಕಲಸು ಮೇಲೋಗರಗಳ ನಡುವೆ ಭಾರತೀಯರು ಬೆಳೆದು ಬಂದಿರುವ ಬಗೆಯೇ ಇದಕ್ಕೆ ಕಾರಣ. ವೇದಗಳು ವಜ್ರವಿದ್ದಂತೆ; ಆದರೆ ಅಜ್ಞಾನದಿಂದಾಗಿ ವಜ್ರವನ್ನು ತಿಪ್ಪೆಗೆ ಎಸೆಯಲಾಗಿದೆ; ಅದು ವಜ್ರದ ತಪ್ಪಲ್ಲವಲ್ಲ!? ಜಗತ್ತಿಗೇ ಶಾಂತಿ ಪಾಠ ಹೇಳಿದ ನಮ್ಮ ದೇಶದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಾಗಿ ಖತಾರ್ ಟಿ.ವಿ. ಪ್ರಕರಣ ರೂಪದಲ್ಲಿ ಇನ್ನೊಂದು ವಿಪರ್ಯಾಸ ಸೇರ್ಪಡೆಯಾಯಿತಷ್ಟೆ.

   ವೇದಾಧ್ಯಾಯಿ ಎಂದ ಕೂಡಲೇ ಸಂತನೋ, ಮುನಿಯೋ ಅಥವಾ ಯಾವುದೋ ಮಠದ ಸ್ವಾಮೀಜಿಯೋ ಎಂದೇನೂ ಭಾವಿಸಬೇಕಾಗಿಲ್ಲ. ಬಹುಮುಖ ವಿದ್ಯಾರ್ಹತೆ- ಅಂದರೆ ವಿಜ್ಞಾನ. ಸಂಸ್ಕೃತ ಹಾಗೂ ಲೆಕ್ಕ ಶಾಸ್ತ್ರ (ಐ.ಸಿಡಬ್ಲ್ಯುಎ) ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೇದಾಧ್ಯಾಯಿಯೂ ಆಗಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಎಂದು ಧಾರಾಳವಾಗಿ ಹೇಳಬಹುದು! ಈ ಹಿಂದೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ದಿ. ಎನ್. ಶ್ರೀಕಂಠಯ್ಯ ಅವರ ಪುತ್ರರಾದ ಶ್ರೀಯುತರು, ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದಾರೆ. ಇವರ ಇಡೀ ಸುಖೀ ಕುಟುಂಬವೇ ವೇದೋಕ್ತ!
     ೧೯೭೩ ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿರುವ ಶರ್ಮ ಅವರು ನಮ್ಮ ಪರಂಪರೆಯಲ್ಲಿ ಸಾಗಿಬಂದಿರುವ ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿರುವುದರಿಂದ ‘ಖಂಡಿತವಾದಿ ಲೋಕ ವಿರೋಧಿ’ ಎಂಬಂತೆ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಇವರು ಕರ್ನಾಟಕದಾದ್ಯಂತ ಹಾಗೂ ಪಕ್ಕದ ಆಂಧ್ರ ಪ್ರದೇಶದಲ್ಲೂ ವೇದಗಳ ಕುರಿತು ನಿರಂತರ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡುತ್ತಿದ್ದಾರೆ.
     ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿರುವ ಶರ್ಮಾಜಿ, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದಾರೆ; ಮಾಡಿಸುತ್ತಾರೆ! ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಮಾಡುವ ಶ್ರೀಯುತರನ್ನು, ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳು ಹಲವು ಕಾರ್ಯಕ್ರಮಗಳ ಮೂಲಕ ಪರಿಚಯಿಸಿವೆ; ಅವರ ಲೇಖನಗಳನ್ನು ಪ್ರಕಟಿಸುತ್ತಿವೆ ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿವೆ.
     ಬೆಂಗಳೂರು ನಿವಾಸಿಗಳಾಗಿರುವ ಶ್ರೀಯುತರು, ತಮ್ಮ ಮಕ್ಕಳನ್ನು ಹೊರಗಿನ ಯಾವುದೇ ಶಾಲೆಗಳಿಗೂ ಕಳುಹಿಸದೆ ಮನೆಯಲ್ಲೇ ಗುರುಕುಲ ಮಾದರಿ ವೇದ ಶಿಕ್ಷಣ ಕೊಡಿಸಿದ್ದು, ಯಾವ ಪದವೀಧರರಿಗಿಂತಲೂ ಕಡಿಮೆಯಿಲ್ಲದೆ ಒಂದು ಕೈ ಹೆಚ್ಚಾಗಿಯೇ ಬುದ್ಧಿವಂತರನ್ನಾಗಿ ಬೆಳೆಸಿದ್ದಾರೆಂದರೆ ಅಚ್ಚರಿಯೇ ಸರಿ!

-ಎಚ್.ಎಸ್. ಪ್ರಭಾಕರ, ಹಿರಿಯ ಪತ್ರಕರ್ತರು,
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ,
ಎಚ್.ಆರ್.ಎಸ್. ಕಾಂಪೌಂಡ್, ೬ನೇ ಕ್ರಾಸ್,
ಕೆ.ಆರ್. ಪುರಂ, ಹಾಸನ-೫೭೩ ೨೦೧

ಭಾನುವಾರ, ಸೆಪ್ಟೆಂಬರ್ 23, 2012

ನಮ್ಮ ಆಚರಣೆಗಳು, ಸಂಪ್ರದಾಯಗಳು ವೇದೋಕ್ತವೇ?

'ವೇದಜೀವನ'ದ ಓದುಗರಿಗೆ,
ನಮಸ್ಕಾರಗಳು.
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?


ಶುಕ್ರವಾರ, ಸೆಪ್ಟೆಂಬರ್ 21, 2012

ಮನಸೆಂಬ ಮಾಯೆ


     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. 'ಖ' ಅಂದರೆ ಇಂದ್ರಿಯ, ಸು+ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ+ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಿದ ಅಂತಹ ಕೆಲಸಗಳಿಗೆ ಕುಗ್ಗಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
-ಕ.ವೆಂ.ನಾಗರಾಜ್.
***************
[ಚಿತ್ರಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]

ಮಂಗಳವಾರ, ಸೆಪ್ಟೆಂಬರ್ 11, 2012

ವೇದಪಾಠ-5

1.ಮಾತೃ ಭ್ಯೋನಮ:| ಪಿತೃಭ್ಯೋನಮ:| ಆಚಾರ್ಯೇಭ್ಯೋನಮ:| ಶ್ರೀ ಗುರುಭ್ಯೋನಮ:|
ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  
2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನಮ್ಮ ಜವಾಬ್ದಾರಿ ಏನು?
3. ಜನಿವಾರ ಏನು ಸೂಚಿಸುತ್ತದೆ?
4. ಭಕ್ತ ಅಂದರೆ ಯಾರು?
5. ಪ್ರಣವ ಅಂದರೇನು?
6. ಓಂಕಾರ ಏಕೆ?
7. ಪೂಜೆ ಅಂದರೇನು?

ಪೂರ್ಣ ಮಾಹಿತಿಗೆ ಮತ್ತು ವೇದಪಾಠಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:
 ವೇದಸುಧೆಡಾಟ್ ಕಾಮ್