ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜನವರಿ 17, 2012

ಆಯುರ್ಧಾರಾ - ೫: ಹೀಗಿರಬೇಕು ನಮ್ಮ ಆಹಾರ

ಆಯುರ್ಧಾರಾ - ೫

    ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಜನಪ್ರಿಯ ಗಾದೆ. ಇದರ ಅರ್ಥ - ಯಾರು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸಬಲ್ಲರೋ ಅವರು ಆರೋಗ್ಯವಂತರಾಗುವರು ಎಂದು. ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ಆಯುರ್ವೇದ ಬಹು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತದೆ.
    ಪ್ರಪ್ರಥಮವಾಗಿ ನಮ್ಮ ಆಹಾರ ಷಡ್ರಸೋಪೇತವಾಗಿರಬೇಕು. ಅಂದರೆ ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು - ಈ ಆರೂ ರಸಗಳು ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಇರಬೇಕು. ಇದರಿಂದ ಮನುಷ್ಯನ ಬಲವು ವೃದ್ಧಿಯಾಗುತ್ತದೆ. ಕೇವಲ ಒಂದೇ ತರಹದ ಅಥವಾ ಒಂದೆರಡು ತರಹದ ರಸಗಳನ್ನೇ ಬಳಸುವುದರಿಂದ ದೌರ್ಬಲ್ಯವುಂಟಾಗುತ್ತದೆ. ಷಡ್ರಸಭರಿತ ಆಹಾರ ಸೇವನೆ ಆರೋಗ್ಯದ ಪ್ರಥಮ ಮೂಲ.
ಆಹಾರದ ಪ್ರಮಾಣ: ಆಹಾರದ ಪ್ರಮಾಣದ ನಿಗದಿ ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಇಷ್ಟೇ ಆಹಾರ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಅದರ ಪ್ರಮಾಣ ಅವರವರ ಅಗ್ನಿಬಲ ಅಂದರೆ ಪಚನಶಕ್ತಿಯನ್ನು ಅವಲಂಬಿಸಿರುತ್ತದೆ. ಆಹಾರವನ್ನು ಲಘು ಮತ್ತು ಗುರು ಎಂದು ವಿಂಗಡಿಸಬಹುದು. ಲಘು ಆಹಾರವು ಅಗ್ನಿ, ವಾಯು ಮಹಾಭೂತ ಪ್ರಧಾನವಾಗಿದ್ದು ಸುಲಭವಾಗಿ ಪಚನಗೊಳ್ಳುತ್ತದೆ. ಗುರು ಆಹಾರವು ಪೃಥ್ವಿ, ಜಲ ಮಹಾಭೂತ ಪ್ರಧಾನವಾಗಿದ್ದು ಪಚನಕ್ಕೆ ಕಷ್ಟಕರವಾಗಿರುತ್ತದೆ. ಅಕ್ಕಿ, ಹೆಸರು ಬೇಳೆ, ಜೇನುತುಪ್ಪ, ಮೃಗಮಾಂಸ, ಮೊಲದ ಮಾಂಸ ಮುಂತಾದವು ಲಘು ಆಹಾರಕ್ಕೆ ಉದಾಹರಣೆ. ಹಿಟ್ಟಿನ ಪದಾರ್ಥಗಳು, ಕ್ಷೀರ ವಿಕೃತಿ (ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದವು), ಇಕ್ಷು ವಿಕೃತಿ (ಸಕ್ಕರೆ, ಬೆಲ್ಲ ಮುಂತಾದವು), ಉದ್ದು, ಎಳ್ಳು ಮುಂತಾದ ಪದಾರ್ಥಗಳು ಗುರು ಆಹಾರಕ್ಕೆ ಉದಾಹರಣೆ. ಗುರು ಆಹಾರವನ್ನು ಅರ್ಧ ತೃಪ್ತಿಯವರೆಗೆ ಮಾತ್ರ ತಿನ್ನಬೇಕು. ಹಾಗೆಂದು ಲಘು ಆಹಾರವನ್ನು ಅತಿ ಹೆಚ್ಚು ತಿನ್ನಬಹುದೆಂದು ಭಾವಿಸಬಾರದು. ತಿನ್ನುವಾಗ ಹೊಟ್ಟೆಯ ಅರ್ಧ ಭಾಗದಲ್ಲಿ ಘನ ಆಹಾರ, ಕಾಲುಭಾಗದಲ್ಲಿ ದ್ರವ, ಉಳಿದ ಕಾಲು ಭಾಗ ದೋಷ ಸಂಚಾರಕ್ಕೆ ಅನುಕೂಲವಾಗುವಂತಹ ಕ್ರಮದಲ್ಲಿ ತಿನ್ನಬೇಕು.
ನಿತ್ಯ ಬಳಸಬಹುದಾದ ಪದಾರ್ಥಗಳು: ಅಕ್ಕಿ, ಹೆಸರು ಬೇಳೆ, ಸೈಂಧವ ಲವಣ, ಬೆಟ್ಟದ ನೆಲ್ಲಿ,  ಅಂತರೀಕ್ಷ ಜಲ (ಮಳೆ ನೀರು), ತುಪ್ಪ, ಜಾಂಗಲ ಪಶು ಮಾಂಸ (ಮಾಂಸಾಹಾರಿಯಾಗಿದ್ದಲ್ಲಿ), ಜೇನುತುಪ್ಪ ಮುಂತಾದವು.
ನಿತ್ಯ ಬಳಸಬಾರದ ಪದಾರ್ಥಗಳು: ಮೊಸರು, ಉದ್ದು, ಮೀನು, ಹಂದಿ, ಹಸು, ಎಮ್ಮೆ ಮಾಂಸ, ಶುಷ್ಕ ಶಾಕ (ಒಣಗಿದ ಸೊಪ್ಪು ತರಕಾರಿ), ಒಣಗಿಸಿದ ಮಾಂಸ ಮುಂತಾದವು. ವಿಶೇಷವಾಗಿ ಕ್ಷಾರ, ಉಪ್ಪು, ಹಿಪ್ಪಲಿ ಇವನ್ನು ಹೆಚ್ಚು ಬಳಸಬಾರದು.
     ವಿಶೇಷ ಆಹಾರವಿಧಿಗಳ ಬಗ್ಗೆ ಮುಂದಿನ ಆಯುರ್ಧಾರಾ ಸಂಚಿಕೆಯಲ್ಲಿ ತಿಳಿಸಲಾಗುವುದು.

ಮಂಗಳವಾರ, ಜನವರಿ 3, 2012

ಆಯುರ್ಧಾರಾ - ೪

SUSHRUTHA
               ಈ ಹಿಂದಿನ ಧಾರೆಗಳಲ್ಲಿ ಆಯುರ್ವೇದವು ೮ ಅಂಗಗಳನ್ನು ಹೊಂದಿದೆ ಎಂದು ತಿಳಿಸಲಾಗಿತ್ತು.ಈಗ ಅವುಗಳ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ .
೧. ಕಾಯಚಿಕಿತ್ಸಾ  ಕಾಯಚಿಕಿತ್ಸಾ ನಾಮ ಸರ್ವಾಂಗ    ಸಂಶ್ರಿತಾನಾಂ ವ್ಯಾಧೀನಾಂ ಜ್ವರ ರಕ್ತಪಿತ್ತ ಶೋಷ ಉನ್ಮಾದ ಅಪಸ್ಮಾರ ಕುಷ್ಠ ಮೇಹಾತಿಸಾರಾದೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
         ಕಾಯ ಚಿಕಿತ್ಸೆಯೆಂದರೆ ಸಕಲ ಶರೀರವನ್ನೂ ಆಶ್ರಯಿಸಿ ಹುಟ್ಟಿರುವ ಜ್ವರ, ರಕ್ತಪಿತ್ತ, ಶೋಷ, ಉನ್ಮಾದ, ಅಪಸ್ಮಾರ, ಕುಷ್ಠ, ಪ್ರಮೇಹ, ಅತಿಸಾರ ಮೊದಲಾದ ರೋಗಗಳನ್ನು ನಿವಾರಿಸುವ ಕ್ರಮಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "General medicine" ನನ್ನು ಒಳಗೊಂಡಿದೆ. 
೨. ಕೌಮಾರ ಭೃತ್ಯ : 
ಕೌಮಾರ ಭೃತ್ಯಂ ನಾಮ ಕುಮಾರ ಭರಣ ಧಾತ್ರೀಕ್ಷೀರದೋಷಸಂಶೋಧನಾರ್ಥಂ ದುಷ್ಟಸ್ತನ್ಯಗ್ರಹಸಮುತ್ಥಾನಾಂ ಚ ವ್ಯಾಧೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
     ಕೌಮಾರ ಭೃತ್ಯವೆಂದರೆ ಆಗ ತಾನೇ ಜನಿಸಿದ ಮತ್ತು ಜನನವಾದನಂತರ ಕ್ಷೀರಪಾನದಿಂದ ಹಿಡಿದು ಅನ್ನವನ್ನು ತಿನ್ನುವವರೆಗೂ ಬೆಳೆದಿರುವ ಮಕ್ಕಳನ್ನು ಕ್ರಮವರಿತು ಪೋಷಿಸುವುದು, ಧಾತ್ರಿಯ (ಹಾಲನ್ನುಣಿಸುವಾಕೆ) ಹಾಲಿನ ದೋಷಗಳನ್ನು ಶೋಧಿಸಿ ಉತ್ತಮಗೊಳಿಸುವುದು, ದುಷ್ಟ ಸ್ತನ್ಯಪಾನದಿಂದುಂಟಾಗುವ ಮಕ್ಕಳ ಶಾರೀರಿಕ ವ್ಯಾಧಿಗಳನ್ನು ಬಾಲಕರಿಗೆ ಗ್ರಹಾದ್ಯಾವೇಶದಿಂದುಂಟಾಗುವ (ಗ್ರಹಗಳ ಪ್ರಭಾವದಿಂದ) ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳನ್ನು ಪರಿಹಾರ ಮಾಡತಕ್ಕ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "Pediatrics" ನನ್ನು ಒಳಗೊಂಡಿದೆ.
೩.  ಭೂತ ವಿದ್ಯಾ :
ಭೂತವಿದ್ಯಾ ನಾಮ ದೇವಾಸುರಗಂಧರ್ವ ಯಕ್ಷರಕ್ಷಃಪಿತೃ ಪಿಶಾಚನಾಗಗ್ರಹಾದ್ಯುಪಸೃಷ್ಟಚೆತಸಾಂ ಶಾಂತಿಕರ್ಮಬಲಿಹರಣಾದಿ ಗ್ರಹೋಪಶಮನಾರ್ಥಂ: ||ಸು.ಸಂ.ಸೂ.೧/೮ ||
     ಭೂತ ವಿದ್ಯೆಯೆಂದರೆ ದೇವತೆ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪಿತೃ, ಪಿಶಾಚ, ನಾಗ ಮೊದಲಾಗ ಗ್ರಹಗಳಿಂದ ಪೀಡಿತರಾದ ಜನರ ವಿಕಾರಗಳನ್ನು ಶಾಂತಿಕರ್ಮ, ಬಲಿದಾನ ಮುಂತಾದ ಕ್ರಮಗಳಿಂದ ಗ್ರಹಪೀಡೆಯನ್ನು ನಿವಾರಿಸಿ ಸುಖವನ್ನುಂಟು ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಆಯುರ್ವೇದವು ಆಸ್ತಿಕ ದರ್ಶನವಾಗಿರುವುದರಿಂದ ಈ ವಿಭಾಗಕ್ಕೆ ಮಾನ್ಯತೆ ಕೊಟ್ಟಿದೆ.  ಆಧುನಿಕ ಚಿಕಿತ್ಸಾಕ್ರಮದವರಿಗೆ ಇದರ ಬಗೆಗಿನ ಜ್ಞಾನ ಇಲ್ಲ.
೪. ಶಾಲಾಕ್ಯ ತಂತ್ರ :
ಶಾಲಾಕ್ಯಂನಾಮೋರ್ಧ್ವಜತ್ರುಗತಾನಾಂ ಶ್ರವಣ ನಯನ ವದನ ಘ್ರಾಣಾದಿ ಸಂಶ್ರಿತಾನಾಂ ವ್ಯಾಧೀನಾಂ ಉಪಶಮನಾರ್ಥಂ, ಶಲಾಕಾ ಯಂತ್ರ ಪ್ರಣಿಧಾನಾರ್ಥಂ ಚ: ||ಸು.ಸಂ.ಸೂ.೧/೮ ||
     ಕತ್ತಿನ ಬುಡದ ಮೇಲೆ ಇರುವ ಕಿವಿ, ಕಣ್ಣು, ಬಾಯಿ, ಮೂಗು ಮೊದಲಾದ ಅವಯವಗಳಲ್ಲಿ ಉಂಟಾಗುವ ರೋಗಗಳನ್ನು ನಿವಾರಿಸುವ ಮತ್ತು ಶಲಾಕೆಯೆಂಬ ಯಂತ್ರಗಳನ್ನು ಪ್ರಯೋಗ ಮಾಡುವ ವಿಧಾನಗಳನ್ನು ತಿಳಿಸುವ ಆಯುರ್ವೇದ ಭಾಗವೇ ಶಾಲಾಕ್ಯ ತಂತ್ರವು.
ಇದು ಆಧುನಿಕ ಚಿಕಿತ್ಸಾಕ್ರಮದ "E.N.T" ಹಾಗೂ "Opthalmology" ಯನ್ನು ಒಳಗೊಂಡಿದೆ. 
೫. ಶಲ್ಯ ತಂತ್ರ :
ಶಲ್ಯಂ ನಾಮ ವಿವಿಧತೃಣಕಾಷ್ಠಪಾಷಾಣಪಾಂಶುಲೋಹಲೋಷ್ಟಾಸ್ಥಿ
ಬಾಲನಖಪೂಯಾಸ್ರಾವದುಷ್ಟವ್ರಣಾಂತರ್ಗರ್ಭಶಲ್ಯೋದ್ಧರಣಾರ್ಥಂ,
ಯಂತ್ರಶಸ್ತ್ರಕ್ಷಾರಾಗ್ನಿಪ್ರಣಿಧಾನವ್ರಣವಿನಿಶ್ಚಯಾರ್ಥಂ ಚ:  ||ಸು.ಸಂ.ಸೂ.೧/೮ ||
  ಶಲ್ಯತಂತ್ರವೆಂದರೆ ಅನೇಕ ವಿಧಗಳಾದ ಹುಲ್ಲು, ಕಡ್ಡಿ, ಕಲ್ಲು, ಧೂಳುಮಣ್ಣು, ಲೋಹದ ಚೂರು, ಮಣ್ಣಿನಹೆಂಟೆ, ಮೂಳೆಯ ಚೂರು, ಕೂದಲು, ಉಗುರು, ಕೀವು ಸೇರುವುದು, ದುಷ್ಟ ವ್ರಣವನ್ನು, ಮೂಢಗರ್ಭವನ್ನು ಅಥವಾ ಬದುಕಿರುವ ಶಿಶುವನ್ನೇ ಜೀವಸಹಿತವಾಗಿ ಮೃತ ಗರ್ಭಿಣಿಯ ಉದರದಿಂದ ಹೊರಕ್ಕೆ ತೆಗೆಯ ಬೇಕಾಗುವಾಗ ಉಪಯೋಗಿಸತಕ್ಕ ಯಂತ್ರ, ಶಸ್ತ್ರ, ಕ್ಷಾರ, ಅಗ್ನಿ ಇವುಗಳ ಪ್ರಯೋಗವನ್ನೂ ಮತ್ತು ಇವುಗಳಿಂದ ವ್ರಣವನ್ನು ನಿರ್ಧರಿಸಿ ತಿಳಿಯುವ ವಿಧಾನಗಳನ್ನೂ ತಿಳಿಸುವ ಭಾಗ.
ಇದು ಆಧುನಿಕ ಚಿಕಿತ್ಸಾಕ್ರಮದ  "Surgery" ಯನ್ನು ಒಳಗೊಂಡಿದೆ.
೬. ಅಗದ ತಂತ್ರ :
 ಅಗದ ತಂತ್ರಂ ನಾಮ ಸರ್ಪಕೀಟಲೂತಾ ಮೂಷಕಾದಿ ದಷ್ಟವಿಷವ್ಯಂಜನಾರ್ಥಂ ವಿವಿಧ  ವಿಷಸಂಯೋಗೋಪಶಮನಾರ್ಥಂ ಚ: ||ಸು.ಸಂ.ಸೂ.೧/೮ ||
     ಅಗದ ತಂತ್ರವೆಂದರೆ ಹಾವು, ಕೀಟ, ಜೇಡ, ಇಲಿ ಮೊದಲಾದ ಪ್ರಾಣಿಗಳ ಕಡಿತದಿಂದ ದೇಹದಲ್ಲಿ ಕಾಣಬರುವ ವಿಷಲಕ್ಷಣಗಳನ್ನು ನಿರ್ಧರಿಸತಕ್ಕ ವಿಧಾನಗಳನ್ನೂ, ಸ್ಥಾವರ-ಜಂಗಮಾದಿ ವಿವಿಧ ವಿಷಯಗಳ ಸಂಯೋಗದಿಂದುಂಟಾಗುವ ವಿಷಬಾಧೆಗಳನ್ನೂ ಮತ್ತು ಅವನ್ನು ನಿವಾರಿಸುವ ವಿಧಾನಗಳನ್ನೂ ಬೋಧಿಸುವ ಆಯುರ್ವೇದ ಭಾಗವು.
 ಇದು ಆಧುನಿಕ ಚಿಕಿತ್ಸಾಕ್ರಮದ  "Toxicology" ನನ್ನು ಒಳಗೊಂಡಿದೆ.
೭. ರಸಾಯನ ತಂತ್ರ :
ರಸಾಯನ ತಂತ್ರಂ ನಾಮ ವಯಃಸ್ಥಾಪನಮಾಯುರ್ಮೇಧಾ ಬಲಕರಂ ರೋಗಾಪಹರಣ ಸಮರ್ಥಂ ಚ: ||ಸು.ಸಂ.ಸೂ.೧/೮ ||
     ರಸಾಯನ ತಂತ್ರವೆಂದರೆ ದೀರ್ಘ ಕಾಲ ಬದುಕುವಂತೆಯೂ, ಬುದ್ಧಿಶಕ್ತಿ, ಬಲಗಳನ್ನೂ ಹೆಚ್ಚಿಸಿ ರೋಗನಿವಾರಣಾ ಶಕ್ತಿಯನ್ನು ವೃದ್ಧಿಸಿ, ಮುದಿತನವನ್ನು ನಿವಾರಿಸಿ ಬಹುಕಾಲ ತಾರುಣ್ಯಾವಸ್ಥೆಯಲ್ಲೇ ಇರುವಂತೆ ಮಾಡುವ ಉಪಾಯವನ್ನು ತಿಳಿಸುವ ಆಯುರ್ವೇದ ಭಾಗವು.
     ಆಯುರ್ವೇದದಲ್ಲಿ ಈ ತಂತ್ರದ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಆದರೆ  ಆಧುನಿಕ ಚಿಕಿತ್ಸಾಕ್ರಮದಲ್ಲಿ ಇದು ಇನ್ನೂ ಅಂಬೆಗಾಲಿಡುತ್ತಿರುವ ಕೂಸು ಎಂದೇ ಹೇಳಬಹುದು.
೮. ವಾಜೀಕರಣ ತಂತ್ರ :
ವಾಜೀಕರಣ ತಂತ್ರಂ ನಾಮಾಲ್ಪದುಷ್ಟಕ್ಷೀಣವಿಶುಷ್ಕರೇತಸಾಂ ಆಪ್ಯಾಯನ ಪ್ರಸಾದೋಪಚಯಜನನನಿಮಿತ್ತಂ ಪ್ರಹರ್ಷಜನನಾರ್ಥಂ ಚ|||ಸು.ಸಂ.ಸೂ.೧/೮ ||   
     ವಾಜೀಕರಣ ತಂತ್ರವೆಂದರೆ ಅಲ್ಪಪ್ರಮಾಣದ, ದೋಷದೂಷಿತವಾದ, ರೋಗಾದಿಗಳಿಂದ ಕ್ಷೀಣಿಸಿದ ಮತ್ತು ಬತ್ತಿಹೋದ ಶುಕ್ರಧಾತುವನ್ನುಳ್ಳ ಜನರಿಗೆ ಕ್ರಮವಾಗಿ ಅಲ್ಪಶುಕ್ರವುಳ್ಳವರಿಗೆ ಅತಿಯಾಗಿ ಹೆಚ್ಚುವಂತೆಯೂ, ವಾತಾದಿ ದೋಷ-ದೂಷಿತ ರೇತಸ್ಸುಳ್ಳವರಿಗೆ ಶುದ್ಧಿಮಾಡತಕ್ಕ ವಿಧಾನಗಳನ್ನು ಪ್ರಯೋಗಿಸುವಂತೆಯೂ, ಪ್ರಮಾಣದಿಂದ ಕ್ಷೀಣವಾಗಿರುವ ಶುಕ್ರವುಳ್ಳವರಿಗೆ ವೃದ್ಧಿಯಾಗುವಂತೆಯೂ, ಅತ್ಯಂತ ಕ್ಷೀಣವಾಗಿರುವವರಿಗೆ ಹೆಚ್ಚಾಗಿ ಉತ್ಪತ್ತಿಯಾಗುವಂತೆಯೂ ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು. ಇದು ಆಧುನಿಕ ಚಿಕಿತ್ಸಾಕ್ರಮದ  "Reproductive Medicine" ನನ್ನು ಒಳಗೊಂಡಿದೆ.

ಬುಧವಾರ, ಡಿಸೆಂಬರ್ 21, 2011

ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟು ಸಾವುಗಳೆರಡು ಮಾಯೆ ಮೂಢ ||
     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
'ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 'ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! ಇದೆಂತಹ ಸೃಷ್ಟಿ ರಹಸ್ಯ!
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ|| 

ಕಾಣದದು ನಯನ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

-ಕ.ವೆಂ.ನಾಗರಾಜ್.


ಲೋಕ ಕಲ್ಯಾಣಾರ್ಥ?

     ನಾನು ಮತ್ತು ನನ್ನ ಪತ್ನಿ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದಾಗ ಕಂಡ ದೃಷ್ಯದ ಒಂದು ತುಣುಕು ಸೆರೆ ಹಿಡಿದು ಇಲ್ಲಿ ಹಾಕಿರುವೆ. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹರಳು ಉಪ್ಪನ್ನು ಹರಡಲಾಗಿತ್ತು, ಅದರ ಮೇಲೆ ವ್ಯಕ್ತಿಯೊಬ್ಬರು ಹೊರಳುತ್ತಾ ಪ್ರದಕ್ಷಿಣೆ ಮಾಡುತ್ತಿದ್ದರು. ಹರಳು ಉಪ್ಪಾಗಿದ್ದರಿಂದ ಶರೀರಕ್ಕೆ ಚುಚ್ಚಿ ಅವರಿಗೆ ನೋವಾಗುತ್ತಿದ್ದುದು ಕಣ್ಣಿಗೆ ತಿಳಿಯುತ್ತಿತ್ತು. 'ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ' ಎಂಬ ಗಾದೆಯ ನೆನಪಾಯಿತು. ನೋವು ಅನುಭವಿಸಿ ಉರುಳುಸೇವೆ ಮಾಡುತ್ತಿದ್ದ ಅವರು ಉರುಳಲಾಗದೆ ಕೆಲವೊಮ್ಮೆ 5-10 ನಿಮಿಷಗಳು ಕಣ್ಣು ಮುಚ್ಚಿ ಅಲ್ಲೇ ಮಲಗಿರುತ್ತಿದ್ದರು. ಅವರನ್ನು ಅನುಸರಿಸಿ ಬರುತ್ತಿದ್ದ ಜೊತೆಯವರು ಭಜನೆ ಮಾಡುತ್ತಾ ಬರುತ್ತಿದ್ದರು. ಲೋಕ ಕಲ್ಯಾಣಾರ್ಥ ಅವರು ಹೀಗೆ ಉರುಳುಸೇವೆ ಮಾಡುತ್ತಿದ್ದರಂತೆ. ಇದರಿಂದ ಲೋಕಕಲ್ಯಾಣ ಹೇಗೆ ಆದೀತು ಎಂದು ನನಗಂತೂ ಅರ್ಥವಾಗಲಿಲ್ಲ. ಸುಮಾರು 50-60 ಮೂಟೆ ಉಪ್ಪು ಅಲ್ಲಿ ಸುರಿಯಲಾಗಿದ್ದು, ಅದು ನಂತರದಲ್ಲಿ ಉಪಯೋಗಕ್ಕೂ ಬರಲಾರದು. ಇದರಿಂದ ಲೋಕಕಲ್ಯಾಣ ಹೇಗೆ ಆಗುತ್ತದೆ ಎಂದು ನಿಮಗೆ ಯಾರಾದರೂ ಗೊತ್ತಿದ್ದರೆ ತಿಳಿಸುವಿರಾ?

ಬುಧವಾರ, ಡಿಸೆಂಬರ್ 14, 2011

ಜೀವನ ದರ್ಶನ - ಶ್ರೀ ಸೂರ್ಯಪ್ರಕಾಶ ಪಂಡಿತರ ಪ್ರವಚನದ ಆಯ್ದ ಭಾಗಗಳು

     ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು.  ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.



ನರಕ ಎಂದರೇನು?



ಸತ್ಯದ ಪರಿಕಲ್ಪನೆ ಏನು?



ಮೋಕ್ಷ ಎಂದರೇನು?


ಕಾಲದ ಮಹಿಮೆ?



ಚಾರ್ವಾಕ ನೀತಿ


ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?


******************
-ಹರಿಹರಪುರ ಶ್ರೀಧರ್.

ಸೋಮವಾರ, ಡಿಸೆಂಬರ್ 12, 2011

ಸ್ವಾಮಿ ಕೃತಾತ್ಮಾನಂದರಿಂದ ಸಂದೇಹ ಪರಿಹಾರ

     18-11-2011ರಂದು ಹರಿಹರಪುರ ಶ್ರೀಧರರ ಮನೆಯಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿ  ಬಂದವರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರು ನೀಡಿದ ಉತ್ತರ ಇಲ್ಲಿದೆ.




ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 


ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?


***********

-ಹರಿಹರಪುರ ಶ್ರೀಧರ್.

ಭಾನುವಾರ, ಡಿಸೆಂಬರ್ 11, 2011

ಸಮತ್ವ

     ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.




-ಹರಿಹರಪುರ ಶ್ರೀಧರ್