ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಸೆಪ್ಟೆಂಬರ್ 17, 2011

ನಾವು ಎನ್ನುವ ಭಾವ


ಸಮಾನೀ ಪ್ರಪಾ ಸಹವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ|
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ||
(ಅಥರ್ವ.೩.೩೦.೬.)
     ಜಲಾಶಯಗಳು ನಿಮ್ಮೆಲ್ಲರಿಗೂ ಸಮಾನವಾಗಿ ಸೇರಿದವುಗಳಾಗಿವೆ. ನಿಮ್ಮೆಲ್ಲರ ಜಲಾಶಯಗಳು ಸಮಾನವಾಗಿರಲಿ. ನಿಮ್ಮ ಭೋಜನಗಳು ಒಂದಿಗಿರಲಿ. ಸಮಾನವಾದ ನೊಗದಲ್ಲಿ ನಿಮ್ಮನ್ನು ಒಂದಿಗೆಯೇ ಹೂಡಿದ್ದೇನೆ. ಗುಂಭವನ್ನು ಅರೆಕಾಲುಗಳು ಸುತ್ತಲಿಂದಲೂ ಆವರಿಸಿಕೊಂಡಿರುವಂತೆ ಒಂದುಗೂಡಿ ಜಗನ್ನಾಯಕನನ್ನು ಆರಾಧಿಸಿರಿ.
     ಇದು ‘ನನ್ನ’ ಹೊಲ-ಗದ್ದೆ. ಅಲ್ಲಿ ನನ್ನ ಭಾವಿಗೆ ನಾನು ಪಂಪ್ ಸೆಟ್ ಹಾಕಿದರೆ ಕೇಳಲು ನೀನು ಯಾರು? - ಎಂದು ಮುಂದುವರೆದಾಗ ಪಕ್ಕದ ಹೊಲದ ಭಾವಿ ಒಣಗಿದ ಮೇಲೆ ಪಕ್ಕದ ಭೂಮಿಯವನು ಏನು ಮಾಡಬೇಕು? ಕೊಳವೇಭಾವಿಯೇ ಗತಿ. ಈಗ ಮೊದಲಿನವನ ಭಾವಿಯ ಕಥೆ ಮುಗಿದಂತೆ! ಅವನು ಇನ್ನೂ ಆಳವಾದ ಕೊಳವೆಭಾವಿ ಹಾಕಿಸಿದಾಗ ಪಕ್ಕದವನ ಕೊಳವೇಭಾವಿಯೂ ಒಣಗುತ್ತದೆ. ಈ ಧೋರಣೆಯಿಂದ ಪ್ರಾರಂಭವಾದ ಅಂತರ್ಜಲದ ಶೋಷಣೆ ಇಂದು ಯಾವ ಮಟ್ಟಕ್ಕೆ ಬಂದಿದೆಯೆಂದರೆ, ೮೦೦ರಿಂದ ೧೦೦೦ ಅಡಿ ಭೂಮಿಯನ್ನು ಕೊರೆದರೂ ನೀರು ಸಿಕ್ಕುವ ಸಾಧ್ಯತೆಯಿಲ್ಲವೆಂದಾಗಿದೆ. ನಮ್ಮೆಲ್ಲರಿಗೂ ಆಶ್ರಯ ನೀಡುತ್ತಿರುವುದು ಒಂದೇ ಭೂಮಿ. ಭೂಮಿಯಳಗಿನ ಜಲಾಶಯಗಳು ಭೂಮಿಯ ಮೇಲಿನಂತೆ ಚಕ್ಕುಬಂದಿಗಳಿಗೆ ಒಳಪಟ್ಟಿಲ್ಲ. ಅವನ್ನು ರಕ್ಷಿಸುವ ಭಾರ ಎಲ್ಲರಿಗೂ ಸೇರಿದ್ದಾಗಿದೆ. ಅದರ ಶೋಷಣೆಯ ವಿರುದ್ಧ ದನಿಯೆತ್ತಲು ಎಲ್ಲರಿಗೂ ಹಕ್ಕಿದೆ. ಈ ಸರಳ ಸತ್ಯವನ್ನೇ ಈ ಮಂತ್ರ ನೆನಪಿಸುತ್ತಿದೆ. ಗೊಡ್ಡು ಆಚಾರ-ವಿಚಾರಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡವರು ಸ್ಪೃಶ್ಯ-ಅಸ್ಪೃಶ್ಯ ಎಂಬ ಮಾನವದ್ರೋಹೀ ಭಾವನೆಗಳಿಗೆ ಕಾವನ್ನು ಕೊಡುತ್ತಾ, ನೀರಿನ ವಿಚಾರಕ್ಕೂ ಅದನ್ನೇ ವಿಸ್ತರಿಸಿ ಮಾಡಿರುವ ಅನ್ಯಾಯಕ್ಕೆ ಲೆಕ್ಕವಿಲ್ಲ. ಇಂದಿಗೂ ಕೆಲವೆಡೆ ಈ ದುಷ್ಟ ಪದ್ಧತಿ ಜೀವಂತವಾಗಿದೆಯೆಂದರೆ ಆ ಗೊಡ್ಡು ಪದ್ಧತಿಗಳ ಆಳವನ್ನು ಊಹಿಸಬಹುದು. ವೇದವಿದನ್ನು ಸ್ಪಷ್ಟನುಡಿಗಳಲ್ಲಿ ನಿಷೇಧಿಸಿರುವಾಗ, ಸ್ಪೃಶ್ಯಾಸ್ಪೃಶ್ಯ ಪಿಡುಗಿನ ಮೂಲವನ್ನು ವೇದಗಳಲ್ಲಿ ಗುರುತಿಸುವುದು ತಮ್ಮನ್ನು ತಾವು ಬುದ್ಧಿಜೀವಿ(?)ಗಳೆಂದು ಕರೆದುಕೊಳ್ಳುವವರಿಗೆ ಮಾತ್ರ ಸಾಧ್ಯವೇನೋ?!!
   ಮಾಂಸಾಹಾರಿಗಳು ಯಾರೊಡನೆಯೂ ಕುಳಿತು ಊಟ ಮಾಡಿಬಿಡುತ್ತಾರೆ. ಆದರೆ, ಸಸ್ಯಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಭೋಜನ ಒಂದಿಗಿರಲಿ‌ ಎಂದಾಗ ಎಲ್ಲರೂ  ಸಸ್ಯಾಹಾರಿಗಳೇ ಆಗಬೇಕಾಗುತ್ತದೆ.
-ವೇದಾಧ್ಯಾಯೀ ಸುಧಾಕರಶರ್ಮ

ಶುಕ್ರವಾರ, ಸೆಪ್ಟೆಂಬರ್ 16, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -2 : ದೇವರೆಲ್ಲಿದ್ದಾನೆ?




ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎಂದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! (ಇಲ್ಲಿ ಒಂದು ವೇದ ಮಂತ್ರ ಉಲ್ಲೇಖಿಸಿ ಹೇಳುತ್ತಾರೆ:) ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ದೇವರಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ!. (ಬಹಳ ವರ್ಷದ ಹಿಂದೆ) ಒಬ್ಬ ಶೆಟ್ಟಿ ಬೆಳಿಗ್ಗೆ ಬಂದಾಗ ಖುಷಿಯಲ್ಲಿದ್ದವನು ಸಾಯಂಕಾಲ ಮುಖ ಸಪ್ಪಗೆ ಹಾಕಿಕೊಂಡು ಬಂದ. ವಿಚಾರಿಸಿದರೆ 'ಕುದುರೆ ರೇಸಿನಲ್ಲಿ ಎಲ್ಲಾ ಕಳೆದುಕೊಂಡೆ. ಇಪ್ಪತ್ತೈದು ರೂಪಾಯಿ ಕೊಟ್ಟಿರಿ, ಶಿವಮೊಗ್ಗಕ್ಕೆ ಹೋಗಿ ವಾಪಸು ಕಳಿಸುತ್ತೇನೆ' ಅಂತ ಹೇಳಿದ. ಇದು ಭಗವದ್ಭಕ್ತರ ಲಕ್ಷಣವಾ? ಕುದುರೆ ಜೂಜಾಡುವುದು? (ಒಂದು ವೇದ ಮಂತ್ರವನ್ನು ಉಲ್ಲೇಖಿಸಿ) ಜೂಜಾಡಬಾರದು, ಕಷ್ಟಪಟ್ಟು ದುಡಿ, ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸಿಟ್ಟುಕೊಳ್ಳುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ತ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. ಸರ್ವೇಜನಾಃ ಸುಖಿನೋ ಭವಂತು. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
**************
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 14, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -೧ : ಕರ್ತವ್ಯ ಮತ್ತು ಮಾನಾಪಮಾನ


      ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು, ಅವರ ಶಿಷ್ಯ ಶ್ರೀ ಸುಧಾಕರ ಶರ್ಮರವರ ವಿಚಾರಗಳು, ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದಂತೆ ನನ್ನ ಅಂತರಂಗದ ಅನಿಸಿಕೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಅನುಭವ ನನ್ನದು. ನಾನು ಹೊಂದಿದ್ದ ಭಾವನೆಗಳಿಗೆ ಆಧಾರ ಸಿಕ್ಕಿದ ಮತ್ತು ಅದು ಸರಿಯಾಗಿದೆ ಅನ್ನುವ ಸಂತಸ ಒಡಮೂಡುತ್ತಿದೆ. ಸತ್ಯದ ಸಂಗತಿಗಳು ಯಾರಿಂದಲೇ ಬರಲಿ - ಅವರು ಶತ್ರುಗಳೇ ಆಗಿರಲಿ - ಅದು ಸ್ವೀಕಾರಾರ್ಹ ಎಂಬ ದೃಷ್ಟಿ ಮತ್ತು ಪೂರ್ವಾಗ್ರಹವಿಲ್ಲದ ವಿಚಾರ ವಿಮರ್ಶೆಯಿಂದ ಹೊರಬರುವ ಸತ್ಯ ಸಿಹಿಯಾಗಿರುತ್ತದೆಯೆಂದು ಅಂದುಕೊಂಡಿದ್ದೇನೆ.ಸತ್ಸಂಗದಲ್ಲಿ ಅವರು ತಿಳಿಸಿದ ವಿಚಾರಗಳನ್ನು ಬರಹರೂಪದಲ್ಲಿಳಿಸಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .' ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ. 
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ.) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. ಸತ್ಯಮೇವ ಜಯತೇ ನಾನೃತಮ್. . . . . ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ದೊಡ್ಡ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿದರು. "ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು" ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ. ಆ ದೇವರು ಎಲ್ಲರನ್ನೂ ಸಮಾನರಾಗಿ ನೋಡುತ್ತಾನೆ. ಒಳ್ಳೆಯವರನ್ನೂ ರಕ್ಷಿಸುತ್ತಾನೆ, ಕೆಟ್ಟವರನ್ನೂ ರಕ್ಷಿಸುತ್ತಾನೆ. ಭಾರತದಲ್ಲಿರುವವರು ಆಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ರಷ್ಯದಲ್ಲಿರುವವರು ದೇವರೇ ಇಲ್ಲ ಅನ್ನುವ ನಾಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ನೀನು ಅಂಥವನು, ಇಂಥವನು ಎಂದು ಹೊಗಳುವವರನ್ನು ಕಂಡು ಅವನೇನು ಉಬ್ಬಿ ನಾನು ದೊಡ್ಡ ದೇವರು ಅಂದುಕೊಂಡು ಹೊಗಳಿದವರಿಗೆ ದೊಡ್ಡ ಉಪಕಾರವನೇನೂ ಮಾಡುವುದಿಲ್ಲ. ಅವನನ್ನು ತೆಗಳಿದವರಿಗೆ, ಬೈದವರಿಗೆ ಸಿಟ್ಟು ಮಾಡಿಕೊಂಡು ಕೆಟ್ಟದನ್ನೂ ಮಾಡುವುದಿಲ್ಲ. ನಿಂದಾಸ್ತುತಿಗಳು ಮನುಷ್ಯರಿಗೇ ಹೊರತು ಪರಮಾತ್ಮನಿಗಿಲ್ಲ. ಹಾಗೆ ಮಾಡಿದರೆ ನಮಗೂ ಅವನಿಗೂ ಏನು ವ್ಯತ್ಯಾಸ? ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ.
. . . ಮುಂದುವರೆದಿದೆ.
**************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 6, 2011

ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!

        ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯು ಹೇಳುತ್ತಿದ್ದರು " ನೋಡುಮಗು, ಸುಳ್ಳು ಹೇಳಬಾರದು,” ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!" ಇವತ್ತು ಆ ಮಾತು ನೆನಪು ಮಾಡಿಕೊಂಡರೆ ನಗು ಬರುತ್ತೆ. ಆದರೆ ಆ ವಯಸ್ಸಿನಲ್ಲಿ ಹೆದರಿಸಿದ್ದರಿಂದ ಒಂದಿಷ್ಟು ಒಳ್ಳೆಯ ನಡತೆಯನ್ನು ರೂಢಿಸಿಕೊಳ್ಳಲು ಸಹಾಯವಾಗಿದ್ದಿರಬಹುದು. ಈಗ ಆ ಮಾತು ಯಾಕೆ ನೆನಪಾಯ್ತೆಂದರೆ ಚಿಕ್ಕ ಮಕ್ಕಳಿಗೆ ಹೀಗೆ ಭಯ ಉಂಟು ಮಾಡಿ ಒಂದಿಷ್ಟು ಸದ್ಗುಣಗಳನ್ನು ಕಲಿಸುವುದನ್ನು ಒಪ್ಪ ಬಹುದೇನೋ ಆದರೆ ಪ್ರೌಢಾವಸ್ತೆ ತಲುಪಿದಮೇಲೂ ಈ ರೀತಿ ಯಾರಾದರೂ ಭೀತಿಯುಂಟು ಮಾಡಿದರೆ ಅವರಿಗೆ ಏನೆನ್ನಬೇಕು? ಹಲವಾರು ವರ್ಷಗಳಿಂದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನನ್ನ ಮನದಲ್ಲಾಗುವ ಜಂಜಾಟವನ್ನು ನಿಮ್ಮ ಗಮನಕ್ಕೂ ತರಲು ಈ ಪ್ರಯತ್ನ. ಪೂಜಾ ಭಾಗ ಮುಗಿಯುವ ವರೆಗೂ ಭಕ್ತಿಯಿಂದಲೇ ಕುಳಿತಿರುವ ನನಗೆ ಸತ್ಯನಾರಾಯಣ ಕಥೆಯನ್ನು ಕೇಳುವಾಗ ಗೊಂದಲ ಶುರುವಾಗುತ್ತದೆ. ಸತ್ಯನಾರಾಯಣ ಪ್ರಸಾದವನ್ನು ತಿನ್ನಲಿಲ್ಲವೆಂಬ ಕಾರಣಕ್ಕೆ ವ್ಯಾಪಾರಿಯೊಬ್ಬನ ಹಡಗುಗಳು ಸಮುದ್ರದಲ್ಲಿ ಮುಳುಗಿಹೋಗಿ ಭಾರಿ ನಷ್ಟವಾಯ್ತೆಂದೂ ನಂತರ ಪಶ್ಚಾತ್ಥಾಪ ಪಟ್ಟು ವ್ರತವನ್ನಾಚರಿಸಿ ಪ್ರಸಾದವನ್ನು ತಿಂದ ಮೇಲೆ ಅವನ ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಾಯ್ತೆಂದೂ ಕಥೆಯನ್ನು ಕೇಳುವಾಗ , ನಮ್ಮಜ್ಜಿ ನೆನಪಾಗುತ್ತಾಳೆ
     ಸತ್ಯನಾರಾಯಣ ಕಥೆಯನ್ನು ಯಾರೂ ಪ್ರಶ್ನೆ ಮಾಡಲು ಯತ್ನಿಸುವುದಿಲ್ಲ. ಕಾರಣ ಅದರ ಹಿಂದೆ ಶ್ರದ್ಧೆ- ಭಕ್ತಿಯ ಜೊತೆಗೆ ಭೀತಿಯೂ ಸೇರಿದೆ. ಸತ್ಯನಾರಾಯಣವ್ರತವನ್ನು ಕೇವಲ ಯಾರೋ ಅವಿದ್ಯಾವಂತರು ಆಚರಿಸುತ್ತಾರೆಂದೇನೂ ಅಲ್ಲ. ಬಹುಪಾಲು ಜನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಅದರಬಗ್ಗೆ ಯಾವ ತಕರಾರೂ ಇಲ್ಲ. ಆದರೆ ಎಲ್ಲರನ್ನೂ ರಕ್ಷಿಸುವ ಭಗವಂತನು ಐಶ್ವರ್ಯವನ್ನು ನಾಶಮಾಡಿದ, ಜೀವಹಾನಿ ಮಾಡಿದ, ಮುಂತಾಗಿ ಕಥೆ ಇದ್ದರೆ ಅದನ್ನು ಇನ್ನೂ ಹೇಳಿಕೊಂಡೇ ಇರಬೇಕೇ?
     ಯಾವುದೋ ಒಂದು ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಬಂದಾಗ ಧರ್ಮಕಾರ್ಯ ನಡೆಯಲು ಅಂದಿನ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಜನರಲ್ಲಿ ಭಯವನ್ನುಂಟು ಮಾಡಿದರೆ ಅವನು ಧರ್ಮಮಾರ್ಗದಲ್ಲಿ ಹೋಗುತ್ತಾನೆಂಬ ಕಾರಣದಿಂದ ಒಂದಿಷ್ಟು ಕಥೆ ಹೆಣೆದಿರಬಹುದು. ಇದನ್ನು ಇಂದಿನ ದಿನಗಳಲ್ಲಿ ಪುರೋಹಿತರು ಅವರ ಹೊಟ್ಟೆ ತುಂಬಿಸಿಕೊಳ್ಳಲು ಮಾಡಿದ ಪ್ಲಾನ್ ಅಂತಾ ಹೇಳುವ ಜನರಿದ್ದಾರೆ. ದೇವರನ್ನು ನಂಬದ ನಾಸ್ತಿಕನ ವಿಚಾರ ಬೇರೆ. ವಿಚಾರವಾದದ ಹೆಸರಲ್ಲಿ ಹಿಂದು ಪರಂಪರೆ, ಹಿಂದು ಧಾರ್ಮಿಕ ಆಚರಣೆಗಳನ್ನು ಖಂಡಿಸುವವರ ವಿಚಾರ ಬೇರೆ. ಆದರೆ ಭವಂತನನ್ನು ನಂಬುವ ಹಿಂದು ಆಚಾರ- ವಿಚಾರಗಳನ್ನು ಪ್ರೀತಿಸುವ ಪ್ರಗತಿಪರ ಆಸ್ತಿಕನ ವಿಚಾರ ಬಂದಾಗ ಇಂತಾ ಕಥೆಗಳನ್ನು ಹೇಳದೆ ಮನಸ್ಸಿನ ನೆಮ್ಮದಿಗಾಗಿ ಯಾವುದೇ ದೇವರ ಪೂಜೆಯನ್ನು ಅವನ ಇಚ್ಛೆಯಂತೆ ಮಾಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಭಾವನೆ. ಅಷ್ಟೇ ಅಲ್ಲ ಕುರುಡು ನಂಬಿಕೆಗಳು, ಅಂಧಾಚರಣೆಗಳನ್ನು ಬಿಡುವ ಧೈರ್ಯ ನಮಗೆ ಬರಬೇಕು. ನೀವು ಏನಂತೀರಾ?
-ಹರಿಹರಪುರ ಶ್ರೀಧರ್.

ಯಜ್ಞ:: [ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸದ ಆಯ್ದ ಭಾಗ]

     ಕೇವಲ ಸಮಿತ್ತನ್ನು ಹೋಮಕುಂಡಕ್ಕೆ ಹಾಕಿ 'ಸ್ವಾಹಾ, ಇದಂ ನಮಮ' ಎನ್ನುವುದಕ್ಕೇ ಯಜ್ಞದ ಅರ್ಥ ಮುಗಿದುಬಿಡುವುದಿಲ್ಲ. ಇದಕ್ಕೆ ಇನ್ನೂ ವಿಸ್ತಾರವಾದ ಅರ್ಥವಿದೆ.ಯಜ್ಞವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದು ಯಾವ ಧಾತುವಿನಂದ ಬಂತು, ಅಲ್ಲಿಂದಲೇ ತಿಳಿಯಬೇಕು.ಆಗ ನಮಗೆ ಸರಿಯದ ಅರ್ಥ ಸಿಗುತ್ತದೆ.ನಾವು ವೇದಾಂಗಕ್ಕೆ ಹೋಗಿ ಆರ್ಶೇಯ ಕ್ರಮದಲ್ಲಿ ಅರ್ಥ ನೋಡುವುದು ಸರಿಯಾದ ಕ್ರಮ. ಯಜ್ಞ ಎನ್ನುವುದಕ್ಕೆ ಅರ್ಥ ಹುಡುಕಿದಾಗ -ಯಜ್ ದೇವಪೂಜಾ ಸಂಗತಿಕರಣ ದಾನೇಶು, ಇದು ಮೂಲದಲ್ಲಿರುವ ಧಾತು. ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಪದಗಳು ಇದರಿಂದ ಮೂಡುತ್ತವೆ. ಶತಪತಬ್ರಾಹ್ಮಣದಲ್ಲಿ ಹೇಳುತ್ತದೆ "ಯಜ್ಞೋವೈಶ್ರೇಷ್ಠತಮಂ ಕರ್ಮ" ಶ್ರೇಷ್ಠತಮ ಕರ್ಮ ಎಂದಾಗ [ಶ್ರೇಷ್ಠ-ಶ್ರೇಷ್ಠತರ-ಶ್ರೇಷ್ಠತಮ]ಅಂದರೆ ಅತ್ಯಂತಶ್ರೇಷ್ಠವಾದ ಕರ್ಮಗಳಿಗೆ ಯಜ್ಞ ಎಂದು ಅರ್ಥೈಸಲಾಗಿದೆ. ನಾವು ಮಾಡುವ ಆಲೋಚನೆಗಳು, ನಾವು ಆಡುವ ಮಾತುಗಳು, ನಾವು ಮಾಡುವ ಕೆಲಸ ಎಲ್ಲದರಿಂದಲೂ ನಾವು ಯಜ್ಞವನ್ನು ಮಾಡಲು ಸಾಧ್ಯವಿದೆ. ಕೇವಲ ಹೋಮಕುಂಡದ ಅಗ್ನಿಯಿಂದ ಮಾಡುವ ಯಜ್ಞವನ್ನಷ್ಟೇ ನಾವು ಯಜ್ಞ ಎಂದು ಭಾವಿಸಬೇಕಿಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಶ್ರೇಷ್ಠತಮವಾಗಿ ಮಾಡಿದರೆ ಅದು ಯಜ್ಞ ಎನಿಸಿಕೊಳ್ಳುತ್ತದೆ. ನಾವು ಪುರೋಹಿತರಿಂದ ಯಜ್ಞಕುಂಡದ ಎದುರು ಮಾಡುವ ಹೋಮವನ್ನು ಮಾತ್ರವೇ ಯಜ್ಞವೆಂದುಭಾವಿಸುತ್ತೇವೆ, ಆದರೆ ಇದೂ ಕೂಡ ಒಂದು ಯಜ್ಞವೇ ಹೊರತೂ ಯಜ್ಞವೆಂದರೆ ಇಷ್ಟೇ ಅಲ್ಲ. ನಾವು ಶ್ರೇಷ್ಠತಮವಾಗಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗಿದೆ. ಈ ಒಂದು ವಿಶಾಲವಾದ ಅರ್ಥವು ದೊರೆತಾಗ ನಮ್ಮ ಇಡೀ ಜೀವನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಇಡೀ ದಿನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು. ನಾವು ಮಾಡುವ ಆಲೋಚನೆಗಳು ಇದಕ್ಕಿಂತ ಇನ್ನೂ ಶ್ರೇಷ್ಠತಮವಾಗಿ ಮಾಡಬಹುದೇ ಎಂದು ಯೋಚಿಸಿ ಮಾಡಿದಾಗ ಅದು ಯಜ್ಞವಾಗುತ್ತದೆ. ನಾವು ಆಡುವ ಮಾತು ಇನ್ನೂ ಶ್ರೇಷ್ಠತಮವಾಗಿ ಆಡಬಹುದೇ ಎಂದು ಆಲೋಚಿಸಿ ಆಡಿದಾಗ ಅದೂ ಯಜ್ಞವೇ ಆಗುತ್ತದೆ. ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದೆ. ನಾವು ಅಡಿಗೆ ಮಾಡುವ ಕೆಲಸವೇ ಆಗಲೀ, ಕಸ ಗುಡಿಸುವ ಕೆಲಸವೇ ಆಗಲೀ, ಸೌದೆ ಒಡೆಯುವ ಕೆಲಸವೇ ಆಗಲೀ, ಇದಕ್ಕಿಂತ ಶ್ರೇಷ್ಠತಮವಾಗಿ ಮಾಡಿದೆನೆಂದರೆ ಅದು ಯಜ್ಞವೆನಿಸುತ್ತದೆ. ಅಂದರೆ ಇದಕ್ಕಿಂತ ಇನ್ನು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಅದು ಯಜ್ಞವೆನಿಸುತ್ತದೆ. ಶಾಲೆಯಲ್ಲಿ ಪಾಠಮಾಡುವಾಗ ಚೆನ್ನಾಗಿ ಪಾಠಮಾಡಿದೆನೆಂದರೆ ಅದು ಶ್ರೇಷ್ಠ. ಸಂಬಳ ಪಡೆಯುತ್ತೇನಾದ್ದರಿಂದ ಮಕ್ಕಳಿಗೆ ದ್ರೋಹವಾಗದಂತೆ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತರ. ಸಂಬಳ ಬಾರದಿದ್ದರೂ ಚಿಂತೆಯಿಲ್ಲ ಮಕ್ಕಳ ಅಭ್ಯುದಯಕ್ಕಾಗಿ ನಾನು ಅತ್ಯಂತಶ್ರದ್ಧೆಯಿಂದ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತಮ. ಇದು ಎಲ್ಲಾ ಕೆಲಸಕ್ಕೂ ಅನ್ವಯ. ಶ್ರೇಷ್ಠತಮ ಕೆಲಸವು ಯಜ್ಞ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ಮಾತಿನಲ್ಲೂ ಶ್ರೇಷ್ಠ, ಶ್ರೇಷ್ಠತರ, ಶ್ರೇಷ್ಠತಮ ಎಂದು ಪರಿಗಣಿಸಲು ಸಾಧ್ಯವಿದೆ. ಮಾತಿನಲ್ಲಿ, ಆಲೋಚನೆಯಲ್ಲಿ, ಕೆಲಸದಲ್ಲಿ ಶ್ರೇಷ್ಠತಮವಾದಾಗ ಅವುಗಳೆಲ್ಲವೂ ಯಜ್ಞ ಎನಿಸಿಕೊಳ್ಳುತ್ತವೆ. ನಮ್ಮ ಇಡೀ ಜೀವನವು ಯಜ್ಞಮಯವಾದಾಗ ನಮಗೆ ಸಿಗುವ ಲಾಭವೂ ಅಷ್ಟೇ ವಿಶೇಷವಾಗಿರುತ್ತದೆ. ನಮಗೆ ಉತ್ತಮ ಆರೋಗ್ಯ, ಸುಖ, ಸಂತೋಷ, ನೆಮ್ಮದಿ ಎಲ್ಲಾ ಬೇಕಾದರೆ ನಮ್ಮ ಜೀವನ ಯಜ್ಞಮಯವಾಗಿರಬೇಕು. ಆಗ ಎಲ್ಲವೂ ತಾನೇ ತಾನಾಗಿ ಲಭ್ಯವಾಗುತದೆ. ವೇದವು ನಮಗೆ ಹೇಳುವ ಮಾರ್ಗ ಇದೇ ಆಗಿದೆ- "ನಾನ್ಯಃ ಪಂಥಾ ಅಯನಾಯ ವಿದ್ಯತೇ" ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಯಾರುಈ ಮಾರ್ಗವನ್ನು ಅರ್ಥಮಾಡಿಕೊಂಡು ಜೀವನ ಮಾಡುತ್ತಾರೋ ಅವರು ಇಲ್ಲೇ ಅಮೃತತ್ವವನ್ನು ಹೊಂದುತ್ತಾರೆ ಎಂದು ಹೇಳಿದೆ. ಅಮೃತತ್ವ ಎಂದರೇನು? ಮೃತ ಎಂದರೆ ಸಾವು , ಅಮೃತ ಎಂದರೆ ಸಾವಿಲ್ಲದಿರುವುದು.[ಇಲ್ಲಿ ಸುಧಾಕರ ಶರ್ಮರು ಮೃತ್ಯುವೆಂಬ ಪದವನ್ನು ಬಹುವಾಗಿ ವಿಶ್ಲೇಷಿಸಿದ್ದಾರೆ, ಅದನ್ನು ಇಲ್ಲಿ ಬಿಟ್ಟಿದ್ದೇನೆ] ಅಂದರೆ ಯಾರಿಗೂ ಸಾವು ತಪ್ಪಿದ್ದಲ್ಲವಾದರೂ ನಿಜವಾಗಿ ಮನುಷ್ಯನಿಗೆ ನಿಜವಾಗಿ ತೊಂದರೆ ಕೊಡುತ್ತಿರುವುದು ಸಾವಲ್ಲ, ಸಾವಿನಭಯ. ಯಾವಾಗ ಸಾವಿನಭಯ ಹೋಗುತ್ತದೆ, ಇನ್ಯಾವುದಕ್ಕೂ ಭಯ ಪಡುವ ಕಾರಣವೇ ಇಲ್ಲ. ಎಲ್ಲಾಭಯಗಳಿಗೂ ಮೂಲವೇ ಪ್ರಾಣಭಯ. ಆದ್ದರಿಂದ ಯಜ್ಞದ ಜ್ಞಾನದಿಂದ ಪ್ರಾಣಭಯದಿಂದ ದೂರವಾಗುತ್ತಾರೆ. ಯಾವಾಗ ಸಾವಿನಭಯವೇ ಇಲ್ಲ ಆಗ ಅಸತ್ಯ, ಅನ್ತ್ಯಾಯ, ಅಧರ್ಮಗಳಿಗೆ ಅಂಜದೆ ಸತ್ಯಮಾರ್ಗದಲ್ಲಿ ಅವರ ದಾರಿ ಸಾಗುತ್ತದೆ.
-ಹರಿಹರಪುರಶ್ರೀಧರ್

ಸೋಮವಾರ, ಸೆಪ್ಟೆಂಬರ್ 5, 2011

ಅಶ್ವಮೇಧ ಯಾಗವೆಂದರೆ. . . . .


     ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದು ಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು" ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.

     ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.

     ಗೋಮೇಧ: ಗೋಮೇಧ ಎಂದಾಕ್ಷಣ ಗೋವಿನ ಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಗೋ ಎಂದರೆ ಹಸು ಎಂದಷ್ಟೇ ಅಲ್ಲ. ಯಾಸ್ಕರ ಪ್ರಕಾರ ಗೋ ಎಂದರೆ " ಇಂದ್ರಿಯ " ಎಂದೂ ಅರ್ಥವಿದೆ." ವಾಕ್" ವಾಣಿ ಎಂದೂ ಅರ್ಥವಿದೆ.ಇಲ್ಲಿ ಗೋಮೇಧ ಎಂದರೆ "ವಾಕ್ ಸಂಯಮ" ಎಂದು ಅರ್ಥ. ಮಾತನ್ನು ನಿಯಂತ್ರಣದಲ್ಲಿಡು ಎಂದು ಅರ್ಥ. ಅಂದರೆ ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಎಂದು ಹೆಸರು.ಗೋಮೇಧಾ ಎಂದರೆ ಹಸುವನ್ನು ಬಲಿಕೊಡುವ ಯಜ್ಞವಲ್ಲ.ವೇದಗಳ ಮೂಲ ಸಿದ್ಧಾಂತವೇ ಅಹಿಂಸೆಯಾದ್ದರಿಂದ ಈ ಅರ್ಥಗಳು ನಾವು ಹುಡುಕಿದರೆ ಸಿಗುತ್ತವೆ.ಮಾತನ್ನು ಹೇಗೆ ಆಡಬೇಕೆಂದೂ ವೇದದಲ್ಲಿಯೇ ಹೇಳಿದೆ. "ಹಿಟ್ಟನ್ನು ಜರಡಿ ಆಡಿದಂತೆ ಜರಡಿಯಾಡಿ ಮಾತನಾಡು" ಎಂದು ಹೇಳಿದೆ. ಹಿಟ್ಟನ್ನು ಜರಡಿಯಾಡಿ ಕಸ ಕಡ್ಡಿ ತೆಗೆದು ನಂತರವಷ್ಟೇ ರೊಟ್ಟಿ ಮಾಡುವುದಿಲ್ಲವೇ ಹಾಗೆ ಮಾತನ್ನು ಆಡುವ ಮುಂಚೆ ಜರಡಿಯಾಡಿ ಮಾತನಾಡು. ಅಂದರೆ ಮಾತನಾಡುವ ಮುನ್ನ ನಾವಾಡುವ ಮಾತು ಸತ್ಯವೇ, ಎಂದು ತಿಳಿದಿರಬೇಕು.ಇದು ಮೊದಲನೆಯ ಹಂತ. ಎರಡನೆಯದು "ಪ್ರಿಯವೇ" . ನಾನಾಡುವ ಮಾತು ಬೇರೆಯವರಲ್ಲಿ ದ್ವೇಶ ಉಂಟುಮಾಡುತ್ತದೋ, ಉದ್ವೇಗ ಉಂಟುಮಾಡುತ್ತದೋ, ಅಥವಾ ಪ್ರಿಯವಾಗುತ್ತದೋ , ಹಿತವಾಗುತ್ತದೋ ಎಂಬುದನ್ನು ಆಲೋಚಿಸಿ ನಂತರ ನಮ್ಮ ಬಾಯಿಂದ ಮಾತು ಹೊರಬರಬೇಕು. ಈಬಗ್ಗೆ ನಾವು ಯೋಚಿಸಿದ್ದೇವೆಯೇ?
     ಈ ಒಂದು ಮಾತಿನ ನಿಯಂತ್ರಣವಿದ್ದರೆ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಅಶಾಂತಿ ಮೂಡುವುದೇ ಇಲ್ಲ. ಮಾತನಾಡುವ ಮುಂಚೆ ಅದು ಸತ್ಯವೇ,ಪ್ರಿಯವೇ, ಹಿತವೇ ಎಂದು ಆಲೋಚಿಸಿ ಮಾತನಾಡಿದರೆ ಸಮಾಜದಲ್ಲಿ ಸಾಮರಸ್ಯಕ್ಕೆ ಬಂಗ ಬರುವುದಿಲ್ಲ.ಸತ್ಯವೂ, ಪ್ರಿಯವೂ, ಹಿತವೂಆದ ಮಾತನ್ನಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ? ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿವಾಚಿ"ಮಂಗಳಕರವಾದ ಸಂಪತ್ತು ,ಶ್ರೇಯಸ್ಕರವಾದ ಹಿತ ಅಂತಹಾ ಮಾತಿನಲ್ಲಿ ನೆಲೆಗೊಂಡಿದೆ. ಬ್ಯಾಂಕಿನಲ್ಲಿರುವ ಡಿಪಾಸಿಟ್ ನಮ್ಮನ್ನು ಕಾಪಾಡುವುದಿಲ್ಲ. ನಿಜವಾದ ಸಂಪತ್ತು ನಮ್ಮ ಮಾತಿನಲ್ಲಿದೆ. ಮಾತು ಸರಿಯಾಗಿದ್ದಲ್ಲಿ ಸಂಪತ್ತನ್ನು ಗಳಿಸುವುದು ಕಷ್ಟವಿಲ್ಲ.ಆದರೆ ಮಾತು ಸರಿಯಿಲ್ಲದಿದ್ದಾಗ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುತ್ತದೆ.ಹೀಗೆ ಜರಡಿಯಿಂದಆಡಿಸಿ ಮಾತನಾಡಬೇಕು, ಇದನ್ನು ವಾಕ್ ಸಂಯಮ ಎನ್ನುವರು. ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಯಜ್ಞ ಎಂದುಕರೆದರು.ಆದರೆ ಅದನ್ನು ಹಸುವನ್ನು ಬಲಿಕೊಡುವ ಒಂದು ಯಜ್ಞಎಂದು ತಪ್ಪಾಗಿ ಅರ್ಥೈಸಿ ಹಸುವನ್ನು ಬಲಿಕೊಟ್ಟು ಅದರ ವಪೆಯನ್ನು ಯಜ್ಞಕ್ಕೆ ಹಾಕಿ, ಇನ್ನು ಯಜ್ಞಕ್ಕೆ ಗೋಬಲಿ ಕೊಟ್ಟಮೇಲೆ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನು, ಎಂದೆಣಿಸಿ ಮಾಂಸವನ್ನೂ ಭಕ್ಷಿಸಿದರು.ಇದಕ್ಕಿಂತ ಮೂರ್ಖತನ ಬೇರೊಂದಿದೆಯೇ? ಇಂತಾ ಅನರ್ಥ ಎಲ್ಲಿಯವರೆಗೆ ಬೆಳೆದಿದೆ ಎಂದರೆ "ಗೋಘ್ನ" ಎಂಬ ಮಾತಿದೆ. ಇದಕ್ಕೆ ಏನು ಅರ್ಥೈಸಿದ್ದಾರೆಂದರೆ ಮನೆಗೆ ಬಂದ ಅಥಿತಿಗಳಿಗೆ ಊಟದಲ್ಲಿ ಗೋಮಾಂಸ ಬಡಿಸು. ಗೋಘ್ನ ಎನ್ನುವುದಕ್ಕೆ ಇನ್ನೊಂದು ಅರ್ಥ ಗೋವಿನ ಉತ್ಪತ್ತಿ , ಎಂದರೆ ಹಾಲು ಮೊಸರು, ತುಪ್ಪ ಬಡಿಸಿ ಸತ್ಜರಿಸು ಎಂದು ಅರ್ಥೈಸುವ ಬದಲು ಗೋಮಾಂಸ ಬಡಿಸು ಎಂದು ಅರ್ಥೈಸಿದರು!
     ಅತಿಥಿಯನ್ನು ಗೋವಿನಿಂದ ಉಪಚರಿಸಬೇಕೆಂದರೆ ಗೋ ಎಂದರೆ ವಾಕ್ ಎಂತಲೂ ಅರ್ಥವಿರುವುದರಿಂದ ಅಥಿತಿಯನ್ನು ಒಳ್ಳೆಯ ಹಿತವಾದ ಮಾತುಗಳಿಂದ ಉಪಚರಿಸು ಎಂದರ್ಥವಾಗುತ್ತದೆ. ದೊಡ್ದ ದೊಡ್ಡ ವಿಸ್ವಾಂಸರುಗಳೂ ಸಹ ಇದನ್ನು ತಪ್ಪು ತಪ್ಪಾಗಿ ಅರ್ಥೈಸಿದ್ದರ ಪರಿಣಾಮ ಬಹಳ ಅನರ್ಥಗಳು ಸಂಭವಿಸಿವೆ, ವೇದದ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವಾಗಿದೆ. ಅಂದರೆ ಒಂದೊಂದುಶಬ್ಧವನ್ನೂ ಅರ್ಥಮಾಡಿಕೊಳ್ಳುವಾಗ ಮೂಲ ಸಿದ್ಧಾಂತವನ್ನು ಮರೆತಿದ್ದರಿಂದ ಇಂತಹಾ ಅನರ್ಥಗಳಾಗಿವೆ. ಅಂದರೆ ಮೂಲ ಸಿದ್ಧಾಂತವೇನು? ಯಜ್ಞವೆಂದರೆ ಅಹಿಂಸೆ. ಅದನ್ನೇ ಮರೆತು ಅರ್ಥಹುಡುಕಿದ್ದರಿಂದ ಬಹಳ ಅನರ್ಥಗಳು ಘಟಿಸಿರುವುದು ಸುಳ್ಳಲ್ಲ.
-ಹರಿಹರಪುರ ಶ್ರೀಧರ್ 

ಮಂಗಳವಾರ, ಆಗಸ್ಟ್ 2, 2011

ಇಂತಹವರೂ ಇರುತ್ತಾರೆ!

     ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬರುವವರು ಇರಬಹುದು. ಆದರೆ ಪರಿಚಯವೇ ಇಲ್ಲದ, ಇಂತಹ ಸಮಸ್ಯೆ ಇರುವ ಯಾರಾದರೂ ಕಡುಬಡವರಿಗೆ ತಾವು ಬದುಕಿರುವಾಗಲೇ ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬಂದವರನ್ನು ಕಂಡಿದ್ದೀರಾ? ಅಂತಹ ಧೀಮಂತ ಮಹಿಳೆಯೊಬ್ಬರು ಇದ್ದಾರೆ, ಅವರೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಶ್ರೀಮತಿ ಶಕುಂತಲಾ ಮಂಜುನಾಥರವರು.
               ಪತಿ ಮಂಜುನಾಥ ಮತ್ತು ಮಗ ಪ್ರವೀಣನೊಂದಿಗೆ ಶ್ರೀಮತಿ ಶಕುಂತಲಾ.
     ಸಾಣೇನಹಳ್ಳಿ ಶ್ರೀಗಳು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ನೇತ್ರದಾನ ಶಿಬಿರವೊಂದರಲ್ಲಿ ನೇತ್ರದಾನ ಮಾಡಲು ಮುಂದೆ ಬಂದ ಹಲವರು ಆ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಬರೆದುಕೊಡುತ್ತಿದ್ದರು. ಶ್ರೀಮತಿ ಶಕುಂತಲಾ ಮಂಜುನಾಥರವರು ಬರೆದುಕೊಟ್ಟ ಪತ್ರದಲ್ಲಿದ್ದ ಒಕ್ಕಣೆ:
     "ನಾನು ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ. ಇದು ನಾನು ಮೃತಳಾದ ಮೇಲೆ ಆಗುವ ಕಾಯಕ. ಆದರೆ ನಾನು ಜೀವಿತಾವಧಿಯಲ್ಲೇ ಕಡುಬಡವರಿಗೆ ನನ್ನ ಒಂದು ಮೂತ್ರಪಿಂಡ ಕಿಡ್ನಿ ಕೊಡಲು ಬಯಸಿದ್ದೇನೆ. ದಯವಿಟ್ಟು ಇದಕ್ಕೆ ಅವಕಾಶ ಕಲ್ಪಿಸಿಕೊಡಿ."
     ಈ ವಿಷಯವನ್ನು ಸಂಬಂಧಿಸಿದ ಸಂಸ್ಥೆ/ಆಸ್ಪತ್ರೆಗೆ ತಿಳಿಸುವ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ. ಅಲ್ಲದೆ ಬಡವರಿಗೆ ಒದಗುವ ಖರ್ಚು ಹೊಂದಿಸಲು ಅವರಿಗೆ ಆಗದೇ ಇರಬಹುದಾದ್ದರಿಂದ, ಸ್ವಾಮಿಗಳಿಗೆ ಹೇಳಿದರೆ ಅವರು ಸಹಕಾರ ನೀಡಿ ಒಳ್ಳೆಯದಾಗಬಹುದೆಂಬ ಕಾರಣದಿಂದ ಅವರಿಗೆ ಪತ್ರ ಬರೆದುಕೊಟ್ಟಿದ್ದರು. ೫೦ ವರ್ಷದ ಶ್ರೀಮತಿ ಶಕುಂತಲಾ ಮಂಜುನಾಥರವರ ಪತಿ ಮಂಜುನಾಥರವರು ಒಬ್ಬ ಸಾಮಾನ್ಯ ರೈತ, ತೃಪ್ತ ಜೀವನ ನಡೆಸುತ್ತಿರುವವರಾಗಿದ್ದು ಪತ್ನಿಯ ನಿರ್ಧಾರದ ಬಗ್ಗೆ ಅವರ ಸಂಪೂರ್ಣ ಸಮ್ಮತಿ ಇದೆ. ಅವರ ಇಬ್ಬರು ಹೆಣ್ಣುಮಕ್ಕಳ ಮದುವೆ ಆಗಿದೆ. ಒಬ್ಬ ಗಂಡು ಮಗ ಪ್ರವೀಣ ತಾಯಿ ಮಾಡುವುದಾಗಿ ಹೇಳಿರುವ ಕೆಲಸ ಒಳ್ಳೆಯದಾಗಿದ್ದು ತಾನು ಏನೂ ಹೇಳುವುದಿಲ್ಲವೆನ್ನುತ್ತಾನೆ.
     ನೊಂದವರಿಗಾಗಿ ಮಿಡಿಯುವ ಹೃದಯವೀಣೆಯ ನಾದ ಎಲ್ಲರಿಗೂ ಕೇಳಲಿ, ಇತರರೂ ಪ್ರೇರಿತರಾಗಲಿ ಎಂಬುದೇ ಈ ಕಿರುಬರಹದ ಉದ್ದೇಶ.
********************
-ಕ.ವೆಂ.ನಾಗರಾಜ್.
(ಆಧಾರ: ವಿಜಯ ಕರ್ನಾಟಕ - ದಿ. ೧೦-೦೭-೨೦೧೧).