ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 11, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೧


     ಮಾನವನು ಸ್ವಭಾವತಃ ಪ್ರಭಾವಗ್ರಾಹಿ. ಬಾಹ್ಯ ಕ್ರಿಯಾಕಲಾಪಗಳ ಮತ್ತು ಆಚಾರ ವ್ಯವಹಾರಗಳ ನಿರ್ದಿಷ್ಟ ಪ್ರಭಾವ, ಅದು ಒಳ್ಳೆಯದೇ ಇರಬಹುದು, ಕೆಟ್ಟದ್ದೇ ಇರಬಹುದು, ಖಚಿತವಾಗಿ ಬಿದ್ದೇ ಬೀಳುತ್ತದೆ. ಈ ರೀತಿ ಬಿದ್ದ ಪ್ರಭಾವವನ್ನು "ಸಂಸ್ಕಾರ" ಎನ್ನುತ್ತಾರೆ. ಧರ್ಮದ ಪರಿಧಿಯಲ್ಲಿ ದುಷ್ಟ ಭಾವನೆಗಳಿಗೆ ಪ್ರವೇಶವೇ ಇಲ್ಲ. ಪ್ರಶ್ನೆ, ಕೇವಲ ಸತ್ ಪ್ರಭಾವಗಳದ್ದೇ ಇರುತ್ತದೆ.  ಸಂಸ್ಕಾರ ಎಂಬ ಶಬ್ದಕ್ಕೆ 'ಮನವನ್ನು ಹದಗೊಳಿಸುವುದು' ಎಂಬ ಅರ್ಥವಿದೆ. ಮನಸ್ಸು ಹದಗೊಂಡರೆ, ಮಾತು-ಮೈಗಳೂ ಹದಗೊಂಡು, ಬಾಳುವೆಯೇ ಹಸನಾಗುವುದರಲ್ಲಿ ಸಂದೇಹವೇ ಇಲ್ಲ. ಈ ಮೂಲಭೂತ ಸಿದ್ಧಾಂತವನ್ನು ಮುಂದಿಟ್ಟುಕೊಂಡೇ ವೈದಿಕ ಧರ್ಮವು ಹದಿನಾರು ಸಂಸ್ಕಾರಗಳನ್ನು ವಿಧಿಸುತ್ತದೆ. 
     ಮೊದಲನೆಯದು ಗರ್ಭಾದಾನ. ವಿವಾಹಿತರಾದ ದಂಪತಿಗಳು ಪ್ರಥಮ ಬಾರಿ ದೇಹಸಂಗ ಮಾಡುವ ಮುನ್ನ ಆಚರಿಸಲ್ಪಡುವ ಸಂಸ್ಕಾರವಿದು. ದೇಹಸಂಗ ಕೇವಲ ಕಾಮಪಿಪಾಸಾ ತೃಪ್ತಿಗಾಗಿ ಮಾಡುವ ಪಾಶವಿಕ ಕರ್ಮವಲ್ಲ. ಭಗವಂತನನ್ನು ಸಾಕ್ಷಿಯಾಗಿಟ್ಟುಕೊಂಡು, ಪ್ರಜಾತಂತುವಿನ ಅವಿಚ್ಛೇದಕ್ಕಾಗಿ ಮಾಡುವ ಕರ್ತವ್ಯಕರ್ಮ -  ಎಂಬಧಾರ್ಮಿಕ ಭಾವನೆಯನ್ನು ದಂಪತಿಗಳ ಚಿತ್ತದ ಮೇಲೆ ಮೂಡಿಸುವುದಕ್ಕಾಗಿ ಮಾಡುವ ಸಂಸ್ಕಾರವಿದು. ಹೋಮದ ಪ್ರಧಾನ ಮಂತ್ರಗಳಲ್ಲಿ ಪತಿಯು - 'ದೇವ ದೇವ! ನಾನು ನಿನ್ನನ್ನೇ ನಮ್ಮ ಜೀವನದ ಸ್ವಾಮಿಯಾಗಿ ಆರಿಸಿದ್ದೇನೆ. ನನ್ನ ಮತ್ತು ಈಕೆಯ ಶರೀರದಲ್ಲಿರಬಹುದಾದ ನಾನಾ ವಿಕಾರಗಳನ್ನು ದೂರೀಕರಿಸು' - ಎಂದು ಬೇಡಿಕೊಳ್ಳುತ್ತಾನೆ.
     ಎರಡನೆಯದಾದ ಪುಂಸವನವು ಗರ್ಭಿಣಿಯ ಶಕ್ತಿಯನ್ನು ಹೆಚ್ಚಿಸುವುದಕ್ಕೂ, ಮೂರನೆಯದಾದ ಸೀಮಂತೋನ್ನಯನವೂ ಆಕೆಯ ಮನಸ್ಸು ಉಲ್ಲಾಸಪೂರ್ಣವಾಗಿ ಇರುವುದಕ್ಕಾಗಿ ಆಚರಿಸಲ್ಪಡುತ್ತದೆ. ಇವೆರಡರಿಂದಲೂ ಗರ್ಭಸ್ಥ ಶಿಶುವಿನ ಮೇಲೆ ಉತ್ತಮ ಸಂಸ್ಕಾರ ಬೀಳುವುದರಲ್ಲಿ ಸಂದೇಹವೇ ಇಲ್ಲ. 
     ನಾಲ್ಕನೆಯದಾದ ಜಾತಕರ್ಮವು ಶಿಶು ಜನನವಾದಾಗ ಮಾಡಲ್ಪಡುತ್ತದೆ. ವಿಶೇಷ ಹೋಮವಾದ ಮೇಲೆ, ತಂದೆ ಬೆಳ್ಳಿ ಅಥವಾ ಚಿನ್ನದ ಸರಳನ್ನು ಜೇನುತುಪ್ಪದಲ್ಲಿ ಅದ್ದಿ, ಮಗುವಿನ ನಾಲಿಗೆಯ ಮೇಲೆ 'ಓಂ' ಎಂದು ಬರೆಯುತ್ತಾನೆ, ಕಿವಿಗಳಲ್ಲಿ 'ವೇದೋsಸಿ' -ನೀನು ಜ್ಞಾನಮಯ-  ಎಂದು ಉಚ್ಚರಿಸುತ್ತಾನೆ. ಆ ಕೂಡಲೇ ಆ ಮಗುವು ಈ ಕ್ರಿಯೆಗಳ ಅರ್ಥವನ್ನು ಗ್ರಹಿಸಲಾರದಾದರೂ, ತಂದೆ-ತಾಯಿಗಳು 'ತಮ್ಮ ಶಿಶುವಿನ ಬಾಯಿಂದ ಸಿಹಿಯಾದ ಮಾತುಗಳೇ ಹೊರಡಲಿ, ಭಗವನ್ನಾಮ ಶಿಶುವಿನ ನಾಲಿಗೆಯ ಮೇಲೆ ಸುಳಿಯಲಿ, ಅದು ಜ್ಞಾನಿಯಾಗಿ ಬೆಳೆಯಲಿ' ಎಂಬ ಪವಿತ್ರ ಸಂಕಲ್ಪವನ್ನು ಹೊತ್ತು, ಅದೇ ರೀತಿ ಅದನ್ನು ಬೆಳೆಸುವ ಯತ್ನ ಮಾಡಬೇಕು. 
     ಐದನೆಯ ಸಂಸ್ಕಾರ ನಾಮಕರಣ. ಮಗುವು ಹನ್ನೊಂದು ದಿನಗಳದ್ದು, ೧೦೧ ದಿನಗಳದ್ದು ಅಥವಾ ಒಂದು ವರ್ಷವಾದದ್ದಾದಾಗ ವಿಶೇಷ ಹೋಮ ಮಾಡಿ ಮಗುವಿಗೆ ಹೆಸರಿಡಲಾಗುತ್ತದೆ. ವೈದಿಕ ಧರ್ಮದಲ್ಲಿ ಹೆಸರು, ವ್ಯಾವರ್ತನ, ನಿರ್ದೇಶನ ಮತ್ತು ಆದರ್ಶನ, ಎಂದರೆ, ಬೇರೆಯವರಿಂದ ಬೇರ್ಪಡಿಸುವುದು, ಇಂತಹವನೇ ಎಂದು ಗುರುತಿಸುವುದು ಮತ್ತು ಉನ್ನತವಾದ ಗುರಿಯನ್ನಿಡುವುದು, ಈ ಮೂರೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ಇಡಲ್ಪಡುತ್ತದೆ. 'ಹೆಸರಿನಲ್ಲೇನಿದೆ?' ಎಂಬ ಹಗುರವಾದ ಪ್ರಶ್ನೆಗೆ ವೈದಿಕ ಧರ್ಮದಲ್ಲಿ ಅವಕಾಶವಿಲ್ಲ. ಹೆಸರನ್ನಿಡುವಾಗ, ತಂದೆ ಈ ಮಂತ್ರವನ್ನುಚ್ಚರಿಸುತ್ತಾನೆ:-
ಕೋsಸಿ ಕತಮೋsಸಿ ಕಸ್ಯಾಸಿ ಕೋ ನಾಮಾಸಿ || (ಯಜು.೭.೨೯.)
     ಓ ಶಿಶೋ, [ಕಃ ಅಸಿ] ನೀನು ಸುಖಮಯನಾಗಿದ್ದೀಯೆ. [ಕತಮಃ ಅಸಿ] ಅತ್ಯಂತ ಸುಖ ಸ್ವರೂಪನಾಗಿದ್ದೀಯ. [ಕಸ್ಯ ಅಸಿ] ನೀನು ಸುಖ ಸ್ವರೂಪನಾದ ಪ್ರಭುವಿನ ಕಂದನಾಗಿದ್ದೀಯೆ. [ಕಃ ನಾಮ ಅಸಿ] ಸುಖ ಎಂಬುದೇ ನಿನ್ನ ಹೆಸರಾಗಿದೆ. 
     ಈ ಕಾಮನೆಯಿಂದ ಮಗುವನ್ನು ಬೆಳೆಸುವುದು ಮಾತಾ-ಪಿತೃಗಳ ಉತ್ತರದಾಯಿತ್ವ.
     ಆರನೆಯದು ನಿಷ್ಕ್ರಮಣ ಸಂಸ್ಕಾರ. ಮಗುವಿಗೆ ನಾಲ್ಕು ತಿಂಗಳಾದಾಗ ಮೊದಲ ಸಾರಿ ಅದನ್ನು ಮನೆಯ ಹೊರಗಡೆ ಕರೆದುಕೊಂಡು ಹೋಗಲಾಗುತ್ತದೆ. 'ಪುತ್ರ ಅಥವಾ ಪುತ್ರಿ, ನೀನು ನೋಡುತ್ತಿರುವ ಸೂರ್ಯನಂತೆಯೇ ನೀನು ಪ್ರಕಾಶಪುಂಜನಾಗು. ಧೀರ-ವೀರತನದಿಂದ ದೀರ್ಘಾಯುವಾಗಿ ಬಾಳು' -  ಎಂಬರ್ಥದ ಮಂತ್ರವನ್ನುಚ್ಚರಿಸುತ್ತಾನೆ.
     ಏಳನೆಯದು ಅನ್ನಪ್ರಾಶನ ಸಂಸ್ಕಾರ. ಮಗುವಿಗೆ ಅನ್ನವನ್ನು ಅರಗಿಸಿಕೊಳ್ಳುವ ಶಕ್ತಿ ಬಂದಾಗ, ವಿಶೇಷ ಹೋಮವನ್ನು ಮಾಡಿ, ಮಗುವಿಗೆ ಮೃದುವೂ, ರುಚಿಕರವೂ ಆದ ಅನ್ನವನ್ನೇ ತಿನ್ನಿಸಲಾಗುತ್ತದೆ, ಆಗ ಹೇಳುವ ಮಂತ್ರ ಸಂಪೂರ್ಣ ಜೀವನಕ್ಕೇ ಆಹಾರದ ಆದರ್ಶವನ್ನು ಮಂಡಿಸುತ್ತದೆ:-
ಅನ್ನಪತೇsನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣಃ | 
ಪ್ರ ಪ್ರ ದಾತಾರಂ ತಾರಿಷ ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ || (ಯಜು.೧೧.೮೩.)
     [ಅನ್ನಪತೇ] ಆಹಾರದ ಸ್ವಾಮಿಯೇ, [ನಃ] ನಮಗೆ [ಅನಮೀವಸ್ಯ] ರೋಗರಹಿತವೂ, [ಶುಷ್ಮಿಣಃ] ಬಲಪ್ರದವೂ ಆದ [ಅನ್ನಸ್ಯ] ಅನ್ನದ ಭಾಗವನ್ನು [ದೇಹಿ] ಕೊಡು. [ಪ್ರ ದಾತಾರಮ್] ಅನ್ನವನ್ನೊದಗಿಸುವ ಕೃಷಿಕಾರನನ್ನು [ಪ್ರ ತಾರಿಷ] ಕಷ್ಟದಿಂದ ಪಾರು ಮಾಡು. [ನಃ ದ್ವಿಪದೇ ಚತುಷ್ಪದೇ] ನಮ್ಮ ದ್ವಿಪಾದ, ಚತುಷ್ಪಾದ ಜೀವರಿಗೆ [ಊರ್ಜಂ ಧೇಹಿ] ಶಕ್ತಿಯನ್ನು ಕರುಣಿಸು.
     ಜೀವನಪೂರ್ತಿ ಇಂತಹ ರೋಗ ತಾರದ, ಬಲದಾಯಕವಾದ, ಯಾವ ಜೀವಕ್ಕೂ ನೋವನ್ನು ತಾರದ ಆಹಾರವನ್ನೇ ಸೇವಿಸಬೇಕು.
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ