ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಫೆಬ್ರವರಿ 20, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - 4.ಅತಿಥಿಯಜ್ಞ     ನಾಲ್ಕನೆಯದು ಅತಿಥಿಯಜ್ಞ. ಇದೂ ಮುಖ್ಯತಃ ಗೃಹಸ್ಥರಿಗೇ ಸಂಬಂಧಿಸಿದ ಯಜ್ಞ. ಯಾವ ಪೂರ್ವ ನಿಶ್ಚಯವೂ ಇಲ್ಲದೆ, ಬರುವ ದಿನದ ಅರಿವು ಇಲ್ಲದೆ, ತಾವಾಗಿ ಬಂದ ಸಂನ್ಯಾಸಿಗಳನ್ನೂ, ಸದಾಚಾರಿ ವಿದ್ವಾಂಸರನ್ನೂ, ಆತ್ಮಜರನ್ನೂ ಅದರದಿಂದ ಸ್ವಾಗತಿಸಿ, ಅವರಿಂದ ಆತ್ಮೋದ್ಧಾರಕಾರವಾದ ಉಪದೇಶಗಳನ್ನು ಪಡೆದುಕೊಂಡು, ಅವರನ್ನು ಭೋಜನಾದಿಗಳಿಂದ ಸತ್ಕರಿಸುವುದೇ ಅತಿಥಿಯಜ್ಞ. ಅತಿಥಿಯಜ್ಞದ ಮಹತ್ವವನ್ನು ವರ್ಣಿಸುತ್ತಾ ಅಥರ್ವವೇದ ಹೇಳುತ್ತದೆ:-
ಅಶಿತಾವತ್ಯಥಾವಶ್ನೀಯಾದ್ಯಜಸ್ಯ ಸಾತ್ಮತ್ವಾಯ ಯಜ್ಞಸ್ಯಾವಿಚ್ಛೇದಾಯ ತದ್ ವ್ರತಮ್ || (ಅಥರ್ವ.೯.೬.೩೮) 
     [ಅತಿಥೌ ಅಶಿತಾವತಿ] ಅತಿಥಿಯು ಊಟ ಮಾಡಿದ ಮೇಲೆ, [ಅಶ್ನೀಯಾತ್] ಗೃಹಸ್ಥನು ಊಟ ಮಾಡಬೇಕು. [ಯಜ್ಞಸ್ಯ ಸಾತ್ಮತ್ವಾಯ] ಯಜ್ಞವು ಆತ್ಮವಂತವಾಗುವಂತೆ ಮಾಡುವುದಕ್ಕಾಗಿ [ಯಜ್ಞಸ್ಯ ಆವಿಚ್ಛೇದಾಯ] ಯಜ್ಞವು ನಿರಂತರ ನಡೆಯುವಂತೆ ಮಾಡುವುದಕ್ಕಾಗಿ (ಎಂಬುದಾಗಿ ತಿಳಿಯಬೇಕು). [ತದ್ ವ್ರತಮ್] ಅದೇ ವ್ರತ.
     ಯಜ್ಞವು ಜಳ್ಳಾಗದಂತೆ, ಕೇವಲ ತಿರುಳಿಲ್ಲದ ಆಡಂಬರವಾಗದಂತೆ, ಅದು ಚೈತನ್ಯದಾಯಕವಾಗುವಂತೆ ಮಾಡಲಿಕ್ಕಾಗಿ ಮತ್ತು ಅದು ಮುರಿದು ಬೀಳದಂತೆ, ಸತತವೂ ನಡೆದು ಬರುವಂತೆ ಮಾಡುವುದಕ್ಕಾಗಿ, ಜ್ಞಾನಿಯಾದ ಸತ್ಯಮಯವಾದ ಆಧ್ಯಾತ್ಮಿಕ ಪ್ರವಚನವನ್ನು ನೀಡಬಲ್ಲ ಅತಿಥಿಯನ್ನು ಮೊದಲು ಭೋಜನಾದಿಗಳಿಂದ ಸತ್ಕರಿಸಿ, ಆಮೇಲೆ ತಾನು ಭುಂಜಿಸುವುದು ಗೃಹಸ್ಥನ ವ್ರತವಾಗಿರಬೇಕು. ಅತಿಥಿಯ ಲಕ್ಷಣವನ್ನು ಹೇಳುತ್ತಾ ಅಥರ್ವವೇದ ಹೀಗೆನ್ನುತ್ತದೆ:-
ಏಷ ವಾ ಅತಿಥಿರ್ಯಚ್ಛೋತ್ರೀಯಸ್ತಸ್ಮಾತ್ಪೂರ್ವೋ ನಾಶ್ನೀಯಾತ್ || (ಅಥರ್ವ.೯.೬.೩೭)
     [ಯತ್ ಶ್ರೋತ್ರೀಯಃ] ಯಾವನು ವೇದವೇತ್ತನಾಗಿದ್ದಾನೋ, [ಏಷ ವಾ ಅತಿಥಿಃ] ಅವನೇ ಅತಿಥಿಯು. [ತಸ್ಮಾತ್ ಏವ ಪೂರ್ವಃ] ಆತನಿಗಿಂತಲೂ ಮೊದಲಿಗನಾಗಿ, [ನ ಅಶ್ನೀಯಾತ್] ಊಟ ಮಾಡಬಾರದು. 
     ಚತುರ್ವೇದ ಪಾರಂಗತನಾದ ವಿದ್ವಾಂಸನೇ ಗೃಹಸ್ಥರಿಗೆ ಪಾರಮಾರ್ಥಿಕ - ಲೌಕಿಕ - ಜ್ಞಾನಗಳನ್ನು ಕೊಡಬಲ್ಲನು. ಧರ್ಮ, ಮನೆಮನೆಯಲ್ಲಿಯೂ ಜೀವಂತವಾಗಿ ಮೆರೆಯಬೇಕಾದರೆ, ವಿದ್ವಾನ್ ಅತಿಥಿಗಳ ಆಗಮನ ಅನಿವಾರ್ಯ. ಅತಿಥಿಸತ್ಕಾರ ಮಾಡದೆ, ತಾನೇ ಮೊದಲು ತಿನ್ನುವ ಗೃಹಸ್ಥನ ಬಗೆಗೆ ಅಥರ್ವವೇದ ಹೇಳುತ್ತದೆ:- 
ಊರ್ಜಾಂ ಚ ವಾ ಏಷ ಸ್ಫಾತಿಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೩)
     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಊರ್ಜಂ ಚ ವಾ ಸ್ಫಾತಿಂ ಚ ಅಶ್ನಾತಿ] ಅವನು ಮನೆಯ ತೇಜಸ್ಸನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ.
ಶ್ರಿಯಂ ಚ ವಾ ಏಷ ಸಂವಿಧಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೬)
     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಶ್ರಿಯಂ ಚ ವಾ ಸಂವಿದಂ ಚ ಅಶ್ನಾತಿ] ಅವನು ಮನೆಯ ಸಂಪತ್ತನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ. 
     ಗೃಹಸ್ಥರ ಧರ್ಮ, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಲ್ಲ. ಮಾನವಮಾತ್ರರ ಉತ್ಕರ್ಷಕ್ಕಾಗಿ ಸದುಪದೇಶ ಮಾಡುತ್ತಾ, ತಿರುಗುವ ಜ್ಞಾನಿಗಳಿಗೂ ಆದರ, ಸತ್ಕಾರ ಸಲ್ಲಿಸಿ, ಸಾಮಾಜಿಕ ಹಿತದಲ್ಲಿಯೂ ಭಾಗವಹಿಸಬೇಕಾದುದು ಅವರ ಕರ್ತವ್ಯ. ಅಭ್ಯಾಗತರನ್ನು ಅಂದರೆ, ಕರೆಸಿಕೊಂಡು ಬಂದವರನ್ನು ಸತ್ಕರಿಸುವುದರಲ್ಲಿ ವಿಶೇಷವೇನೂ ಇಲ್ಲ. ಅತಿಥಿಸತ್ಕಾರದಿಂದಲೇ ಗೃಹಸ್ಥರ ಹೃದಯ ವಿಶಾಲವಾಗುವುದು. ವಿದ್ವತ್ಸಂಗದಿಂದ ಅಧ್ಯಾತ್ಮಜ್ಞಾನವೂ ಬೆಳೆದುಬರುವುದು. 
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ